
ಪುಣೆ, ಮೇ 21: ಮಕ್ಕಳ ಭವಿಷ್ಯಕ್ಕಾಗಿ ಪೋಷಕರು ಯಾವುದೇ ಹಂತಕ್ಕಾದರೂ ಹೋಗಲು ಸಿದ್ಧರಾಗುತ್ತಾರೆ. ಆದರೆ, ಇಲ್ಲೊಬ್ಬರು ಹೆಸರಾಂತ ವೈದ್ಯರು ತಮ್ಮ ಮಗನಿಗಾಗಿ ನೀಟ್(NEET) ಪರೀಕ್ಷೆಯ ಅಕ್ರಮದ ದಾರಿ ಹಿಡಿದು, ಕೊನೆಗೆ ಕಂಬಿ ಎಣಿಸುವಂತಾಗಿದೆ. ಸಿಬಿಐ ಕೈಗೆ ಸಿಕ್ಕಿಬಿದ್ದಿರುವ ಆ ವೈದ್ಯ ಪೋಷಕನೇ ಡಾ.ಮನೋಜ್ ಶಿರೂರೆ.
ಯಾರಿದು ಡಾ. ಮನೋಜ್ ಶಿರೂರೆ?
ಡಾ. ಮನೋಜ್ ಶಿರೂರೆ ಅವರು ಮಹಾರಾಷ್ಟ್ರದ ಲಾತೂರ್ ಮೂಲದ ಪ್ರಖ್ಯಾತ ಮಕ್ಕಳ ತಜ್ಞರು (Pediatrician). ಲಾತೂರಿನ ಓಲ್ಡ್ ಔಸಾ ರಸ್ತೆ ವಿಭಾಗದಲ್ಲಿ ಇವರಿಗೆ ಸೇರಿದ ‘ಸಿದ್ಧಿವಿನಾಯಕ ಮಕ್ಕಳ ಆಸ್ಪತ್ರೆ’ ಇದ್ದು, ಇದು ಅತ್ಯಂತ ಜನಪ್ರಿಯ ಆಸ್ಪತ್ರೆಯಾಗಿದೆ. ಸಮಾಜದಲ್ಲಿ ಉತ್ತಮ ಗೌರವ ಹೊಂದಿದ್ದ ವೈದ್ಯರೇ ಈಗ ಪೇಪರ್ ಲೀಕ್ ಹಗರಣದಲ್ಲಿ ಸಿಕ್ಕಿಬಿದ್ದಿರುವುದು ಇಡೀ ಮಹಾರಾಷ್ಟ್ರವನ್ನು ಬೆಚ್ಚಿಬೀಳಿಸಿದೆ.
ನಾಲ್ಕೂವರೆ ಗಂಟೆಗಳ ತೀವ್ರ ವಿಚಾರಣೆ ಮತ್ತು ಅರೆಸ್ಟ್
ನೀಟ್ ಹಗರಣದ ಬೆನ್ನುಬಿದ್ದಿರುವ ಸಿಬಿಐ ಅಧಿಕಾರಿಗಳು ಕಳೆದ ಎಂಟು ದಿನಗಳಿಂದ ಲಾತೂರ್‌ನಲ್ಲೇ ಬೀಡುಬಿಟ್ಟಿದ್ದಾರೆ. ಈ ಹಗರಣದ ಪ್ರಮುಖ ಆರೋಪಿ ಶಿವರಾಜ್ ಮೋಟೆಗಾಂವ್ಕರ್‌ನನ್ನು ಮೊದಲು ತೀವ್ರ ವಿಚಾರಣೆಗೆ ಒಳಪಡಿಸಿ ಬಂಧಿಸಿದ್ದ ಸಿಬಿಐಗೆ, ಆತನಿಂದ ಮಹತ್ವದ ಸುಳಿವು ಸಿಕ್ಕಿತ್ತು. ಮೋಟೆಗಾಂವ್ಕರ್ ನೀಡಿದ ಸಂಪರ್ಕಗಳ ಆಧಾರದ ಮೇಲೆ ಸಿಬಿಐ ಅಧಿಕಾರಿಗಳು ಬುಧವಾರ ಸಂಜೆ ನೇರವಾಗಿ ಡಾ. ಮನೋಜ್ ಶಿರೂರೆ ಅವರ ಆಸ್ಪತ್ರೆಯ ಮೇಲೆ ದಾಳಿ ಮಾಡಿದರು.
ಆಸ್ಪತ್ರೆಯಲ್ಲೇ ವೈದ್ಯರನ್ನು ಬರೋಬ್ಬರಿ ನಾಲ್ಕೂವರೆ ಗಂಟೆಗಳ ಕಾಲ ತೀವ್ರವಾಗಿ ತನಿಖೆ ನಡೆಸಲಾಯಿತು. ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಲಾಗದೆ, ಕೊನೆಗೆ ವೈದ್ಯರು ತಾವು ಮಾಡಿದ ಅಪರಾಧವನ್ನು ಒಪ್ಪಿಕೊಂಡರು. ತಕ್ಷಣವೇ ಸಿಬಿಐ ಅಧಿಕಾರಿಗಳು ಅವರ ಮುಖಕ್ಕೆ ಕಪ್ಪು ಬಟ್ಟೆ ಮುಚ್ಚಿ ಬಂಧಿಸಿ ಕರೆದೊಯ್ದಿದ್ದಾರೆ.
ಮತ್ತಷ್ಟು ಓದಿ: ನೀಟ್ ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಬೆನ್ನಲ್ಲೇ NTAನಲ್ಲಿ ಮಹತ್ವದ ಬದಲಾವಣೆ
ಆರೋಪವೇನು?
ಡಾ. ಮನೋಜ್ ಶಿರೂರೆ ಅವರು ತಮ್ಮ ಮಗನಿಗೆ ನೀಟ್ ಪರೀಕ್ಷೆಯಲ್ಲಿ ಅಕ್ರಮವಾಗಿ ಸಹಾಯ ಮಾಡಲು ಪ್ರಮುಖ ಆರೋಪಿ ಶಿವರಾಜ್ ಮೋಟೆಗಾಂವ್ಕರ್‌ನೊಂದಿಗೆ ಕೈಜೋಡಿಸಿದ್ದರು. ಮಗನಿಗಾಗಿ ಪ್ರಶ್ನೆಪತ್ರಿಕೆ ಮತ್ತು ಅಗತ್ಯ ದಾಖಲೆಗಳನ್ನು ಮೋಟೆಗಾಂವ್ಕರ್‌ನಿಂದ ಪಡೆದ ಗಂಭೀರ ಆರೋಪ ಇವರ ಮೇಲಿದೆ.
ಮೊಬೈಲ್ ವಶ, ಬ್ಯಾಂಕ್ ಖಾತೆಗಳ ಮೇಲೆ ಕಣ್ಣು
ಬಂಧನದ ವೇಳೆ ಸಿಬಿಐ ಅಧಿಕಾರಿಗಳು ಡಾ. ಶಿರೂರೆ ಅವರ ಮೊಬೈಲ್ ಫೋನ್ ಮತ್ತು ಆಸ್ಪತ್ರೆಯಲ್ಲಿದ್ದ ಕೆಲವು ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಮೊಬೈಲ್ ಮೂಲಕ ಅವರು ಮೋಟೆಗಾಂವ್ಕರ್ ಜೊತೆ ಎಷ್ಟು ದಿನಗಳಿಂದ ಸಂಪರ್ಕದಲ್ಲಿದ್ದರು? ನೀಟ್ ಪೇಪರ್ ಅನ್ನು ತಮ್ಮ ಮಗನಿಗೆ ಮಾತ್ರ ಬಳಸಿದ್ದರೇ ಅಥವಾ ಬೇರೆ ಯಾರಿಗಾದರೂ ಮಾರಾಟ ಮಾಡಿ ವೈರಲ್ ಮಾಡಿದ್ದರೇ? ಎಂಬಿತ್ಯಾದಿ ವಿಷಯಗಳ ಬಗ್ಗೆ ತನಿಖೆ ನಡೆಯುತ್ತಿದೆ.
ಅಲ್ಲದೆ, ಪೇಪರ್ ಪಡೆಯಲು ಇವರಿಬ್ಬರ ಮಧ್ಯೆ ಎಷ್ಟು ಕೋಟಿ ರೂಪಾಯಿಗಳ ಡೀಲ್ ನಡೆದಿತ್ತು ಎಂಬುದನ್ನು ಪತ್ತೆಹಚ್ಚಲು ಸಿಬಿಐ ಅಧಿಕಾರಿಗಳು ವೈದ್ಯರ ಬ್ಯಾಂಕ್ ಖಾತೆಗಳನ್ನು ಜಾಲಾಡುತ್ತಿದ್ದಾರೆ. ಹಗರಣದಲ್ಲಿ ಪೋಷಕರ ವಿರುದ್ಧ ಸಿಬಿಐ ಕೈಗೊಂಡ ಮೊದಲ ಕ್ರಮ ಇದಾಗಿದ್ದು, ಅಡ್ಡದಾರಿ ಹಿಡಿಯುವ ಇತರೆ ಪೋಷಕರಿಗೂ ಇದೊಂದು ಬಲವಾದ ಎಚ್ಚರಿಕೆಯಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ