‘ಅಧಿಕಾರದ ದುರ್ಬಳಕೆ’; ರಾಜಸ್ಥಾನದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿರುದ್ಧ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಆರೋಪ

ಸುಪ್ರೀಂ ಕೋರ್ಟ್​ನ ನ್ಯಾಯಮೂರ್ತಿಯೊಬ್ಬರು ಹೈಕೋರ್ಟ್ ನ್ಯಾಯಮೂರ್ತಿಗಳೊಬ್ಬರ ಅಪ್ರಾಮಾಣಿಕತೆ, ಅಧಿಕಾರದ ದುರ್ಬಳಕೆಯ ಬಗ್ಗೆ ಆರೋಪ ಮಾಡಿ ಅವರ ಬದಲು ಬೇರೆ ನ್ಯಾಯಮೂರ್ತಿಗಳನ್ನು ನೇಮಕ ಮಾಡಲು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿರುವ ಬಹಳ ಅಪರೂಪದ ಬೆಳವಣಿಗೆಯೊಂದು ನಡೆದಿದೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಅವರು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರಿಗೆ ಪತ್ರ ಬರೆದಿದ್ದು, ರಾಜಸ್ಥಾನ ಹೈಕೋರ್ಟ್‌ನ ಕಾರ್ಯಕಾರಿ ಮುಖ್ಯ ನ್ಯಾಯಮೂರ್ತಿ ಎಸ್.ಪಿ. ಶರ್ಮಾ ಅವರನ್ನು ತಕ್ಷಣವೇ ಬೇರೆ ಹೈಕೋರ್ಟ್‌ಗೆ ವರ್ಗಾಯಿಸುವಂತೆ ಮತ್ತು ಮತ್ತೊಂದು ಹೈಕೋರ್ಟ್‌ನಿಂದ ನೂತನ ಮುಖ್ಯ ನ್ಯಾಯಮೂರ್ತಿಯನ್ನು ನೇಮಿಸುವಂತೆ ಕೋರಿದ್ದಾರೆ.

ಅಧಿಕಾರದ ದುರ್ಬಳಕೆ; ರಾಜಸ್ಥಾನದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿರುದ್ಧ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಆರೋಪ
Justice Sp Sharma And Justice Sandeep Mehta
Image Credit source: TV9

Updated on: Aug 26, 2026 | 3:24 PM

ನವದೆಹಲಿ, ಆಗಸ್ಟ್ 26: ರಾಜಸ್ಥಾನದ ಹೈಕೋರ್ಟ್‌ನ ಕಾರ್ಯಕಾರಿ ಮುಖ್ಯ ನ್ಯಾಯಮೂರ್ತಿ ಸಂಜೀವ್ ಪ್ರಕಾಶ್ ಶರ್ಮಾ (Justice SP Sharma) ಅವರು ತಮ್ಮ ಆಡಳಿತಾತ್ಮಕ ಅಧಿಕಾರಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಹಾಗೂ ಶ್ರೀಮಂತ ಮತ್ತು ಪ್ರಭಾವಿ ಕಕ್ಷಿದಾರರ ಪರವಾಗಿ ಪ್ರಕರಣಗಳ ಪಟ್ಟಿಯನ್ನು ಬದಲಾಯಿಸುತ್ತಿದ್ದಾರೆ ಎಂದು ಆರೋಪಿಸಿರುವ ಸುಪ್ರೀಂ ಕೋರ್ಟ್ (Supreme Court) ನ್ಯಾಯಮೂರ್ತಿ ಸಂದೀಪ್ ಮೆಹ್ತಾ (Justice Sandeep Mehta), ತಕ್ಷಣವೇ ಜಾರಿಗೆ ಬರುವಂತೆ ಬೇರೆ ರಾಜ್ಯದ ಹೈಕೋರ್ಟ್‌ನಿಂದ ಪೂರ್ಣಾವಧಿಯ ಮುಖ್ಯ ನ್ಯಾಯಮೂರ್ತಿಯನ್ನು ನೇಮಿಸುವಂತೆ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರಿಗೆ ಮನವಿ ಮಾಡಿದ್ದಾರೆ.

ಈ ತಿಂಗಳ ಆರಂಭದಲ್ಲಿ ಸುಪ್ರೀಂ ಕೋರ್ಟ್ ಕೊಲಿಜಿಯಂನ ಇತರ ಸದಸ್ಯರಿಗೂ ಪ್ರತಿಯನ್ನು ಕಳುಹಿಸಲಾದ ಸರಣಿ ಮೂರು ಪತ್ರಗಳಲ್ಲಿ, ರಾಜಸ್ಥಾನ ಮೂಲದವರೇ ಆದ ನ್ಯಾಯಮೂರ್ತಿ ಮೆಹ್ತಾ ಅವರು ನ್ಯಾಯಮೂರ್ತಿ ಶರ್ಮಾ ವಿರುದ್ಧ “ಅಧಿಕಾರ ದುರ್ಬಳಕೆ”ಯ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ, ನ್ಯಾಯಮೂರ್ತಿ ಶರ್ಮಾ ಅವರ ಪ್ರಾಮಾಣಿಕತೆಯ ಬಗ್ಗೆ ಅನುಮಾನ ಮೂಡಿಸುವ ಹಲವಾರು ದೂರುಗಳು ತಮಗೆ ಬಂದಿವೆ ಎಂದು ತಿಳಿಸಿದ್ದಾರೆ.

 

ಆಗಸ್ಟ್ 2, 10 ಮತ್ತು 17ರಂದು ಬರೆದಿರುವ ಸರಣಿ ಪತ್ರಗಳಲ್ಲಿ ನ್ಯಾಯಮೂರ್ತಿ ಮೆಹ್ತಾ ಅವರು, ಕಾರ್ಯಕಾರಿ ಜಡ್ಜ್ಜ್ ಸಿಜೆ ಶರ್ಮಾ ವಿರುದ್ಧ ದುರಾಡಳಿತ, ಪಕ್ಷಪಾತ ಹಾಗೂ ತಮ್ಮ ಅಧಿಕಾರವನ್ನು ಬಳಸಿಕೊಂಡು ಆಯ್ದ ಪ್ರಕರಣಗಳನ್ನು ತಮಗೆ ಬೇಕಾದ ಪೀಠಕ್ಕೆ ವರ್ಗಾಯಿಸಿಕೊಳ್ಳುತ್ತಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.

ಪತ್ರಗಳಲ್ಲಿರುವ ಪ್ರಮುಖ ಆರೋಪಗಳು:

ಉದಯಪುರ ಜಮೀನು ಪ್ರಕರಣ:

ಉದಯಪುರದಲ್ಲಿರುವ ಅತ್ಯಂತ ಅಮೂಲ್ಯ ಭೂಮಿಗೆ ಸಂಬಂಧಿಸಿದ ಮೇಲ್ಮನವಿಗಳನ್ನು ಜೋಧ್‌ಪುರದ ಪ್ರಮುಖ ಪೀಠದಿಂದ ಜೈಪುರಕ್ಕೆ ಸಿಜೆ ಶರ್ಮಾ ಅವರಿದ್ದ ಪೀಠಕ್ಕೆ ವರ್ಗಾಯಿಸಿಕೊಳ್ಳಲಾಗಿತ್ತು. ಈ ಪ್ರಕರಣದಲ್ಲಿ ಹಿರಿಯ ವಕೀಲ ಕಮಲಾಕರ್ ಶರ್ಮಾ ಅವರ ಸೊಸೆಯನ್ನು ಹೈಕೋರ್ಟ್ ನ್ಯಾಯಮೂರ್ತಿಯನ್ನಾಗಿ ಬಡ್ತಿ ನೀಡಲು ಶರ್ಮಾ ಬೆಂಬಲಿಸುತ್ತಿದ್ದರು ಎಂದು ನ್ಯಾಯಮೂರ್ತಿ ಮೆಹ್ತಾ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಬಂಕೆ ಬಿಹಾರಿ ದೇವಾಲಯದ ಎಲ್ಲಾ ದೇಣಿಗೆ ನೇರವಾಗಿ ಖಜಾನೆಗೆ ಜಮೆಯಾಗಬೇಕು; ಸುಪ್ರೀಂ ಕೋರ್ಟ್ ಆದೇಶ

ಗಣಿ ಉದ್ಯಮಿಯ ಪ್ರಕರಣದಲ್ಲಿ ನಿಯಮ ಉಲ್ಲಂಘನೆ:

ಗಣಿ ಉದ್ಯಮಿ ಮೇಘರಾಜ್ ಸಿಂಗ್ ಅವರ ಪ್ರಕರಣವೊಂದರಲ್ಲಿ, ಸಿಆರ್‌ಪಿಸಿ ಸೆಕ್ಷನ್ 482ರ ಅಡಿಯಲ್ಲಿ ನೀಡಲಾಗಿದ್ದ ಆದೇಶದ ವಿರುದ್ಧ ವಿಶೇಷ ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲದಿದ್ದರೂ, ರಿಜಿಸ್ಟ್ರಿಯನ್ನು ದುರ್ಬಳಕೆ ಮಾಡಿಕೊಂಡು ಅದನ್ನು ಸಿಜೆ ಶರ್ಮಾ ಅವರ ಪೀಠಕ್ಕೆ ತರಲಾಗಿತ್ತು. ಪೀಠವು ಮೊದಲ ದಿನವೇ 457 ದಿನಗಳ ವಿಳಂಬವನ್ನು ಮನ್ನಾ ಮಾಡಿ ಮಧ್ಯಂತರ ತಡೆ ನೀಡಿತ್ತು.

ನ್ಯಾಯಾಂಗ ಅಧಿಕಾರಿಗಳ ಮೇಲಿನ ದ್ವೇಷ:

ರಾಜಸ್ಥಾನ ಹೈಕೋರ್ಟ್ ನ್ಯಾಯಮೂರ್ತಿ ಉಮಾ ಶಂಕರ್ ವ್ಯಾಸ್ ಅವರ ಪತ್ನಿ ಹಾಗೂ ಹಿರಿಯ ಜಿಲ್ಲಾ ನ್ಯಾಯಾಂಗ ಅಧಿಕಾರಿಯಾಗಿರುವ ನಂದಿನಿ ವ್ಯಾಸ್ ಅವರ ವಿರುದ್ಧ ಸಿಜೆ ಶರ್ಮಾ ಅವರು ವೈಯಕ್ತಿಕ ದ್ವೇಷದ ಕ್ರಮ ಕೈಗೊಂಡಿದ್ದಾರೆ ಎಂದು ದೂರಲಾಗಿದೆ.

ಜೋಧ್‌ಪುರ ಜಿಲ್ಲಾ ನ್ಯಾಯಾಲಯ ಕಟ್ಟಡ ಉದ್ಘಾಟನೆ ತಡೆ:

ಕಾರ್ಯರೂಪಕ್ಕೆ ಸಿದ್ಧವಾಗಿದ್ದ ಜೋಧ್‌ಪುರ ಮೆಟ್ರೋ ನ್ಯಾಯಾಲಯದ ನೂತನ ಕಟ್ಟಡದ ಉದ್ಘಾಟನೆಯನ್ನು ಸಿಜೆ ಶರ್ಮಾ ಅವರು ಏಕಪಕ್ಷೀಯವಾಗಿ ತಡೆಹಿಡಿದು ಮೂಲಸೌಕರ್ಯ ಬದಲಾವಣೆಗೆ ಆದೇಶಿಸಿದ್ದರು. ಅಂತಿಮವಾಗಿ ನ್ಯಾಯಮೂರ್ತಿ ಮೆಹ್ತಾ ಮತ್ತು ನ್ಯಾಯಮೂರ್ತಿ ವಿಜಯ್ ಬಿಷ್ಣೋಯ್ ಅವರ ಕೋರಿಕೆಯ ಮೇರೆಗೆ ಮುಖ್ಯ ನ್ಯಾಯಮೂರ್ತಿಗಳು ಆಗಸ್ಟ್ 15ರಂದು ಈ ಕಟ್ಟಡವನ್ನು ಉದ್ಘಾಟಿಸಿದರು.

ಇದನ್ನೂ ಓದಿ: ಕಾವೇರಿ ವಿವಾದ: ಸುಪ್ರೀಂ ಕೋರ್ಟ್​ನಲ್ಲಿ ಮತ್ತೆ ವಿಚಾರಣೆ ಮುಂದೂಡಿಕೆ, ಕರ್ನಾಟಕಕ್ಕೆ ತಪ್ಪದ ಸಂಕಷ್ಟ

ಖಾಸಗಿ ಸಮ್ಮೇಳನಕ್ಕೆ ಸರ್ಕಾರಿ ಹಣ ಬಳಕೆ:

ಜುಲೈ 31ರಿಂದ ಆಗಸ್ಟ್ 2ರವರೆಗೆ ಜೈಪುರದಲ್ಲಿ ನಡೆದ ವಕೀಲರ ಸಮ್ಮೇಳನಕ್ಕೆ ಹೈಕೋರ್ಟ್‌ನ ಬಹುತೇಕ ನ್ಯಾಯಮೂರ್ತಿಗಳನ್ನು ನಿಯೋಜಿಸಲಾಗಿತ್ತು, ಇದರಿಂದ ಜೋಧ್‌ಪುರ ಪೀಠವು ಎರಡು ದಿನಗಳ ಕಾಲ ಸಂಪೂರ್ಣವಾಗಿ ಸ್ತಬ್ಧವಾಗಿತ್ತು. ಈ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರದಿಂದ ಸುಮಾರು 80 ಲಕ್ಷ ಅನುದಾನ ಒದಗಿಸಲಾಗಿತ್ತು. 96 ವಕೀಲರನ್ನು ಹಿರಿಯ ವಕೀಲರೆಂದು ನಾಮನಿರ್ದೇಶನ ಮಾಡಲು ಒತ್ತಡ ಹೇರಲಾಗಿತ್ತು.

ರಾಜಸ್ಥಾನ ಹೈಕೋರ್ಟ್‌ನ ಹಲವು ನ್ಯಾಯಮೂರ್ತಿಗಳು ಸಿಜೆ ಶರ್ಮಾ ಅವರ ಬೆದರಿಕೆ ಹಾಗೂ ವರ್ಗಾವಣೆಯ ಆತಂಕದ ಬಗ್ಗೆ ತಮ್ಮ ಬಳಿ ನೋವು ತೋಡಿಕೊಂಡಿದ್ದಾರೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಮೆಹ್ತಾ ತಿಳಿಸಿದ್ದಾರೆ. ಆದ್ದರಿಂದ ಹೈಕೋರ್ಟ್‌ನ ಘನತೆಯನ್ನು ಉಳಿಸಲು ನ್ಯಾಯಮೂರ್ತಿ ಎಸ್.ಪಿ. ಶರ್ಮಾ ಅವರನ್ನು ತಕ್ಷಣವೇ ರಾಜಸ್ಥಾನದಿಂದ ಹೊರಗೆ ವರ್ಗಾಯಿಸಬೇಕು ಎಂದು ಅವರು ಸುಪ್ರೀಂ ಕೋರ್ಟ್ ಕೊಲಿಜಿಯಂ ಅನ್ನು ಕೋರಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us