ಸಮೋಸಾ ತಿನ್ನಲು ರೈಲು ನಿಲ್ಲಿಸಿದ್ರಾ ಲೊಕೊ ಪೈಲಟ್?
ಸಮೋಸಾ ಖರೀದಿಸಲು ಲೋಕೋ ಪೈಲಟ್ ರೈಲು ನಿಲ್ಲಿಸಿದರು ಎಂಬ ವೈರಲ್ ವಿಡಿಯೋ ಸುಳ್ಳು ಎಂದು ಭಾರತೀಯ ರೈಲ್ವೆ ಸ್ಪಷ್ಟಪಡಿಸಿದೆ. ವಾಸ್ತವವಾಗಿ, ಅದು ಸರಕು ಸಾಗಣೆ ರೈಲಾಗಿದ್ದು, ಇಂಜಿನಿಯರಿಂಗ್ ಕಾಮಗಾರಿಗಳಿಗಾಗಿ ನಿಗದಿತವಾಗಿ ನಿಂತಿತ್ತು. ಈ ವಿರಾಮದ ಸಮಯದಲ್ಲಿ, ಸಹಾಯಕ ಲೋಕೋ ಪೈಲಟ್ ತಿಂಡಿ ಖರೀದಿಸಿದ್ದರು. ಸಾರ್ವಜನಿಕರನ್ನು ದಾರಿ ತಪ್ಪಿಸಿದ ಈ ಸುಳ್ಳು ಸುದ್ದಿ ವಿರುದ್ಧ ರೈಲ್ವೆ ಆಕ್ರೋಶ ವ್ಯಕ್ತಪಡಿಸಿದೆ.

ಇಂದೋರ್, ಜುಲೈ 08: ಸಮೋಸಾ ಮತ್ತು ಕಚೋರಿ ಖರೀದಿಸಲು ಲೊಕೊ ಪೈಲಟ್ ಒಬ್ಬರು ರೈಲು(Train) ನಿಲ್ಲಿಸಿದ್ದಾರೆ ಎಂದು ಆರೋಪಿಸಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆದಿದೆ. ಲಕ್ಷಾಂತರ ಜನರು ಇದನ್ನು ವೀಕ್ಷಿಸಿದ್ದು, ಇದು ರೈಲ್ವೆ ಸಿಬ್ಬಂದಿಯ ಬೇಜವಾಬ್ದಾರಿ ಎಂದು ಟೀಕಿಸಿದ್ದಾರೆ. ಆದರೆ ಈಗ ಈ ಇಡೀ ಘಟನೆಗೆ ಭಾರತೀಯ ರೈಲ್ವೆ ಇಲಾಖೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅಸಲಿ ಸತ್ಯವನ್ನು ಜನರ ಮುಂದಿಟ್ಟಿದೆ.
ವೈರಲ್ ವಿಡಿಯೋದಲ್ಲೇನಿತ್ತು? ವೈರಲ್ ಆದ ವಿಡಿಯೋದಲ್ಲಿ ‘ಇಂದೋರ್-ಮೋವ್ ಡೆಮು’ಪ್ರಯಾಣಿಕರ ರೈಲಿನ ಲೊಕೊ ಪೈಲಟ್ ಹಳಿಯ ಪಕ್ಕದ ಅಂಗಡಿಯಿಂದ ಸಮೋಸಾ ಖರೀದಿಸಲು ರೈಲನ್ನು ನಿಲ್ಲಿಸಿದ್ದರು. ಅವರು ತಿಂಡಿ ಖರೀದಿಸಿ ರೈಲು ಹತ್ತಿದ ತಕ್ಷಣವೇ ರೈಲು ಚಲಿಸಲು ಪ್ರಾರಂಭಿಸಿತು ಎಂದು ವಿಡಿಯೋ ಮಾಡಿದ ವ್ಯಕ್ತಿ ಸಾರ್ವಜನಿಕರನ್ನು ದಾರಿ ತಪ್ಪಿಸಿದ್ದ.
ರೈಲ್ವೆ ಇಲಾಖೆ ನಡೆಸಿದ ‘ಸತ್ಯ ಪರಿಶೀಲನೆ’ ವಿವಾದ ದೊಡ್ಡದಾಗುತ್ತಿದ್ದಂತೆ ಎಚ್ಚೆತ್ತ ಪಶ್ಚಿಮ ರೈಲ್ವೆ ವಿಡಿಯೋವನ್ನು ಸಂಪೂರ್ಣವಾಗಿ ಪರಿಶೀಲಿಸಿ ಅಧಿಕೃತ ಎಕ್ಸ್ ಖಾತೆಯಲ್ಲಿ ಸ್ಪಷ್ಟನೆ ನೀಡಿದೆ.
ಮೊದಲನೆಯದಾಗಿ, ವಿಡಿಯೋದಲ್ಲಿರುವ ರೈಲು ಯಾವುದೇ ಪ್ರಯಾಣಿಕರ (DEMU) ರೈಲಲ್ಲ. ಅದು ‘ಕಾನ್ಕಾರ್ ಗ್ರೀನ್ ಫೀಲ್ಡ್ ಪ್ರೈವೇಟ್ ಟರ್ಮಿನಸ್’ಗೆ ಸೇರಿದ ಸರಕು ಸಾಗಣೆ ರೈಲಾಗಿದೆ.
Viral Video Sparks Railway Probe in Indore!
A loco pilot of the Indore-Mhow DEMU train allegedly halted the train midway just to buy samosas from a roadside shop beside the tracks.
The clip has gone viral, prompting Indian Railways to order an immediate inquiry. Samosa stop or… pic.twitter.com/RLtwQEtmAH
— Siraj Noorani (@sirajnoorani) July 8, 2026
ತಿಂಡಿಗಾಗಿ ರೈಲು ನಿಂತಿಲ್ಲ: ರೈಲ್ವೆ ಯಾರ್ಡ್‌ನಲ್ಲಿ ಮೊದಲೇ ನಿಗದಿಯಾಗಿದ್ದ ತುರ್ತು ಎಂಜಿನಿಯರಿಂಗ್ ಕಾಮಗಾರಿಗಳ (Engineering Work) ಕಾರಣದಿಂದಾಗಿ, ಆ ರೈಲನ್ನು ಆರ್‌ಎಯು ಹೋಮ್ ಸಿಗ್ನಲ್ ಬಳಿ ಮೊದಲೇ ನಿಲ್ಲಿಸಲಾಗಿತ್ತು. ರೈಲು ಅಧಿಕೃತವಾಗಿ ಸಿಗ್ನಲ್‌ನಲ್ಲಿ ನಿಂತಿದ್ದ ಆ ಬಿಡುವಿನ ಸಮಯದಲ್ಲಿ, ಹಸಿವಾಗಿದ್ದರಿಂದ ಸಹಾಯಕ ಲೊಕೊ ಪೈಲಟ್ ಕೆಳಗಿಳಿದು ಪಕ್ಕದ ಅಂಗಡಿಯಿಂದ ಆಹಾರ ಖರೀದಿಸಿದ್ದರು.
ಮತ್ತಷ್ಟು ಓದಿ: Video: ಆತುರದಿಂದ ಹಳಿ ದಾಟುವಾಗ ಬಂದೇ ಬಿಡ್ತು ರೈಲು, ಮಕ್ಕಳನ್ನು ಎದೆಗಪ್ಪಿ ಕುಳಿತ ಮಹಿಳೆ
ಅಧಿಕೃತ ಕಾರಣಗಳಿಗಾಗಿ ರೈಲು ನಿಂತಿದ್ದಾಗ ಸಿಬ್ಬಂದಿ ಆಹಾರ ಖರೀದಿಸಿದ್ದನ್ನು, ಕೇವಲ ತಿಂಡಿಗಾಗಿಯೇ ರೈಲು ನಿಲ್ಲಿಸಲಾಗಿದೆ ಎಂದು ಆಯ್ದ ಭಾಗಗಳನ್ನು ಎಡಿಟ್ ಮಾಡಿ ತಪ್ಪು ನಿರೂಪಣೆ ಮಾಡಲಾಗಿದೆ. ಇಂತಹ ಸುಳ್ಳು ಸುದ್ದಿಗಳು ಸಾರ್ವಜನಿಕರಲ್ಲಿ ಇಲಾಖೆಯ ಮೇಲಿನ ನಂಬಿಕೆಯನ್ನು ಹಾಳುಮಾಡುತ್ತವೆ. ಹಂಚಿಕೊಳ್ಳುವ ಮುನ್ನ ಸತ್ಯಾಸತ್ಯತೆ ಪರಿಶೀಲಿಸಿ ಎಂದು ಪಶ್ಚಿಮ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.
ರೈಲ್ವೆ ನಿಯಮಗಳ ಹೆಚ್ಚುವರಿ ಮಾಹಿತಿ ಭಾರತೀಯ ರೈಲ್ವೆ ನಿಯಮಾವಳಿಗಳ ಪ್ರಕಾರ, ಗೂಡ್ಸ್ ರೈಲುಗಳು ಸಿಗ್ನಲ್ ಅಥವಾ ಕ್ರಾಸಿಂಗ್‌ಗಾಗಿ ಗಂಟೆಗಟ್ಟಲೆ ಕಾಯಬೇಕಾಗಿ ಬರುತ್ತದೆ. ಅಂತಹ ಸಂದರ್ಭಗಳಲ್ಲಿ ಇಂಜಿನ್ ಚಾಲನೆಯಲ್ಲಿಟ್ಟುಕೊಂಡೇ, ಸ್ಟೇಷನ್ ಮಾಸ್ಟರ್ ಅನುಮತಿ ಪಡೆದು ಸಿಬ್ಬಂದಿ ಆಹಾರ ಅಥವಾ ನೀರನ್ನು ಖರೀದಿಸಲು ಅವಕಾಶವಿರುತ್ತದೆ. ಸದ್ಯ ಪಿಟಿಐ ಸೇರಿದಂತೆ ಪ್ರಮುಖ ಮಾಧ್ಯಮಗಳು ರೈಲ್ವೆಯ ಈ ಫ್ಯಾಕ್ಟ್ ಚೆಕ್ ಅನ್ನು ಪ್ರಕಟಿಸಿದ್ದು, ಸುಳ್ಳು ಸುದ್ದಿ ಹರಡಿದವರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




