
ನವದೆಹಲಿ, ಫೆಬ್ರವರಿ 2: ಆ ಮಹಿಳೆ ಹೊಟ್ಟೆ ನೋವಿನಿಂದ ಒದ್ದಾಡುತ್ತಿದ್ದರು. ಅವರು ಅಂದುಕೊಂಡದ್ದಕ್ಕಿಂತ ಮೊದಲೇ ಹೆರಿಗೆ ನೋವು (Delivery Pain) ಕಾಣಿಸಿಕೊಂಡಿದ್ದರಿಂದ ತಕ್ಷಣ ತಮ್ಮ ಹಳ್ಳಿಯಿಂದ ಆಸ್ಪತ್ರೆಗೆ ಹೋಗಲೇಬೇಕಾಗಿತ್ತು. ಆದರೆ, ಆ ಊರಿಗೆ ರಸ್ತೆ ಸರಿ ಇಲ್ಲದ ಕಾರಣದಿಂದ ಆ್ಯಂಬುಲೆನ್ಸ್ (Ambulance) ಬರುವುದೇ ಕಷ್ಟವಾಗಿತ್ತು. ಆದರೂ ಅನಿವಾರ್ಯವಾದ್ದರಿಂದ ಹಾಗೂ ಬೇರೆ ವಾಹನಗಳಲ್ಲಿ ಅವರನ್ನು ಕರೆದುಕೊಂಡು ಹೋಗಲಾಗದ ಸ್ಥಿತಿ ಇದ್ದುದರಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆ್ಯಂಬುಲೆನ್ಸ್ ಕಳುಹಿಸಲು ಮನವಿ ಮಾಡಲಾಗಿತ್ತು.
ಆದರೆ, ಈಗ ಬರುತ್ತೇವೆಂದು ಆ್ಯಂಬುಲೆನ್ಸ್ನವರು ಹೇಳಿದ್ದರಿಂದ ಆ ಮಹಿಳೆ ರಸ್ತೆಯ ಬಳಿ ಹೋಗಿ ನಿಂತು ಕಾಯುತ್ತಿದ್ದರು. ಎಷ್ಟೇ ಹೊತ್ತು ಕಾದರೂ ಆ್ಯಂಬುಲೆನ್ಸ್ ಬರಲೇ ಇಲ್ಲ. ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದ ಅವರು ಇನ್ನು ಕಾಯಲು ಸಾಧ್ಯವೇ ಇಲ್ಲ ಎಂದು ರಸ್ತೆಬದಿಯಲ್ಲೇ ಕುಳಿತರು. ತಾತ್ಕಾಲಿಕ ಪರದೆಯಂತೆ ಟಾರ್ಪಲ್ ಕಟ್ಟಿದ ಆ ಊರಿನ ಮಹಿಳೆಯರು ಟಾರ್ಚ್ ಬೆಳಕು ಹಾಕಿಕೊಂಡು ರಸ್ತೆ ಬದಿಯಲ್ಲೇ ಆ ಮಹಿಳೆಗೆ ಹೆರಿಗೆ ಮಾಡಿಸಿದರು. ಮಧ್ಯಪ್ರದೇಶದ ವಿದಿಶಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಗರ್ಭಿಣಿ ಮಹಿಳೆಯೊಬ್ಬರು ಟಾರ್ಚ್ ಬೆಳಕಿನಲ್ಲಿ ರಸ್ತೆಬದಿಯಲ್ಲಿಯೇ ಮಗುವನ್ನು ಹೆತ್ತಿದ್ದಾರೆ.
ಇದನ್ನೂ ಓದಿ: ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಮಹಿಳೆಗೆ ಹೆರಿಗೆ: ಸರ್ಕಾರಿ ಆಸ್ಪತ್ರೆ ಅವಸ್ಥೆ ವಿಡಿಯೋ ವೈರಲ್
ಕುಟುಂಬದವರ ಪ್ರಕಾರ, ಶನಿವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಗರ್ಭಿಣಿ ಮಹಿಳೆಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಅದಾದ ನಂತರ 108 ಆ್ಯಂಬುಲೆನ್ಸ್ ಸೇವೆಗೆ ಪದೇ ಪದೇ ಫೋನ್ ಮಾಡಲಾಯಿತು. ಆ ಕುಟುಂಬವು ಸುಮಾರು 3 ಗಂಟೆಗಳ ಕಾಲ ಕಾಯುತ್ತಿತ್ತು. ಆದರೆ, ಯಾವುದೇ ಆಂಬ್ಯುಲೆನ್ಸ್ ಬರಲಿಲ್ಲ. ಅಷ್ಟರಲ್ಲಿ ಆ ಮಹಿಳೆಗೆ ನೋವು ಹೆಚ್ಚಾಗಿತ್ತು. ಹೀಗಾಗಿ, ಅವರ ಕುಟುಂಬವು ಅವರನ್ನು ಕಾಲ್ನಡಿಗೆಯಲ್ಲಿಯೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿತು.
ಇದನ್ನೂ ಓದಿ: Viral: ಹೆರಿಗೆಯಾದ 17 ದಿನಕ್ಕೆ ಯುಪಿಎಸ್‌ಸಿ ಪರೀಕ್ಷೆ ಬರೆದು ಐಎಎಸ್ ಅಧಿಕಾರಿಯಾದ ಕೇರಳದ ಮಹಿಳೆ
ಆದರೆ, ಮಧ್ಯದಲ್ಲಿಯೇ ಹೆರಿಗೆ ನೋವು ತೀವ್ರಗೊಂಡ ಕಾರಣ ರಸ್ತೆಬದಿಯಲ್ಲೇ ಹೆರಿಗೆಯನ್ನು ಮಾಡಬೇಕಾಯಿತು. ತೀವ್ರವಾದ ಚಳಿಯಲ್ಲಿಯೇ ಆ ಮಹಿಳೆ ರಸ್ತೆಬದಿ ಮಗುವಿಗೆ ಜನ್ಮ ನೀಡಿದರು. ಆ ಮಹಿಳೆ ಮತ್ತು ಅವರ ಶಿಶುವನ್ನು ಶೀತದಿಂದ ರಕ್ಷಿಸಲು, ಗ್ರಾಮಸ್ಥರು ಬಟ್ಟೆ, ಪ್ಲಾಸ್ಟಿಕ್ ಹಾಳೆಗಳು ಮತ್ತು ಸಾಮಗ್ರಿಗಳನ್ನು ತಂದು ಬೆಚ್ಚಗಿಡಲು ಬೆಂಕಿಯನ್ನು ಹಚ್ಚಿದರು. ಬೆಳಗಿನ ಜಾವ 3.20ರ ಸುಮಾರಿಗೆ ವ್ಯಾನ್ ಚಾಲಕನೊಬ್ಬ ಬಂದು ತಾಯಿ ಮತ್ತು ನವಜಾತ ಶಿಶುವನ್ನು ತನ್ನ ವ್ಯಾನ್‌ನಲ್ಲಿ ಆಸ್ಪತ್ರೆಗೆ ಸಾಗಿಸಿದನು.
ಆರೋಗ್ಯ ಇಲಾಖೆಯ ಪ್ರಕಾರ, ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಆದರೂ ಈ ಘಟನೆಯು ರಾಜ್ಯದಲ್ಲಿ ತುರ್ತು ಆರೋಗ್ಯ ಸೇವೆ ಮತ್ತು ತಾಯಿಯ ಸುರಕ್ಷತೆಯ ಬಗ್ಗೆ ಮತ್ತೊಮ್ಮೆ ಅಹಿತಕರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:35 pm, Mon, 2 February 26