AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗುವಿನ ಗಾಯಕ್ಕೆ ಹೊಲಿಗೆ ಹಾಕುವ ಬದಲು ಫೆವಿಕ್ವಿಕ್ ಅಂಟಿಸಿದ ವೈದ್ಯ!

ಉತ್ತರ ಪ್ರದೇಶದ ಮೀರತ್​​ನ ವೈದ್ಯರೊಬ್ಬರು ಮಗುವಿನ ಗಾಯಕ್ಕೆ ಹೊಲಿಗೆ ಹಾಕುವ ಬದಲು ಫೆವಿಕ್ವಿಕ್ ಹಾಕಿ ಅಂಟಿಸಿರುವ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಈ ಬಗ್ಗೆ ಮಗುವಿನ ಕುಟುಂಬ ದೂರು ದಾಖಲಿಸಿದೆ. ತನಿಖಾ ಸಮಿತಿಯನ್ನು ರಚಿಸಲಾಗಿದೆ. ಮಗುವಿನ ಕುಟುಂಬ ಈ ವಿಷಯವನ್ನು ಮುಖ್ಯಮಂತ್ರಿ ಕಚೇರಿಗೆ ಸಹ ತಿಳಿಸಿದೆ.

ಮಗುವಿನ ಗಾಯಕ್ಕೆ ಹೊಲಿಗೆ ಹಾಕುವ ಬದಲು ಫೆವಿಕ್ವಿಕ್ ಅಂಟಿಸಿದ ವೈದ್ಯ!
Doctor Applied Fevikwik On Child Wound
ಸುಷ್ಮಾ ಚಕ್ರೆ
|

Updated on:Nov 20, 2025 | 8:12 PM

Share

ಮೀರತ್, ನವೆಂಬರ್ 20: ಉತ್ತರ ಪ್ರದೇಶದ (Uttar Pradesh) ಮೀರತ್‌ನ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರು ಹಣೆಯಲ್ಲಿ ಗಾಯವಾಗಿದ್ದ ಮಗುವಿನ ಹೊಲಿಗೆ ಹಾಕುವ ಬದಲು ಫೆವಿಕ್ವಿಕ್ ಅಂಟಿಸಿ ಚಿಕಿತ್ಸೆ ನೀಡಿದ್ದಾರೆ ಎಂದು ಆ ಮಗುವಿನ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಬಗ್ಗೆ ಪೊಲೀಸರ ತನಿಖೆ ನಡೆಯುತ್ತಿದೆ.

ಸರ್ದಾರ್ ಜಸ್ಪಿಂದರ್ ಸಿಂಗ್ ಎಂಬುವವರ ಮಗ ಮನೆಯಲ್ಲಿ ಆಟವಾಡುತ್ತಿದ್ದಾಗ ತಲೆ ಮೇಜಿನ ತುದಿಗೆ ಬಡಿದು ರಕ್ತ ಸೋರುತ್ತಿತ್ತು. ಹೀಗಾಗಿ, ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆಗ ಖಾಸಗಿ ಆಸ್ಪತ್ರೆಯ ವೈದ್ಯರು 5 ರೂ. ಬೆಲೆಯ ಫೆವಿಕ್ವಿಕ್ ಟ್ಯೂಬ್ ಖರೀದಿಸಿ ತಂದು ಆ ಗಾಯವನ್ನು ಮುಚ್ಚಿದ್ದಾರೆ ಎಂದು ಹೇಳಲಾಗಿದೆ. ಆದರೆ, ಆ ಮಗು ಅಳುತ್ತಲೇ ಇತ್ತು. ಆಗ ವೈದ್ಯರು ಸ್ವಲ್ಪ ಹೊತ್ತಿನಲ್ಲೇ ನೋವು ಕಡಿಮೆಯಾಗುತ್ತದೆ ಎಂದು ಹೇಳಿದರು ಎಂದು ಮಗುವಿನ ತಾಯಿ ಹೇಳಿದ್ದಾರೆ.

ಇದನ್ನೂ ಓದಿ: ಕೊಟ್ಟ ಹಣ ವಾಪಸ್​​ ಕೇಳಿದ್ದಕ್ಕೆ ‘ದೃಶ್ಯ’ ಸಿನಿಮಾ ಸ್ಟೈಲ್​ನಲ್ಲಿ ಎಂಜಿನಿಯರ್​ ಮರ್ಡರ್​

ಆದರೆ, ಮನೆಗೆ ಬಂದರೂ ಮಗು ಅಳು ನಿಲ್ಲಿಸಲಿಲ್ಲ. ರಾತ್ರಿಯಿಡೀ ಮಲಗದೆ ಒದ್ದಾಡುತ್ತಿತ್ತು. ಕೊನೆಗೆ ಆ ಮಗುವಿನ ತಂದೆ-ತಾಯಿ ಮರುದಿನ ಬೆಳಿಗ್ಗೆ ಆ ಮಗುವನ್ನು ಇನ್ನೊಂದು ಆಸ್ಪತ್ರೆಗೆ ಕರೆದೊಯ್ದರು. ಗಾಯದ ರಕ್ತಕ್ಕೆ ಅಂಟಿ ಗಟ್ಟಿಯಾಗಿದ್ದ ಗಮ್ ತೆಗೆಯಲು ಅಲ್ಲಿನ ವೈದ್ಯರು 3 ಗಂಟೆ ತೆಗೆದುಕೊಂಡರು. ಕೊನೆಗೆ ಗಾಯವಾದ ಜಾಗವನ್ನು ಸ್ವಚ್ಛಗೊಳಿಸಿ, ಆ ಗಾಯವನ್ನು ಮುಚ್ಚಲು ಅವರು 4 ಹೊಲಿಗೆಗಳನ್ನು ಹಾಕಿದರು.

ಇದನ್ನೂ ಓದಿ: ಕುಡಿಯಬೇಡ ಅಂದಿದ್ದೇ ತಪ್ಪಾಯ್ತು: ಹೆಂಡತಿ ಜೀವವನ್ನೇ ಬಲಿ ಪಡೆದ ಪಾಪಿ ಪತಿ

ಒಂದುವೇಳೆ ಮಗುವನ್ನು ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗದಿದ್ದರೆ ಆಗ ಪರಿಸ್ಥಿತಿ ಇನ್ನೂ ಕೆಟ್ಟದಾಗಿರುತ್ತಿತ್ತು ಎಂದು ಕುಟುಂಬಸ್ಥರು ದೂರಿನಲ್ಲಿ ಆರೋಪಿಸಿದ್ದಾರೆ. ಒಂದುವೇಳೆ ಹಣೆಗೆ ಅಂಟಿಸಿದ್ದ ಫೆವಿಕ್ವಿಕ್ ಮಗುವಿನ ಕಣ್ಣಿಗೆ ಸೋರಿಕೆಯಾಗಿದ್ದರೆ, ಮಗುವಿನ ಕಣ್ಣೇ ಹೋಗುತ್ತಿತ್ತು ಎಂದು ಅವರು ಆರೋಪಿಸಿದ್ದಾರೆ. ಈ ಬಗ್ಗೆ ಮಗುವಿನ ಕುಟುಂಬ ದೂರು ದಾಖಲಿಸಿದೆ. ತನಿಖಾ ಸಮಿತಿಯನ್ನು ರಚಿಸಲಾಗಿದೆ. ಮಗುವಿನ ಕುಟುಂಬ ಈ ವಿಷಯವನ್ನು ಮುಖ್ಯಮಂತ್ರಿ ಕಚೇರಿಗೆ ಸಹ ತಿಳಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:12 pm, Thu, 20 November 25