
ನವದೆಹಲಿ, ಅಕ್ಟೋಬರ್ 11: ಶಾಂತಿಯುತ ಹಾಗೂ ನಿಶಸ್ತ್ರ ಪ್ರತಿಭಟನಾಕಾರರನ್ನು ಕಾನೂನಿನ ಪ್ರಕಾರ ಹೊರತುಪಡಿಸಿ ಯಾವುದೇ ಕಾರಣಕ್ಕೂ ಅಕ್ರಮವಾಗಿ ಬಂಧಿಸುವಂತಿಲ್ಲ ಎಂದು ಇಂದು ಆದೇಶಿಸಿರುವ ಸುಪ್ರೀಂ ಕೋರ್ಟ್, ದೆಹಲಿಯಲ್ಲಿ ಮೆಟ್ರೋ ಮತ್ತು ರೈಲು ಸೇವೆಗಳು ಎಂದಿನಂತೆ ಸುಗಮವಾಗಿ ಕಾರ್ಯಾಚರಿಸಬೇಕು, ಇಂಟರ್ನೆಟ್ ಸೇವೆಗೆ ಯಾವುದೇ ಅಡ್ಡಿಪಡಿಸಬಾರದು ಮತ್ತು ಸಾರ್ವಜನಿಕರ ಮುಕ್ತ ಸಂಚಾರದ ವ್ಯವಸ್ಥೆ ಕಲ್ಪಿಸಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಸುಪ್ರೀಂ ಕೋರ್ಟ್ ಆದೇಶದ ಹೊರತಾಗಿಯೂ ದೆಹಲಿ ಪೊಲೀಸರು ನಿನ್ನೆ ರೈಲು, ಮೆಟ್ರೋ ಸಂಚಾರವನ್ನು ಸ್ಥಗಿತಗೊಳಿಸುವ ಮೂಲಕ ನ್ಯಾಯಾಂಗ ನಿಂದನೆ ಎಸಗಿದ್ದಾರೆ ಎಂಬ ಅರ್ಜಿ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ರಜಾದಿನವಾದರೂ ಇಂದು ವಿಶೇಷ ಕಲಾಪ ನಡೆಸಿದ ಸುಪ್ರೀಂ ಕೋರ್ಟ್ ದೆಹಲಿ ಪೊಲೀಸರಿಗೆ ಖಡಕ್ ಎಚ್ಚರಿಕೆ ನೀಡಿದೆ.
ಒಂದುವೇಳೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ತೀರಾ ಅಗತ್ಯವಿದ್ದರೆ ಮಾತ್ರ ಸೂಕ್ತ ನಿರ್ಬಂಧಗಳನ್ನು ವಿಧಿಸಬಹುದು ಎಂದು ಕೂಡ ಸುಪ್ರೀಂ ಕೋರ್ಟ್ ಹೇಳಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ಶನಿವಾರ ನಡೆದ ಪ್ರತಿಭಟನೆಯ ಪೂರ್ವಭಾವಿಯಾಗಿ ಕೈಗೊಳ್ಳಲಾದ ಬೃಹತ್ ಬಂಧನಗಳು, ಓಡಾಟದ ಮೇಲಿನ ನಿರ್ಬಂಧಗಳು, ಇಂಟರ್ನೆಟ್ ಕಡಿತ ಹಾಗೂ ಸಾರಿಗೆ ನಿರ್ಬಂಧದ ಅಕ್ಟೋಬರ್ 9ರ ಆದೇಶದ ಉಲ್ಲಂಘನೆಗಳನ್ನು ಪ್ರಶ್ನೆ ಮಾಡಿ ಸಲ್ಲಿಕೆಯಾಗಿದ್ದ ತುರ್ತು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜೋಯ್‌ಮಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ವಿಶೇಷ ಪೀಠ ಈ ಆದೇಶ ಹೊರಡಿಸಿದೆ.
ಇದನ್ನೂ ಓದಿ: ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ; ಕೇಂದ್ರ ಗೃಹ ಸಚಿವಾಲಯ, ದೆಹಲಿ ಪೊಲೀಸ್ ಆಯುಕ್ತರ ವಿರುದ್ಧ ಭಾನುವಾರವೂ ವಿಶೇಷ ವಿಚಾರಣೆ
ನ್ಯಾಯಾಲಯದ ಹಿಂದಿನ ಆದೇಶವನ್ನೂ ಮೀರಿ ರಾಜಧಾನಿ ದೆಹಲಿಯಲ್ಲಿ ವಿಧಿಸಲಾಗಿದ್ದ ನಿರ್ಬಂಧಗಳ ಕುರಿತು ದೆಹಲಿ ಪೊಲೀಸರು, ಕೇಂದ್ರ ಗೃಹ ಕಾರ್ಯದರ್ಶಿ ಹಾಗೂ ದೆಹಲಿ ಮೆಟ್ರೋ ರೈಲು ನಿಗಮಕ್ಕೆ ಕೋರ್ಟ್ ನೋಟಿಸ್ ಜಾರಿ ಮಾಡಿದ್ದು, ಮಂಗಳವಾರದೊಳಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ. ಆದರೆ, ದೆಹಲಿ ಪೊಲೀಸರ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಮೆಟ್ರೋ ಹಾಗೂ ರೈಲು ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ ಮತ್ತು ಇಂಟರ್ನೆಟ್ ಸೇವೆಗಳನ್ನು ಮರುಸ್ಥಾಪಿಸಲಾಗಿದೆ ಎಂದು ಭೇಟಿ ವೇಳೆ ತಿಳಿಸಿರುವುದನ್ನು ಕೋರ್ಟ್ ಗಮನಿಸಿದೆ.
STORY | Protests in Delhi: SC passes slew of directions, directs no illegal detention
In a special sitting, the Supreme Court on Sunday passed a slew of directions while issuing a notice to the Centre on a plea seeking contempt proceedings for alleged violation of the court’s direction regarding metro and train services in Delhi due to the CJP protest.
READ: https://t.co/ShvhtdFyVy
— Press Trust of India (@PTI_News) October 11, 2026
ಸಿಜೆಪಿ ಸಂಸ್ಥಾಪಕ ಅಭಿಜಿತ್ ದಿಪ್ಕೆ, ಸಹ-ಸಂಚಾಲಕ ಸೌರವ್ ದಾಸ್ ಮತ್ತು ರಾಷ್ಟ್ರೀಯ ವಕ್ತಾರ ಅಶುತೋಷ್ ರಂಕಾ ಅವರನ್ನು ಬಂಧನದ ಬಳಿಕ ಸುಮಾರು 24 ಗಂಟೆಗಳ ನಂತರ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಬಿಡುಗಡೆಗೊಳಿಸಿದ್ದಾರೆ. ಅವರ ಮೇಲೆ ಬಿಎನ್‌ಎಸ್ಎಸ್ ನ ವಿವಿಧ ಸೆಕ್ಷನ್‌ಗಳನ್ನು ಹೊರಿಸಲಾಗಿತ್ತು. ಮುಂದಿನ ಒಂದು ವರ್ಷದವರೆಗೆ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ತರುವ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ ಎಂಬ ಷರತ್ತಿನ ಮೇಲೆ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.
ಏನಿದು ಪ್ರಕರಣ?:
ಅಕ್ಟೋಬರ್ 9ರ ಆದೇಶವನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿ ಮೆಟ್ರೋ ರೈಲು ನಿಗಮ (DMRC), ಸಂಬಂಧಿತ ರೈಲ್ವೆ ಅಧಿಕಾರಿಗಳು ಮತ್ತು ದೆಹಲಿ ಪೊಲೀಸರಿಗೆ ನ್ಯಾಯಾಲಯವು ನಿಂದನಾ ನೋಟಿಸ್ ಜಾರಿ ಮಾಡಿದೆ. ಈ ಕುರಿತು ಮಂಗಳವಾರದೊಳಗೆ ಅಫಿಡವಿಟ್ ಸಲ್ಲಿಸುವಂತೆ ಸೂಚಿಸಿ, ವಿಚಾರಣೆಯನ್ನು ಅಕ್ಟೋಬರ್ 13ಕ್ಕೆ ನಿಗದಿಪಡಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ