
ತಿರುವನಂತಪುರಂ, ಮೇ 17: ಕೇರಳ ವಿಧಾನಸಭಾ ಚುನಾವಣೆಯಲ್ಲಿ (Kerala Assembly Elections) ಭರ್ಜರಿ ವಿಜಯ ಸಾಧಿಸಿದ ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) ಮೈತ್ರಿಕೂಟವು ಮುಖ್ಯಮಂತ್ರಿಯನ್ನು ಮಾತ್ರವನ್ನು ಸಂಪುಟ ಸದಸ್ಯರ ಆಯ್ಕೆಯನ್ನೂ ಅಂತಿಮಗೊಳಿಸುವ ಹಾದಿಯಲ್ಲಿದೆ. ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ (V.D. Satheesan) ಅವರು ನಾಳೆ ಮೇ 18 ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಮುಖ್ಯಮಂತ್ರಿ ಪ್ರಮಾಣವಚನಕ್ಕೆ ಮುನ್ನ, 21 ಸದಸ್ಯರ ನೂತನ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ (Cabinet Berths) ಮತ್ತು ಖಾತೆಗಳ ಹಂಚಿಕೆಗಾಗಿ ಯುಡಿಎಫ್ ಮೈತ್ರಿಕೂಟದ ಪಕ್ಷಗಳ ನಡುವೆ ತೀವ್ರ ರಾಜಕೀಯ ಕಸರತ್ತುಗಳು ನಡೆಯುತ್ತಿವೆ. ಮಾಧ್ಯಮ ವರದಿಗಳ ಪ್ರಕಾರ ಮೈತ್ರಿಕೂಟದಲ್ಲಿ ಅತಿದೊಡ್ಡ ಪಕ್ಷವಾಗಿರುವ ಕಾಂಗ್ರೆಸ್‌ಗೆ ಸಂಪುಟದಲ್ಲಿ ಸಿಂಹಪಾಲು ಸಿಗಬಹುದು. 12 ಸ್ಥಾನಗಳು ಕಾಂಗ್ರೆಸ್‌ಗೆ ಹೋಗಬಹುದು, ಮುಸ್ಲಿಂ ಲೀಗ್ಗೆ (ಐಯುಎಂಎಲ್) 5 ಸ್ಥಾನಗಳು ಸಿಗಬಹುದು ಎನ್ನಲಾಗಿದೆ.
ಮುಖ್ಯಮಂತ್ರಿ ರೇಸ್‌ನಲ್ಲಿದ್ದ ಹಿರಿಯ ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲ ಅವರು ಆರಂಭದಲ್ಲಿ ಸಚಿವ ಸ್ಥಾನ ಸ್ವೀಕರಿಸಲು ಹಿಂಜರಿದಿದ್ದರು. ಆದರೆ, ಸಿಎಂ ಆಗಲಿರುವ ವಿ.ಡಿ. ಸತೀಶನ್ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ನಡೆಸಿದ ಸಂಧಾನ ಮಾತುಕತೆ ಯಶಸ್ವಿಯಾಗಿದೆ. ಚೆನ್ನಿತ್ತಲ ಅವರಿಗೆ ಅತ್ಯಂತ ಪ್ರಮುಖವಾದ ಗೃಹ ಇಲಾಖೆ (Home Portfolio) ನೀಡಲು ಸತೀಶನ್ ಸಮ್ಮತಿಸಿದ್ದು, ಚೆನ್ನಿತ್ತಲ ಅವರು ಸಂಪುಟ ಸೇರಲು ಒಪ್ಪಿದ್ದಾರೆ.
ಯುಡಿಎಫ್ ಮೈತ್ರಿಕೂಟದಲ್ಲಿ ಕಾಂಗ್ರೆಸ್ ನಂತರದ ದೊಡ್ಡ ಪಕ್ಷವಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ಮತ್ತು ಇತರ ಪ್ರಾದೇಶಿಕ ಪಕ್ಷಗಳು ತಮಗಾಗಿ ಹೆಚ್ಚಿನ ಸಚಿವ ಸ್ಥಾನ ಹಾಗೂ ಪ್ರಮುಖ ಖಾತೆಗಳಿಗಾಗಿ ಪಟ್ಟು ಹಿಡಿದಿವೆ.
ಇದನ್ನೂ ಓದಿ: ಭಾರತಕ್ಕೆ 2ನೇ ಅತಿದೊಡ್ಡ ರಫ್ತು ಮಾರುಕಟ್ಟೆ ಈಗ ಯುಎಇ ಅಲ್ಲ, ಸಿಂಗಾಪುರ
ಇದನ್ನೂ ಓದಿ: ದಿ ಹೇಗ್‌ನಲ್ಲಿ 16 ಡಚ್ ಸಿಇಒಗಳನ್ನು ಭೇಟಿಯಾದ ಪ್ರಧಾನಿ ಮೋದಿ: ಏನಿದು ಒಪ್ಪಂದ? ಏನು ಚರ್ಚೆಯಾಯಿತು?
ಮೈತ್ರಿ ಪಕ್ಷಗಳ ಖಾತೆ ಹಂಚಿಕೆ ಮುಗಿದ ಬಳಿಕವಷ್ಟೇ ಕಾಂಗ್ರೆಸ್ ತನ್ನ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಲಿದೆ. ಜಾತಿ, ಪ್ರಾದೇಶಿಕ ಸಮತೋಲನ ಹಾಗೂ ಪಕ್ಷದ ಒಳಗಿನ ಪ್ರಮುಖ ನಾಯಕರ (ಸತೀಶನ್, ಚೆನ್ನಿತ್ತಲ ಮತ್ತು ವೇಣುಗೋಪಾಲ್) ಬಣಗಳನ್ನು ತೃಪ್ತಿಪಡಿಸುವ ನಿಟ್ಟಿನಲ್ಲಿ ಸಚಿವರ ಆಯ್ಕೆ ನಡೆಯಲಿದೆ. ಕಾಂಗ್ರೆಸ್‌ನಿಂದ ಸಚಿವ ಸ್ಥಾನದ ರೇಸ್‌ನಲ್ಲಿರುವ ಪ್ರಮುಖರೆಂದರೆ, ಕೆ. ಮುರಳೀಧರನ್, ತಿರುವಂಚೂರ್ ರಾಧಾಕೃಷ್ಣನ್, ಎ.ಪಿ. ಅನಿಲ್ ಕುಮಾರ್, ಸನ್ನಿ ಜೋಸೆಫ್, ಪಿ.ಸಿ. ವಿಷ್ಣುನಾಥ್ ಮತ್ತಿತರರು.
ಸಚಿವ ಸಂಪುಟದ ಅಂತಿಮ ಪಟ್ಟಿಯನ್ನು ರಾಜ್ಯಪಾಲರಾದ ರಾಜೇಂದ್ರ ಅರ್ಲೇಕರ್ ಅವರಿಗೆ ಸಲ್ಲಿಸಲಾಗುತ್ತಿದ್ದು, ಮೇ 18 ರಂದು ಬೆಳಗ್ಗೆ 10 ಗಂಟೆಗೆ ತಿರುವನಂತಪುರಂನ ಸೆಂಟ್ರಲ್ ಸ್ಟೇಡಿಯಂನಲ್ಲಿ ನೂತನ ಸರ್ಕಾರ ಅಧಿಕೃತವಾಗಿ ಅಧಿಕಾರ ವಹಿಸಿಕೊಳ್ಳಲಿದೆ. ಸಂಪುಟ ಸದಸ್ಯರ ಹೆಸರು ಅಂತಿಮಗೊಂಡರೆ, ನಾಳೆಯೇ ಸಿಎಂ ಜೊತೆಗೆ ಈ ಎಲ್ಲಾ ಸಂಪುಟ ಸದಸ್ಯರು ಪ್ರಮಾಣ ವಚನ ಸ್ವೀಕರಿಸಬಹುದು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ