AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿವೃತ್ತ ವಾಯುಪಡೆ ಅಧಿಕಾರಿ ಮೇಲೆ ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಗಳು

ಲಕ್ನೋದ ಸುಶಾಂತ್ ಗಾಲ್ಫ್ ಸಿಟಿಯಲ್ಲಿ ನಿವೃತ್ತ ವಾಯುಪಡೆ ಅಧಿಕಾರಿ ಅವಧೇಶ್ ಕುಮಾರ್ ಪಾಠಕ್ ಅವರ ಮೇಲೆ ಜನವರಿ 30ರಂದು ಗುಂಡಿನ ದಾಳಿ ನಡೆದಿದೆ. ತಮ್ಮ ರೆಸ್ಟೋರೆಂಟ್‌ನಿಂದ ಹಿಂದಿರುಗುತ್ತಿದ್ದಾಗ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಪಾಠಕ್ ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಸ್ಥಿರವಾಗಿದೆ. ಪೊಲೀಸರು ವ್ಯವಹಾರ ವೈಷಮ್ಯ, ಆಸ್ತಿ ವಿವಾದದ ಹಿನ್ನೆಲೆಯಲ್ಲಿ ತನಿಖೆ ನಡೆಸುತ್ತಿದ್ದು, ಆರೋಪಿಗಳ ಪತ್ತೆಗೆ ಐದು ವಿಶೇಷ ತಂಡಗಳನ್ನು ರಚಿಸಲಾಗಿದೆ.

ನಿವೃತ್ತ ವಾಯುಪಡೆ ಅಧಿಕಾರಿ ಮೇಲೆ ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಗಳು
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Jan 31, 2026 | 4:44 PM

Share

ಉತ್ತರ ಪ್ರದೇಶ, ಜ.31: ಲಕ್ನೋದ ಸುಶಾಂತ್ ಗಾಲ್ಫ್ ಸಿಟಿ (Sushant Golf City) ಪ್ರದೇಶದಲ್ಲಿ ನಿನ್ನೆ ರಾತ್ರಿ (ಜನವರಿ 30, 2026) ನಡೆದ ಘಟನೆಯು ಉತ್ತರ ಪ್ರದೇಶದಾದ್ಯಂತ ಆತಂಕ ಮೂಡಿಸಿದೆ. ನಿವೃತ್ತ ವಾಯುಪಡೆ ಅಧಿಕಾರಿಯೊಬ್ಬರ ಮೇಲೆ ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಅವಧೇಶ್ ಕುಮಾರ್ ಪಾಠಕ್ (60) ಎಂಬುವವರ ಮೇಲೆ ದಾಳಿಯನ್ನು ನಡೆಸಿದ್ದಾರೆ. ಇವರು ಭಾರತೀಯ ವಾಯುಪಡೆಯ ನಿವೃತ್ತ ಅಧಿಕಾರಿಯಾಗಿದ್ದು, ಪ್ರಸ್ತುತ ಲಕ್ನೋದ ಸೆಕ್ಟರ್-D ಶಾಪಿಂಗ್ ಸ್ಕ್ವೇರ್ ಬಳಿ ‘ಕ್ಲೌಡ್ ಕಿಚನ್’ ಮತ್ತು ರೆಸ್ಟೋರೆಂಟ್ ನಡೆಸುತ್ತಿದ್ದಾರೆ. ತಮ್ಮ ರೆಸ್ಟೋರೆಂಟ್ ಕೆಲಸ ಮುಗಿಸಿ ಪತ್ನಿಯೊಂದಿಗೆ ಕಾರಿನ ಕಡೆಗೆ ನಡೆಯುತ್ತಿದ್ದಾಗ, ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಏಕಾಏಕಿ ಗುಂಡು ಹಾರಿಸಿದ್ದಾರೆ. ಒಂದು ಗುಂಡು ಪಾಠಕ್ ಅವರ ಭುಜಕ್ಕೆ ಮತ್ತು ಇನ್ನೊಂದು ಬಲಗೈ ಮೇಲ್ಭಾಗಕ್ಕೆ ತಗುಲಿದೆ ಎನ್ನಲಾಗಿದೆ. ಘಟನೆಯ ನಂತರ ದಾಳಿಕೋರರು ಸ್ಥಳದಿಂದ ಪರಾರಿಯಾಗಿದ್ದಾರೆ.

ತಕ್ಷಣವೇ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರ ಪ್ರಕಾರ, ಅವರ ಸ್ಥಿತಿ ಪ್ರಸ್ತುತ ಸ್ಥಿರವಾಗಿದೆ ಮತ್ತು ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಪಾಠಕ್ ಅವರ ಪತ್ನಿ ಮಿಥ್ಲೇಶ್ ನೀಡಿದ ದೂರಿನ ಮೇರೆಗೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಡಿಸಿಪಿ ದಕ್ಷಿಣ ನಿಪುಣ್ ಅಗರ್ವಾಲ್ ನೇತೃತ್ವದಲ್ಲಿ ಒಂದು ತಂಡವನ್ನು ರಚನೆ ಮಾಡಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ವೈಯಕ್ತಿಕ ದ್ವೇಷ ಅಥವಾ ವ್ಯವಹಾರದ ಪೈಪೋಟಿಯ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆಯೇ ಎಂಬ ಆಯಾಮದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಲಕ್ನೋದ ಅತಿ ಶ್ರೀಮಂತ ಮತ್ತು ಸುರಕ್ಷಿತ ಎನ್ನಲಾಗುವ ಸುಶಾಂತ್ ಗಾಲ್ಫ್ ಸಿಟಿ ಏರಿಯಾದಲ್ಲೇ ಈ ಹತ್ಯೆಯತ್ನ ನಡೆದಿರುವುದು ಸ್ಥಳೀಯ ನಿವಾಸಿಗಳಲ್ಲಿ ಭೀತಿ ಉಂಟುಮಾಡಿದೆ.

ಪಾಠಕ್ ಅವರು ಸುಶಾಂತ್ ಗಾಲ್ಫ್ ಸಿಟಿಯ ಪ್ರಮುಖ ಸ್ಥಳದಲ್ಲಿ ‘ಕ್ಲೌಡ್ ಕಿಚನ್’ ಮತ್ತು ರೆಸ್ಟೋರೆಂಟ್ ನಡೆಸುತ್ತಿದ್ದರು. ಈ ಭಾಗದಲ್ಲಿ ರೆಸ್ಟೋರೆಂಟ್ ವ್ಯವಹಾರಕ್ಕೆ ಭಾರೀ ಬೇಡಿಕೆ ಇದೆ. ಈ ಕಾರಣಕ್ಕಾಗಿ ಕಿರಿಕ್​​​​​​​ ನಡೆದಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಇದರ ಜತೆಗೆ ಅಧಿಕಾರಿಗಳು ಕುಟುಂಬಕ್ಕೆ ಸಂಬಂಧಿಸಿದ ದ್ವೇಷದ ಬಗ್ಗೆಯೂ ಮಾಹಿತಿ ಕಲೆಹಾಕುತ್ತಿದ್ದಾರೆ. ದಾಳಿಕೋರರು ನೇರವಾಗಿ ಅವರನ್ನು ಗುರಿಯಾಗಿಸಿಕೊಂಡು ಬಂದಿರುವುದರಿಂದ, ಇದು ಪೂರ್ವನಿಯೋಜಿತ ಕೃತ್ಯ ಎಂಬುದು ಸ್ಪಷ್ಟವಾಗಿದೆ. ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಇಂತಹ ಕೆಲವು ಪ್ರಕರಣಗಳಲ್ಲಿ ಆಸ್ತಿ ವಿವಾದವು ಪ್ರಮುಖ ಕಾರಣವಾಗಿರುವುದು ಕಂಡುಬಂದಿದೆ. ಆದ್ದರಿಂದ, ಪಾಠಕ್ ಅವರ ಮೂಲ ಊರು (ಸಂತ ಕಬೀರ್ ನಗರ) ಲಕ್ನೋದಲ್ಲಿನ ಆಸ್ತಿಗಳ ಬಗ್ಗೆ ಯಾವುದೇ ವಿವಾದಗಳಿವೆಯೇ ಎಂದು ತನಿಖೆ ನಡೆಸಲಾಗುತ್ತಿದೆ. ಆರಂಭದಲ್ಲಿ ಇದೊಂದು ಸುಲಿಗೆ ಪ್ರಯತ್ನವಿರಬಹುದು ಎಂದು ಭಾವಿಸಲಾಗಿತ್ತು. ಆದರೆ, ದಾಳಿಕೋರರು ಯಾವುದೇ ಹಣ ಅಥವಾ ವಸ್ತುಗಳನ್ನು ದೋಚದೆ ಕೇವಲ ಗುಂಡು ಹಾರಿಸಿ ಪರಾರಿಯಾಗಿರುವುದು ಇದು ಕೇವಲ ಹತ್ಯೆ ಯತ್ನ ಎಂದು ಹೇಳಲಾಗಿದೆ.

ಇದನ್ನೂ ಓದಿ: ಪಕ್ಷದ ನಾಯಕನ ಜತೆಗೆ ಪತ್ನಿಯ ಅಕ್ರಮ ಸಂಬಂಧ, ನಡು ರಸ್ತೆಯಲ್ಲಿ ಹಿಗ್ಗಾಮುಗ್ಗಾ ಥಳಿಸಿದ ಪತಿ

ರೆಸ್ಟೋರೆಂಟ್‌ನ ಒಳಗೆ ಮತ್ತು ಹೊರಗೆ ಇರುವ ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಳಿಕೋರರ ಚಲನವಲನಗಳು ಸೆರೆಯಾಗಿವೆ. ಲಕ್ನೋ ಪೊಲೀಸರ ಐದು ವಿಶೇಷ ತಂಡಗಳು (SIT) ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲಸ ಮಾಡುತ್ತಿದೆ. ಸ್ಥಳದಲ್ಲಿ ಸಿಕ್ಕಿರುವ ಗುಂಡಿನ ಶೆಲ್‌ಗಳು ಮತ್ತು ಇತರ ಪುರಾವೆಗಳನ್ನು ಫೋರೆನ್ಸಿಕ್ ತಂಡವು ಪರಿಶೀಲಿಸುತ್ತಿದೆ.ಪೊಲೀಸ್ ಕಮಿಷನರ್ ಅವರ ಪ್ರಕಾರ, ಶೀಘ್ರದಲ್ಲೇ ಆರೋಪಿಗಳನ್ನು ಪತ್ತೆಹಚ್ಚಲಾಗುವುದು ಮತ್ತು ದಾಳಿಯ ಹಿಂದಿನ ನಿಖರವಾದ ಕಾರಣಗಳನ್ನು ಬಹಿರಂಗಪಡಿಸಲಾಗುವುದು ಎಂದು ಹೇಳಲಾಗಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ