My Modi Story: ಪ್ರಧಾನಿ ಮೋದಿಯಿಂದ ಕಲಿತ ಜೀವನದ ದೊಡ್ಡ ಪಾಠ ಹಂಚಿಕೊಂಡ ಅಮಿತ್ ಶಾ
ಇಂದು ಪ್ರಧಾನಿ ನರೇಂದ್ರ ಮೋದಿಯವರ 75ನೇ ಹುಟ್ಟುಹಬ್ಬ. ಈ ವೇಳೆ ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ಮೈ ಮೋದಿ ಸ್ಟೋರಿ ಎಂಬ ಹ್ಯಾಶ್ಟ್ಯಾಗ್ನಡಿ ಅನೇಕ ಜನರು ಮತ್ತು ಹಾಗೂ ಮೋದಿಯ ನಡುವಿನ ಸಂಬಂಧ ಮತ್ತು ಅವರ ಜೊತೆ ಕಳೆದ ಕ್ಷಣಗಳ ಬಗ್ಗೆ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೂಡ ಪ್ರಧಾನಿ ನರೇಂದ್ರ ಮೋದಿಯವರಿಂದ ಪಡೆದ ಸೂಕ್ಷ್ಮತೆಯ ಪಾಠವನ್ನು ಹಂಚಿಕೊಂಡಿದ್ದಾರೆ. ಅದೇನೆಂದರೆ ತನಗಿಂತ ಮೊದಲು ತನ್ನ ಮೇಲೆ ನಂಬಿಕೆಯಿಟ್ಟು ಬಂದ ಕಾರ್ಯಕರ್ತರನ್ನು ನೋಡಿಕೊಳ್ಳುವುದು ಎಂದಿದ್ದಾರೆ.

ನವದೆಹಲಿ, ಸೆಪ್ಟೆಂಬರ್ 17: ಪ್ರಧಾನಿ ನರೇಂದ್ರ ಮೋದಿಯವರ (PM Narendra Modi) 75ನೇ ಹುಟ್ಟುಹಬ್ಬವನ್ನು ಆಚರಣೆಯ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ‘ಮೈ ಮೋದಿ ಸ್ಟೋರಿ’ (My Modi Story) ಸೀರೀಸ್ನಲ್ಲಿ ತಮ್ಮ ಹಾಗೂ ಪ್ರಧಾನಿ ಮೋದಿಯವರ ನಡುವಿನ ಒಡನಾಟದ ವೇಳೆ ನಡೆದ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ. ತನಗಿಂತ ಮೊದಲು ಪಕ್ಷದ ಕಾರ್ಯಕರ್ತರನ್ನು ನೋಡಿಕೊಳ್ಳುವ ಪ್ರಧಾನಿ ಮೋದಿಯವರ ಜೀವಮಾನದ ಬದ್ಧತೆಯ ಬಗ್ಗೆ ಅವರು ಮಾತನಾಡಿದ್ದಾರೆ. ಎಕ್ಸ್ನಲ್ಲಿ ವಿಡಿಯೋವನ್ನು ಹಂಚಿಕೊಂಡಿರುವ ಕೇಂದ್ರ ಸಚಿವ ಅಮಿತ್ ಶಾ, ಅಂದಿನಿಂದ ಈ ಪಾಠ ತಮ್ಮ ಮನಸ್ಸಿನಲ್ಲಿದೆ ಎಂದು ಹೇಳಿದ್ದಾರೆ.
ಹಲವು ವರ್ಷಗಳ ಹಿಂದೆ ಒಂದು ಸಂಜೆ ತಡವಾಗಿ ಅಹಮದಾಬಾದ್‌ನಿಂದ ರಾಜ್‌ಕೋಟ್‌ಗೆ ಪ್ರಧಾನಿ ಮೋದಿಯವರೊಂದಿಗೆ ಪ್ರಯಾಣಿಸಿದ್ದನ್ನು ಅಮಿತ್ ಶಾ ನೆನಪಿಸಿಕೊಂಡಿದ್ದಾರೆ. “ಅದಾಗಲೇ ರಾತ್ರಿ 8.30 ಆಗಿತ್ತು. ಮೋದಿ ಅವರು ಸಾಮಾನ್ಯವಾಗಿ ಪಕ್ಷದ ಕಾರ್ಯಕರ್ತರ ಮನೆಯಲ್ಲಿ ಭೋಜನ ಸೇವಿಸುತ್ತಿದ್ದರು. ಆದರೆ, ಆ ಪ್ರಯಾಣದ ಸಮಯದಲ್ಲಿ ಪ್ರಧಾನಿ ಮೋದಿ ಸೂರ್ಯನಗರದಲ್ಲಿ ಕಾರು ನಿಲ್ಲಿಸಲು ಸೂಚಿಸಿದರು. ಅಲ್ಲಿ ಒಬ್ಬ ಬಿಜೆಪಿ ಕಾರ್ಯಕರ್ತ ರಸ್ತೆಬದಿಯ ಡಾಬಾ ನಡೆಸುತ್ತಿದ್ದರು. ನಾವು ಅವರ ಡಾಬಾ ಬಳಿ ಕಾರನ್ನು ನಿಲ್ಲಿಸಿದೆವು. ನಾವೆಲ್ಲರೂ ತಿನ್ನಲು ಕುಳಿತೆವು. ಮೋದಿಯವರಿಗೆ ಹಸಿವಾಗಿ ಇಲ್ಲಿ ನಿಲ್ಲಿಸಿರಬಹುದು, ಅವರ ನೆಪದಲ್ಲಿ ನಾವೂ ಏನಾದರೂ ತಿನ್ನಬಹುದು ಎಂದು ನಾನು ಭಾವಿಸಿದ್ದೆ. ಆದರೆ, ನಾವೆಲ್ಲರೂ ಊಟ ಮಾಡುತ್ತಿದ್ದಾಗ ಪ್ರಧಾನಿ ಮೋದಿ ಒಂದೆರಡು ತುಂಡು ಹಣ್ಣುಗಳನ್ನು ಮಾತ್ರ ತಿಂದರು” ಎಂದು ಅಮಿತ್ ಶಾ ನೆನಪಿಸಿಕೊಂಡಿದ್ದಾರೆ.
ಇದನ್ನೂ ಓದಿ: ಹೊಸ ಭಾರತ ಪರಮಾಣು ಬೆದರಿಕೆಗಳಿಗೆ ಹೆದರುವುದಿಲ್ಲ, ಉಗ್ರರ ಮನೆಗೆ ನುಗ್ಗಿ ಹೊಡೆಯುತ್ತದೆ; ಧಾರ್‌ನಲ್ಲಿ ಪ್ರಧಾನಿ ಮೋದಿ
“ಆ ರಾತ್ರಿ ನಾನು ಯೋಚನೆ ಮಾಡಿದೆ. ಆ ಡಾಬಾದಲ್ಲಿ ಮೋದಿಯೇನೂ ತಿನ್ನಲೇ ಇಲ್ಲ. ಹಾಗಾದರೆ, ಅಲ್ಲಿ ಕಾರು ನಿಲ್ಲಿಸಲು ಹೇಳಿದ್ದು ಏಕೆ? ಎಂದು ಯೋಚಿಸಿದೆ. ಆಗ ನನಗೆ ನೆನಪಾಯಿತು, ಅಲ್ಲಿ ಮೋದಿ ಕಾರು ನಿಲ್ಲಿಸಲು ಹೇಳಿದ್ದು ತಮಗಾಗಿ ಅಲ್ಲ, ಹಸಿದಿರುವ ಕಾರ್ಯಕರ್ತರಿಗಾಗಿ ಎಂದು. ತಾವು ಹೋಗಿ ಕಾರ್ಯಕರ್ತರ ಮನೆಯಲ್ಲಿ ಊಟ ಮಾಡುವಷ್ಟರಲ್ಲಿ ಕಾರ್ಯಕರ್ತರು ಊಟ ಮಾಡಲಿ ಎಂದು ಮೋದಿ ತಮ್ಮ ಊಟವನ್ನು ವಿಳಂಬಗೊಳಿಸಿದ್ದರು. ಮೋದಿಯವರು ಎಲ್ಲೇ ಹೋದರೂ ಕಾರ್ಯಕರ್ತರ ಬಗ್ಗೆ ಯೋಚಿಸುತ್ತಿದ್ದರು. ಇದು ಕಾರ್ಯಕರ್ತರು ಅವರ ಮೇಲಿಟ್ಟ ನಂಬಿಕೆಯನ್ನು ಅವರು ಉಳಿಸಿಕೊಂಡ ಪರಿ. ನಾನು ಮೋದಿಯವರಿಂದ ನಂಬಿಕೆ, ಸಮರ್ಪಣೆಯೇ ಸಂಘಟನೆಯ ಆತ್ಮ ಎಂಬುದರ ಪಾಠವನ್ನು ಕಲಿತೆ” ಎಂದು ಅಮಿತ್ ಶಾ ನೆನಪಿಸಿಕೊಂಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




