AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪ್ಯಾರಡೈಸ್’ ವಿಮರ್ಶೆ; ಅಸ್ಮಿತೆಯ ಹೋರಾಟದಲ್ಲಿ ನರಕದ ಅನುಭವ

‘ಪ್ಯಾರಡೈಸ್’ ವಿಮರ್ಶೆ; ಅಸ್ಮಿತೆಯ ಹೋರಾಟದಲ್ಲಿ ನರಕದ ಅನುಭವ
ಪ್ಯಾರಡೈಸ್ ವಿಮರ್ಶೆ

ದಿ ಪ್ಯಾರಡೈಸ್

A
  • Time - 204 Minutes
  • Released - ಸೆಪ್ಟೆಂಬರ್ 24, 2026
  • Language - ತೆಲುಗು
  • Genre - ಆ್ಯಕ್ಷನ್, ಡ್ರಾಮಾ
Cast - ನಾನಿ, ಮೋಹನ್ ಬಾಬು, ರಾಘವ್ ಜುಯಲ್, ಕಯಾದು ಲೋಹರ್
Director - ಶ್ರೀಕಾಂತ್ ಒಡೆಲಾ
2.5
Critic's Rating
ರಾಜೇಶ್ ದುಗ್ಗುಮನೆ
|

Updated on:Sep 24, 2026 | 9:09 AM

Share

ನಟ ನಾನಿ ಹಾಗೂ ನಿರ್ದೇಶಕ ಶ್ರೀಕಾಂತ್ ಒಡೆಲಾ ಕಾಂಬಿನೇಷನ್​ನ ‘ದಸರಾ’ ಸಿನಿಮಾ ಯಶಸ್ಸು ಕಂಡಿತ್ತು. ಈ ಹಿನ್ನೆಲೆಯಲ್ಲಿ ನಾನಿ ಹಾಗೂ ಶ್ರೀಕಾಂತ್ ಜೋಡಿ ‘ಪ್ಯಾರಡೈಸ್’ ಸಿನಿಮಾಗೆ ಮತ್ತೆ ಒಂದಾಗಿತ್ತು. ಈ ಸಿನಿಮಾದ ಬಗ್ಗೆ ಕುತೂಹಲ ಮೂಡಲು ಕಾರಣ ಸಿನಿಮಾಗೆ ಯಾವುದೇ ಟ್ರೇಲರ್ ಇಲ್ಲದಿರುವುದು. ಹಾಗಾದರೆ, ‘ಪ್ಯಾರಡೈಸ್’ ಸಿನಿಮಾ ಹೇಗಿದೆ? ಈ ಚಿತ್ರದ ಪ್ಲಸ್ ಏನು? ಮೈನಸ್ ಏನು? ಇಲ್ಲಿದೆ ಸಿನಿಮಾ ವಿಮರ್ಶೆ.

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು ಹಲವು ವರ್ಷಗಳೇ ಕಳೆದಿರುತ್ತವೆ. ಆದರೆ, ಸವರಿ ಬುಡಕಟ್ಟು ಜನಾಂಗಕ್ಕೆ ಮಾತ್ರ ಅಸ್ಮಿತೆ ಅನ್ನೋದೇ ಇರುವುದಿಲ್ಲ. ಈ ಬುಡಕಟ್ಟು ಜನಾಂಗದವರು ಶಿಕಿಂಜ ಮಾಲೀಕ್ (ಮೋಹನ್ ಬಾಬು) ಅವರ ಆರೈಕೆಯಲ್ಲಿ ವಾಸಿಸುತ್ತಾರೆ. ಇವರಿಗೆ ಮಾನ್ಯತೆ ಕೊಡಲು ಅವರ ಕುಟುಂಬ ಒಪ್ಪಿರುವುದಿಲ್ಲ. ಇವರನ್ನು ಕೀಳಾಗಿ ಕಾಣಲಾಗುತ್ತದೆ. ಅದೆಷ್ಟರಮಟ್ಟಿಗೆ ಅಂದರೆ ಇವರಿಗೆ ಎಲ್ಲಿಯೂ ಎಂಟ್ರಿ ಇಲ್ಲ. ದೇಹದ ಗಬ್ಬು ವಾಸನೆ ಬರಬಾರದು ಎಂದು ಎಲ್ಲೇ ತೆರಳುವುದಾದರೂ ಇವರು ಊದಿನಬತ್ತಿ ಹಿಡಿದು ತೆರಳಬೇಕು. ತಮ್ಮ ಅಸ್ಮಿತೆಗಾಗಿ ಈ ಬುಡಕಟ್ಟು ಜನಾಂಗದ ಸಮ್ಮಕ್ಕ (ಸೋನಾಲಿ ಕುಲಕರ್ಣಿ) ಹೋರಾಡುತ್ತಾಳೆ. ಆಕೆಯ ಮಗ ಜಾಡಲ್ (ನಾನಿ) ಕೊಲೆ ಪ್ರಕರಣಕ್ಕಾಗಿ 14 ವರ್ಷಗಳ ಜೈಲು ಸೇರಿ, ನಂತರ ಹಿಂತಿರುಗುತ್ತಾನೆ. ಅಲ್ಲಿಂದ ಹೊಸ ಹೋರಾಟದ ಕಥೆ ಶುರುವಾಗುತ್ತದೆ. ಈ ಹೋರಾಟದಲ್ಲಿ ಆತ ಗೆಲ್ಲುತ್ತಾನಾ? ಇದಕ್ಕೆ ಏನೆಲ್ಲ ಅನುಭವಿಸುತ್ತಾನೆ ಅನ್ನೋದು ಸಿನಿಮಾದ ಕಥೆ.

ಪ್ಯಾರಡೈಸ್ (ಸ್ವರ್ಗ)  ಸಿನಿಮಾ ಟೈಟಲ್​​ಗಷ್ಟೇ ಸೀಮಿತ. ಸಿನಿಮಾದ ಪ್ರತಿ ಹಂತವೂ ನರಕವೇ. ಸಿನಿಮಾದಲ್ಲಿ ಗಮನ ಸೆಳೆಯುವ ವಿಷಯ ಅಂತ ಇರೋದು ನಾನಿ ನಟನೆ, ಡ್ಯಾನ್ಸ್ ಹಾಗೂ ಮೇಕಿಂಗ್ ಮಾತ್ರ. ಮೊದಲಾರ್ಧವನ್ನಾದರೂ ಹೇಗೋ ಸಹಿಸಿಕೊಳ್ಳಬಹುದು. ಆದರೆ, ದ್ವಿತೀಯಾರ್ಧದಲ್ಲಿ ಏನಾಗುತ್ತಿದೆ? ಇದನ್ನೆಲ್ಲ ನಿರ್ದೇಶಕರು ಏಕೆ ಸೇರಿಸಿದರು ಎಂಬ ಗೊಂದಲದಲ್ಲೇ ಕಳೆದು ಹೋಗುತ್ತದೆ.

ಇಲ್ಲಿ ಹೀರೋಗೂ ವೈಲೆನ್ಸ್ ಇಷ್ಟ, ವೈಲೆನ್ಸ್​​ಗೂ ಹೀರೋ ಇಷ್ಟ. ಹೀಗಾಗಿ, ಇಬ್ಬರೂ ಇದನ್ನು ಅವಾಯ್ಡ್ ಮಾಡೋಕೆ ಇಷ್ಟಪಡೋದೆ ಇಲ್ಲ. ಇದರಿಂದ ರಕ್ತದೋಕುಳಿ ಹರಿಯುತ್ತದೆ. ಎ ರೇಟಿಂಗ್ ಕೊಟ್ಟಿದ್ದಾರೆ ಎಂದರೆ ಅಲ್ಲಿ ವೈಲೆನ್ಸ್ ಕೊಂಚ ಹೆಚ್ಚೇ ಇರುತ್ತದೆ ಎಂಬುದು ಅರ್ಥವಾಗುವಂತಹ ವಿಷಯ. ಆದರೆ, ಸಿನಿಮಾದಲ್ಲಿ ಬರುವ ಕೆಲವ ದೃಶ್ಯಗಳು ‘ಅತಿಯಾದ ವೈಲೆನ್ಸ್​​’ ಗಡಿಯನ್ನು ಮೀರಿ ಮುಂದಕ್ಕೆ ಹೋಗುತ್ತದೆ. ಇದು ಪ್ರೇಕ್ಷಕನನ್ನೇ ಅಲುಗಾಡಿಸಿಬಿಡುತ್ತದೆ. ‘ಉಳಿದ ವಿಷಯ ಬಿಟ್ಟು, ರಕ್ತ ಹರಿಸುವುದೊಂದೇ  ನಿರ್ದೇಶಕನ ಆಶಯ ಎಂಬಂತೆ ಕಾಣಿಸುತ್ತದೆ. ಇಷ್ಟೊಂದು ರಕ್ತ ಹರಿಸುವ ಅವಶ್ಯಕತೆ ಇತ್ತೇ ಎನ್ನುವ ಪ್ರಶ್ನೆ ಮೂಡುತ್ತದೆ.

‘ಪ್ಯಾರಡೈಸ್’ ಸಿನಿಮಾದ ಮೊದಲಾರ್ಧದ ಕಥೆ ಉತ್ತಮವಾಗಿದೆ. ಇಂಟರವಲ್​ ಬ್ಲಾಕ್ ಫೈಟ್ ಕೂಡ ಗಮನ ಸೆಳೆಯುತ್ತದೆ. ಆದರೆ, ನಂತರದಲ್ಲಿ ಕಥೆ, ನಿರೂಪಣೆ ಎಲ್ಲವೂ ಹಳಿ ತಪ್ಪಿ ಸಾಗುತ್ತದೆ. ಲಾಜಿಕ್​ಗಳಿಗಂತೂ ಇಲ್ಲಿ ಜಾಗವೇ ಇಲ್ಲ. ಅದೆಷ್ಟರಮಟ್ಟಿಗೆ ಎಂದರೆ, ಕೇವಲ ಆಗಸದಿಂದ ಬೀಳುವ ಮಳೆಯಿಂದ, ನಿಂತು ಹೋದ ಹೀರೋನ ಉಸಿರು ಮತ್ತೆ ದೇಹ ಸೇರಿಕೊಳ್ಳುತ್ತದೆ. ಇನ್ನು, ಹಲವು ದೃಶ್ಯಗಳ ಮೇಕಿಂಗ್​ಗೆ ಕೆಜಿಎಫ್ ಸ್ಫೂರ್ತಿ ಇದ್ದಂತೆ ಇದೆ.

ಸಿನಿಮಾದಲ್ಲಿ ನಾನಿ ನಟನೆ ಗಮನ ಸೆಳೆಯುತ್ತದೆ. ಆದರೆ, ಉದ್ದ ಕೂದಲ ಲುಕ್ ಅವರಿಗೆ ಅಷ್ಟು ಹೊಂದಿಕೆ ಆಗುತ್ತಿಲ್ಲ. ಸಿನಿಮಾದಲ್ಲಿ ನಟನೆಯ ಜೊತೆಗೆ ಡ್ಯಾನ್ಸ್ ಕೂಡ ಉತ್ತಮವಾಗಿ ಮಾಡಿದ್ದಾರೆ. ಮೋಹನ್ ಬಾಬು ಮೊದಲಾರ್ಧದಲ್ಲಿ ತಮ್ಮ ವಿಂಟೇಜ್ ಲುಕ್​ನಲ್ಲಿ ಕಾಣಿಸಿದರೂ, ದ್ವಿತೀಯಾರ್ಧದಲ್ಲಿ ಡಮ್ಮಿ ಎನಿಸುತ್ತಾರೆ. ಸೋನಾಲಿ ಅವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ರಾಘವ್ ಜುಯಲ್ ಅವರು ಕೆಲವೇ ದೃಶ್ಯಗಳಲ್ಲಿ ಕಾಣಿಸಿಕೊಂಡರೂ ಮೆಚ್ಚುಗೆ ಪಡೆಯುತ್ತಾರೆ. ಕಯಾದು ಲೋಹರ್ ಕೇವಲ ಅತಿಯಾದ ಗ್ಲಾಮರ್​ಗೆ ಸೀಮಿತವಾಗಿದ್ದಾರೆ.

ಅನಿರುದ್ಧ ರವಿಚಂದರ್ ಇದ್ದಾರೆ ಎಂದರೆ ಮ್ಯೂಸಿಕ್ ಗಮನ ಸೆಳೆಯುತ್ತದೆ ಎಂಬ ನಂಬಿಕೆ ಇರುತ್ತದೆ. ಆದರೆ, ಕೆಲ ಹಾಡು ಬಿಟ್ಟರೆ, ಬಿಜಿಎಂ ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ನಿರ್ದೇಶಕರು ವೈಲೆನ್ಸ್​​ಗೆ ಕೊಟ್ಟ ಆದ್ಯತೆಯನ್ನು ಕಥೆಗೆ ಹಾಗೂ ಕಥೆಯ ಆಶಯಕ್ಕೆ ಕೊಟ್ಟಿದ್ದರೆ ಸಿನಿಮಾ ಮತ್ತಷ್ಟು ಸುಂದರವಾಗಿ ಕಾಣುತ್ತಿತ್ತೇನೋ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:00 am, Thu, 24 September 26

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More