
ಮಂದಸೌರ್, ಆಗಸ್ಟ್ 26: ನಾಯಿ(Dog)ಯೊಂದು ಒಡವೆ ಬ್ಯಾಗ್ ಹೊತ್ತೊಯ್ದಿರುವ ವಿಚಿತ್ರ ಘಟನೆ ಮಧ್ಯಪ್ರದೇಶದ ಆಸ್ಪತ್ರೆಯೊಂದರಲ್ಲಿ ನಡೆದಿದೆ. ಮಹಿಳೆಯೊಬ್ಬರ 4 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 2 ಸಾವಿರ ರೂ. ನಗದು ಇದ್ದ ಚೀಲವನ್ನು ಬೀದಿ ನಾಯಿಯೊಂದು ಆಹಾರವೆಂದು ತಪ್ಪಾಗಿ ಭಾವಿಸಿ ಬಾಯಲ್ಲಿ ಕಚ್ಚಿಕೊಂಡು ಹೋಗಿದ್ದು, ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ.
ಕಾಯಂಪುರ ಗ್ರಾಮದ ನಿವಾಸಿ ಲತಾ ಬಾಯಿ ಎಂಬ ಮಹಿಳೆ ಆಸ್ಪತ್ರೆಯ ಜನರಲ್ ವಾರ್ಡ್‌ನಲ್ಲಿದ್ದಾಗ ತಮ್ಮ ಆಭರಣದ ಬ್ಯಾಗ್ ನಾಪತ್ತೆಯಾಗಿರುವುದನ್ನು ಕಂಡು ಗಾಬರಿಗೊಂಡು ಕೊತ್ವಾಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪೊಲೀಸರು ಕಳ್ಳತನದ ಜಾಡು ಹಿಡಿಯಲು ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಮುಂಜಾನೆ ಸಮಯದಲ್ಲಿ ಬೀದಿ ನಾಯಿಯೊಂದು ವಾರ್ಡ್‌ನೊಳಗೆ ಬಂದು ಬ್ಯಾಗ್ ಅನ್ನು ಕಚ್ಚಿಕೊಂಡು ಆರಾಮವಾಗಿ ಹೊರನಡೆಯುತ್ತಿರುವ ದೃಶ್ಯ ಕಂಡು ಅಚ್ಚರಿಪಟ್ಟರು. ಪೊಲೀಸರು ತಕ್ಷಣ ನಾಯಿ ತೆರಳಿದ ಮಾರ್ಗವನ್ನು ಶೋಧಿಸಿ, ಆಸ್ಪತ್ರೆಯ ಆವರಣದಲ್ಲಿದ್ದ ಬ್ಯಾಗ್ ಅನ್ನು ಆಭರಣ ಮತ್ತು ನಗದಿನೊಂದಿಗೆ ಸುರಕ್ಷಿತವಾಗಿ ವಶಪಡಿಸಿಕೊಂಡು ಮಹಿಳೆಗೆ ಮರಳಿಸಿದ್ದಾರೆ.
ಮತ್ತಷ್ಟು ಓದಿ: Rabies Vaccine: ಭಾರತದಲ್ಲಿ ಹೆಚ್ಚುತ್ತಲೇ ಇದೆ ನಾಯಿ ಕಚ್ಚುವಿಕೆ; ಲಸಿಕೆ ಪಡೆದರೂ ರೇಬೀಸ್ ಬರಲು ಸಾಧ್ಯವೇ?
ನೆಟ್ಟಿಗರು “ಇದು ದೇಶದ ಅತ್ಯಂತ ಶ್ರೀಮಂತ ನಾಯಿ”, ಆಸ್ಪತ್ರೆಯ ಸೆಕ್ಯುರಿಟಿ ಚೆಕ್ ಮಾಡಲು ಬಂದ ಸ್ಪೆಷಲ್ ಆಫೀಸರ್ ಎಂದೆಲ್ಲಾ ತಮಾಷೆಯ ಕಮೆಂಟ್‌ಗಳ ಮೂಲಕ ಪ್ರತಿಕ್ರಿಯಿಸಿದ್ದಾರೆ.
ವಿಡಿಯೋ
🚨 STRAY DOG TURNS THIEF IN MANDSAUR!
A stray dog was caught on CCTV carrying away a bag containing jewellery worth ₹4 lakh and nearly ₹2,000 cash from Mandsaur District Hospital.
Police traced its route and recovered everything. The belongings were later returned to the… pic.twitter.com/MjYAzeQfCH
— Ghar Ke Kalesh (@gharkekalesh) August 25, 2026
ಆಸ್ಪತ್ರೆಗಳ ಒಳಗೆ ಬೀದಿ ನಾಯಿಗಳ ಹಾವಳಿ: ಈ ಘಟನೆಯು ನಗು ಮೂಡಿಸಿದರೂ, ಸರ್ಕಾರಿ ಆಸ್ಪತ್ರೆಗಳ ಜನರಲ್ ವಾರ್ಡ್ ಮತ್ತು ತುರ್ತು ಚಿಕಿತ್ಸಾ ಘಟಕಗಳ ಒಳಗೆ ಬೀದಿ ಪ್ರಾಣಿಗಳು ಮುಕ್ತವಾಗಿ ಓಡಾಡುತ್ತಿರುವುದು ರೋಗಿಗಳ ಸುರಕ್ಷತೆ ಮತ್ತು ನೈರ್ಮಲ್ಯದ (Hygiene) ಮೇಲಿನ ಗಂಭೀರ ಲೋಪವನ್ನು ಬಯಲಿಗೆಳೆದಿದೆ.
ಸೋಂಕು ಮತ್ತು ರೇಬಿಸ್ ಭೀತಿ: ಆಸ್ಪತ್ರೆಗಳಲ್ಲಿ ನವಜಾತ ಶಿಶುಗಳು ಮತ್ತು ಶಸ್ತ್ರಚಿಕಿತ್ಸೆಗೆ ಒಳಗಾದ ರೋಗಿಗಳು ಇರುವುದರಿಂದ, ಪ್ರಾಣಿಗಳಿಂದ ಹರಡುವ ಸೋಂಕುಗಳು ಹಾಗೂ ಕಡಿತದ ಅಪಾಯವನ್ನು ತಡೆಗಟ್ಟಲು ಭದ್ರತಾ ಸಿಬ್ಬಂದಿಯನ್ನು ಕಟ್ಟುನಿಟ್ಟಾಗಿ ನಿಯೋಜಿಸುವಂತೆ ಸಾರ್ವಜನಿಕರು ಆಡಳಿತ ಮಂಡಳಿಯನ್ನು ಆಗ್ರಹಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ