‘ನೈತಿಕ ಪೊಲೀಸ್‌ಗಿರಿಯನ್ನು ಇನ್ನೂ ಗೌರವಯುತ ರೀತಿಯಲ್ಲಿ ಮಾಡಬಹುದು’; ಜಮೂಯಿ ಪ್ರಕರಣದ ಬಗ್ಗೆ ಬಿಹಾರ ಸಚಿವೆ ಶಾಕಿಂಗ್ ಹೇಳಿಕೆ

ಬಿಹಾರದ ಜಮೂಯಿ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕ-ಬಾಲಕಿ ಮೇಲೆ ನಡೆದ ಭೀಕರ ಕಿರುಕುಳ ಮತ್ತು ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಸರ್ಕಾರದ ಸಚಿವೆ ಹಾಗೂ ಸ್ಥಳೀಯ ಬಿಜೆಪಿ ಶಾಸಕಿ ಶ್ರೇಯಸಿ ಸಿಂಗ್ ನೀಡಿದ ಹೇಳಿಕೆಯೊಂದು ಭಾರಿ ವಿವಾದಕ್ಕೆ ಕಾರಣವಾಗಿದೆ. ಈ ದೌರ್ಜನ್ಯದ ಘಟನೆಯನ್ನು ಖಂಡಿಸುವ ಭರದಲ್ಲಿ, "ನೈತಿಕ ಪೊಲೀಸ್‌ಗಿರಿಯನ್ನು ಇನ್ನಷ್ಟು ಶಿಸ್ತಿನಿಂದ ಮತ್ತು ಮರ್ಯಾದಾಯುತ ರೀತಿಯಲ್ಲಿ ಮಾಡಬಹುದು" ಎಂದು ಹೇಳಿಕೆ ನೀಡಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ.  'ನೈತಿಕ ಪೊಲೀಸ್‌ಗಿರಿ' ಮಾಡುವುದನ್ನು ಸಮರ್ಥಿಸಿಕೊಳ್ಳುವ ರೀತಿಯಲ್ಲಿ ನೀಡಿದ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ರಾಜಕೀಯ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.

‘ನೈತಿಕ ಪೊಲೀಸ್‌ಗಿರಿಯನ್ನು ಇನ್ನೂ ಗೌರವಯುತ ರೀತಿಯಲ್ಲಿ ಮಾಡಬಹುದು’; ಜಮೂಯಿ ಪ್ರಕರಣದ ಬಗ್ಗೆ ಬಿಹಾರ ಸಚಿವೆ ಶಾಕಿಂಗ್ ಹೇಳಿಕೆ
ಶ್ರೇಯಸಿ ಸಿಂಗ್
Image Credit source: ANI

Updated on: Sep 22, 2026 | 5:36 PM

ಜಮೂಯಿ, ಸೆಪ್ಟೆಂಬರ್ 22: ಬಿಹಾರದ ಜಮೂಯಿ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿ ಮತ್ತು ಬಾಲಕನ ಮೇಲೆ ನಡೆದ ಕಿರುಕುಳ ಹಾಗೂ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಸರ್ಕಾರದ ಸಚಿವೆ ಮತ್ತು ಜಮೂಯಿ ಶಾಸಕಿ ಶ್ರೇಯಸಿ ಸಿಂಗ್ ನೀಡಿದ ಹೇಳಿಕೆಯೊಂದು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದೆ. ಜಮೂಯಿಯಲ್ಲಿ ಟ್ಯೂಷನ್ ಕ್ಲಾಸ್ ಮುಗಿಸಿಕೊಂಡು ತನ್ನ ಗೆಳೆಯನ ಜೊತೆ ಬರುತ್ತಿದ್ದ 10ನೇ ತರಗತಿ ವಿದ್ಯಾರ್ಥಿನಿಗೆ ಪುಂಡರ ಗುಂಪೊಂದು ಲೈಂಗಿಕ ಕಿರುಕುಳ ನೀಡಿತ್ತು. ಈ ಘಟನೆಯ ವಿಡಿಯೋ ವೈರಲ್ ಆಗಿತ್ತು. ಈ ದೌರ್ಜನ್ಯದ ಘಟನೆಯನ್ನು ಖಂಡಿಸುವ ವೇಳೆ, “ನೈತಿಕ ಪೊಲೀಸ್‌ಗಿರಿಯನ್ನು ಇನ್ನು ಶಿಸ್ತಿನಿಂದ ಮತ್ತು ಮರ್ಯಾದೆಯುತ ರೀತಿಯಲ್ಲಿ ಮಾಡಬಹುದಿತ್ತು” ಎಂದು 35 ವರ್ಷದ ಶೂಟಿಂಗ್ ಕ್ರೀಡಾಪಟು ಹಾಗೂ ಬಿಜೆಪಿ ನಾಯಕಿ ಶ್ರೇಯಸಿ ಸಿಂಗ್ ಹೇಳಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ.

ಸಚಿವೆ ಶ್ರೇಯಸಿ ಸಿಂಗ್ ಹೇಳಿದ್ದೇನು?:

ಜಮೂಯಿಯಲ್ಲಿ 10ನೇ ತರಗತಿಯ ಬಾಲಕಿ ಮತ್ತು ಆಕೆಯ ಗೆಳೆಯನ ಮೇಲೆ ರಸ್ತೆಬದಿಯಲ್ಲಿ ಗುಂಪೊಂದು ತೀವ್ರ ಕಿರುಕುಳ ನೀಡಿ ಹಲ್ಲೆ ನಡೆಸಿದ್ದ ವಿಡಿಯೋ ವೈರಲ್ ಆಗಿತ್ತು. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವೆ ಶ್ರೇಯಸಿ ಸಿಂಗ್, “ನೈತಿಕ ಪೊಲೀಸ್‌ಗಿರಿಯನ್ನು ಇನ್ನೂ ಉತ್ತಮ ಮತ್ತು ಮರ್ಯಾದಾಯುತ ರೀತಿಯಲ್ಲಿ ಮಾಡಬಹುದಿತ್ತು. ಆದರೆ, ಅವರು ಆ ಯುವಕ ಮತ್ತು ಬಾಲಕಿಯನ್ನು ನಡೆಸಿಕೊಂಡ ರೀತಿಯನ್ನು ಸಹಿಸಲು ಸಾಧ್ಯವಿಲ್ಲ. ಮತ್ತೊಬ್ಬರು ತಮ್ಮ ಜೀವನವನ್ನು ಹೇಗೆ ನಡೆಸಬೇಕು ಎಂಬುದರ ಕುರಿತು ನಿಮ್ಮದೇ ಆದ ಅಭಿಪ್ರಾಯವಿರಬಹುದು, ಅದನ್ನು ವ್ಯಕ್ತಪಡಿಸಲು ಉತ್ತಮ ಮಾರ್ಗಗಳಿವೆ. ಆದರೆ ವಿಡಿಯೋದಲ್ಲಿ ಕಂಡುಬಂದ ವಿಕೃತ ವರ್ತನೆ ಆಘಾತಕಾರಿಯಾಗಿದೆ.” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಿಹಾರದಲ್ಲಿ 10ನೇ ತರಗತಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಇಬ್ಬರು ಆರೋಪಿಗಳ ಕಾಲಿಗೆ ಗುಂಡೇಟು

ಆ ಸಣ್ಣ ಮಕ್ಕಳ ಜೊತೆ ಸ್ಥಳೀಯ ಸಮಾಜದ ಜನರೇ ಹೀಗೆ ವಿಕೃತವಾಗಿ ವರ್ತಿಸಿರುವುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದ ಅವರು, ತಪ್ಪಿತಸ್ಥರು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳದಂತೆ ಕಠಿಣ ಕ್ರಮ ಜರುಗಿಸುವುದಾಗಿ ತಿಳಿಸಿದರು.


ಕಾಂಗ್ರೆಸ್ ಆಕ್ರೋಶ:

ಕಾಂಗ್ರೆಸ್ ನಾಯಕ ಪವನ್ ಖೇರಾ ಎಕ್ಸ್ ಜಾಲತಾಣದಲ್ಲಿ ಸಚಿವೆ ಶ್ರೇಯಸಿ ಸಿಂಗ್ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದು, “ಇದೇನು ವಿಚಿತ್ರ ವಾದ? ನಾಳೆ ಅಹಿಂಸಾತ್ಮಕವಾಗಿ ಅಥವಾ ಮರ್ಯಾದಾಯುತವಾಗಿ ಅತ್ಯಾಚಾರ ನಡೆದರೆ ಅದನ್ನೂ ಸರಿ ಎನ್ನುತ್ತೀರಾ?” ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಜಮೂಯಿಯಲ್ಲಿ ಗೆಳೆಯನನ್ನು ಥಳಿಸಿ, 10ನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ; ಬಿಹಾರ ಸರ್ಕಾರದ ವಿರುದ್ಧ ಜನರ ಆಕ್ರೋಶ

ಮುಖ್ಯ ಆರೋಪಿಗೆ ಗುಂಡೇಟು:

ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಕಾರ್ಯಾಚರಣೆ ನಡೆಸಿದ ಜಮೂಯಿ ಪೊಲೀಸರು, ಘಟನೆಯ ಮುಖ್ಯ ಆರೋಪಿ ನಂದನ್ ಯಾದವ್ ಹಾಗೂ ಆತನ ಸಹಚರ ಹರೇ ರಾಮ್ ಯಾದವ್ ಅವರನ್ನು ಬಂಧಿಸಿದ್ದಾರೆ. ಪೊಲೀಸ್ ಎನ್‌ಕೌಂಟರ್ ವೇಳೆ ಗುಂಡೇಟಿನಿಂದ ಗಾಯಗೊಂಡ ಹರೇ ರಾಮ್ ಯಾದವ್‌ನನ್ನು ವಶಕ್ಕೆ ಪಡೆಯಲಾಗಿದ್ದು, ವೈರಲ್ ವಿಡಿಯೋ ಆಧಾರದ ಮೇಲೆ ತನಿಖೆ ಚುರುಕುಗೊಳಿಸಲಾಗಿದೆ.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us