ಮಸೂದೆ ಪಾಸಾಗಲು ಬೇಕು 356 ಮತ; ಸರ್ಕಾರದ ಪರ 371 ಸದಸ್ಯರ ಬೆಂಬಲ? ಮೋದಿ ನಿವಾಸದಲ್ಲಿ ಮಹತ್ವದ ಸಭೆ; ರಣತಂತ್ರ ನಿರ್ಧಾರ

ಕ್ಷೇತ್ರ ಮರುವಿಂಗಡಣೆ ಮಸೂದೆಯನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಗೆಲ್ಲಿಸಲು ಸರ್ಕಾರ ರಣತಂತ್ರ ರೂಪಿಸಿದೆ. ನವೆಂಬರ್ 30ರಂದು ವಿಶೇಷ ಅಧಿವೇಶನ ಆರಂಭವಾಗಲಿದ್ದು, ಪ್ರಧಾನಿ ಮೋದಿ ನಿವಾಸದಲ್ಲಿ ಎನ್​ಡಿಎ ಮುಖಂಡರ ಸಭೆ ಭಾನುವಾರ ಸೇರಿದೆ. ಮೂರು ಮಸೂದೆಗಳಿಗೆ ಅಗತ್ಯ ಬೆಂಬಲ ಖಾತ್ರಿಪಡಿಸುವ ಕುರಿತು ಚರ್ಚೆ ಮಾಡಲಾಗಿದೆ. ಸರ್ಕಾರ 371 ಸದಸ್ಯರ ಬೆಂಬಲ ಪಡೆಯುವ ವಿಶ್ವಾಸದಲ್ಲಿದೆ.

ಮಸೂದೆ ಪಾಸಾಗಲು ಬೇಕು 356 ಮತ; ಸರ್ಕಾರದ ಪರ 371 ಸದಸ್ಯರ ಬೆಂಬಲ? ಮೋದಿ ನಿವಾಸದಲ್ಲಿ ಮಹತ್ವದ ಸಭೆ; ರಣತಂತ್ರ ನಿರ್ಧಾರ
ನರೇಂದ್ರ ಮೋದಿ
Image Credit source: Narendra Modi's Youtube

Updated on: Nov 29, 2026 | 7:51 PM

ನವದೆಹಲಿ, ನವೆಂಬರ್ 29: ಕ್ಷೇತ್ರ ಮರುವಿಂಗಡಣೆ ವಿಚಾರದಲ್ಲಿ ಕಳೆದ ಬಾರಿ ಸಂಸತ್ತಿನಲ್ಲಿ ಸೋಲನುಭವಿಸಿದ್ದ ಕೇಂದ್ರ ಸರ್ಕಾರ ಈ ಬಾರಿ ಎಲ್ಲಾ ಹೋಮ್ ವರ್ಕ್ ಮಾಡಿಕೊಂಡಂತಿದೆ. ಮಸೂದೆ ಪಾಸಾಗಲು ಬೇಕಾದ ಎಲ್ಲಾ ಅಗತ್ಯ ಬೆಂಬಲವನ್ನು ಸರ್ಕಾರ ಕ್ರೋಢೀಕರಣಗೊಂಡಿರುವುದನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ಸೋಮವಾರದಿಂದ ವಿಶೇಷ ಸಂಸದೀಯ ಅಧಿವೇಶನ ನಡೆಯಲಿದೆ. ಲೋಕಸಭಾ ಕ್ಷೇತ್ರ ಮರುವಿಂಗಡಣೆ ಮಸೂದೆಯು ಈ ಅಧಿವೇಶನದ ಮುಖ್ಯ ವಿಚಾರವಾಗಿದೆ. ಈ ಅಧಿವೇಶನಕ್ಕೆ ಮುನ್ನ, ಎನ್​ಡಿಎ ಪಕ್ಷಗಳ ಮುಖಂಡರು ಭಾನುವಾರ ರಾತ್ರಿ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದಲ್ಲಿ ಸಭೆ ನಡೆಸಿದ್ದಾರೆ. ಅಧಿವೇಶನದಲ್ಲಿ ಮೂರು ಮಸೂದೆಗಳನ್ನು ಗೆಲ್ಲಿಸುವುದರಿಂದ ಹಿಡಿದು ವಿವಿಧ ನಡೆಗಳಿಗೆ ಕಾರ್ಯತಂತ್ರ ಹೇಗೆ ರೂಪಿಸುವುದು ಎನ್ನುವ ಯೋಜನೆ ಹಾಕಲು ಈ ಸಭೆ ನಡೆಸಲಾಗಿದೆ.

ಸಂವಿಧಾನ ತಿದ್ದುಪಡಿ ಮಸೂದೆ ಗೆಲ್ಲಲು ಬೇಕು ಕನಿಷ್ಠ 356 ಮತಗಳು

ಅಧಿವೇಶನದಲ್ಲಿ ಮೂರು ಮಸೂದೆಗಳನ್ನು ಮಂಡಿಸಲಾಗುತ್ತದೆ. ಸಂವಿಧಾನ ತಿದ್ದುಪಡಿ ಮಸೂದೆ, ಲೋಕಸಭಾ ಕ್ಷೇತ್ರ ಮರುವಿಂಗಡಣೆ ಮಸೂದೆ, ಕೇಂದ್ರಾಡಳಿತ ಪ್ರದೇಶಗಳ ತಿದ್ದಪಡಿ ಮಸೂದೆಗಳಿವೆ. ಇವುಗಳಿಗೆ ಸದನದ ಮೂರನೇ ಎರಡಷ್ಟು ಸದಸ್ಯರ ಬೆಂಬಲ ಬೇಕು. ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಬೆಂಬಲ ಗಳಿಸಬೇಕು. 2026ರ ಏಪ್ರಿಲ್​ನಲ್ಲಿ ಮಸೂದೆಗೆ 356 ಮತಗಳ ಬೆಂಬಲ ಗಿಟ್ಟಿಸಲು ಸರ್ಕಾರ ವಿಫಲವಾಗಿತ್ತು. ಈ ಬಾರಿ ಸರ್ಕಾರವು 371 ಸದಸ್ಯರ ಬೆಂಬಲ ಗಳಿಸುವ ವಿಶ್ವಾಸದಲ್ಲಿದೆ.

Loading...

ಇದನ್ನೂ ಓದಿ: ಕ್ಷೇತ್ರ ಮರುವಿಂಗಡಣೆ ವಿಚಾರ: ಸ್ಟಾಲಿನ್ ನಿವಾಸಕ್ಕೆ ಮುಗಿಬಿದ್ದ ಕಾಂಗ್ರೆಸ್ ದಿಗ್ಗರು; ಸೋನಿಯಾ ಗಾಂಧಿ ಕೂಡ ಹಾಜರ್

  1. ಸಂವಿಧಾನ ತಿದ್ದುಪಡಿ ಮಸೂದೆ: ಏಪ್ರಿಲ್​ನಲ್ಲಿ ಸೋಲಾಗಿದ್ದು 131ನೇ ತಿದ್ದುಪಡಿ ಮಸೂದೆಗೆ. ಈ ಬಾರಿ 132ನೇ ತಿದ್ದುಪಡಿ ಮಸೂದೆ ರೂಪಿಸಲಾಗಿದೆ. ಇದರಲ್ಲಿ 543 ಇರುವ ಪ್ರಸಕ್ತ ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು 850ಕ್ಕೆ ಏರಿಸುವ ಪ್ರಸ್ತಾಪ ಇದೆ. ಆದರೆ, ಪ್ರತೀ ರಾಜ್ಯದ ಕ್ಷೇತ್ರಗಳ ಸಂಖ್ಯೆಯನ್ನು ಶೇ. 50ರಷ್ಟು ಏರಿಸಲು ಪ್ರಸ್ತಾಪಿಸಲಾಗಿದೆ. ಮುಂದಿನ 25 ವರ್ಷ ಇದೇ ಅನುಪಾತವನ್ನು ಕಾಪಾಡಿಕೊಳ್ಳುವ ಭರವಸೆ ನೀಡಲಾಗಿದೆ.
  2. ಕ್ಷೇತ್ರ ಮರುವಿಂಗಡಣೆ ಮಸೂದೆ: ಪ್ರತೀ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಕ್ಷೇತ್ರಗಳ ಸಂಖ್ಯೆಯನ್ನು ಶೇ. 50ರಷ್ಟು ಹೆಚ್ಚಿಸಲು ತೆಗೆದುಕೊಳ್ಳಬೇಕಾದ ನಿಯಮಗಳನ್ನು ಇದು ಹೊಂದಿದೆ.
  3. ಕೇಂದ್ರಾಡಳಿತ ಪ್ರದೇಶಗಳ ಕಾನೂನು ತಿದ್ದುಪಡಿ ಮಸೂದೆ: ಇದರಲ್ಲಿ ಕೇಂದ್ರಾಡಳಿತ ಪ್ರದೇಶಗಳ ಕಾಯ್ದೆ 10663ರಲ್ಲಿ ತಿದ್ದುಪಡಿ ತರಲಾಗುತ್ತದೆ.

ಇದನ್ನೂ ಓದಿ: ಕ್ಷೇತ್ರ ಮರುವಿಂಗಡಣೆ ಮಸೂದೆ: ರಾಹುಲ್ ಮನವಿಗೆ ಸ್ಟಾಲಿನ್ ಪ್ರತಿಕ್ರಿಯೆ, ತಮಿಳುನಾಡಿನ ಹಿತಾಸಕ್ತಿಯಲ್ಲಿ ರಾಜಿ ಇಲ್ಲ

ಕ್ಷೇತ್ರ ಮರುವಿಂಗಡಣೆಗೆ ಸರ್ಕಾರ 371 ಸದಸ್ಯರ ಬೆಂಬಲ ಗಳಿಸುತ್ತಾ?

2026ರ ಏಪ್ರಿಲ್​ನಲ್ಲಿ ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಬೆಂಬಲ ಪಡೆಯಲು ಸರ್ಕಾರ ವಿಫಲವಾಗಿತ್ತು. ಈ ಬಾರಿ ವಿಪಕ್ಷಗಳ ಕೆಲ ಆಕ್ಷೇಪಗಳಿಗೆ ಸರ್ಕಾರ ಸ್ಪಂದಿಸಿ ಅವುಗಳ ಅಭಿಪ್ರಾಯಗಳಿಗೆ ಪೂರಕವಾದ ಬದಲಾವಣೆಗಳನ್ನು ಮಾಡಿದೆ. ರಾಜ್ಯಗಳ ಈಗಿರುವ ಪ್ರಾತಿನಿಧ್ಯ ಕಡಿಮೆ ಆಗದ ರೀತಿಯಲ್ಲಿ ಕ್ಷೇತ್ರ ಮರುವಿಂಗಡಣೆಯ ಸೂತ್ರವನ್ನು ಸರ್ಕಾರ ರೂಪಿಸಿದೆ. ಹೀಗಾಗಿ, ಡಿಎಂಕೆ ಪಕ್ಷ, ಶರದ್ ಪವಾರ್ ಅವರ ಎನ್​ಸಿಪಿ ಮೊದಲಾದ ಕೆಲ ವಿಪಕ್ಷಗಳು ಮಸೂದೆಗೆ ಬೆಂಬಲ ನೀಡಲು ನಿರ್ಧರಿಸಿವೆ. ಟಿಎಂಸಿ ಬಂಡಾಯ ಪಕ್ಷ, ಶಿರೋಮಣಿ ಅಕಾಲಿ ದಳ ಮೊದಲಾದ ಪಕ್ಷಗಳು ಈ ಬಾರಿ ಬಿಜೆಪಿಯ ಪಾಳಯದಲ್ಲಿವೆ. ಹೀಗಾಗಿ, ಸರ್ಕಾರಕ್ಕೆ ಈ ಬಾರಿ ಸೋಲಾಗುವ ಸಂಭವ ಕಡಿಮೆ ಎನ್ನಲಾಗಿದೆ. ಸರ್ಕಾರದ ಮೂಲಗಳ ಪ್ರಕಾರ ಲೋಕಸಭೆಯಲ್ಲಿ ಮಸೂದೆಗಳಿಗೆ 371 ಸದಸ್ಯರ ಬೆಂಬಲ ಸಿಗುವ ನಿರೀಕ್ಷೆ ಇದೆ. ರಾಜ್ಯಸಭೆಯಲ್ಲೂ ಅಗತ್ಯ ಬಹುಮತ ಸಿಗಬಹುದು ಎನ್ನಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us