‘ಪ್ರಜಾಪ್ರಭುತ್ವದ ಕಗ್ಗೊಲೆ, ಕೇಂದ್ರದ್ದು ಸರ್ವಾಧಿಕಾರಿ ಧೋರಣೆ’: ದೆಹಲಿಯಲ್ಲಿ ಬಿಜೆಪಿ ವಿರುದ್ಧ ಅಬ್ಬರಿಸಿದ ರಾಜ್ಯ ಕಾಂಗ್ರೆಸ್ ನಾಯಕರು
ಎಸ್‌ಐಆರ್ ರದ್ದತಿ ಹಾಗೂ ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ದೆಹಲಿಯಲ್ಲಿ ಇಂಡಿಯಾ ಒಕ್ಕೂಟದಿಂದ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ರಾಜ್ಯ ಕಾಂಗ್ರೆಸ್ ನಾಯಕರು, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ದೇಶದಲ್ಲಿ ಬಿಜೆಪಿ ಅರಾಜಕತೆ ಸೃಷ್ಟಿ ಮಾಡಿದೆಯೇ ಹೊರತು ನಾವಲ್ಲ. ಬಿಜೆಪಿ ಹುಟ್ಟಿರುವುದೇ ಅರಾಜಕತೆಯಿಂದ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಆರೋಪಿಸಿದ್ದಾರೆ. ಬಿಜೆಪಿಗರನ್ನ 2-3 ದಿನಗಳಿಂದ ನೋಡಿದರೆ ಹೆದರಿದ್ದಾರೆ ಎಂದು ಗೊತ್ತಾಗ್ತಿದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.

ನವದೆಹಲಿ, ಅಕ್ಟೋಬರ್ 12: ಎಸ್‌ಐಆರ್ ರದ್ದತಿ, ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ದೆಹಲಿಯಲ್ಲಿಇಂಡಿಯಾ ಒಕ್ಕೂಟದಿಂದ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕ ದಂಡೇ ಭಾಗಿಯಾಗಿದೆ. ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಚುನಾವಣಾ ಆಯೋಗದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ನಾಯಕರು, ಸಂವಿಧಾನ ನೀಡಿರುವ ಮತದಾನದ ಹಕ್ಕನ್ನು ಕೇಂದ್ರ ಸರ್ಕಾರ ಕಿತ್ತುಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ. ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಕೈಗೊಂಬೆಯಂತಾಗಿದೆ ಎಂದೂ ದೂರಿದ್ದಾರೆ.
‘ಮೋದಿ, ಅಮಿತ್ ಶಾರದ್ದು ಸರ್ವಾಧಿಕಾರಿ ಧೋರಣೆ’
ಮೋದಿ, ಅಮಿತ್ ಶಾ ಸರ್ವಾಧಿಕಾರಿ ಧೋರಣೆ ತೋರುತ್ತಿದ್ದು, ಚುನಾವಣಾ ಆಯೋಗ ಏಕಪಕ್ಷೀಯವಾಗಿದೆ ಎಂದು ನವದೆಹಲಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಆರೋಪಿಸಿದ್ದಾರೆ. ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆ ಕಾಪಾಡುವ ವಿಚಾರದಲ್ಲಿ ಸುಪ್ರೀಂಕೋರ್ಟ್ ಕೂಡ ತಟಸ್ಥವಾಗಿದೆ. ಹೀಗಾಗಿ ಇಂದು ಸಿಜೆಐಗೆ ಮನವಿ ಸಲ್ಲಿಸಲು ಮುಂದಾಗಿದ್ದೇವೆ. ಕಾಂಗ್ರೆಸ್ ನಾಯಕರು ಎಲ್ಲರೂ ಒಟ್ಟಾಗಿ ಮೆರವಣಿಗೆ ಮಾಡ್ತಿದ್ದೇವೆ. ದೇಶದಲ್ಲಿ ಬಿಜೆಪಿ ಅರಾಜಕತೆ ಸೃಷ್ಟಿ ಮಾಡಿದೆಯೇ ಹೊರತು ನಾವಲ್ಲ. ಬಿಜೆಪಿ ಹುಟ್ಟಿರುವುದೇ ಅರಾಜಕತೆಯಿಂದ ಎಂದವರು ಆರೋಪಿಸಿದ್ದಾರೆ. ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆ ವಿರುದ್ಧ ಬಿಜೆಪಿ ಮತ್ತು RSS ಇವೆ. ಹೀಗಾಗಿ ಸುಪ್ರೀಂಕೋರ್ಟ್ ಸಾಮಾನ್ಯ ನಾಯಕರ ಮನವಿ ಪರಿಗಣಿಸಬೇಕು. ಈ ಹಿಂದೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿದೆ. ಪೋಸ್ಟ್ ಕಾರ್ಡ್ನಲ್ಲಿ ದೂರು ನೀಡಿದರೆ ದಾಖಲಿಸಿಕೊಂಡಿದ್ದಿದೆ. ವಿದ್ಯಾರ್ಥಿಗಳು ಪ್ರತಿಭಟನೆ ಮಾಡುವಾಗ ಅದನ್ನು ಪರಿಗಣಿಸಬೇಕು ಎಂದವರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಇಂಡಿ ಮೈತ್ರಿಕೂಟದಿಂದ ಸುಪ್ರೀಂ ಚಲೋ ಮೆರವಣಿಗೆ: ಭೇಟಿಗೆ ನಿರಾಕರಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್
‘ಸಿಇಸಿ ಕೇಂದ್ರ ಸರ್ಕಾರ ಕೈಗೊಂಬೆ’
ಸಿಇಸಿಯನ್ನು ಕೇಂದ್ರ ಸರ್ಕಾರ ಕೈಗೊಂಬೆಯಾಗಿ ಮಾಡಿಕೊಂಡಿದೆ. ಹಾಗಾಗಿ ಜ್ಞಾನೇಶ್ ಕುಮಾರ್ ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿ ಇಡೀ ದೇಶಾದ್ಯಂತ ಹೋರಾಟ ನಡೆಯುತ್ತಿದೆ. ಚುನಾವಣಾ ವ್ಯವಸ್ಥೆಯಲ್ಲಿ ಆಗಿರುವ ಲೋಪದೋಷ ಸರಿಪಡಿಸಬೇಕು. ಕೇಂದ್ರ ಸರ್ಕಾರ ಗೌರವಯುತವಾಗಿ ನಡೆದುಕೊಂಡು ಹೋಗಬೇಕು ಎಂದು ಅಬಕಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ ಹೇಳಿದ್ದಾರೆ. ಸಂವಿಧಾನದಲ್ಲಿ ಮತದಾನದ ಹಕ್ಕು ಅಮೂಲ್ಯವಾದುದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಒಂದು ಅಸ್ತ್ರವಾಗಿದೆ. ಆದರೆ ಕೇಂದ್ರ ಸರ್ಕಾರದಿಂದ ಅದನ್ನು ಕಿತ್ತುಕೊಳ್ಳುವ ಯತ್ನ ನಡೆಯುತ್ತಿದೆ. ಆ ಮೂಲಕ ಪ್ರಜಾಪ್ರಭುತ್ವ ಬುಡಮೇಲು ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆರೋಪಿಸಿದ್ದಾರೆ.
‘ಪ್ರಜಾಪ್ರಭುತ್ವದ ಕಗ್ಗೊಲೆ ಆಗ್ತಿದೆ’
ಬಿಜೆಪಿಗರನ್ನ 2-3 ದಿನಗಳಿಂದ ನೋಡಿದರೆ ಹೆದರಿದ್ದಾರೆ ಎಂದು ಗೊತ್ತಾಗ್ತಿದೆ . ಅವ್ರ ಸತ್ಯ ಜನರಿಗೆ ಗೊತ್ತಾಗ್ತಿದೆ. ಜನರಿಗೆ ದೆಹಲಿಗೆ ಬರೋದಕ್ಕೆ ಬಿಡ್ತಿಲ್ಲ. ರೈಲು, ಮೆಟ್ರೋ ಬಂದ್ ಮಾಡ್ತಿದ್ದಾರೆ. ಪ್ರಜಾಪ್ರಭುತ್ವದ ಕಗ್ಗೊಲೆ ಆಗ್ತಿದೆ. ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನ ಅಳಿಸೋಕೆ ಹೊರಟಿದ್ದಾರೆ. ವೋಟ್ ಕಳ್ಳತನ ಆಗ್ತಿದೆ ಅಂತ ರಾಹುಲ್ ಗಾಂಧಿ ಹಿಂದೆಯೇ ಹೇಳಿದ್ದರು ಎಂದು ಸಚಿವ ಶಿವರಾಜ ತಂಗಡಿ ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:24 pm, Mon, 12 October 26




