ರೈತರಿಗಿಂತ ಹೆಚ್ಚಿನ ವಿದ್ಯಾರ್ಥಿಗಳು ಆತ್ಮಹತ್ಯೆ; ಮಾನಸಿಕ ಆರೋಗ್ಯ ಸಮಸ್ಯೆ ಪರಿಹರಿಸಲು ಟಾಸ್ಕ್ ಫೋರ್ಸ್ ರಚಿಸಿದ ಸುಪ್ರೀಂ ಕೋರ್ಟ್
ಕಾಲೇಜು ಕ್ಯಾಂಪಸ್‌ಗಳಲ್ಲಿ ಜಾತಿ ಆಧಾರಿತ ತಾರತಮ್ಯವು ಸಂವಿಧಾನದ 15ನೇ ವಿಧಿಯ ಸ್ಪಷ್ಟ ಉಲ್ಲಂಘನೆಯಾಗಿದೆ, ಇದು ಇತರ ವಿಷಯಗಳ ಜೊತೆಗೆ ಜಾತಿಯ ಆಧಾರದ ಮೇಲೆ ತಾರತಮ್ಯವನ್ನು ನಿಷೇಧಿಸುತ್ತದೆ. ಸಂಪೂರ್ಣವಾಗಿ ಅಂಕ ಆಧಾರಿತ ಶಿಕ್ಷಣ ವ್ಯವಸ್ಥೆಯಲ್ಲಿ ಉತ್ತಮ ಪ್ರದರ್ಶನ ನೀಡಲು ನಿರಂತರ ಒತ್ತಡ ಮತ್ತು ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಸೀಮಿತ ಸೀಟುಗಳಿಗಾಗಿ ತೀವ್ರ ಸ್ಪರ್ಧೆಯು ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಮೇಲೆ ಭಯಾನಕ ಹೊರೆಯನ್ನು ಹೇರುತ್ತದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ಹೇಳಿದೆ. ವಿದ್ಯಾರ್ಥಿಯು ಮನೆ ಬಿಟ್ಟು ತಮ್ಮ ಕ್ಯಾಂಪಸ್‌ಗಳಲ್ಲಿ ಅಧ್ಯಯನ ಮಾಡಲು ಬಂದಾಗ ವಿಶ್ವವಿದ್ಯಾಲಯಗಳು ಪೋಷಕರ ಪಾತ್ರವನ್ನು ವಹಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ನವದೆಹಲಿ, ಮಾರ್ಚ್ 25: ಸಂಪೂರ್ಣ ಅಂಕಗಳನ್ನು ಆಧರಿಸಿದ ಶಿಕ್ಷಣ ವ್ಯವಸ್ಥೆಯಲ್ಲಿ ಉತ್ತಮ ಅಂಕ ಗಳಿಸಲು ನಿರಂತರ ಒತ್ತಡ ಮತ್ತು ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಸೀಮಿತ ಸೀಟುಗಳಿಗಾಗಿ ತೀವ್ರ ಸ್ಪರ್ಧೆ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಮೇಲೆ ಹೊರೆ ಉಂಟುಮಾಡುತ್ತಿದೆ ಎಂದು ಸುಪ್ರೀಂ ಕೋರ್ಟ್ ಇಂದು ಹೇಳಿದೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಜೆ.ಬಿ ಪಾರ್ದಿವಾಲಾ ಮತ್ತು ಆರ್. ಮಹಾದೇವನ್ ಅವರ ಪೀಠವು ಕಾಲೇಜು ಕ್ಯಾಂಪಸ್‌ಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆ ಘಟನೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಅಂತಹ ವಿದ್ಯಾರ್ಥಿಗಳ ಸಂಕಷ್ಟಕ್ಕೆ ಕಾರಣವಾಗುವ ಮೂಲ ಕಾರಣಗಳನ್ನು ಕಡಿಮೆ ಮಾಡಲು ಸಮಗ್ರ ಮಾರ್ಗಸೂಚಿಗಳನ್ನು ರೂಪಿಸುವ ಸಮಯ ಬಂದಿದೆ ಎಂದು ಹೇಳಿದೆ.
“ವಿಶ್ವವಿದ್ಯಾಲಯಗಳು ಕೇವಲ ಕಲಿಕೆಯ ಕೇಂದ್ರಗಳಾಗಿ ಮಾತ್ರವಲ್ಲದೆ ತಮ್ಮ ವಿದ್ಯಾರ್ಥಿಗಳ ಯೋಗಕ್ಷೇಮ ಮತ್ತು ಸಮಗ್ರ ಅಭಿವೃದ್ಧಿಗೆ ಜವಾಬ್ದಾರರಾಗಿರುವ ಸಂಸ್ಥೆಗಳಾಗಿ ತಮ್ಮ ಪಾತ್ರವನ್ನು ಒಪ್ಪಿಕೊಳ್ಳಬೇಕು” ಎಂದು ನ್ಯಾಯ ಪೀಠ ಹೇಳಿದೆ. ಒಂದುವೇಳೆ ಹಾಗೆ ಮಾಡಲು ವಿಫಲವಾದರೆ ಜೀವನವನ್ನು ಸಬಲೀಕರಣಗೊಳಿಸುವ ಮತ್ತು ಪರಿವರ್ತಿಸುವ ಶಿಕ್ಷಣದ ಉದ್ದೇಶವೇ ವಿಫಲವಾಗುತ್ತದೆ ಎಂದು ನ್ಯಾಯಾಲಯವು ಹೇಳಿದೆ. ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಆತ್ಮಹತ್ಯೆ ಘಟನೆಗಳನ್ನು ತಡೆಗಟ್ಟಲು ರಾಷ್ಟ್ರೀಯ ಕಾರ್ಯಪಡೆ (NTF)ಯನ್ನು ರಚಿಸಿದ ಪೀಠವು, ಕೇವಲ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧೆ ಮಾತ್ರವಲ್ಲದೆ ಅವರ ಮಾನಸಿಕ ಆರೋಗ್ಯದ ಬಗ್ಗೆ ಗಮನರಿಸುವುದು ಕೂಡ ಕಾಲೇಜುಗಳ ಕರ್ತವ್ಯವಾಗಿದೆ ಎಂದು ಹೇಳಿದೆ.
ಇದನ್ನೂ ಓದಿ: 8 ತಿಂಗಳ ಗರ್ಭಿಣಿಯ ಗರ್ಭಪಾತಕ್ಕೆ ಬಾಂಬೆ ಹೈಕೋರ್ಟ್ ಒಪ್ಪಿಗೆ, ಕಾರಣವೇನು?
ಅದೇ ರೀತಿ, ವಿದ್ಯಾರ್ಥಿಗಳ ಮೇಲೆ ಅಧಿಕಾರ ಮತ್ತು ನಿಯಂತ್ರಣವನ್ನು ಚಲಾಯಿಸುವುದಲ್ಲದೆ, ಸಂಕಷ್ಟದ ಸಮಯದಲ್ಲಿ ಬೆಂಬಲವನ್ನು ಒದಗಿಸಬೇಕೆಂದು ನ್ಯಾಯಾಲಯವು ಸೂಚಿಸಿದೆ. ವಿದ್ಯಾರ್ಥಿಗಳ ಆತ್ಮಹತ್ಯೆಯ ಕೆಲವು ಘಟನೆಗಳನ್ನು ಉಲ್ಲೇಖಿಸಿದ ಪೀಠ, ಇವು ಒಂದೇ ಬಾರಿಗೆ ಸಂಭವಿಸಿದ ಘಟನೆಗಳಲ್ಲ, ಬದಲಾಗಿ ರ‍್ಯಾಗಿಂಗ್, ಶೈಕ್ಷಣಿಕ ಒತ್ತಡ, ಜಾತಿ ಆಧಾರಿತ ತಾರತಮ್ಯ, ಲೈಂಗಿಕ ಕಿರುಕುಳ ಮುಂತಾದ ಹಲವಾರು ಕಾರಣಗಳಿಂದ ಕಾಲಕ್ರಮೇಣ ನಡೆದಿರುವ ಅನೇಕ ಘಟನೆಗಳಲ್ಲಿ ಕೆಲವೇ ಕೆಲವು ಘಟನೆಗಳಾಗಿವೆ ಎಂದು ಹೇಳಿದೆ.
2021ರ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ವರದಿಯು ದೇಶದಲ್ಲಿ 13,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಕಠೋರ ವಾಸ್ತವವನ್ನು ಎತ್ತಿ ತೋರಿಸುತ್ತದೆ. ಇದು 1 ದಶಕದ ಹಿಂದೆ ಈಗಾಗಲೇ ಆತಂಕಕಾರಿ ಸಂಖ್ಯೆಗಿಂತ 2 ಪಟ್ಟು ಹೆಚ್ಚಾಗಿದೆ ಎಂದು ಪೀಠ ಹೇಳಿದೆ. 2022ರಲ್ಲಿ ಭಾರತದಲ್ಲಿ ನಡೆದ ಒಟ್ಟು ಆತ್ಮಹತ್ಯೆಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆಗಳು ಶೇ. 7.6ರಷ್ಟಿದ್ದು, ಒಟ್ಟು ಆತ್ಮಹತ್ಯೆಗಳಲ್ಲಿ ಶೇ. 1.2ರಷ್ಟು ವೃತ್ತಿಪರ ಅಥವಾ ವೃತ್ತಿ ಸಮಸ್ಯೆಗಳಿಂದ ಉಂಟಾಗಿದ್ದರೆ, ಶೇ. 1.2ರಷ್ಟು ಪರೀಕ್ಷೆಯಲ್ಲಿ ವಿಫಲತೆಯಿಂದ ಉಂಟಾಗಿದೆ ಎಂದು ನ್ಯಾಯಪೀಠ ಹೇಳಿದೆ.
ಇದನ್ನೂ ಓದಿ: ದೆಹಲಿಯಿಂದ ಅಲಹಾಬಾದ್ ಹೈಕೋರ್ಟ್‌ಗೆ ನ್ಯಾ. ಯಶವಂತ್ ವರ್ಮಾ ವರ್ಗಾವಣೆಗೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು
ಜನವರಿ 2024ರಲ್ಲಿ ದೆಹಲಿ ಹೈಕೋರ್ಟ್‌ನ ಇಬ್ಬರು ವಿದ್ಯಾರ್ಥಿಗಳ ಆತ್ಮಹತ್ಯೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲು ಪೊಲೀಸರಿಗೆ ನಿರ್ದೇಶಿಸಲು ನಿರಾಕರಿಸಿದ ಆದೇಶದ ವಿರುದ್ಧ ಇಬ್ಬರು ಮೃತ ವಿದ್ಯಾರ್ಥಿಗಳ ಪೋಷಕರು ಸಲ್ಲಿಸಿದ ಮೇಲ್ಮನವಿಯ ಮೇರೆಗೆ ಈ ನಿರ್ದೇಶನಗಳು ಬಂದವು. 2023ರಲ್ಲಿ ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)ಯಲ್ಲಿ ಓದುತ್ತಿದ್ದಾಗ ಆತ್ಮಹತ್ಯೆಯಿಂದ ಸಾವನ್ನಪ್ಪಿದ ಇಬ್ಬರು ವಿದ್ಯಾರ್ಥಿಗಳ ಕುಟುಂಬ ಸದಸ್ಯರ ದೂರುಗಳ ಮೇಲೆ ಎಫ್‌ಐಆರ್ ದಾಖಲಿಸಲು ಅದು ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:49 pm, Tue, 25 March 25