ಮನೆಯಲ್ಲಿ ಹಣ ಪತ್ತೆ ಪ್ರಕರಣ; ಮಾಜಿ ನ್ಯಾಯಮೂರ್ತಿ ಯಶವಂತ್ ವರ್ಮಾ ವಿರುದ್ಧದ 3 ಆರೋಪಗಳು ಸಾಬೀತು
ದೆಹಲಿಯಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಬೃಹತ್ ಪ್ರಮಾಣದ ನಗದು ಪತ್ತೆಯಾದ ಪ್ರಕರಣದಲ್ಲಿ ಆರೋಪಿಯಾಗಿದ್ದ ದೆಹಲಿ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಯಶವಂತ್ ವರ್ಮಾ ದೋಷಿ ಎಂದು ತನಿಖಾ ಸಮಿತಿ ವರದಿ ನೀಡಿದೆ. ಆ ಹಣದ ಮೂಲದ ಬಗ್ಗೆ ಸೂಕ್ತ ವಿವರಣೆ ನೀಡಲು ವಿಫಲರಾದ ಹಿನ್ನೆಲೆಯಲ್ಲಿ, ಅವರ ಮೇಲಿದ್ದ ಮೂರೂ ಆರೋಪಗಳು ಸಾಬೀತಾಗಿವೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ರಚಿಸಿದ್ದ ಮೂವರು ಸದಸ್ಯರ ತನಿಖಾ ಸಮಿತಿ ತೀರ್ಮಾನಿಸಿದೆ.

ನವದೆಹಲಿ, ಆಗಸ್ಟ್ 12: ದೆಹಲಿಯಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಸಂಭವಿಸಿದ ಬೆಂಕಿ ಅವಘಡದ ನಂತರ ಪತ್ತೆಯಾದ ಮೂಲವಿಲ್ಲದ ಬೃಹತ್ ನಗದಿಗೆ ಸಂಬಂಧಿಸಿದಂತೆ, ದೆಹಲಿ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಯಶವಂತ್ ವರ್ಮಾ (Justice Yashwant Varma) ಅವರ ವಿರುದ್ಧದ ಮೂರೂ ಆರೋಪಗಳು ಸಾಬೀತಾಗಿವೆ ಎಂದು ಸಂಸದೀಯ ತನಿಖಾ ಸಮಿತಿ ತಿಳಿಸಿದೆ. ದೆಹಲಿಯ 30 ತುಘಲಕ್ ಕ್ರೆಸೆಂಟ್‌ನಲ್ಲಿರುವ ಅಧಿಕೃತ ನಿವಾಸದ ಸ್ಟೋರ್‌ರೂಮ್‌ನಲ್ಲಿ ಕಳೆದ ವರ್ಷ ಭಾರೀ ಪ್ರಮಾಣದ ಹಣ ಪತ್ತೆಯಾಗಿತ್ತು. ಈ ಸ್ಥಳವು ನ್ಯಾಯಮೂರ್ತಿ ವರ್ಮಾ ಅವರ ಸುಪರ್ದಿಯಲ್ಲೇ ಇತ್ತು. ಅಲ್ಲಿ ಪತ್ತೆಯಾದ ಹಣದ ಮೂಲದ ಬಗ್ಗೆ ಅವರು ಸೂಕ್ತ ವಿವರಣೆ ನೀಡಲು ವಿಫಲರಾಗಿದ್ದಾರೆ ಎಂದು ಸಮಿತಿ ತೀರ್ಮಾನಿಸಿದೆ.
ಪ್ರಕರಣದ ಹಿನ್ನೆಲೆ:
2025ರ ಮಾರ್ಚ್ 14-15ರ ಮಧ್ಯರಾತ್ರಿ ದೆಹಲಿಯಲ್ಲಿರುವ ನ್ಯಾಯಮೂರ್ತಿ ವರ್ಮಾ ಅವರ ಸರ್ಕಾರಿ ನಿವಾಸದ ಸ್ಟೋರ್‌ರೂಮ್‌ನಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿತ್ತು. ಆ ವೇಳೆ ಯಶವಂತ್ ವರ್ಮಾ ಮನೆಯಲ್ಲಿ ಇರಲಿಲ್ಲ. ಹೀಗಾಗಿ, ಅವರ ಮನೆಯ ಸದಸ್ಯರು ಅಗ್ನಿಶಾಮಕ ದಳದ ಸಿಬ್ಬಂದಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಈ ವೇಳೆ ಆ ಸ್ಥಳಕ್ಕೆ ಆಗಮಿಸಿದ ದೆಹಲಿ ಪೊಲೀಸ್ ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳಿಗೆ ಸ್ಟೋರ್‌ರೂಮ್‌ನಲ್ಲಿ ಅರ್ಧ ಸುಟ್ಟ, ಒದ್ದೆಯಾದ ಹಾಗೂ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದ ಅಪಾರ ಪ್ರಮಾಣದ 500 ರೂಪಾಯಿ ಮುಖಬೆಲೆಯ ನೋಟುಗಳ ಕಟ್ಟುಗಳು ಕಂಡುಬಂದಿದ್ದವು. ಅಧಿಕಾರಿಗಳ ಹೇಳಿಕೆಗಳು, ಫೋಟೋಗಳು ಮತ್ತು ವಿಡಿಯೋ ರೆಕಾರ್ಡಿಂಗ್‌ಗಳು ಆ ಮನೆಯಲ್ಲಿ ಅಪಾರ ಪ್ರಮಾಣದ ನಗದು ಇದ್ದುದನ್ನು ಖಚಿತಪಡಿಸಿದ್ದವು.
ಆ ಸಮಯದಲ್ಲಿ ನೋಟುಗಳನ್ನು ಸ್ಥಳದಲ್ಲೇ ವಶಪಡಿಸಿಕೊಳ್ಳಲಿಲ್ಲ, ಎಣಿಕೆ ಮಾಡಲಿಲ್ಲ ಅಥವಾ ಪಟ್ಟಿಯನ್ನು ಸಿದ್ಧಪಡಿಸಲಿಲ್ಲ. ಹೀಗಾಗಿ ಪತ್ತೆಯಾದ ಹಣದ ನಿಖರ ಮೊತ್ತವನ್ನು ವರದಿಯಲ್ಲಿ ಉಲ್ಲೇಖಿಸಲು ಸಾಧ್ಯವಿಲ್ಲ ಎಂದು ಸಮಿತಿ ತಿಳಿಸಿದೆ. ಆದರೆ, ಅಲ್ಲಿ ಭಾರಿ ಪ್ರಮಾಣದ 500 ರೂ. ಮುಖಬೆಲೆಯ ನೋಟುಗಳಿದ್ದವು ಎಂಬುದಕ್ಕೆ ಬಲವಾದ ಸಾಕ್ಷ್ಯಗಳಿವೆ ಎಂದು ಸಮಿತಿ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ನ್ಯಾ. ಯಶವಂತ್ ವರ್ಮಾ ಪದಚ್ಯುತಿಗೆ ಲೋಕಸಭೆಯಲ್ಲಿ ಶೀಘ್ರದಲ್ಲೇ ಪ್ರಕ್ರಿಯೆ ಆರಂಭ; ಕಿರಣ್ ರಿಜಿಜು
ಯಶವಂತ್ ವರ್ಮಾ ಮೇಲಿರುವ 3 ಆರೋಪಗಳೇನು?:
1. ಹಣದ ಮೂಲದ ಬಗ್ಗೆ ತೃಪ್ತಿಕರ ಉತ್ತರವಿಲ್ಲ:
ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಸುಪರ್ದಿಯಲ್ಲಿದ್ದ ಸರ್ಕಾರಿ ನಿವಾಸದಲ್ಲಿ ದಾಖಲೆಯಿಲ್ಲದ ಬೃಹತ್ ಪ್ರಮಾಣದ ನಗದು ಪತ್ತೆಯಾಗಿದ್ದು ಮೊದಲ ಆರೋಪವಾಗಿತ್ತು. ಈ ಆರೋಪ ಸಾಬೀತಾಗಿದೆ ಎಂದು ಸಮಿತಿ ಹೇಳಿದೆ. ನೋಟುಗಳ ಮೂಲ ಅಥವಾ ಮಾಲೀಕತ್ವದ ಬಗ್ಗೆ ನ್ಯಾಯಮೂರ್ತಿ ವರ್ಮಾ ಸೂಕ್ತ ಸ್ಪಷ್ಟನೆ ನೀಡಲು ವಿಫಲರಾಗಿದ್ದಾರೆ.
“ಈ ಹಣ ಜಡ್ಜ್‌ಗೆ ಸೇರಿದ್ದು ಎಂದು ನೇರವಾಗಿ ಹೇಳದಿದ್ದರೂ, ಅವರ ನಿಯಂತ್ರಣದಲ್ಲಿದ್ದ ಆವರಣದಲ್ಲಿ ಇಷ್ಟೊಂದು ನಗದು ಸಿಕ್ಕಿರುವುದು ಹಾಗೂ ಅದಕ್ಕೆ ಸೂಕ್ತ ಉತ್ತರ ನೀಡದಿರುವುದೇ ಆರೋಪ ಸಾಬೀತಾಗಲು ಸಾಕು” ಎಂದು ಸಮಿತಿ ಅಭಿಪ್ರಾಯಪಟ್ಟಿದೆ. ತಮ್ಮ ಗೈರುಹಾಜರಿ ಅಥವಾ ಬೇರೆಯವರು ಗೂಢಚರ್ಯೆ ನಡೆಸಿ ಹಣ ತಂದಿಟ್ಟಿದ್ದಾರೆ ಎಂಬ ಯಶವಂತ್ ವರ್ಮಾ ಅವರ ಸಂಚಿನ ಆರೋಪಕ್ಕೆ ಯಾವುದೇ ಆಧಾರಗಳಿಲ್ಲ ಎಂದು ಸಮಿತಿ ಹೇಳಿದೆ.
2: ಸಾಕ್ಷ್ಯ ನಾಶ:
ಬೆಂಕಿ ನಂದಿಸಿದ ನಂತರ ಘಟನಾ ಸ್ಥಳ ಮತ್ತು ಸಾಕ್ಷ್ಯಾಧಾರಗಳನ್ನು ಸೂಕ್ತವಾಗಿ ಸಂರಕ್ಷಿಸದಿರುವುದು ಎರಡನೇ ಆರೋಪವಾಗಿತ್ತು. ಸರ್ಕಾರಿ ಅಧಿಕಾರಿಗಳು ಆವರಣವನ್ನು ಪರಿಶೀಲಿಸಿ ಸೀಲ್ ಮಾಡುವ ಮೊದಲೇ ಸ್ಟೋರ್‌ರೂಮ್‌ನ ಸ್ಥಿತಿಗತಿಯನ್ನು ಬದಲಾಯಿಸಲಾಯಿತು ಮತ್ತು ಅಲ್ಲಿದ್ದ ನಗದು ನಂತರ ಕಣ್ಮರೆಯಾಯಿತು. ನ್ಯಾಯಮೂರ್ತಿ ವರ್ಮಾ ಅವರೇ ಖುದ್ದಾಗಿ ಹಣವನ್ನು ತೆರವುಗೊಳಿಸಿದ್ದಾರೆ ಎಂದು ಸಮಿತಿ ಹೇಳಿಲ್ಲವಾದರೂ, ತನಿಖೆಗೆ ಅತ್ಯಗತ್ಯವಾಗಿದ್ದ ಪ್ರಮುಖ ಸಾಕ್ಷ್ಯಗಳನ್ನು ರಕ್ಷಿಸುವಲ್ಲಿ ಮತ್ತು ಸ್ಥಳದ ಸತ್ಯಾಸತ್ಯತೆಯನ್ನು ಕಾಯ್ದುಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂಬ ಕಾರಣಕ್ಕೆ ಈ ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಲಾಗಿದೆ.
3: ನೀಡಿದ ವಿವರಣೆಗಳು ಅಪೂರ್ಣ ಹಾಗೂ ದಾರಿ ತಪ್ಪಿಸುವಂತಿದ್ದವು:
ಆ ಘಟನೆಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಯಶವಂತ್ ವರ್ಮಾ ನೀಡಿದ ಹೇಳಿಕೆಗಳು ಮತ್ತು ವಿವರಣೆಗಳು ಕಾಲಕಾಲಕ್ಕೆ ಬದಲಾಗಿದ್ದವು. ಸಂವಿಧಾನಾತ್ಮಕ ಹುದ್ದೆಯಲ್ಲಿದ್ದ ವ್ಯಕ್ತಿಯಿಂದ ನಿರೀಕ್ಷಿಸುವಷ್ಟು ಪಾರದರ್ಶಕತೆ ಅವರ ಉತ್ತರಗಳಲ್ಲಿ ಇರಲಿಲ್ಲ ಎಂದು ಮೂರನೇ ಆರೋಪವನ್ನು ಸಮಿತಿ ಎತ್ತಿಹಿಡಿದಿದೆ. ಆರಂಭದಲ್ಲಿ ತಮಗೆ ಹಣದ ಬಗ್ಗೆ ಏನೂ ತಿಳಿದಿಲ್ಲ ಎಂದಿದ್ದ ವರ್ಮಾ, ನಂತರ ಹಣ ಜಪ್ತಿ ಮತ್ತು ಆವರಣ ಸ್ವಚ್ಛಗೊಳಿಸಿದ ವಿಚಾರಗಳನ್ನು ಪ್ರಸ್ತಾಪಿಸಿದರು. ಸಿಬ್ಬಂದಿಯ ಮೇಲೆ ಅನುಮಾನ ವ್ಯಕ್ತಪಡಿಸಿ, ಯಾರೋ ಹಣವನ್ನು ತಂದಿಟ್ಟಿದ್ದಾರೆ ಅಥವಾ ತೆಗೆದುಕೊಂಡು ಹೋಗಿದ್ದಾರೆ ಎಂಬ ಹಾರಿಕೆ ಉತ್ತರಗಳನ್ನು ನೀಡಿದ್ದರು. ಆದರೆ ಇವುಗಳನ್ನು ಸಾಬೀತುಪಡಿಸಲು ಯಾವುದೇ ಸಾಕ್ಷಿಗಳನ್ನು ಹಾಜರುಪಡಿಸದ ಕಾರಣ, ಅವರ ಸಮಜಾಯಿಷಿ ತೃಪ್ತಿಕರವಾಗಿಲ್ಲ ಎಂದು ಸಮಿತಿ ಹೇಳಿದೆ.
ಇದನ್ನೂ ಓದಿ: ನ್ಯಾಯಮೂರ್ತಿ ಯಶವಂತ್ ವರ್ಮಾ ಮನೆಯಲ್ಲಿ ಹಣ ಪತ್ತೆಯಾಗಿದ್ದು ದೃಢ; ರಾಜೀನಾಮೆಗೆ ಸೂಚನೆ
ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ನ್ಯಾಯಮೂರ್ತಿ ವರ್ಮಾ ಅವರ ವಜಾಗೊಳಿಸುವ ಪ್ರಸ್ತಾವನೆಯನ್ನು ಒಪ್ಪಿಕೊಂಡ ನಂತರ, ಸೆಪ್ಟೆಂಬರ್ 2025ರಲ್ಲಿ ಈ ಜಂಟಿ ತನಿಖಾ ಸಮಿತಿಯನ್ನು ರಚಿಸಲಾಗಿತ್ತು. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರವಿಂದ್ ಕುಮಾರ್ ನೇತೃತ್ವದ ಈ ಸಮಿತಿಯು ನವೆಂಬರ್‌ನಲ್ಲಿ ದೋಷಾರೋಪಣೆ ಪಟ್ಟಿಯನ್ನು ಸಿದ್ಧಪಡಿಸಿತ್ತು. ಸಮಿತಿಯ ರಚನೆಯನ್ನು ಪ್ರಶ್ನಿಸಿ ಯಶವಂತ್ ವರ್ಮಾ ಸಲ್ಲಿಸಿದ್ದ ಅರ್ಜಿಯನ್ನು ಜನವರಿ 2026ರಲ್ಲಿ ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು. ದೆಹಲಿ ಪೊಲೀಸ್, ಸಿಆರ್‌ಪಿಎಫ್ ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳ ಹೇಳಿಕೆ ಹಾಗೂ ದಾಖಲೆಗಳನ್ನು ಪರಿಶೀಲಿಸಿದ ಸಮಿತಿಯು ತನ್ನ ವರದಿಯನ್ನು ಸಂಸತ್ತಿನ ಉಭಯ ಸದನಗಳಲ್ಲಿ ಮಂಡಿಸಿದ್ದು, ಇದು ಮುಂದಿನ ಸಂಸದೀಯ ಪ್ರಕ್ರಿಯೆಗೆ ಆಧಾರವಾಗಲಿದೆ.
ಪೊಲೀಸ್ ಮತ್ತು ಅಗ್ನಿಶಾಮಕ ಅಧಿಕಾರಿಗಳ ನಿರ್ಲಕ್ಷ್ಯ:
ಘಟನಾ ಸ್ಥಳಕ್ಕೆ ತೆರಳಿದ್ದ ಪೊಲೀಸ್ ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳ ಕರ್ತವ್ಯ ಲೋಪದ ಕುರಿತೂ ಸಮಿತಿ ಪ್ರಶ್ನೆ ಎತ್ತಿದೆ. ನಿಯಮಗಳ ಪ್ರಕಾರ ನಗದನ್ನು ತಕ್ಷಣವೇ ವಶಪಡಿಸಿಕೊಂಡು, ಮಹಜರು ನಡೆಸಿ, ಸಾಕ್ಷ್ಯಗಳನ್ನು ಸಂರಕ್ಷಿಸಬೇಕಿದ್ದ ಅಧಿಕಾರಿಗಳು ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡಿರುವುದು ಗಂಭೀರ ಲೋಪ ಎಂದು ಸಮಿತಿ ಸಾಕ್ಷ್ಯಾಧಾರಸಹಿತವಾಗಿ ಆರೋಪಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:29 pm, Wed, 12 August 26




