AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಯೋಧ್ಯೆ: ಉಜ್ವಲಾ ಯೋಜನೆಯ ಫಲಾನುಭವಿ ಮನೆಗೆ ಮೋದಿ ಭೇಟಿ; ಚಹಾ ಜತೆ ಚಿಟ್ ಚಾಟ್

ಕುಟುಂಬದ ಸದಸ್ಯರ ಜತೆ ಹಮ್ಮು ಬಿಮ್ಮು ಇಲ್ಲದೆ ಕುಳಿತ ಮೋದಿ, ಮೀರಾ ಮಾಂಝಿ ಜತೆ ಮಾತನಾಡಿದ್ದಾರೆ. ನಾನು ಇಲ್ಲಿಗೆ ಯಾಕೆ ಬಂದೆ ಗೊತ್ತಾ ಮಾತು ಆರಂಭಿಸಿದ ಮೋದಿ, ನೀವು ಉಜ್ವಲಾ ಯೋಜನೆಯ 10ನೇ ಕೋಟಿ ಫಲಾನುಭವಿ. 10ನೇ ಕೋಟಿ ಫಲಾನುಭವಿ ಅಯೋಧ್ಯೆಯಲ್ಲೇ ಇದ್ದಾರೆ ಎಂದಾಗ ಅರೇ, ಇಲ್ಲೇ ಇರುವವರಲ್ಲವೇ ನಿಮ್ಮನ್ನು ಭೇಟಿ ಮಾಡೋಣ ಎಂದು ಬಂದೆ ಎಂದಿದ್ದಾರೆ.

ರಶ್ಮಿ ಕಲ್ಲಕಟ್ಟ
|

Updated on: Dec 30, 2023 | 8:00 PM

Share

ಅಯೋಧ್ಯೆ ಡಿಸೆಂಬರ್ 30: ಜನವರಿ 22 ರಂದು ರಾಮಮಂದಿರದ ಉದ್ಘಾಟನೆಗೆ ಮುನ್ನ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಶನಿವಾರದಂದು ತಮ್ಮ ಅಯೋಧ್ಯೆ ಪ್ರವಾಸದ ಸಂದರ್ಭದಲ್ಲಿ ಮೀರಾ ಮಾಂಝಿ (Meera Manjhi) ಎಂಬವರ ಮನೆಗೆ ದಿಢೀರ್ ಭೇಟಿ ನೀಡಿದ್ದಾರೆ. ಈ ಮೀರಾ ಮಾಂಝಿ ಉಜ್ವಲಾ ಯೋಜನೆಯ (Pradhan Mantri Ujjwala Yojana)10ನೇ ಕೋಟಿ ಫಲಾನುಭವಿ. ಪ್ರಧಾನಿ ಮೋದಿ ತಮ್ಮ ಮನೆಗೆ ಬರುತ್ತಿದ್ದಾರೆ ಎಂಬುದು ನನಗೆ ತಿಳಿದಿರಲಿಲ್ಲ ಎಂದು ಮೀರಾ ಮಾಂಝಿ ಹೇಳಿದ್ದಾರೆ.

ಒಂದು ಗಂಟೆಯ ಹಿಂದೆ ರಾಜಕೀಯ ನಾಯಕರೊಬ್ಬರು ಬರುತ್ತಾರೆ ಎಂದು ತಿಳಿಸಿದ್ದರು. ಅವರು ಬಂದರು, ಅವರು ನನ್ನ ಕುಟುಂಬದ ಸದಸ್ಯರೊಂದಿಗೆ ಮಾತನಾಡಿದರು. ಅವರು ಉಜ್ವಲ ಯೋಜನೆಯಲ್ಲಿ ನಮಗೆ ಸಿಗುತ್ತಿರುವ ಪ್ರಯೋಜನಗಳ ಬಗ್ಗೆ ಕೇಳಿದರು. ಏನೇನು ಅಡುಗೆ ಮಾಡಿದ್ದೀರಿ ಎಂದು ಕೇಳಿದರು. ನಾನು ಅಕ್ಕಿ, ಬೇಳೆ, ತರಕಾರಿ ಬೇ ಬೇಯಿಸಿದ್ದೇನೆ, ಈಗ ಚಹಾ ಕೂಡಾ ಮಾಡಿದ್ದೇನೆ ಎಂದು ಹೇಳಿದೆ. ಈ ಚಳಿಯಲ್ಲಿ ಚಹಾ ಬೇಕಲ್ವಾ ಎಂದರು. ನಾನು ಅವರಿಗೆ ಚಹಾ ಕೊಟ್ಟೆ, ಇದು ಸ್ವಲ್ಪ ಜಾಸ್ತಿ ಸಿಹಿ ಆಗಿದೆ ಎಂದು ಅವರು ಹೇಳಿದರು ಅಂತಾರೆ ಮೀರಾ ಮಾಂಝಿ.

ಮೀರಾ ಮಾಂಝಿ ಹೇಳಿದಂತೆ ಮೋದಿ ಮನೆಗೆ ಬರುತ್ತಾರೆ ಎಂಬುದು ಅವರಿಗೆ ಗೊತ್ತಿರಲಿಲ್ಲ. ವಿಡಿಯೊ ನೋಡಿದರೆ ಅವರೆಲ್ಲರೂ ಮೋದಿ ಮನೆಗೆ ಬಂದಿರುವುದನ್ನು ನೋಡಿ ಅಚ್ಚರಿಯಿಂದ ನಿಂತಿದ್ದಾರೆ. ಪ್ರಧಾನಿ ಮನೆಯೊಳಗೆ ಬರುತ್ತಿದ್ದಂತೆ ಅವರ ಕಾಲಿಗೆ ನಮಸ್ಕಾರ ಮಾಡಿದ್ದಾರೆ. ಆಗ ಮೋದಿ ಹಾಗೆಲ್ಲ ಮಾಡಬೇಡಿ ಎಂದು ಮನೆಯೊಳಗೆ ಬಂದು ಮನೆಯ ಸದಸ್ಯರಂತೆ ಅಲ್ಲೇ ಇದ್ದ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಾರೆ. ಮೀರಾ ಅವರ ಪುಟ್ಟ ಮಗುವನ್ನು ಮೋದಿ ಮುದ್ದು ಮಾಡಿದ್ದಾರೆ.

ಕುಟುಂಬದ ಸದಸ್ಯರ ಜತೆ ಹಮ್ಮು ಬಿಮ್ಮು ಇಲ್ಲದೆ ಕುಳಿತ ಮೋದಿ, ಮೀರಾ ಮಾಂಝಿ ಜತೆ ಮಾತನಾಡಿದ್ದಾರೆ. ನಾನು ಇಲ್ಲಿಗೆ ಯಾಕೆ ಬಂದೆ ಗೊತ್ತಾ ಮಾತು ಆರಂಭಿಸಿದ ಮೋದಿ, ನೀವು ಉಜ್ವಲಾ ಯೋಜನೆಯ 10ನೇ ಕೋಟಿ ಫಲಾನುಭವಿ. 10ನೇ ಕೋಟಿ ಫಲಾನುಭವಿ ಅಯೋಧ್ಯೆಯಲ್ಲೇ ಇದ್ದಾರೆ ಎಂದಾಗ ಅರೇ, ಇಲ್ಲೇ ಇರುವವರಲ್ಲವೇ ನಿಮ್ಮನ್ನು ಭೇಟಿ ಮಾಡೋಣ ಎಂದು ಬಂದೆ ಎಂದು ಹೇಳಿದ್ದಾರೆ. ಗ್ಯಾಸ್ ನಲ್ಲಿ ಏನೆಲ್ಲಾ ಅಡುಗೆ ಮಾಡ್ತೀರಿ ಎಂದು ಮೋದಿ ಕೇಳಿದಾಗ ಮೀರಾ, ಅನ್ನ, ಬೇಳೆ, ತರಕಾರಿ ಬೇಯಿಸಿದ್ದೀನಿ. ಟೀ ಕೂಡಾ ಮಾಡಿದ್ದೀನಿ ಎಂದು ಹೇಳಿ ಮೋದಿಗೆ ಟೀ ನೀಡಿದ್ದಾರೆ.

ಟೀ ಸ್ವೀಕರಿಸಿದ ಮೋದಿ ಹಾಲು ಹಾಕಿದ ಚಹಾ. ನಿಮಗೆ ಇಲ್ಲಿ ಹಾಲು ಸಿಗುತ್ತಾ ಎಂದು ಕೇಳಿದ್ದಾರೆ. ಆಗ ಮೀರಾ, ಹೌದು, ಪ್ಯಾಕೆಟ್ ಹಾಲು ಸಿಗುತ್ತದೆ ಎಂದು ಹೇಳಿದ್ದಾರೆ. ಈ ಚಹಾ ತುಂಬಾ ಸಿಹಿಯಾಗಿದೆ, ನೀವು ಇಷ್ಟೊಂದು ಸಿಹಿ ಕುಡಿಯುತ್ತೀರಾ ಎಂದು ಮೋದಿ ಹೇಳಿದಾಗ, ಚಹಾ ಸಿಹಿ ಆಗಿ ಬಿಡುತ್ತದೆ ಎಂದು ಮೀರಾ ಸಂಕೋಚದಿಂದಲೇ ಹೇಳಿದ್ದಾರೆ.

ನಿಮಗೆ ಸರ್ಕಾರದಿಂದ ಏನೇನು ಪ್ರಯೋಜನಗಳು ಸಿಕ್ಕಿವೆ ಎಂದು ಕೇಳಿದಾಗ ಮೀರಾ ಈ ಮನೆ ಸಿಕ್ಕಿದೆ ಅಂತಾರೆ. ಹಾಗಾದರೆ ಮೊದಲು ಎಲ್ಲಿ ಇರುತ್ತಿದ್ರಿ? ಎಂಬ ಪ್ರಶ್ನೆಗೆ ಮೊದಲು ಜೋಪಡಿಯಲ್ಲಿ ಇರುತ್ತಿದ್ದೆವು, ನಿಮ್ಮ ಕೃಪೆಯಿಂದ ಮನೆ ಆಗಿದೆ ಎಂದಿದ್ದಾರೆ.

ಹಾಗಾದರೆ ವಿದ್ಯುತ್? ಮೂರು ವರ್ಷದಿಂದ ಮನೆಗೆ ವಿದ್ಯುತ್ ಇದೆ ಎಂದು ಮೀರಾ ಹೇಳಿದಾಗ ಬಿಲ್ ಎಷ್ಟು ಬರುತ್ತದೆ ಎಂದು ಮೋದಿ ಕೇಳಿದ್ದಾರೆ. ತಿಂಗಳಿಗೆ 100-200 ಬರುತ್ತದೆ ಎಂಬುದು ಮೀರಾ ಉತ್ತರ.

ಇದನ್ನೂ ಓದಿ:Viral Video: ಪ್ರಧಾನಮಂತ್ರಿ ಆವಾಸ್ ಯೋಜನೆಯ ಫಲಾನುಭವಿ ಮನೆಯಲ್ಲಿ ಟೀ ಕುಡಿದ ಪ್ರಧಾನಿ ಮೋದಿ

ಗ್ಯಾಸ್?, ಅದು ನಿನ್ನೆ ಸಿಕ್ಕಿತು. ನಾವು ಮೊದಲು ಒಲೆಯಲ್ಲಿ ಅಡುಗೆ ಮಾಡುತ್ತಿದ್ದೆವು ಎಂದು ಮೀರಾ ಹೇಳಿದಾಗ,ಈಗ ನಿಮಗೆ ಸಮಯ ಉಳಿತಾಯ ಆಗುತ್ತಿದೆ ಅಲ್ಲವೇ ಅಂತಾರೆ ಮೋದಿ. ಹೌದು ಮಕ್ಕಳೊಂದಿಗೆ ಇರಲು ಸಮಯ ಸಿಗುತ್ತದೆ ಎಂದು ಮೀರಾ ಹೇಳಿದ್ದಾರೆ. ನೀವು ಏನು ಕೆಲಸ ಮಾಡುತ್ತೀರಿ ಎಂದು ಮೋದಿ ವಿಚಾರಿಸಿದಾಗ ನಾನು ಹೂ ಮಾರುತ್ತೇನೆ. ನಯಾ ಘಾಟ್ ನಲ್ಲಿ ಎಂದು ಆಕೆ ಹೇಳಿದ್ದಾರೆ.ಪಡಿತರ ಸಿಗುತ್ತಿದೆಯೇ ಎಂದು ಮೋದಿ ಕೇಳಿದಾಗ ಹೌದು, 10 ಕೆಜಿ ಸಿಗುತ್ತದೆ ಎಂದು ಮೀರಾ ಹೇಳಿದ್ದಾರೆ.

ಹಾಗಾದರೆ ಗ್ಯಾಸ್, ವಿದ್ಯುತ್, ಪಡಿತರ,ಮನೆ, ನೀರು ಎಲ್ಲವೂ ಸಿಗುತ್ತಿದೆ ನಿಮಗೆ ಅಂತಾರೆ ಮೋದಿ. ಆಗ ಆ ಮನೆಯ ಹಿರಿಯ ಮಹಿಳೆ ನಾವು ನಮ್ಮ ಪಾಲಿನ ದೇವರು ಎಂದಾಗ, ದೇವರು ಭಗವನ್ ರಾಮಚಂದ್ರಜೀ ಎಂದು ಮೋದಿ ಹೇಳುತ್ತಿರುವುದು ವಿಡಿಯೊದಲ್ಲಿದೆ. ಮನೆ ಕಟ್ಟಲು ಹಣ ಕಂತಿನಲ್ಲಿ ಸಿಕ್ಕಿತೇ ಎಂದು ಕೇಳಿದಾಗ ಹಾಂ, ಕಂತಿನಲ್ಲಿ ಸಿಕ್ಕಿತು. ಅದಕ್ಕಾಗಿ ಯಾರಿಗೂ ಲಂಚ ಕೊಟ್ಟಿಲ್ಲ ಎಂದು ಮೀರಾ ಹೇಳಿದ್ದಾರೆ. ಚಹಾ ಚೆನ್ನಾಗಿ ಮಾಡಿದ್ದೀರಿ. ನಾನು ಚಾಯ್ ವಾಲಾ ಅಲ್ವಾ, ನನಗೆ ಗೊತ್ತಾಗುತ್ತದೆ ಎಂದು ಮೋದಿ ನಗುತ್ತಾ ಚಹಾ ಹೀರಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ