
ತಿರುವನಂತಪುರಂ, ಅಕ್ಟೋಬರ್ 12: ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ತಕ್ಷಣವೇ ವಜಾಗೊಳಿಸಬೇಕು ಹಾಗೂ ಮತದಾರರ ಪಟ್ಟಿಯ ಅಕ್ರಮಗಳನ್ನು ಸರಿಪಡಿಸಬೇಕು ಎಂದು ಆಗ್ರಹಿಸಿ 140 ಸದಸ್ಯ ಬಲದ ಕೇರಳ ವಿಧಾನಸಭೆಯು ಇಂದು ಬೃಹತ್ ಬೆಂಬಲದೊಂದಿಗೆ ನಿರ್ಣಯವನ್ನು ಅಂಗೀಕರಿಸಿದೆ. ಕಾಂಗ್ರೆಸ್ ನೇತೃತ್ವದಲ್ಲಿ ‘ವೋಟ್ ಚೋರಿ’ (ಮತಗಳ ಕಳ್ಳತನ) ಹಾಗೂ ಕೇಂದ್ರ ಸರ್ಕಾರದೊಂದಿಗಿನ ಚುನಾವಣಾ ಆಯೋಗದ ಕೈಜೋಡಿಸುವಿಕೆಯ ಕುರಿತು ದೇಶಾದ್ಯಂತ ಪ್ರತಿಭಟನೆಗಳು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ಕೇರಳ ಶಾಸನಸಭೆಯ ಎರಡನೇ ಅಧಿವೇಶನದ ಆರಂಭಿಕ ದಿನದಲ್ಲೇ ಈ ಮಹತ್ವದ ಕ್ರಮ ಕೈಗೊಳ್ಳಲಾಗಿದೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಕಾರ್ಯವೈಖರಿ ಮತ್ತು ನಿಷ್ಪಕ್ಷಪಾತ ತೀವ್ರ ಸಂಶಯಕ್ಕೆ ಒಳಪಟ್ಟಿದ್ದು, ಚುನಾವಣಾ ಆಯೋಗದ ಮೇಲಿನ ಸಾರ್ವಜನಿಕರ ವಿಶ್ವಾಸವನ್ನು ಮರುಸ್ಥಾಪಿಸಲು ಅವರನ್ನು ತಕ್ಷಣವೇ ವಜಾಗೊಳಿಸಬೇಕು ಎಂದು ನಿರ್ಣಯದಲ್ಲಿ ಸ್ಪಷ್ಟಪಡಿಸಲಾಗಿದೆ.
ಎಸ್ಐಆರ್ ಅಕ್ರಮಗಳ ತಿದ್ದುಪಡಿ:
ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್ಐಆರ್) ಹೆಸರಿನಲ್ಲಿ ನಡೆದಿರುವ ಅಕ್ರಮಗಳನ್ನು ತನಿಖೆಗೊಳಪಡಿಸಬೇಕು ಮತ್ತು ಅಕ್ರಮವಾಗಿ ಮತದಾನದ ಹಕ್ಕಿನಿಂದ ವಂಚಿತರಾದ ಪ್ರತಿಯೊಬ್ಬ ಅರ್ಹ ನಾಗರಿಕನ ಹೆಸರನ್ನು ಪುನಃ ಪಟ್ಟಿಗೆ ಸೇರಿಸಬೇಕು. ಚುನಾವಣಾ ಆಯುಕ್ತರ ಆಯ್ಕೆ ಪ್ರಕ್ರಿಯೆಯು ಸಂಪೂರ್ಣವಾಗಿ ಪಾರದರ್ಶಕವಾಗಿರಬೇಕು. ಇದಕ್ಕಾಗಿ ಪ್ರಧಾನಮಂತ್ರಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಭಾರತದ ಮುಖ್ಯ ನ್ಯಾಯಮೂರ್ತಿ ಅವರನ್ನು ಒಳಗೊಂಡ ಆಯ್ಕೆ ಸಮಿತಿಯನ್ನು ತಕ್ಷಣವೇ ಪುನಾರಚಿಸಬೇಕು ಎಂದು ನಿರ್ಣಯ ಅಂಗೀಕರಿಸಲಾಗಿದೆ.
ಇದನ್ನೂ ಓದಿ: ಶಾಂತಿಯುತ ಪ್ರತಿಭಟನೆಯಲ್ಲಿ ಭಾಗವಹಿಸಲು ವಕೀಲರಿಗೂ ಹಕ್ಕಿದೆ; ಸುಪ್ರೀಂ ಕೋರ್ಟ್ ಸ್ಪಷ್ಟನೆ
ಈ ನಿರ್ಣಯ ಅಂಗೀಕಾರದ ಕುರಿತು ಎಕ್ಸ್ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಕೇರಳದ ಮುಖ್ಯಮಂತ್ರಿ ವಿ. ಡಿ. ಸತೀಶನ್, “ಮತದಾನದ ಹಕ್ಕು ನಮ್ಮ ಪ್ರಜಾಪ್ರಭುತ್ವದ ಅಡಿಪಾಯ. ನಾಗರಿಕರ ಸಾಂವಿಧಾನಿಕ ಹಕ್ಕುಗಳನ್ನು ಹತ್ತಿಕ್ಕಲು ಅಥವಾ ಧಕ್ಕೆ ತರಲು ಯಾವುದೇ ಸಂಸ್ಥೆಗೆ ಅವಕಾಶ ನೀಡಲಾಗುವುದಿಲ್ಲ. ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಕೇರಳ ವಿಧಾನಸಭೆಯು ಗಟ್ಟಿಯಾಗಿ ನಿಲ್ಲುತ್ತದೆ” ಎಂದು ತಿಳಿಸಿದ್ದಾರೆ.
ಎಸ್ಐಆರ್ನಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ವಿರುದ್ಧ ಸುಪ್ರೀಂ ಕೋರ್ಟ್ ಭೇಟಿಗೆ ಇಂಡಿಯಾ ಒಕ್ಕೂಟ ಹೊರಟಿರುವ ಸಮಯದಲ್ಲೇ ಕೇರಳ ಶಾಸನಸಭೆಯ ಈ ನಿರ್ಣಯವು ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ಮತ್ತಷ್ಟು ರಾಜಕೀಯ ಸವಾಲನ್ನು ತಂದೊಡ್ಡಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ