ರಷ್ಯಾ ತೈಲ ಖರೀದಿ ವಿಚಾರದಲ್ಲಿ ಭಾರತಕ್ಕೆ ಅಮೆರಿಕದ ಬಿಗ್ ರಿಲೀಫ್: ಶೇ 100 ಸುಂಕದ ಆತಂಕಕ್ಕೆ ತಾತ್ಕಾಲಿಕ ವಿರಾಮ!
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ 100ರವರೆಗೆ ಸುಂಕ ವಿಧಿಸಲು ಮುಂದಾಗಿದ್ದ ಅಮೆರಿಕ ಇದೀಗ ಆ ನಿಲುವಿನಿಂದ ತಾತ್ಕಾಲಿಕವಾಗಿ ಹಿಂದೆ ಸರಿದಿದೆ. ರಷ್ಯಾದಿಂದ ತೈಲ ಖರೀದಿಸುವ ದೇಶಗಳಿಗೆ ಸದ್ಯದ ಮಟ್ಟಿಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿನಾಯಿತಿ ನೀಡಿದ್ದಾರೆ. ಇದಕ್ಕೆ ಅಮೆರಿಕದ ರಾಷ್ಟ್ರೀಯ ಹಿತಾಸಕ್ತಿಯೇ ಕಾರಣ ಎಂದು ಟ್ರಂಪ್ ಹೇಳಿದ್ದಾರೆ.

ಮುಖ್ಯಾಂಶಗಳು
- ರಷ್ಯಾ ತೈಲ ಖರೀದಿ ವಿಚಾರದಲ್ಲಿ ಭಾರತಕ್ಕೆ ರಿಲೀಫ್
- ಶೇ 100ರವರೆಗಿನ ಸುಂಕದ ಕ್ರಮಕ್ಕೆ ತಾತ್ಕಾಲಿಕ ವಿನಾಯಿತಿ
- ಅಮೆರಿಕದ ರಾಷ್ಟ್ರೀಯ ಹಿತಾಸಕ್ತಿಯ ಹೆಸರಿನಲ್ಲಿ ಟ್ರಂಪ್ ಆದೇಶ
ನವದೆಹಲಿ, ಅಕ್ಟೋಬರ್ 17: ರಷ್ಯಾದಿಂದ ಕಚ್ಚಾ ತೈಲ ಖರೀದಿಸುವ ಭಾರತದಂತಹ ದೇಶಗಳ ಮೇಲೆ ಶೇ 100ರವರೆಗೆ ಸುಂಕ ವಿಧಿಸುವ ಕ್ರಮಕ್ಕೆ ಮುಂದಾಗಿದ್ದ ಅಮೆರಿಕ ಇದೀಗ ಸದ್ಯಕ್ಕೆ ಅದರಿಂದ ವಿನಾಯಿತಿ ನೀಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ಆದೇಶ ಹೊರಡಿಸಿದ್ದು, ರಷ್ಯಾ ಸಂಬಂಧಿತ ಕೆಲವು ನಿರ್ಬಂಧಗಳು ಮತ್ತು ಸುಂಕಗಳು ಜಾರಿಗೆ ಬರುವ ಮುನ್ನವೇ ವಿನಾಯಿತಿ ನೀಡುವ ನಿರ್ಧಾರ ಕೈಗೊಂಡಿದ್ದಾರೆ. ಇದರಿಂದ ಭಾರತ ಮತ್ತು ಚೀನಾ ಸೇರಿದಂತೆ ರಷ್ಯಾದಿಂದ ತೈಲ ಖರೀದಿಸುವ ಹಲವು ದೇಶಗಳಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.
ಭಾರತವು ರಷ್ಯಾದಿಂದ ಕಚ್ಚಾ ತೈಲ ಖರೀದಿಸುವ ಪ್ರಮುಖ ದೇಶಗಳಲ್ಲಿ ಒಂದಾಗಿರುವುದರಿಂದ, ಅಮೆರಿಕದ ಈ ನಿರ್ಧಾರ ಭಾರತದ ವ್ಯಾಪಾರ ವಲಯದ ದೃಷ್ಟಿಯಿಂದ ಮಹತ್ವ ಪಡೆದಿದೆ. ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಸರಕುಗಳ ಮೇಲೆ ಭಾರಿ ಸುಂಕ ವಿಧಿಸಿದರೆ, ಅಮೆರಿಕದ ಮಾರುಕಟ್ಟೆಯಲ್ಲಿ ಭಾರತೀಯ ಉತ್ಪನ್ನಗಳ ಸ್ಪರ್ಧಾತ್ಮಕತೆ ಹಾಗೂ ವ್ಯಾಪಾರದ ಮೇಲೆ ಪರಿಣಾಮ ಬೀರುವ ಆತಂಕವಿತ್ತು.
ರಷ್ಯಾದಿಂದ ತೈಲ ಖರೀದಿಸಿದರೆ ಶೇ 100ರವರೆಗೆ ಸುಂಕ ವಿಧಿಸಲು ಮುಂದಾಗಿದ್ದ ಅಮೆರಿಕ
ಟ್ರಂಪ್ ಕಳೆದ ಸೆಪ್ಟೆಂಬರ್ನಲ್ಲಿ ರಷ್ಯಾ ಮತ್ತು ಇರಾನ್ ವಿರುದ್ಧದ ನಿರ್ಬಂಧಗಳಿಗೆ ಸಂಬಂಧಿಸಿದ ಕಾನೂನಿಗೆ ಸಹಿ ಹಾಕಿದ್ದರು. ಅದರ ಅನ್ವಯ, ರಷ್ಯಾದಿಂದ ಕಚ್ಚಾ ತೈಲ ಅಥವಾ ನೈಸರ್ಗಿಕ ಅನಿಲ ಖರೀದಿಸುವ ಪ್ರಮುಖ ಐದು ದೇಶಗಳಿಂದ ಅಮೆರಿಕಕ್ಕೆ ಬರುವ ಸರಕುಗಳ ಮೇಲೆ 30 ದಿನಗಳೊಳಗೆ ಶೇ 100ರವರೆಗೆ ಸುಂಕ ವಿಧಿಸುವ ಅವಕಾಶವಿತ್ತು.
ಕಾನೂನು ಜಾರಿಯಾದ 30 ದಿನಗಳ ಬಳಿಕವೂ ಉದ್ದೇಶಪೂರ್ವಕವಾಗಿ ರಷ್ಯಾದಿಂದ ತೈಲ ಅಥವಾ ಅನಿಲ ಖರೀದಿಸುವ ದೇಶಗಳ ಮೇಲೂ ಈ ಕ್ರಮ ಅನ್ವಯಿಸಬಹುದಿತ್ತು. ರಷ್ಯಾ ನಿರ್ಬಂಧಗಳನ್ನು ತಪ್ಪಿಸಿಕೊಳ್ಳಲು ನೆರವಾಗುವ ಪ್ರಮುಖ ದೇಶಗಳ ವಿರುದ್ಧವೂ ಕ್ರಮ ಕೈಗೊಳ್ಳುವ ಅವಕಾಶವನ್ನು ಕಾನೂನು ಒದಗಿಸಿತ್ತು.
ಈ ಹಿನ್ನೆಲೆಯಲ್ಲಿ ಭಾರತ ಸೇರಿದಂತೆ ಹಲವು ದೇಶಗಳು ಆತಂಕ ವ್ಯಕ್ತಪಡಿಸಿದ್ದವು. ಅಮೆರಿಕದ ಮಾರುಕಟ್ಟೆ ಭಾರತೀಯ ರಫ್ತಿಗೆ ಪ್ರಮುಖವಾಗಿರುವುದರಿಂದ, ಹೆಚ್ಚಿನ ಸುಂಕ ಜಾರಿಯಾದರೆ ವ್ಯಾಪಾರ ವಹಿವಾಟಿನ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿತ್ತು.
‘ಅಮೆರಿಕದ ರಾಷ್ಟ್ರೀಯ ಹಿತಾಸಕ್ತಿ’ ಎಂದ ಟ್ರಂಪ್
ಶುಕ್ರವಾರ ಶ್ವೇತಭವನ ಹೊರಡಿಸಿದ ಆದೇಶದಲ್ಲಿ, ಪ್ರಸ್ತುತ ಸಂದರ್ಭದಲ್ಲಿ ರಷ್ಯಾದಿಂದ ಕಚ್ಚಾ ತೈಲ ಖರೀದಿ ಮಾಡುವ ದೇಶಗಳಿಗೆ ವಿನಾಯಿತಿ ನೀಡುವುದು ಅಮೆರಿಕದ ರಾಷ್ಟ್ರೀಯ ಹಿತಾಸಕ್ತಿಗೆ ಅನುಗುಣವಾಗಿದೆ ಎಂದು ಟ್ರಂಪ್ ಹೇಳಿದ್ದಾರೆ. ಈ ಕುರಿತು ಅಮೆರಿಕದ ಸಂಸತ್ತಿಗೂ ಪ್ರಮಾಣಪತ್ರ ಸಲ್ಲಿಸಿರುವುದಾಗಿ ಅವರು ತಿಳಿಸಿದ್ದಾರೆ.
ರಷ್ಯಾದಿಂದ ಅತಿ ಹೆಚ್ಚು ತೈಲ ಖರೀದಿಸುವ ದೇಶಗಳಲ್ಲಿ ಚೀನಾ ಮತ್ತು ಭಾರತ ಪ್ರಮುಖವಾಗಿವೆ. ಅಜರ್ಬೈಜಾನ್, ಹಂಗೇರಿ ಹಾಗೂ ಸ್ಲೋವಾಕಿಯಾ ಕೂಡ ಈ ಪಟ್ಟಿಯಲ್ಲಿವೆ.
ಟ್ರಂಪ್ ಅವರ ಈ ನಿರ್ಧಾರದಿಂದ ರಷ್ಯಾದ ತೈಲ ಖರೀದಿಗೆ ಸಂಬಂಧಿಸಿದಂತೆ ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಸುಂಕದ ರೂಪದಲ್ಲಿ ಒತ್ತಡ ಹೇರುವ ಪ್ರಸ್ತಾವಿತ ಕ್ರಮಗಳಿಗೆ ಸದ್ಯಕ್ಕೆ ವಿನಾಯಿತಿ ದೊರೆತಿದೆ. ಆದರೆ, ಯಾವ ನಿರ್ಬಂಧಗಳು ಮತ್ತು ಸುಂಕಗಳಿಗೆ ನಿಖರವಾಗಿ ವಿನಾಯಿತಿ ನೀಡಲಾಗಿದೆ ಎಂಬ ವಿವರ ಆದೇಶದಲ್ಲಿ ಸ್ಪಷ್ಟವಾಗಿಲ್ಲ.
ಭಾರತದ ವ್ಯಾಪಾರದ ಮೇಲೆ ಏನು ಪರಿಣಾಮ?
ಭಾರತದ ದೃಷ್ಟಿಯಿಂದ ಅಮೆರಿಕದ ಈ ನಿರ್ಧಾರ ಮಹತ್ವದ್ದಾಗಿದೆ. ರಷ್ಯಾದಿಂದ ತೈಲ ಖರೀದಿಸುವ ವಿಚಾರದಲ್ಲಿ ಶೇ 100ರವರೆಗೆ ಸುಂಕ ವಿಧಿಸುವ ಕ್ರಮ ಜಾರಿಯಾಗಿದ್ದರೆ, ಅಮೆರಿಕಕ್ಕೆ ಭಾರತದ ರಫ್ತು ವಹಿವಾಟಿನ ಮೇಲೆ ಒತ್ತಡ ಉಂಟಾಗಬಹುದಿತ್ತು. ಸದ್ಯಕ್ಕೆ ವಿನಾಯಿತಿ ನೀಡಿರುವುದರಿಂದ ಅಂತಹ ಸುಂಕದ ಆತಂಕಕ್ಕೆ ತಾತ್ಕಾಲಿಕ ವಿರಾಮ ಸಿಕ್ಕಿದೆ.
ಟ್ರಂಪ್ ಈ ನಿರ್ಧಾರ ಪ್ರಕಟಿಸಲು ಕಾರಣವೇನು?
ಅಮೆರಿಕದಲ್ಲಿ ಡೀಸೆಲ್ ಬೆಲೆ ಇಳಿಸುವ ಉದ್ದೇಶದಿಂದ ರಷ್ಯಾದಿಂದ ಲಕ್ಷಾಂತರ ಟನ್ ಇಂಧನ ಪೂರೈಕೆಗೆ ಒಪ್ಪಂದವಾಗಿದೆ ಎಂದು ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಘೋಷಣೆ ಮಾಡಿದ್ದರು. ಇತರ ರಾಷ್ಟ್ರಗಳು ರಷ್ಯಾದಿಂದ ತೈಲ ಖರೀದಿಸಿದರೆ ಅವುಗಳ ಮೇಲೆ ನಿರ್ಬಂಧ ವಿಧಿಸಿ ತಾನೇ ಆ ರಾಷ್ಟ್ರದಿಂದ ಡೀಸೆಲ್ ಖರೀದಿಸಲು ಟ್ರಂಪ್ ಮುಂದಾಗಿದ್ದಾರೆ ಎಂಬ ಟೀಕೆ ಜಾಗತಿಕ ಮಟ್ಟದಲ್ಲಿ ವ್ಯಕ್ತವಾಗಿತ್ತು. ಟ್ರಂಪ್ ಅವರ ಸದ್ಯದ ತೀರ್ಮಾನಕ್ಕೆ ಇದುವೇ ಕಾರಣವಾಗಿರಬಹದು ಎಂದು ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ: ರಷ್ಯಾದಿಂದ ಡೀಸೆಲ್ ಖರೀದಿಗೆ ಟ್ರಂಪ್ ಒಪ್ಪಂದ: ಉಕ್ರೇನ್ ಕೆಂಡಾಮಂಡಲ, ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯ!
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




