ಭಾರತಕ್ಕೆ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಭೇಟಿ: ಮುಂಬೈ, ಜಾಮ್‌ನಗರದಲ್ಲಿ ಮಹತ್ವದ ಚರ್ಚೆ

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅಕ್ಟೋಬರ್ 17ರಿಂದ 22ರವರೆಗೆ ಭಾರತಕ್ಕೆ ಭೇಟಿ ನೀಡಲಿದ್ದು, ಮುಂಬೈ ಮತ್ತು ಜಾಮ್‌ನಗರದಲ್ಲಿ ಸರ್ಕಾರಿ ಅಧಿಕಾರಿಗಳು ಹಾಗೂ ಉದ್ಯಮ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಈ ವೇಳೆ, ಭಾರತ–ಅಮೆರಿಕ ಸಂಬಂಧ, ಇಂಧನ ಸಹಕಾರ ಮತ್ತು ವಾಣಿಜ್ಯ ಹೂಡಿಕೆಗಳ ವಿಚಾರವಾಗಿ ಮಹತ್ವದ ಚರ್ಚೆ ನಡೆಯುವ ನಿರೀಕ್ಷೆ ಇದೆ.

ಭಾರತಕ್ಕೆ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಭೇಟಿ: ಮುಂಬೈ, ಜಾಮ್‌ನಗರದಲ್ಲಿ ಮಹತ್ವದ ಚರ್ಚೆ
ಮಾರ್ಕೊ ರೂಬಿಯೊ
Image Credit source: TV9 Network

Updated on: Oct 17, 2026 | 10:34 AM

ಮುಖ್ಯಾಂಶಗಳು

  • ಮುಂಬೈ, ಜಾಮ್‌ನಗರಕ್ಕೆ ಮಾರ್ಕೊ ರೂಬಿಯೊ ಭೇಟಿ
  • ಭಾರತ–ಅಮೆರಿಕ ಕಾರ್ಯತಂತ್ರದ ಸಂಬಂಧ ಬಲಪಡಿಸುವ ಚರ್ಚೆ
  • ಇಂಧನ ಸಹಕಾರ ಮತ್ತು ವಾಣಿಜ್ಯ ಹೂಡಿಕೆಗೆ ಆದ್ಯತೆ

ನವದೆಹಲಿ, ಅಕ್ಟೋಬರ್ 17: ಅಮೆರಿಕದ ವಿದೇಶಾಂಗ ಸಚಿವ ಮಾರ್ಕೊ ರೂಬಿಯೊ ಅಕ್ಟೋಬರ್ 17ರಿಂದ 22ರವರೆಗೆ ಭಾರತ ಮತ್ತು ಉಜ್ಬೇಕಿಸ್ತಾನಕ್ಕೆ ಭೇಟಿ ನೀಡಲಿದ್ದಾರೆ. ಭಾರತದಲ್ಲಿ ಮುಂಬೈ ಮತ್ತು ಗುಜರಾತ್‌ನ ಜಾಮ್‌ನಗರಕ್ಕೆ ತೆರಳಲಿರುವ ಅವರು, ಹಿರಿಯ ಸರ್ಕಾರಿ ಅಧಿಕಾರಿಗಳು ಹಾಗೂ ಉದ್ಯಮ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ, ಭಾರತ–ಅಮೆರಿಕ ಕಾರ್ಯತಂತ್ರದ ಸಂಬಂಧ, ಇಂಧನ ಸಹಕಾರ ಮತ್ತು ವಾಣಿಜ್ಯ ಹೂಡಿಕೆಗಳ ಕುರಿತು ಚರ್ಚಿಸಲಿದ್ದಾರೆ.

ಇಂಧನ ಸಹಕಾರಕ್ಕೆ ಜಾಮ್‌ನಗರದಲ್ಲಿ ಗಮನ

ಮುಂಬೈನಲ್ಲಿ ನಡೆಯಲಿರುವ ಸಭೆಗಳಲ್ಲಿ ದ್ವಿಪಕ್ಷೀಯ ಸಂಬಂಧ, ಪ್ರಾದೇಶಿಕ ಬೆಳವಣಿಗೆಗಳು, ವ್ಯಾಪಾರ ಮತ್ತು ಹೂಡಿಕೆಯ ಅವಕಾಶಗಳು ಪ್ರಮುಖ ವಿಷಯಗಳಾಗುವ ನಿರೀಕ್ಷೆಯಿದೆ. ಭಾರತದ ಹಿರಿಯ ಅಧಿಕಾರಿಗಳು ಮತ್ತು ಉದ್ಯಮ ನಾಯಕರೊಂದಿಗೆ ರೂಬಿಯೊ ಮಾತುಕತೆ ನಡೆಸಲಿದ್ದಾರೆ.

ಗುಜರಾತ್‌ನ ಜಾಮ್‌ನಗರದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ನ ಪ್ರಮುಖ ತೈಲ ಸಂಸ್ಕರಣಾ ಸಂಕೀರ್ಣವಿದೆ. ಇಲ್ಲಿ ಉದ್ಯಮ ಪ್ರತಿನಿಧಿಗಳೊಂದಿಗೆ ನಡೆಯಲಿರುವ ಚರ್ಚೆಗಳು ಇಂಧನ ಸಹಕಾರ ಮತ್ತು ವಾಣಿಜ್ಯ ಹೂಡಿಕೆಗೆ ಸಂಬಂಧಿಸಿರಲಿವೆ. ರಷ್ಯಾದಿಂದ ಭಾರತದ ತೈಲ ಖರೀದಿ ಹಾಗೂ ಸುಂಕ ಸಂಬಂಧಿತ ವಿಚಾರಗಳೂ ಚರ್ಚೆಗೆ ಬರಬಹುದಾದರೂ, ಈ ಕುರಿತು ಯಾವುದೇ ಅಧಿಕೃತ ಘೋಷಣೆ ಇನ್ನೂ ದೃಢಪಟ್ಟಿಲ್ಲ.

ಉಜ್ಬೇಕಿಸ್ತಾನದಲ್ಲಿ ಸಿ5+1 ಸಭೆ

ಭಾರತಕ್ಕೆ ಬರುವ ಮೊದಲು ರೂಬಿಯೊ ಉಜ್ಬೇಕಿಸ್ತಾನದ ಸಮರ್ಕಂಡ್‌ನಲ್ಲಿ ನಡೆಯಲಿರುವ C5+1 ಸಚಿವರ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ವೇದಿಕೆಯಲ್ಲಿ ಅಮೆರಿಕ ಮತ್ತು ಮಧ್ಯ ಏಷ್ಯಾದ ಐದು ದೇಶಗಳಾದ ಉಜ್ಬೇಕಿಸ್ತಾನ, ಕಜಕಿಸ್ತಾನ, ತಜಿಕಿಸ್ತಾನ, ತುರ್ಕಮೆನಿಸ್ತಾನ ಮತ್ತು ಕಿರ್ಗಿಸ್ತಾನಗಳು ಪಾಲ್ಗೊಳ್ಳಲಿವೆ. ಈ ಪ್ರವಾಸದಲ್ಲಿ 200ಕ್ಕೂ ಹೆಚ್ಚು ಉದ್ಯಮ ನಾಯಕರನ್ನೊಳಗೊಂಡ ಅಮೆರಿಕದ ವಾಣಿಜ್ಯ ನಿಯೋಗವೂ ಭಾಗವಹಿಸಲಿದೆ.

ಇದನ್ನೂ ಓದಿ: ರಷ್ಯಾ ತೈಲ ಖರೀದಿ ವಿಚಾರದಲ್ಲಿ ಭಾರತಕ್ಕೆ ಅಮೆರಿಕದ ಬಿಗ್ ರಿಲೀಫ್: ಶೇ 100 ಸುಂಕದ ಆತಂಕಕ್ಕೆ ತಾತ್ಕಾಲಿಕ ವಿರಾಮ!

2026ರಲ್ಲಿ ರೂಬಿಯೊ ಭಾರತಕ್ಕೆ ನೀಡುತ್ತಿರುವ ಎರಡನೇ ಭೇಟಿಯಿದು. ಈ ವರ್ಷದ ಮೇ ತಿಂಗಳಲ್ಲಿ ದೆಹಲಿಯಲ್ಲಿ ನಡೆದ ಕ್ವಾಡ್ ವಿದೇಶಾಂಗ ಸಚಿವರ ಸಭೆಯಲ್ಲಿ ಅವರು ಭಾಗವಹಿಸಿದ್ದರು. ಈ ಬಾರಿಯ ಭೇಟಿಯಲ್ಲಿ ವ್ಯಾಪಾರ, ಇಂಧನ ಮತ್ತು ಹೂಡಿಕೆ ಕ್ಷೇತ್ರಗಳಲ್ಲಿ ಸಹಕಾರ ಹೆಚ್ಚಿಸುವತ್ತ ಗಮನ ಹರಿಸುವ ನಿರೀಕ್ಷೆಯಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us