ಯುಸಿಸಿ ಜಾರಿ ಗದ್ದಲದ ಬೆನ್ನಲ್ಲೇ ಬಿಹಾರದಲ್ಲಿ ಸಂಚಲನ: ಜೆಡಿಯು ಸಂಸದರು, ಶಾಸಕರ ಮಹತ್ವದ ಸಭೆ ಕರೆದ ನಿತೀಶ್ ಕುಮಾರ್
ಕೇಂದ್ರದ ಯುಸಿಸಿ ಜಾರಿ ಘೋಷಣೆ ಬಿಹಾರ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಬಿಜೆಪಿ ಆಡಳಿತವಿರುವ 21 ರಾಜ್ಯಗಳಲ್ಲಿ ಯುಸಿಸಿ ತರುವ ಅಮಿತ್ ಶಾ ಹೇಳಿಕೆ ಬೆನ್ನಲ್ಲೇ, ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಸೆಪ್ಟೆಂಬರ್ 18ರಂದು ಪಕ್ಷದ ಸಂಸದರು, ಶಾಸಕರ ಮಹತ್ವದ ಸಭೆ ಕರೆದಿದ್ದಾರೆ. ಯುಸಿಸಿ ಕುರಿತು ಪಕ್ಷದ ಮುಂದಿನ ನಿಲುವು ಹಾಗೂ ಫರಕ್ಕಾ ಜಲ ಒಪ್ಪಂದದಂತಹ ಪ್ರಮುಖ ವಿಷಯಗಳ ಚರ್ಚೆ ಈ ಸಭೆಯ ಮುಖ್ಯ ಅಜೆಂಡಾ.

ಪಾಟ್ನಾ, ಸೆಪ್ಟೆಂಬರ್ 16: ಮುಂಬರುವ 2029ರ ಲೋಕಸಭಾ ಚುನಾವಣೆಗೆ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ ಬಿಹಾರ ರಾಜಕೀಯದಲ್ಲಿ ಸಂಚಲನ ಮೂಡಿದೆ. ಈ ಮಹತ್ವದ ಬೆಳವಣಿಗೆಯ ನಡುವೆ, ಎನ್‌ಡಿಎ ಮೈತ್ರಿಕೂಟದ ಪ್ರಮುಖ ಪಾಲುದಾರ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರು ಸೆಪ್ಟೆಂಬರ್ 18 ರಂದು ಪಾಟ್ನಾದಲ್ಲಿ ಪಕ್ಷದ ಎಲ್ಲಾ ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರ (MLC) ತುರ್ತು ಮತ್ತು ಮಹತ್ವದ ಸಭೆ ಕರೆದಿದ್ದಾರೆ. ಯುಸಿಸಿ ವಿಚಾರದಲ್ಲಿ ಪಕ್ಷದ ಮುಂದಿನ ನಿಲುವೇನು ಎಂಬುದನ್ನು ಚರ್ಚಿಸಲು ಈ ಸಭೆ ಆಯೋಜಿಸಲಾಗಿದೆ.
ಅಮಿತ್ ಶಾ ಡೆಡ್‌ಲೈನ್: ಮುಂಬೈನಲ್ಲಿ ಮಾತನಾಡಿದ್ದ ಅಮಿತ್ ಶಾ, ಧರ್ಮ ಭೇದವಿಲ್ಲದೆ ಮದುವೆ, ವಿಚ್ಛೇದನ, ಆಸ್ತಿ ಹಂಚಿಕೆ ಹಾಗೂ ದತ್ತು ಸ್ವೀಕಾರಕ್ಕೆ ಸಂಬಂಧಿಸಿದಂತೆ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಯುಸಿಸಿ ಜಾರಿಗೊಳಿಸುವುದಾಗಿ ಹೇಳಿದ್ದರು. 12 ಲೋಕಸಭಾ ಸಂಸದರನ್ನು ಹೊಂದಿರುವ ಜೆಡಿಯು ಮೇಲೆ ಈ ಹೇಳಿಕೆ ತೀವ್ರ ರಾಜಕೀಯ ಒತ್ತಡ ಸೃಷ್ಟಿಸಿದೆ.
ಜೆಡಿಯು ಎಚ್ಚರಿಕೆಯ ಹೆಜ್ಜೆ: ಸದ್ಯಕ್ಕೆ ಯಾವುದೇ ಆತುರದ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಬಿಹಾರ ಉಪಮುಖ್ಯಮಂತ್ರಿ ಹಾಗೂ ಜೆಡಿಯು ಹಿರಿಯ ನಾಯಕ ವಿಜಯ್ ಕುಮಾರ್ ಚೌಧರಿ ತಿಳಿಸಿದ್ದಾರೆ. ಕೇಂದ್ರದ ಕರಡು ಮಸೂದೆಯನ್ನು ಸಂಪೂರ್ಣವಾಗಿ ಪರಿಶೀಲಿಸಿದ ನಂತರವೇ ನಿಲುವು ಪ್ರಕಟಿಸುತ್ತೇವೆ; ಯಾವುದೇ ಆಕ್ಷೇಪಾರ್ಹ ಅಂಶಗಳಿದ್ದರೆ ಗೃಹ ಸಚಿವರ ಗಮನಕ್ಕೆ ತರುತ್ತೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪಕ್ಷದೊಳಗಿನ ಭಿನ್ನಸ್ವರ: ಶಾಸಕ ಶ್ಯಾಮ್ ರಜಕ್ ಸೇರಿದಂತೆ ಕೆಲ ಜೆಡಿಯು ಮುಖಂಡರು ಬಿಹಾರದಲ್ಲಿ ಯುಸಿಸಿ ಜಾರಿಗೆ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದು, ಪಕ್ಷದ ಮುಸ್ಲಿಂ ಮತಬ್ಯಾಂಕ್ ಮೇಲೆ ಇದು ನಕಾರಾತ್ಮಕ ಪರಿಣಾಮ ಬೀರಬಹುದು ಎಂಬ ಆತಂಕ ಪಕ್ಷದೊಳಗೆ ತಲೆದೋರಿದೆ.
ಫರಕ್ಕಾ ಜಲ ಒಪ್ಪಂದದ ಚರ್ಚೆ: ಸೆಪ್ಟೆಂಬರ್ 18ರ ಜೆಡಿಯು ಸಭೆಯಲ್ಲಿ ಯುಸಿಸಿ ಜೊತೆಗೆ ಬಿಹಾರಕ್ಕೆ ಅತ್ಯಂತ ಸೂಕ್ಷ್ಮವಾಗಿರುವ ಗಂಗಾ ನದಿಯ ಫರಕ್ಕಾ ಜಲ ಒಪ್ಪಂದ ಮತ್ತು ಹೂಳೆತ್ತುವ ಸಮಸ್ಯೆಗಳ ಕುರಿತಾಗಿಯೂ ಚರ್ಚೆ ನಡೆಯುವ ಸಾಧ್ಯತೆಯಿದೆ.
ಮತ್ತಷ್ಟು ಓಸಿ: 2029ರೊಳಗೆ ಎನ್‌ಡಿಎ ಆಡಳಿತದ 21 ರಾಜ್ಯಗಳಲ್ಲಿ ಯುಸಿಸಿ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಮಹತ್ವದ ಘೋಷಣೆ
ಓವೈಸಿ ತೀವ್ರ ವಾಗ್ದಾಳಿ: ಅಮಿತ್ ಶಾ ಘೋಷಣೆಯನ್ನು ಕಟುವಾಗಿ ಟೀಕಿಸಿರುವ ಎಐಎಂಐಎಂ (AIMIM) ಅಧ್ಯಕ್ಷ ಅಸಾದುದ್ದೀನ್ ಓವೈಸಿ, “ಬಿಜೆಪಿ-ಆರ್‌ಎಸ್‌ಎಸ್ ಅಲ್ಪಸಂಖ್ಯಾತರ ಹಕ್ಕುಗಳನ್ನು ಕಸಿಯಲು ಯತ್ನಿಸುತ್ತಿವೆ. ಬುಡಕಟ್ಟು ಸಮುದಾಯಗಳಿಗೆ ವಿನಾಯಿತಿ ನೀಡಿ ಕೇವಲ ಮುಸ್ಲಿಮರನ್ನು ಗುರಿ ಮಾಡಲಾಗುತ್ತಿದೆ. ಜೆಡಿಯು ನಿಜವಾದ ಜಾತ್ಯತೀತ ಪಕ್ಷವಾಗಿದ್ದರೆ ಯುಸಿಸಿಯನ್ನು ನೇರವಾಗಿ ವಿರೋಧಿಸಲಿ” ಎಂದು ಸವಾಲು ಹಾಕಿದ್ದಾರೆ.
ಉತ್ತರಾಖಂಡ: ಸ್ವಾತಂತ್ರ್ಯಾನಂತರ ದೇಶದಲ್ಲೇ ಮೊದಲ ಬಾರಿಗೆ ಸಂಪೂರ್ಣ ಯುಸಿಸಿ ಜಾರಿಗೆ ತಂದ ಮೊದಲ ರಾಜ್ಯವೆನಿಸಿದೆ.
ಇತರ ಎನ್‌ಡಿಎ ರಾಜ್ಯಗಳು: ಅಸ್ಸಾಂ, ಗುಜರಾತ್ ಹಾಗೂ ಮಧ್ಯಪ್ರದೇಶಗಳು ಈಗಾಗಲೇ ಶಾಸನ ಸಭೆಗಳಲ್ಲಿ ಯುಸಿಸಿ ಸಂಬಂಧಿತ ಕಾನೂನು ಪ್ರಕ್ರಿಯೆ ಮುಗಿಸಿದ್ದರೆ, ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢಗಳು ಕರಡು ರಚನೆಗೆ ಸಿದ್ಧತೆ ನಡೆಸಿವೆ.
ಗೋವಾ ವಿನಾಯಿತಿ: ಗೋವಾದಲ್ಲಿ ಪೋರ್ಚುಗೀಸ್ ಕಾಲದ ಸಾಂಪ್ರದಾಯಿಕ ನಾಗರಿಕ ಸಂಹಿತೆ ಜಾರಿಯಲ್ಲಿದ್ದು, ಅದು ಪ್ರಸ್ತುತ ಹೊಸ ಯುಸಿಸಿ ಮಾದರಿಗಿಂತ ಭಿನ್ನವಾದ ಕಾನೂನು ಚೌಕಟ್ಟನ್ನು ಹೊಂದಿದೆ.
ಕೇಂದ್ರದ ಸಂಖ್ಯಾಬಲದ ಲೆಕ್ಕಾಚಾರ: ಲೋಕಸಭೆಯಲ್ಲಿ ಎನ್‌ಡಿಎ ಸರ್ಕಾರ ಬಹುಮತ ಉಳಿಸಿಕೊಳ್ಳಲು ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಬೆಂಬಲ ಅತ್ಯಂತ ನಿರ್ಣಾಯಕವಾಗಿರುವುದರಿಂದ, ಯುಸಿಸಿ ಮಸೂದೆಯ ಅಂತಿಮ ರೂಪರೇಷೆಯಲ್ಲಿ ನಿತೀಶ್ ಅವರ ಸಲಹೆಗಳಿಗೆ ಮನ್ನಣೆ ಸಿಗುವುದು ಅನಿವಾರ್ಯವಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




