ನವದೆಹಲಿ, ಏಪ್ರಿಲ್ 27: ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ 15ನೇ ಪಟ್ಟಿ ಬಿಡುಗಡೆಯಾಗಿದ್ದು, ಸಂಸದೆ ಪೂನಂ ಮಹಾಜನ್ಗೆ (Poonam Mahajan) ಟಿಕೆಟ್ ನೀಡಿಲ್ಲ. 26/11ರ ಮುಂಬೈ ದಾಳಿಯ (Mumbai Attack) ಉಗ್ರ ಅಜ್ಮಲ್ ಕಸಬ್‌ನನ್ನು (Ajmal Kasab) ಗಲ್ಲಿಗೇರಿಸುವಂತೆ ಮಾಡಲು ಸರ್ಕಾರದ ಪರ ವಾದ ಮಂಡಿಸಿದ್ದ ವಕೀಲ ಉಜ್ವಲ್ ನಿಕಮ್ (Ujjwal Nikam) ಮುಂಬೈ ನಾರ್ತ್ ಸೆಂಟ್ರಲ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಕಣಕ್ಕಿಳಿಸಿದೆ. ಉಜ್ವಲ್ ನಿಕಮ್ ದೇಶದ ಅತ್ಯಂತ ಪ್ರಸಿದ್ಧ ಸರ್ಕಾರಿ ವಕೀಲರಲ್ಲಿ ಒಬ್ಬರಾಗಿದ್ದರು. ಅವರು ಭಯೋತ್ಪಾದಕ ಅಜ್ಮಲ್ ಕಸಬ್‌ನನ್ನು ಗಲ್ಲಿಗೇರಿಸಲು ಸಂಬಂಧಪಟ್ಟಂತೆ ವಾದ ಮಂಡಿಸಿದ್ದು, 1993 ರ ಸರಣಿ ಬಾಂಬ್ ಸ್ಫೋಟ, ಗುಲ್ಶನ್ ಕುಮಾರ್ ಹತ್ಯೆ ಪ್ರಕರಣ ಮತ್ತು ಪ್ರಮೋದ್ ಮಹಾಜನ್ ಹತ್ಯೆಯಂಥ ಉನ್ನತ ಪ್ರಕರಣಗಳಲ್ಲಿ ಸರ್ಕಾರದ ಪರವಾಗಿ ವಾದ ಮಂಡಿಸಿದ್ದಾರೆ.
ಅನೇಕ ಸಮೀಕ್ಷೆಗಳಲ್ಲಿ ಸಂಸದೆ ಪೂನಂ ಮಹಾಜನ್ ಬಗ್ಗೆ ನಕಾರಾತ್ಮಕ ಅಭಿಪ್ರಾಯ ವ್ಯಕ್ತವಾಗಿದ್ದರಿಂದ ಹಾಲಿ ಸಂಸದೆ ಪೂನಂ ಮಹಾಜನ್ ಅವರನ್ನು ಕೈಬಿಡಲು ಬಿಜೆಪಿ ನಿರ್ಧರಿಸಿದೆ. ಮುಂಬೈ ಬಿಜೆಪಿ ಮುಖ್ಯಸ್ಥ ಆಶಿಶ್ ಶೆಲಾರ್ ಅವರ ಹೆಸರು ಕೂಡ ಚರ್ಚೆಯಾಗಿದ್ದು, ಅವರು ಚನಾವಣೆಯಲ್ಲಿ ಕಣಕ್ಕಿಳಿಯಲು ನಿರಾಕರಿಸಿದ್ದರು ಎನ್ನಲಾಗಿತ್ತು. ಈ ಸ್ಥಾನಕ್ಕಾಗಿ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಅವರನ್ನು ಸಹ ಬಿಜೆಪಿ ಸಂಪರ್ಕಿಸಿತ್ತು ಎಂದು ಕೆಲವು ಮೂಲಗಳು ಹೇಳಿವೆ. 2009 ರಿಂದ 2014 ರವರೆಗೆ ಸಂಸದರಾಗಿದ್ದ ಕಾಂಗ್ರೆಸ್‌ನ ಪ್ರಿಯಾ ದತ್ ಅವರನ್ನು ಸೋಲಿಸಿ ಪೂನಂ ಮಹಾಜನ್ 2014 ಮತ್ತು 2019 ರಲ್ಲಿ ಸಂಸದೆಯಾಗಿದ್ದರು.
ಪೂನಂ ಮಹಾಜನ್ 2006 ರಲ್ಲಿ ತನ್ನ ತಂದೆ ಪ್ರಮೋದ್ ಮಹಾಜನ್ ಹತ್ಯೆಯ ನಂತರ ಬಿಜೆಪಿ ಸೇರಿದ್ದರು. 2009 ರಲ್ಲಿ, ಅವರು ಮೊದಲ ಬಾರಿಗೆ ಘಾಟ್ಕೋಪರ್ ಪಶ್ಚಿಮದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ ಚುನಾವಣೆಯಲ್ಲಿ ಸೋತರು. 2014 ರಲ್ಲಿ ಅವರು ಮುಂಬೈ ನಾರ್ತ್ ಸೆಂಟ್ರಲ್ ಕ್ಷೇತ್ರದಿಂದ ಕಾಂಗ್ರೆಸ್‌ನ ಪ್ರಿಯಾ ದತ್ ಅವರನ್ನು ಸೋಲಿಸಿದರು.
ಇದನ್ನೂ ಓದಿ: ಕಾಂಗ್ರೆಸ್ಗೆ ನಮ್ಮ ಮತ ಬೇಕು, ಆದರೆ ಮುಸ್ಲಿಮರ ನಾಯಕತ್ವ ಬೇಡ: ಕಾಂಗ್ರೆಸ್ ನಾಯಕ
ಪೂನಂ ಮಹಾಜನ್ ಅಮೆರಿಕದ ಟೆಕ್ಸಾಸ್‌ನಲ್ಲಿ ಪೈಲಟ್ ತರಬೇತಿ ಪಡೆದಿದ್ದು, ವೃತ್ತಿನಿರತ ಪೈಲಟ್ ಆಗಿದ್ದವರು. ಅವರು ಸುಮಾರು 300 ಗಂಟೆಗಳ ಹಾರಾಟದ ಅನುಭವವನ್ನು ಹೊಂದಿದ್ದಾರೆ. 2012 ರಲ್ಲಿ ಬ್ರೈಟನ್ ಸ್ಕೂಲ್ ಆಫ್ ಬ್ಯುಸಿನೆಸ್ ಅಂಡ್ ಮ್ಯಾನೇಜ್‌ಮೆಂಟ್‌ನಿಂದ ಬಿಟೆಕ್ ಪದವಿಯನ್ನು ಪೂರ್ಣಗೊಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:54 pm, Sat, 27 April 24