
ಸಿಂಗ್ರೌಲಿ, ಆಗಸ್ಟ್ 26: ತುರ್ತು ಸಂದರ್ಭಗಳಲ್ಲಿ ಜನರ ಜೀವ ಮತ್ತು ಆಸ್ತಿಪಾಸ್ತಿ ರಕ್ಷಿಸಬೇಕಾದ ಸರ್ಕಾರಿ ಅಗ್ನಿಶಾಮಕ ದಳದ ವಾಹನವನ್ನು ಶಾಸಕರೊಬ್ಬರ ಇನ್ನೋವಾ ಕಾರು ತೊಳೆಯಲು ಬಳಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರಿ ರಾಜಕೀಯ ವಿವಾದವನ್ನು ಹುಟ್ಟುಹಾಕಿದೆ.
ಮಧ್ಯಪ್ರದೇಶದ ಸಿಂಗ್ರೌಲಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ರಾಮ್‌ನಿವಾಸ್ ಶಾ ಅವರ ಬಿಲೌಂಜಿಯಲ್ಲಿರುವ ಸರ್ಕಾರಿ ನಿವಾಸದ ಮುಂಭಾಗ ಈ ಘಟನೆ ನಡೆದಿದ್ದು, ಮುನ್ಸಿಪಲ್ ಕಾರ್ಪೊರೇಷನ್‌ನ ಮೂವರು ಸಿಬ್ಬಂದಿ ಅಗ್ನಿಶಾಮಕ ವಾಹನದ ಪೈಪ್ ಮೂಲಕ ಶಾಸಕರ ಕಾರಿಗೆ ಪ್ರೆಶರ್ ನೀರು ಸಿಂಪಡಿಸಿ ತೊಳೆಯುತ್ತಿರುವುದು ದೃಶ್ಯಗಳಲ್ಲಿ ಸೆರೆಯಾಗಿದೆ.
ವಿಡಿಯೋ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ಉತ್ತರಿಸಿದ ಶಾಸಕ ರಾಮ್‌ನಿವಾಸ್ ಶಾ, ಜನರು ಮೊದಲು ಅರ್ಥಮಾಡಿಕೊಳ್ಳಬೇಕು, ಒಬ್ಬ ಶಾಸಕ ತನ್ನ ವಾಹನವನ್ನು ತಾನೇ ತೊಳೆಯಲು ಸಾಧ್ಯವೇ? ಎಂದು ಮರುಪ್ರಶ್ನಿಸುವ ಮೂಲಕ ಉಡಾಫೆಯಾಗಿ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಎನ್ಡಿಟಿವಿ ವರದಿ ಮಾಡಿದೆ.
ವಿಡಿಯೋ
“Does an MLA wash his own vehicle?” Singrauli BJP MLA Ramniwas Shah said when questioned about a viral video purportedly showing a fire brigade vehicle being used to wash his Toyota Innova outside his government residence @GargiRawat https://t.co/pe5XwfF6J5 pic.twitter.com/I2CPZs90nQ
— Anurag Dwary (@Anurag_Dwary) August 26, 2026
ಆ ಸಮಯದಲ್ಲಿ ತಾನು ಸ್ಥಳೀಯ ಕಾರ್ಯಕ್ರಮಗಳಲ್ಲಿದ್ದ ಕಾರಣ ನಿವಾಸದಲ್ಲಿ ಇರಲಿಲ್ಲ ಎಂದು ಹೇಳಿಕೊಂಡ ಅವರು, ಮಹಾನಗರ ಪಾಲಿಕೆ ಕಚೇರಿಗೆ ನೀರು ಸರಬರಾಜು ಮಾಡಲು ಬಂದಿದ್ದ ವಾಹನವನ್ನು ಚಾಲಕ ಕಾರು ತೊಳೆಯಲು ಬಳಸಿಕೊಂಡಿರಬಹುದು ಎಂದು ಸಮರ್ಥಿಸಿಕೊಂಡಿದ್ದಾರೆ.
ಉಮಾಂಗ್ ಸಿಂಘರ್ ಕಿಡಿ: ಮಧ್ಯಪ್ರದೇಶ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಉಮಾಂಗ್ ಸಿಂಘರ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ಸಾಮಾನ್ಯ ಜನರ ಮನೆಗೆ ಬೆಂಕಿ ಬಿದ್ದಾಗ ಸಕಾಲಕ್ಕೆ ಬಾರದ ಅಗ್ನಿಶಾಮಕ ವಾಹನಗಳು, ಬಿಜೆಪಿ ಶಾಸಕರ ಕಾರು ತೊಳೆಯುವ ಖಾಸಗಿ ವಾಷಿಂಗ್ ಸೆಂಟರ್ ಆಗಿ ಮಾರ್ಪಟ್ಟಿವೆ ಎಂದು ಟೀಕಿಸಿದ್ದಾರೆ.
ಮತ್ತಷ್ಟು ಓದಿ:
ಪಿಎಸ್‌ಐ ಮೇಲೆ ಶಾಸಕ ಸುರೇಶ್‌ಗೌಡ ಪುತ್ರಿ ಕಪಾಳಮೋಕ್ಷ ಪ್ರಕರಣ; 10 ದಿನಗಳ ಬಳಿಕ ವೀಡಿಯೋ ವೈರಲ್
ನೆಟ್ಟಿಗರ ವ್ಯಂಗ್ಯ: ಸಾರ್ವಜನಿಕರ ತೆರಿಗೆ ಹಣ ಮತ್ತು ತುರ್ತು ಸಂಪನ್ಮೂಲಗಳನ್ನು ರಾಜಕಾರಣಿಗಳು ತಮ್ಮ ವೈಯಕ್ತಿಕ ಪ್ರತಿಷ್ಠೆಗೆ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ತುರ್ತು ಸೇವಾ ನಿಯಮಗಳ ಉಲ್ಲಂಘನೆ: ನಿಯಮಗಳ ಪ್ರಕಾರ, ಅಗ್ನಿಶಾಮಕ ವಾಹನಗಳನ್ನು ಕೇವಲ ಬೆಂಕಿ ಅವಘಡಗಳು, ಪ್ರವಾಹ ಅಥವಾ ತುರ್ತು ರಕ್ಷಣಾ ಕಾರ್ಯಾಚರಣೆಗಳಿಗೆ ಮಾತ್ರ ಬಳಸಲು ಅನುಮತಿಯಿದೆ. ಯಾವುದೇ ವ್ಯಕ್ತಿಯ ಖಾಸಗಿ ವಾಹನ ತೊಳೆಯಲು ಅಥವಾ ವೈಯಕ್ತಿಕ ಬಳಕೆಗೆ ಇವುಗಳನ್ನು ಬಳಸುವುದು ಅಧಿಕಾರ ದುರುಪಯೋಗ ಹಾಗೂ ಶಿಕ್ಷಾರ್ಹ ಅಪರಾಧವಾಗಿದೆ.
ಅಧಿಕಾರಿಗಳ ಮೌನ: ಘಟನೆ ಸಾರ್ವಜನಿಕವಾಗಿ ಬಯಲಾಗಿದ್ದರೂ, ಸ್ಥಳೀಯ ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಜಿಲ್ಲಾಡಳಿತವು ಘಟನೆಯ ಬಗ್ಗೆ ಸ್ಪಷ್ಟ ತನಿಖೆ ನಡೆಸದೆ ಜಾಣಮೌನ ವಹಿಸಿರುವುದು ಸ್ಥಳೀಯ ಆಡಳಿತದ ಮೇಲಿನ ಹೊಣೆಗಾರಿಕೆಯನ್ನು ಪ್ರಶ್ನಿಸುವಂತೆ ಮಾಡಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ