ರಷ್ಯಾದಿಂದ ಡೀಸೆಲ್ ಖರೀದಿಗೆ ಟ್ರಂಪ್ ಒಪ್ಪಂದ: ಉಕ್ರೇನ್ ಕೆಂಡಾಮಂಡಲ, ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯ!
ಅಮೆರಿಕದಲ್ಲಿ ಡೀಸೆಲ್ ಬೆಲೆ ಇಳಿಸುವ ಉದ್ದೇಶದಿಂದ ರಷ್ಯಾದಿಂದ ಲಕ್ಷಾಂತರ ಟನ್ ಇಂಧನ ಪೂರೈಕೆಗೆ ಒಪ್ಪಂದವಾಗಿದೆ ಎಂದು ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಆದರೆ, ರಷ್ಯಾಕ್ಕೆ ಆದಾಯ ಹೆಚ್ಚಿಸುವ ಈ ಕ್ರಮವು ಯುದ್ಧಕ್ಕೆ ನೆರವಾಗಬಹುದು ಎಂದು ಉಕ್ರೇನ್ ಆಕ್ರೋಶ ವ್ಯಕ್ತಪಡಿಸಿದೆ. ಅಮೆರಿಕದ ನೀತಿಯಲ್ಲಿನ ವಿರೋಧಾಭಾಸದ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ವ್ಯಂಗ್ಯ ವ್ಯಕ್ತವಾಗಿದೆ.

ಮುಖ್ಯಾಂಶಗಳು
- ರಷ್ಯಾದಿಂದ ಲಕ್ಷಾಂತರ ಟನ್ ಡೀಸೆಲ್ ಪೂರೈಕೆಗೆ ಒಪ್ಪಂದ
- ಇಂಧನ ಬೆಲೆ ಇಳಿಸಲು ಟ್ರಂಪ್ ಆಡಳಿತದ ಪ್ರಯತ್ನ
- ನಿರ್ಧಾರಕ್ಕೆ ಉಕ್ರೇನ್ ವಿರೋಧ, ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯ
ನವದೆಹಲಿ, ಅಕ್ಟೋಬರ್ 10: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆಗಿನ ಮಾತುಕತೆ ಬಳಿಕ ರಷ್ಯಾದಿಂದ ಡೀಸೆಲ್ ಇಂಧನ ಪೂರೈಕೆಗೆ ಒಪ್ಪಂದವಾಗಿದೆ ಎಂದು ಘೋಷಿಸಿದ್ದಾರೆ. ಅಮೆರಿಕ ಮತ್ತು ಜಾಗತಿಕ ಮಾರುಕಟ್ಟೆಗೆ ಇಂಧನ ಪೂರೈಕೆ ಹೆಚ್ಚಿಸಿ ಬೆಲೆ ಇಳಿಸುವುದು ಈ ಕ್ರಮದ ಉದ್ದೇಶ ಎಂದು ಟ್ರಂಪ್ ಹೇಳಿದ್ದಾರೆ. ಆದರೆ, ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ನಡೆಸುತ್ತಿರುವ ಸಂದರ್ಭದಲ್ಲಿ ಈ ನಿರ್ಧಾರ ಕೈಗೊಂಡಿರುವುದಕ್ಕೆ ಉಕ್ರೇನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ಬೆಳವಣಿಗೆ ಸಾಮಾಜಿಕ ಜಾಲತಾಣದಲ್ಲೂ ವ್ಯಂಗ್ಯ ಮತ್ತು ಚರ್ಚೆಗೆ ಕಾರಣವಾಗಿದೆ.
ಟ್ರಂಪ್ ಸಂದೇಶದಲ್ಲೇನಿದೆ?
ಟ್ರಂಪ್ ತಮ್ಮ ‘ಟ್ರೂತ್ ಸೋಶಿಯಲ್’ ಖಾತೆಯಲ್ಲಿ ಪುಟಿನ್ ಜೊತೆಗಿನ ಮಾತುಕತೆ ಯಶಸ್ವಿಯಾಗಿದೆ ಎಂದು ಬರೆದುಕೊಂಡಿದ್ದಾರೆ. ಅದರ ಪ್ರಕಾರ, ರಷ್ಯಾ ತಕ್ಷಣವೇ ಅಮೆರಿಕ ಮತ್ತು ಜಾಗತಿಕ ಮಾರುಕಟ್ಟೆಗೆ 3 ಲಕ್ಷ ಟನ್‌ಗಿಂತ ಹೆಚ್ಚು ಡೀಸೆಲ್ ಪೂರೈಸಲಿದೆ. ನವೆಂಬರ್‌ನಲ್ಲಿ ಮತ್ತಷ್ಟು 5 ಲಕ್ಷ ಟನ್ ಹಾಗೂ ನಂತರ 10 ಲಕ್ಷ ಟನ್ ಪೂರೈಸುವ ಯೋಜನೆಯಿದೆ ಎಂದು ಅವರು ತಿಳಿಸಿದ್ದಾರೆ. ಇದಾದ ಬಳಿಕ ಕಡಿಮೆ ಅವಧಿಯಲ್ಲೇ ಹೆಚ್ಚುವರಿಯಾಗಿ 30 ಲಕ್ಷ ಟನ್ ಡೀಸೆಲ್ ಪೂರೈಕೆಯಾಗಲಿದೆ ಎಂದೂ ಟ್ರಂಪ್ ಹೇಳಿದ್ದಾರೆ.
ರಷ್ಯಾದಿಂದ ಇಂಧನ ಪೂರೈಕೆ ಹೆಚ್ಚಿದರೆ ಅಮೆರಿಕದಲ್ಲಿ ಡೀಸೆಲ್ ಬೆಲೆ ಇಳಿಯಲಿದೆ ಮತ್ತು ರೈತರು, ಸಾಗಣೆ ಉದ್ಯಮ ಸೇರಿದಂತೆ ಇಂಧನವನ್ನು ಅವಲಂಬಿಸಿರುವ ಕ್ಷೇತ್ರಗಳಿಗೆ ಅನುಕೂಲವಾಗಲಿದೆ ಎಂಬುದು ಟ್ರಂಪ್ ಅವರ ನಿರೀಕ್ಷೆ. ಈ ಒಪ್ಪಂದಕ್ಕೆ ಅನುಕೂಲವಾಗುವಂತೆ ರಷ್ಯಾದ ಡೀಸೆಲ್ ಆಮದಿನ ಮೇಲಿನ ಕೆಲವು ನಿರ್ಬಂಧಗಳನ್ನು ತಾತ್ಕಾಲಿಕವಾಗಿ ಸಡಿಲಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ರಷ್ಯಾದಿಂದ ಡೀಸೆಲ್ ಖರೀದಿಗೆ ಅಮೆರಿಕ ಮುಂದಾಗಿದ್ದೇಕೆ?
ಅಮೆರಿಕದಲ್ಲಿ ಡೀಸೆಲ್ ಬೆಲೆ ಏರಿಕೆ ಮತ್ತು ಜಾಗತಿಕ ಇಂಧನ ಪೂರೈಕೆಯಲ್ಲಿನ ಒತ್ತಡ ಈ ನಿರ್ಧಾರದ ಪ್ರಮುಖ ಹಿನ್ನೆಲೆ. ಡೀಸೆಲ್ ಕೃಷಿ, ಸರಕು ಸಾಗಣೆ ಮತ್ತು ಮನೆಗಳ ತಾಪನ ವ್ಯವಸ್ಥೆ ಸೇರಿದಂತೆ ಹಲವು ಕ್ಷೇತ್ರಗಳಿಗೆ ಅಗತ್ಯ. ಇಂಧನದ ಬೆಲೆ ಹೆಚ್ಚಾದರೆ ಸಾರಿಗೆ ವೆಚ್ಚ ಏರಿಕೆಯಾಗುತ್ತದೆ; ಅದರ ಪರಿಣಾಮ ಸರಕುಗಳ ಬೆಲೆ ಹಾಗೂ ಹಣದುಬ್ಬರದ ಮೇಲೂ ಬೀಳಬಹುದು.
ಮಧ್ಯಂತರ ಚುನಾವಣೆಗೂ ಮುನ್ನ ಇಂಧನ ಬೆಲೆ ಇಳಿಸುವ ಒತ್ತಡದಲ್ಲಿ ಟ್ರಂಪ್
ಇರಾನ್ ಯುದ್ಧದಿಂದ ಇಂಧನ ಮಾರುಕಟ್ಟೆಯಲ್ಲಿ ಉಂಟಾಗಿರುವ ಒತ್ತಡವೂ ಬೆಲೆ ಏರಿಕೆಗೆ ಕಾರಣವಾಗಿದೆ. ಅಮೆರಿಕದಲ್ಲಿ ನವೆಂಬರ್‌ನಲ್ಲಿ ನಡೆಯಲಿರುವ ಮಧ್ಯಂತರ ಚುನಾವಣೆಗೂ ಮುನ್ನ ಇಂಧನ ಬೆಲೆ ಇಳಿಸುವುದು ಟ್ರಂಪ್ ಆಡಳಿತಕ್ಕೆ ಪ್ರಮುಖ ವಿಚಾರವಾಗಿದೆ. ಇತ್ತೀಚೆಗೆ ಜಿ7 ರಾಷ್ಟ್ರಗಳು ಕೂಡ ಮಾರುಕಟ್ಟೆಗೆ 10 ಕೋಟಿ ಬ್ಯಾರೆಲ್ ತೈಲ ಬಿಡುಗಡೆ ಮಾಡಲು ಒಪ್ಪಿಕೊಂಡಿದ್ದವು. ಈ ಹಿನ್ನೆಲೆಯಲ್ಲಿ ರಷ್ಯಾದಿಂದ ಹೆಚ್ಚುವರಿ ಡೀಸೆಲ್ ಖರೀದಿಗೆ ಟ್ರಂಪ್ ಮುಂದಾಗಿದ್ದಾರೆ. ಆದರೆ, ಈ ಒಪ್ಪಂದದಿಂದ ಇಂಧನ ಬೆಲೆ ಎಷ್ಟು ಇಳಿಯಲಿದೆ ಎಂಬ ಬಗ್ಗೆ ವಿಶ್ಲೇಷಕರು ಅನುಮಾನ ವ್ಯಕ್ತಪಡಿಸಿದ್ದಾರೆ.
‘ಇತರರು ಖರೀದಿಸಿದರೆ ನಿರ್ಬಂಧ, ಅಮೆರಿಕ ಖರೀದಿಸಿದರೆ ಸರಿಯೇ?’: ಸಾಮಾಜಿಕ ಜಾಲತಾಣದಲ್ಲಿ ಚರ್ಚೆ
ಟ್ರಂಪ್ ಅವರ ಘೋಷಣೆಯ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯಭರಿತ ಪ್ರತಿಕ್ರಿಯೆಯೊಂದು ಗಮನ ಸೆಳೆದಿದೆ. ರಷ್ಯಾದಿಂದ ತೈಲ ಖರೀದಿಸುವ ಇತರ ದೇಶಗಳಿಗೆ ನಿರ್ಬಂಧದ ಎಚ್ಚರಿಕೆ ನೀಡುವ ಅಮೆರಿಕ, ತಾನೇ ರಷ್ಯಾದಿಂದ ಇಂಧನ ಖರೀದಿಸಲು ಮುಂದಾದಾಗ ಅದನ್ನು ಸಮರ್ಥಿಸಿಕೊಳ್ಳುತ್ತಿದೆ ಎಂಬ ಅರ್ಥದಲ್ಲಿ ಪೋಸ್ಟ್ ಮಾಡಲಾಗಿದೆ.
“We’ll sanction you for buying Russian oil”
“When we buy Russian oil it’s holy & virtuous” https://t.co/jhtQnBJQh9
— Abhijit Iyer-Mitra (@Iyervval) October 9, 2026
“ರಷ್ಯಾದಿಂದ ತೈಲ ಖರೀದಿಸಿದರೆ ನಿಮಗೆ ನಿರ್ಬಂಧ ವಿಧಿಸುತ್ತೇವೆ; ಆದರೆ ನಾವು ಖರೀದಿಸಿದರೆ ಅದು ಪವಿತ್ರ ಮತ್ತು ಸದ್ಗುಣದ ಕೆಲಸ” ಎಂಬ ವ್ಯಂಗ್ಯದ ಮೂಲಕ ಅಮೆರಿಕದ ನೀತಿಯಲ್ಲಿನ ವಿರೋಧಾಭಾಸವನ್ನು ಪ್ರಶ್ನಿಸಲಾಗಿದೆ.
ಬಲಿಷ್ಠ ಪಾಲುದಾರರ ದುರ್ಬಲ ನಿರ್ಧಾರ: ಉಕ್ರೇನ್ ಆಕ್ರೋಶ
ರಷ್ಯಾದಿಂದ ಡೀಸೆಲ್ ಪೂರೈಕೆಗೆ ಅವಕಾಶ ನೀಡಿರುವ ಟ್ರಂಪ್ ನಿರ್ಧಾರಕ್ಕೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದನ್ನು “ಬಲಿಷ್ಠ ಪಾಲುದಾರರ ದುರ್ಬಲ ನಿರ್ಧಾರ” ಎಂದು ಅವರು ಟೀಕಿಸಿದ್ದಾರೆ. ರಷ್ಯಾದ ಇಂಧನ ಮಾರಾಟದಿಂದ ಆ ದೇಶಕ್ಕೆ ಹೆಚ್ಚುವರಿ ಆದಾಯ ಸಿಗಲಿದ್ದು, ಅದನ್ನು ಯುದ್ಧ ಮುಂದುವರಿಸಲು ಬಳಸುವ ಸಾಧ್ಯತೆಯಿದೆ ಎಂಬುದು ಉಕ್ರೇನ್‌ನ ಆತಂಕ.
ಅಮೆರಿಕದ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಲು ಉಕ್ರೇನ್ ತಂಡ ಮಿಯಾಮಿಗೆ ಆಗಮಿಸಿದ್ದ ಸಂದರ್ಭದಲ್ಲೇ ಟ್ರಂಪ್ ಪುಟಿನ್ ಜೊತೆ ಒಪ್ಪಂದ ಘೋಷಿಸಿರುವುದಕ್ಕೂ ಝೆಲೆನ್ಸ್ಕಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ತಂಡದ ಶಾಂತಿ ಮಾತುಕತೆಗಳನ್ನು ಬೇರೆ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತಿದೆಯೇ ಎಂಬ ಅನುಮಾನವನ್ನೂ ಅವರು ಹೊರಹಾಕಿದ್ದಾರೆ.
ಒಟ್ಟಿನಲ್ಲಿ, ಅಮೆರಿಕದಲ್ಲಿ ಇಂಧನ ಬೆಲೆ ನಿಯಂತ್ರಿಸುವ ಉದ್ದೇಶದಿಂದ ಕೈಗೊಂಡಿರುವ ಈ ಕ್ರಮವು ರಷ್ಯಾ-ಉಕ್ರೇನ್ ಯುದ್ಧದ ರಾಜತಾಂತ್ರಿಕ ಆಯಾಮವನ್ನೂ ಮತ್ತೆ ಮುನ್ನೆಲೆಗೆ ತಂದಿದೆ. ಇಂಧನ ಪೂರೈಕೆ ಹೆಚ್ಚಿಸುವ ಪ್ರಯತ್ನ ಒಂದೆಡೆಯಾದರೆ, ರಷ್ಯಾಕ್ಕೆ ಆರ್ಥಿಕ ನೆರವು ಸಿಗಬಹುದು ಎಂಬ ಉಕ್ರೇನ್‌ನ ಆತಂಕ ಮತ್ತೊಂದೆಡೆ ಇದೆ. ಒಪ್ಪಂದವು ಜಾಗತಿಕ ಇಂಧನ ಬೆಲೆಗಳ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂಬುದು ಮುಂದಿನ ಬೆಳವಣಿಗೆಗಳ ಮೇಲೆ ಅವಲಂಬಿತವಾಗಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




