Muslim Women: ಮಸೀದಿಗಳಲ್ಲಿ ಪ್ರಾರ್ಥಿಸಲು ಮಹಿಳೆಯರಿಗೆ ನಿರ್ಬಂಧವಿಲ್ಲ; ಸುಪ್ರೀಂಕೋರ್ಟ್​ಗೆ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮಾಹಿತಿ

Supreme Court of India: ಮಸೀದಿ ಪ್ರವೇಶಿಸಲು ಮುಸ್ಲಿಂ ಮಹಿಳೆಯರಿಗೆ ಯಾವುದೇ ನಿರ್ಬಂಧ ಇರಬಾರದು. ಒಂದು ವೇಳೆ ಇದ್ದರೆ ಅಂಥ ನಿರ್ಬಂಧವನ್ನು ಅಕ್ರಮ ಎಂದು ಘೋಷಿಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ವೇಳೆ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಈ ವಿವರಣೆ ನೀಡಿದೆ.

Muslim Women: ಮಸೀದಿಗಳಲ್ಲಿ ಪ್ರಾರ್ಥಿಸಲು ಮಹಿಳೆಯರಿಗೆ ನಿರ್ಬಂಧವಿಲ್ಲ; ಸುಪ್ರೀಂಕೋರ್ಟ್​ಗೆ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮಾಹಿತಿ
ಸುಪ್ರೀಂಕೋರ್ಟ್ (ಎಡಚಿತ್ರ), ಪ್ರಾರ್ಥನೆ ಸಲ್ಲಿಸುತ್ತಿರುವ ಮುಸ್ಲಿಂ ಮಹಿಳೆ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Feb 10, 2023 | 10:58 AM

ಇಸ್ಲಾಂ ಧಾರ್ಮಿಕ ಪಠ್ಯಗಳು ಮಸೀದಿಗಳಲ್ಲಿ ನಮಾಜ್ (Namaz) ಮಾಡಲು ಮಹಿಳೆಯರನ್ನು ನಿರ್ಬಂಧಿಸುವುದಿಲ್ಲ ಎಂದು ‘ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ’ (All India Muslim Personal Law Board – AIMPLB) ಬುಧವಾರ ಸುಪ್ರೀಂಕೋರ್ಟ್​ಗೆ (Supreme Court) ಸಲ್ಲಿಸಿದ ಸತ್ಯಾಪನಾ ಪ್ರಮಾಣಪತ್ರದಲ್ಲಿ (ಅಫಿಡವಿಟ್) ತಿಳಿಸಿದೆ. ಮಸೀದಿ ಪ್ರವೇಶಿಸಲು ಮುಸ್ಲಿಂ ಮಹಿಳೆಯರಿಗೆ ಯಾವುದೇ ನಿರ್ಬಂಧ ಇರಬಾರದು. ಒಂದು ವೇಳೆ ಇದ್ದರೆ ಅಂಥ ನಿರ್ಬಂಧವನ್ನು ಅಕ್ರಮ ಎಂದು ಘೋಷಿಸಬೇಕು ಎಂದು ಕೋರಿ ಪುಣೆಯ ಫರ್​ಹಾ ಅನ್ವರ್ ಹುಸೇನ್ ಶೇಖ್ ಎನ್ನುವವರು ಸುಪ್ರೀಂಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಏನಿದು ಪ್ರಕರಣ?

ಫರ್​ಹಾ ಅನ್ವರ್ ಶೇಖ್ ಅವರು ಫೆಬ್ರುವರಿ 2020ರಲ್ಲಿ ವಕೀಲರಾದ ಸಂದೀಪ್ ತಿವಾರಿ ಮತ್ತು ರಾಮೆಶ್ವರ್ ಗೋಯಲ್ ಅವರ ಮೂಲಕ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಮಸೀದಿ ಪ್ರವೇಶಕ್ಕೆ ಇರುವ ನಿರ್ಬಂಧವನ್ನು ಅಸಾಂವಿಧಾನಿಕ ಮತ್ತು ಅಕ್ರಮ ಎಂದು ಘೋಷಿಸಬೇಕು. ಏಕೆಂದರೆ ಈ ನಿರ್ಬಂಧವು ಎಲ್ಲ ಭಾರತೀಯರಿಗೆ ಸಮಾನತೆ, ತಾರತಮ್ಯ ಇಲ್ಲದ ಬದುಕು ಮತ್ತು ಧಾರ್ಮಿಕ ಸ್ವಾತಂತ್ರ್ಯವನ್ನು ಖಾತ್ರಿಪಡಿಸುವ ಸಂವಿಧಾನದ 14, 15, 21, 25 ಮತ್ತು 29ನೇ ವಿಧಿಗಳನ್ನು ಉಲ್ಲಂಘಿಸುತ್ತವೆ ಎಂದು ಅವರು ಅಭಿಪ್ರಾಯಪಟ್ಟಿದ್ದರು.

ಮಹಿಳೆಯರಿಗೆ ಮಸೀದಿ ಪ್ರವೇಶ ನಿರಾಕರಿಸುವ ಯಾವುದೇ ಉಲ್ಲೇಖ ಕುರಾನ್ ಅಥವಾ ಪ್ರವಾದಿ ಮೊಹಮದ್ ಪೈಗಂಬರ್ ಅವರ ವಾಣಿಗಳಲ್ಲಿ ಇಲ್ಲ. ಪವಿತ್ರ ಯಾತ್ರಾಸ್ಥಳ ‘ಮೆಕ್ಕಾ’ದಲ್ಲಿ ನಡೆಯುವ ಯಾವುದೇ ಧಾರ್ಮಿಕ ವಿಧಿಗಳಲ್ಲಿ ಲಿಂಗ ತಾರತಮ್ಯ ಇಲ್ಲ. ಕಾಬಾ ಪ್ರದಕ್ಷಿಣಿಗೆ ಪುರುಷರಂತೆ ಮಹಿಳೆಯರಿಗೂ ಅವಕಾಶವಿದೆ ಎಂದು ಮನವಿಯಲ್ಲಿ ಅವರು ತಿಳಿಸಿದ್ದರು. ಮಸೀದಿಯ ‘ಮುಸಲ್ಲಾ’ (ಪ್ರಾರ್ಥನಾ ಸ್ಥಳ) ಪ್ರದೇಶದಲ್ಲಿ ಯಾವುದೇ ತಾರತಮ್ಯ, ಅಡೆತಡೆ ಇಲ್ಲದೆ ಪ್ರಾರ್ಥಿಸಲು ಅವಕಾಶ ಕಲ್ಪಿಸಬೇಕು ಎಂದು ಮನವಿಯಲ್ಲಿ ಕೋರಲಾಗಿತ್ತು.

ಸುಪ್ರೀಂಕೋರ್ಟ್ 2018ರಲ್ಲಿ ಶಬರಿಮಲೆ ಪ್ರಕರಣದಲ್ಲಿ ನೀಡಿದ್ದ ತೀರ್ಪನ್ನು ಅವರು ಉಲ್ಲೇಖಿಸಿದ್ದರು. ಶಬರಿಮಲೆ ದೇಗುಲಕ್ಕೆ ಮಹಿಳೆಯ ಪ್ರವೇಶ ನಿರಾಕರಿಸುವುದು ಸಂವಿಧಾನದ 25ನೇ ವಿಧಿಯ ಆಶಯವನ್ನು ಉಲ್ಲಂಘಿಸಿದಂತೆ ಎಂದು ಈ ತೀರ್ಪಿನಲ್ಲಿ ಸುಪ್ರೀಂಕೋರ್ಟ್​ ಅಭಿಪ್ರಾಯಪಟ್ಟಿತ್ತು.

ಫರ್​ಹಾ ಶೇಖ್ ಅವರ ಮನವಿಯನ್ನು ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಎ.ಎಸ್.ಬೊಪಣ್ಣ ಮತ್ತು ಹೃಷಿಕೇಶ್ ರಾಯ್ ಅವರಿದ್ದ ನ್ಯಾಯಪೀಠವು ಮೇ 2020ರಲ್ಲಿ ಕೇಂದ್ರ ಸರ್ಕಾರ, ಕೇಂದ್ರ ವಕ್ಫ್ ಮಂಡಳಿ, ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ, ಜಮಾತ್ ಉಲ್ಮಾ-ಎ-ಹಿಂದ್ ಮತ್ತು ದಾರುಲ್ ಉಲ್ಮಾ ದೇವಬಂದ್ ಸೇರಿ 10 ಸಂಸ್ಥೆಗಳಿಗೆ ಪ್ರತಿಕ್ರಿಯಿಸುವಂತೆ ನೊಟೀಸ್ ಜಾರಿ ಮಾಡಿತ್ತು.

ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಹೇಳಿದ್ದೇನು?

ವಕೀಲ ಶಂಶದ್ ಅವರ ಮೂಲಕ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸುಪ್ರೀಂಕೋರ್ಟ್​ಗೆ ಪ್ರತಿಕ್ರಿಯಿಸಿತು. ‘ಮಹಿಳೆಯರ ಮಸೀದಿ ಪ್ರವೇಶಕ್ಕೆ ಇಸ್ಲಾಂ ಯಾವುದೇ ನಿರ್ಬಂಧ ವಿಧಿಸಿಲ್ಲ. ಮಸೀದಿಯಲ್ಲಿ ಪುರುಷರು ಮತ್ತು ಮಹಿಳೆಯರು ಪ್ರತ್ಯೇಕವಾಗಿ ಪ್ರಾರ್ಥನೆ ಸಲ್ಲಿಸಲು ಸ್ಥಳಾವಕಾಶ ಇರಬೇಕು’ ಎಂದು ಸ್ಪಷ್ಟಪಡಿಸಿತು. ಮೆಕ್ಕಾ ಮತ್ತು ಮದೀನಾ ಪವಿತ್ರಸ್ಥಳಗಳಲ್ಲಿ ನಡೆಯುವ ಹಜ್ ಅಥವಾ ಉಮ್ರಾ ಧಾರ್ಮಿಕ ವಿಧಿಗಳಲ್ಲಿ ಪುರುಷ ಸಹವರ್ತಿಗಳೊಂದಿಗೆ ಪಾಲ್ಗೊಳ್ಳಲು ಮಹಿಳೆಯರಿಗೆ ಅವಕಾಶವಿದೆ. ಅದರಂತೆ ಮಸೀದಿಗಳಲ್ಲಿಯೂ ಅವಕಾಶ ಕಲ್ಪಿಸಬೇಕು ಎನ್ನುವ ಅರ್ಜಿದಾರರ ವಾದದಲ್ಲಿ ತಪ್ಪು ಮಾಹಿತಿಗಳಿವೆ ಎಂದು ಮಂಡಳಿಯು ಹೇಳಿತು. ಮೆಕ್ಕಾ, ಮದೀನಾಗಳಲ್ಲಿ ಪೂರೈಸಬೇಕಿರುವ ಧಾರ್ಮಿಕ ವಿಧಿಗಳನ್ನು ವಿವರವಾಗಿ ದಾಖಲಿಸಲಾಗಿದೆ. ಅಲ್ಲಿ ನಡೆಯುವ ವಿಧಿಗಳು ಉಳಿದೆಲ್ಲೆಡೆ ಅನ್ವಯಿಸಬೇಕಿಲ್ಲ ಎಂದು ಅಫಿಡವಿಟ್​ನಲ್ಲಿ ತಿಳಿಸಲಾಗಿದೆ.

‘ಮಸೀದಿಗಳಲ್ಲಿ ಪುರುಷರು ಮತ್ತು ಮಹಿಳೆಯರು ಒಗ್ಗೂಡಿ ಪ್ರಾರ್ಥನೆ ಸಲ್ಲಿಸಲು ಅವಕಾಶವಿದೆ ಎಂದು ಎಲ್ಲಿಯೂ ಹೇಳಿಲ್ಲ. ಮೆಕ್ಕಾದಲ್ಲಿಯೂ ಮಸ್ಜಿದ್-ಅಲ್-ಹರಾಮ್​ ಅಕ್ಕಪಕ್ಕದಲ್ಲಿರುವ ಮಸೀದಿಗಳಲ್ಲಿ ಪ್ರವಾದಿ ಮೊಹಮ್ಮದ್ ಪೈಗಂಬರ್​ರ ಕಾಲದಿಂದಲೂ ಪುರುಷ-ಮಹಿಳೆಯರು ಜೊತೆಗೂಡಿ ಪ್ರಾರ್ಥನೆ ಸಲ್ಲಿಸಲು ಅವಕಾಶ ಇರಲಿಲ್ಲ. ಮದೀನಾದ ನಬಾವಿ ಮಸೀದಿಯಲ್ಲಿ ‘ವಜು’ (ಶುದ್ಧಿಸ್ನಾನ) ಪ್ರಕ್ರಿಯೆಗೂ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ’ ಎಂದು ಮಂಡಳಿಯು ವಿವರಿಸಿತು.

ಮಸೀದಿಗಳಲ್ಲಿ ನಡೆಯುವ ಈದ್ ಪ್ರಾರ್ಥನೆಗಳಲ್ಲಿ ಪುರುಷರು ಮತ್ತು ಮಹಿಳೆಯರು ಪಾಲ್ಗೊಳ್ಳಲು ಭಾರತದ ಹಲವೆಡೆ ಅವಕಾಶ ನೀಡಲಾಗುತ್ತಿದೆ. ಇಂಥ ಸಂದರ್ಭದಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ‘ವಜು’, ಪ್ರಾರ್ಥನಾ ಸ್ಥಳ, ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನ ಸ್ಥಳಗಳನ್ನು ಗುರುತಿಸಲಾಗಿರುತ್ತದೆ ಎನ್ನುವ ಅಂಶದ ಬಗ್ಗೆಯೂ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ನ್ಯಾಯಾಲಯದ ಗಮನ ಸೆಳೆಯಿತು.

ಮಸೀದಿಗಳಲ್ಲಿ ನಡೆಯುವ ದೈನಂದಿನ ಪ್ರಾರ್ಥನೆಗಳಲ್ಲಿ ಅಥವಾ ಶುಕ್ರವಾರದ ಪ್ರಾರ್ಥನೆಗಳಲ್ಲಿ ಪಾಲ್ಗೊಳ್ಳಬೇಕು ಎಂಬ ವಿಧಿಯನ್ನು ಮಹಿಳೆಯರಿಗೆ ಇಸ್ಲಾಂ ಕಡ್ಡಾಯ ಮಾಡಿಲ್ಲ. ಪ್ರಾರ್ಥನೆ ಸಲ್ಲಿಸುವ ಮಹಿಳೆ ಅಥವಾ ಪುರುಷರ ಪುಣ್ಯಪ್ರಾಪ್ತಿ ವಿಚಾರದಲ್ಲಿ ಯಾವುದೇ ತಾರತಮ್ಯ ಇಲ್ಲ. ಆದರೆ ಮಹಿಳೆಯರಿಗೆ ಮಸೀದಿ ಅಥವಾ ಮನೆಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಆಯ್ಕೆ ನೀಡಲಾಗಿದೆ ಎಂದು ಮಂಡಳಿಯು ವಿವರಿಸಿತು.

ಮಸೀದಿಗಳು ಖಾಸಗಿ ಆಸ್ತಿಗಳಾಗಿದ್ದು ಮುತುವಲ್ಲಿಗಳು ನಿರ್ವಹಿಸುತ್ತಾರೆ. ಇಸ್ಲಾಂ ವೈಯಕ್ತಿಕ ಕಾನೂನು ಮಂಡಳಿಯು ಸಲಹಾತ್ಮಕವಾಗಿ ಟಿಪ್ಪಣಿ ಕಳಿಸಬಹುದೇ ವಿನಃ, ಹೀಗೆಯೇ ನಡೆದುಕೊಳ್ಳಬೇಕು ಎಂದು ಸೂಚಿಸಲು ಆಗುವುದಿಲ್ಲ. ಸಂಪೂರ್ಣ ಖಾಸಗಿಯಾದ, ಧಾರ್ಮಿಕ ನಂಬಿಕೆಗಳನ್ನು ಆಧಾರವಾಗಿ ಹೊಂದಿರುವ ಸ್ಥಳಗಳ ವಿಚಾರದಲ್ಲಿ ನ್ಯಾಯಾಲಯಗಳು ಹಸ್ತಕ್ಷೇಪ ಮಾಡುವುದೂ ಸರಿಯಾಗುವುದಿಲ್ಲ. ನ್ಯಾಯಾಲಯಗಳು ಸಂವಿಧಾನದ 14, 15, 21, 25 ಮತ್ತು 29ನೇ ವಿಧಿಗಳ ಅನ್ವಯ ಯಾವುದೇ ಧಾರ್ಮಿಕ ಆಚರಣೆಗಳನ್ನು ಪರಿಶೀಲಿಸುವುದು ಅಥವಾ ಸರಿಪಡಿಸುವುದು ಸರಿಯಲ್ಲ ಎಂದು ಅಫಿಡವಿಟ್​ನಲ್ಲಿ ಮಂಡಳಿಯು ತಿಳಿಸಿತು.

ಮಸೀದಿಗಳಿಗೆ ಮಹಿಳೆಯರ ಪ್ರವೇಶ ನಿರಾಕರಿಸಿ ಹೊರಡಿಸಿರುವ ಫತ್ವಾ ರದ್ದುಪಡಿಸುವಂತೆ ಅರ್ಜಿದಾರರು ಮಾಡಿರುವ ಮನವಿ ಕುರಿತು ಪ್ರತಿಕ್ರಿಯಿಸಿರುವ ಮಂಡಳಿ, ಫತ್ವಾಗಳಿಗೆ ಕಾನೂನಿನ ಮಾನ್ಯತೆ ಇರುವುದಿಲ್ಲ. ಅವು ಕೇವಲ ಧಾರ್ಮಿಕ ಪಠ್ಯಗಳು ಮತ್ತು ಸಿದ್ಧಾಂತಗಳನ್ನು ಆಧರಿಸಿದ ಅಭಿಪ್ರಾಯಗಳಷ್ಟೇ ಆಗಿರುತ್ತವೆ. ಇಂಥ ಫತ್ವಾಗಳನ್ನು ಯಾವುದೇ ಮುಸ್ಲಿಂ ಧಾರ್ಮಿಕ ಪಠ್ಯಗಳ ಆಧಾರದ ಮೇಲೆ ನಿರಾಕರಿಸಬಹುದೇ ವಿನಃ, ನ್ಯಾಯಾಲಯದ ಮೂಲಕ ವಜಾಗೊಳಿಸಲು ಆಗುವುದಿಲ್ಲ. ನ್ಯಾಯಾಲಯಗಳು ಮಧ್ಯಪ್ರವೇಶಿಸಿದರೆ ಧಾರ್ಮಿಕ ಸ್ವಾತಂತ್ರ್ಯದಲ್ಲಿ ಹಸ್ತಕ್ಷೇಪ ಮಾಡಿದಂತೆ ಆಗುತ್ತದೆ ಎಂದು ಮಂಡಳಿಯು ಎಚ್ಚರಿಸಿತು.

ಈವರೆಗಿನ ನ್ಯಾಯಾಲಯದ ಅಭಿಪ್ರಾಯವೇನು?

ಪುಣೆ ಮೂಲದ ದಂಪತಿ 2019ರಲ್ಲಿ ಮಹಿಳೆಯರಿಗೆ ಮಸೀದಿ ಪ್ರವೇಶ ನೀಡಬೇಕೆಂದು ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಪ್ರತಿಕ್ರಿಯಿಸಿದ್ದ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು, ‘ಮಹಿಳೆಯರಿಗೆ ಮಸೀದಿ ಪ್ರವೇಶಕ್ಕೆ ಅವಕಾಶವಿದೆ. ಅವರಿಗೆ ಅವಕಾಶ ನಿರಾಕರಿಸುವ ಯಾವುದೇ ಫತ್ವಾಕ್ಕೆ ಮಾನ್ಯತೆ ಇಲ್ಲ. ಅಂಥ ಫತ್ವಾಗಳನ್ನು ನಿರ್ಲಕ್ಷಿಸಬಹುದು’ ಎಂದು ತಿಳಿಸಿತ್ತು.

ನಂತರ ಈ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬಡೆ ನೇತೃತ್ವದ 9 ನ್ಯಾಯಮೂರ್ತಿಗಳ ನ್ಯಾಯಪೀಠಕ್ಕೆ ಪರಿಶೀಲನೆಗೆ ಕಳುಹಿಸಲಾಗಿತ್ತು. ನಂತರ ನ್ಯಾಯಾಲಯವು ಈ ಪ್ರಕರಣವನ್ನು ಶಬರಿಮಲೆ (ಕಾಂತಾರು ರಾಜೀವರು vs ಇಂಡಿಯನ್ ಯಂಗ್ ಲಾಯರ್ಸ್​ ಅಸೋಸಿಯೇಷನ್) ಪ್ರಕರಣದೊಟ್ಟಿಗೆ ವಿಚಾರಣೆಗೆ ಒಳಪಡಿಸಲು ನಿರ್ಧರಿಸಿತು.

ಧಾರ್ಮಿಕ ಆಚರಣೆಗಳನ್ನು ಪರಿಶೀಲನೆಗೆ ಒಳಪಡಿಸುವ ವಿಚಾರದಲ್ಲಿ ನ್ಯಾಯಾಂಗದ ವ್ಯಾಪ್ತಿ, ಧಾರ್ಮಿಕ ಸ್ವಾತಂತ್ರ್ಯ ಮತ್ತು ಸಾಂವಿಧಾನಿಕ ನೈತಿಕತೆಯ ಬಗ್ಗೆ ನ್ಯಾಯಾಂಗದ ಪರಿಶೀಲನೆ ನಡೆಯಬೇಕಿದೆ. ಸುಪ್ರೀಂಕೋರ್ಟ್​ನಲ್ಲಿ ಪ್ರಕರಣವು ಇನ್ನೂ ವಿಚಾರಣೆಗೆ ಬಾಕಿಯಿದೆ. 2018ರ ಶಬರಿಮಲೆ ತೀರ್ಪಿಗೆ ಸಂಬಂಧಿಸಿದಂತೆಯು ಮರುಪರಿಶೀಲನೆ ಅರ್ಜಿ ಸಲ್ಲಿಕೆಯಾಗಿದೆ.

ಇದನ್ನೂ ಓದಿ: Divorce: ಮುಸ್ಲಿಂ ಮಹಿಳೆಯರು ವಿಚ್ಛೇದನಕ್ಕಾಗಿ ಕೌಟುಂಬಿಕ ನ್ಯಾಯಾಲಯವನ್ನು ಮಾತ್ರ ಸಂಪರ್ಕಿಸಬೇಕು: ಮದ್ರಾಸ್ ಹೈಕೋರ್ಟ್​

ಮತ್ತಷ್ಟು ರಾಷ್ಟ್ರೀಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:58 am, Fri, 10 February 23

‘2 ರೆಕ್ಕೆ ಕೊಡು, ದೊಡ್ಡ ಸ್ಟಾರ್ ಆಗಬೇಕು’; ಟ್ರೋಫಿ ನೋಡಿ ತ್ರಿವಿಕ್ರಂ ಮಾತು
‘2 ರೆಕ್ಕೆ ಕೊಡು, ದೊಡ್ಡ ಸ್ಟಾರ್ ಆಗಬೇಕು’; ಟ್ರೋಫಿ ನೋಡಿ ತ್ರಿವಿಕ್ರಂ ಮಾತು
ಕೊಪ್ಪಳ: ಸ್ವಂತ ಹಣದಲ್ಲಿ ಸರ್ಕಾರಿ ಶಾಲೆಗೆ‌ ಬೋರ್​ವೆಲ್ ಕೊರೆಸಿದ ರೈತ
ಕೊಪ್ಪಳ: ಸ್ವಂತ ಹಣದಲ್ಲಿ ಸರ್ಕಾರಿ ಶಾಲೆಗೆ‌ ಬೋರ್​ವೆಲ್ ಕೊರೆಸಿದ ರೈತ
ಸತ್ತವರ ಹೆಸರಲ್ಲಿ ಅರ್ಚನೆ! ಸಂಕಲ್ಪ ಮಾಡಿಸಬಹುದಾ? ವಿಡಿಯೋ ನೋಡಿ
ಸತ್ತವರ ಹೆಸರಲ್ಲಿ ಅರ್ಚನೆ! ಸಂಕಲ್ಪ ಮಾಡಿಸಬಹುದಾ? ವಿಡಿಯೋ ನೋಡಿ
ಈ ರಾಶಿಯವರು ಮದುವೆ ಮತ್ತು ಮನೆ ವಿಷಯಗಳಲ್ಲಿ ಇಂದು ಶುಭ ಸುದ್ದಿ ಕೇಳುವರು
ಈ ರಾಶಿಯವರು ಮದುವೆ ಮತ್ತು ಮನೆ ವಿಷಯಗಳಲ್ಲಿ ಇಂದು ಶುಭ ಸುದ್ದಿ ಕೇಳುವರು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್