ದೇಶದ್ರೋಹ ಕಾನೂನಿಗೆ ತಡೆ ಅಲ್ಲ, ಕೇಂದ್ರ ಮರುಪರಿಶೀಲನೆ ಪೂರ್ಣಗೊಳಿಸುವವರೆಗೆ ಕಾಯ್ದೆ ಬಳಕೆ ಮಾಡುವಂತಿಲ್ಲ ಎಂದ ಸುಪ್ರೀಂಕೋರ್ಟ್

ದೇಶದ್ರೋಹ ಕಾನೂನಿಗೆ ತಡೆ ಅಲ್ಲ, ಕೇಂದ್ರ ಮರುಪರಿಶೀಲನೆ ಪೂರ್ಣಗೊಳಿಸುವವರೆಗೆ ಕಾಯ್ದೆ ಬಳಕೆ ಮಾಡುವಂತಿಲ್ಲ ಎಂದ ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್

ದೇಶದ್ರೋಹ ಕಾನೂನಿಗೆ ಯಾವುದೇ ತಡೆ ಇಲ್ಲ. ಸರ್ಕಾರವು ಮರುಪರಿಶೀಲಿಸುವ ಪ್ರಕ್ರಿಯೆಯು ನಡೆಯುವವರೆಗೆ ಯಾವುದೇ ಹೊಸ ದೇಶದ್ರೋಹದ ಪ್ರಕರಣಗಳು ದಾಖಲಾಗುವುದಿಲ್ಲ ಎಂದು ನ್ಯಾಯಾಲಯವು ಭರವಸೆ ಮತ್ತು ನಿರೀಕ್ಷೆಯನ್ನು ವ್ಯಕ್ತಪಡಿಸಿದೆ.

TV9kannada Web Team

| Edited By: Rashmi Kallakatta

May 11, 2022 | 11:06 PM

ದೇಶದ್ರೋಹ ಕಾನೂನಿನ (Sedition law)ಮರು ಪರಿಶೀಲನೆಯ ಕಾರ್ಯ ಮುಕ್ತಾಯವಾಗುವವರೆಗೂ ಈ ಕಾಯ್ದೆ ಬಳಸುವುದು ಸೂಕ್ತವಲ್ಲ. ಮರು ಪರಿಶೀಲನೆ ಅಂತ್ಯಗೊಳ್ಳುವವರೆಗೂ ಕೇಂದ್ರ ಮತ್ತು ರಾಜ್ಯಗಳು 124 ಎ (ದೇಶದ್ರೋಹ ಕಾನೂನು) ಅಡಿಯಲ್ಲಿ ಯಾವುದೇ ಎಫ್‌ಐಆರ್ ದಾಖಲಿಸುವುದು ಅಥವಾ ಪ್ರಕ್ರಿಯೆ ಆರಂಭಿಸುವುದರಿಂದ ದೂರ ಇರಲಿವೆ ಎಂದು ನಾವು ಭರವಸೆ ಹಾಗೂ ನಿರೀಕ್ಷೆ ಹೊಂದಿದ್ದೇವೆ” ಎಂದು ಸುಪ್ರೀಂಕೋರ್ಟ್​​ನಲ್ಲಿ(Supreme Court) ಬುಧವಾರ ದೇಶದ್ರೋಹ ಪ್ರಕರಣಗಳ ವಿಚಾರಣೆ ನಡೆಸಿದ ಸಿಜೆಐ ಎನ್‌ವಿ ರಮಣ ಹೇಳಿದ್ದಾರೆ. ಅಂದರೆ ಕೇಂದ್ರ ಸರ್ಕಾರವು ತನ್ನ ನಿಲುವು ಸ್ಪಷ್ಟಪಡಿಸುವವರೆಗೆ ಈ ಕಾಯ್ದೆ ಅನೂರ್ಜಿತಗೊಂಡಿರುತ್ತದೆ. ಈ ಬಗ್ಗೆ ನ್ಯೂಸ್ 9 ನೊಂದಿಗೆ ಮಾತನಾಡಿದ ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ (Tushar Mehta) “ದೇಶದ್ರೋಹ ಕಾನೂನಿಗೆ ಯಾವುದೇ ತಡೆ ಇಲ್ಲ. ಸರ್ಕಾರವು ಮರುಪರಿಶೀಲಿಸುವ ಪ್ರಕ್ರಿಯೆಯು ನಡೆಯುವವರೆಗೆ ಯಾವುದೇ ಹೊಸ ದೇಶದ್ರೋಹದ ಪ್ರಕರಣಗಳು ದಾಖಲಾಗುವುದಿಲ್ಲ ಎಂದು ನ್ಯಾಯಾಲಯವು ಭರವಸೆ ಮತ್ತು ನಿರೀಕ್ಷೆಯನ್ನು ವ್ಯಕ್ತಪಡಿಸಿದೆ. ಕಾನೂನಿನ ದುರುಪಯೋಗವನ್ನು ತಡೆಗಟ್ಟಲು ರಾಜ್ಯ ಸರ್ಕಾರಗಳಿಗೆ ನಿರ್ದೇಶನಗಳನ್ನು ನೀಡಲು ನ್ಯಾಯಾಲಯವು ಕೇಂದ್ರಕ್ಕೆ ಅನುಮತಿ ನೀಡಿದೆ. ಅದೇ ವೇಳೆ ಅಗತ್ಯವಿದ್ದರೆ ಎಫ್‌ಐಆರ್ ಅನ್ನು ಎಸ್‌ಪಿ ಶ್ರೇಣಿಯ ಅಧಿಕಾರಿಯಿಂದ ಪರಿಶೀಲಿಸಿದ ನಂತರ ದಾಖಲಿಸಲಾಗುತ್ತದೆ ಎಂದು ಹೇಳಿದ್ದಾರೆ.

ಅಂದರೆ ದೇಶದ್ರೋಹದ ಕಾನೂನಿನ ಬಳಕೆಯ ಮೇಲೆ ಯಾವುದೇ ನ್ಯಾಯಾಲಯದ ತಡೆಯಾಜ್ಞೆ ಇಲ್ಲದಿದ್ದರೂ, ಎಲ್ಲಾ ಬಾಕಿಯಿರುವ ವಿಚಾರಣೆಗಳು, ಮೇಲ್ಮನವಿಗಳು ಮತ್ತು ವಿಚಾರಣೆಗಳು IPC ಯ ಸೆಕ್ಷನ್ 124A ಅಡಿಯಲ್ಲಿ ರಚಿಸಲಾದ ಆರೋಪವನ್ನು ಸರ್ಕಾರವು ದೇಶದ್ರೋಹದ ಸುತ್ತಲಿನ ಕಾನೂನು ನಿಬಂಧನೆಗಳನ್ನು ಮರುಪರಿಶೀಲಿಸುವವರೆಗೂ ಅಮಾನತುಗೊಳಿಸಲಾಗಿದೆ ಎಂದು ಹೇಳುವ ಮೂಲಕ ಸುಪ್ರೀಂಕೋರ್ಟ್ ನಾಗರಿಕ ಸ್ವಾತಂತ್ರ್ಯ ಮತ್ತು ರಾಷ್ಟ್ರೀಯ ಭದ್ರತೆಯ ನಡುವೆ ಸಮತೋಲನವನ್ನು ಸಾಧಿಸಲು ಪ್ರಯತ್ನಿಸಿದೆ. ದೇಶದ್ರೋಹದ ಅಪರಾಧವನ್ನು ಐಪಿಸಿ 124ಎ ವಿಧಿಯು ವಿವರಿಸುತ್ತದೆ. ಐಪಿಸಿ 124ಎ ವಿಧಿಯನ್ನು ಸದ್ಯದ ಮಟ್ಟಿಗೆ ಅನೂರ್ಜಿತಗೊಳಿಸುವುದು ಸರಿ ಎನಿಸುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧಿಕಾರಿಗಳು ಯಾವೊಬ್ಬ ವ್ಯಕ್ತಿಯ ವಿರುದ್ಧವೂ ಈ ವಿಧಿಯ ಅನ್ವಯ ಪ್ರಕರಣಗಳನ್ನು ದಾಖಲಿಸಬಾರದು ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಸೂಚಿಸಿದರು.  ಐಪಿಸಿ 124ಎ ವಿಧಿಯ ಅನ್ವಯ ಕಾನೂನು ಬದ್ಧವಾಗಿ ಸ್ಥಾಪನೆಯಾದ ಸರ್ಕಾರದ ವಿರುದ್ಧ ಬರಹ, ಮಾತು, ಸಂಜ್ಞೆಗಳ ಮೂಲಕ ಅಸಮಾಧಾನ ತೋರಿಸುವುದು ದೇಶದ್ರೋಹವಾಗುತ್ತದೆ. ಇಂಥ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಲು ಅವಕಾಶವಿದೆ.

ಉಚ್ಚ ನ್ಯಾಯಾಲಯದ ಈ ಆದೇಶವು ದೇಶದ್ರೋಹದ ಕಾನೂನಿನ ಕಾನೂನುಬದ್ಧತೆ ಮತ್ತು ಸಾಂವಿಧಾನಿಕತೆಯನ್ನು ಪ್ರಶ್ನಿಸಿದ ಅರ್ಜಿಗಳ ಹಿನ್ನಲೆ ಮೇಲೆ ಬಂದಿದೆ. ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಮತ್ತು ಮಾಜಿ ಮೇಜರ್ ಜನರಲ್ ಎಸ್‌ಜಿ ವೊಂಬಟ್ಕೆರೆ ಅವರು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಇತರ ಅರ್ಜಿದಾರರಲ್ಲಿ ಬಿಜೆಪಿಯ ಮಾಜಿ ಕೇಂದ್ರ ಸಚಿವ ಅರುಣ್ ಶೌರಿ, ಮಣಿಪುರದ ಪತ್ರಕರ್ತ ಕಿಶೋರಚಂದ್ರ ವಾಂಗ್ಖೇಮ್ಚಾ ಮತ್ತು ಛತ್ತೀಸ್‌ಗಢದ ಪತ್ರಕರ್ತ ಕನ್ಹಯ್ಯಾ ಲಾಲ್ ಶುಕ್ಲಾ ಸೇರಿದ್ದಾರೆ. ಈ ಎಲ್ಲಾ ಮನವಿಗಳು ಕಾನೂನಿನ ಈ ನಿಬಂಧನೆಯು 1898 ರ ಹಿಂದಿನದು ಎಂದು ಪ್ರತಿಪಾದಿಸುತ್ತದೆ. ಇದು ಸಂವಿಧಾನಕ್ಕಿಂತ ಹಿಂದಿನದು ಮತ್ತು ಅದು ದುರುಪಯೋಗವಾಗುತ್ತಿದೆ .ಹಾಗಾಗಿ ಅದನ್ನು ತೆಗೆದುಹಾಕಬೇಕು ಎಂದು ಮನವಿ ಒತ್ತಾಯಿಸಿವೆ.

ಕೇಂದ್ರ ಸರ್ಕಾರವು ತನ್ನ ನಿಲುವು ಸ್ಪಷ್ಟಪಡಿಸಿ, ಸುಪ್ರೀಂಕೋರ್ಟ್ ಮುಂದಿನ ನಿರ್ದೇಶನ ನೀಡುವವರೆಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯಾರ ವಿರುದ್ಧವೂ ಭಾರತೀಯ ದಂಡ ಸಂಹಿತೆ (Indian Penal Code – IPC) 124ಎ ವಿಧಿಯ ಅನ್ವಯ (ದೇಶದ್ರೋಹ ಕಾಯ್ದೆ) ಅನ್ವಯ ಪ್ರಕರಣಗಳನ್ನು ದಾಖಲಿಸಬಾರದು ಎಂದು ಸೂಚಿಸಿದೆ. ‘ಈ ವಿಧಿಯ ಅನ್ವಯ ಪ್ರಕರಣಗಳನ್ನು ದಾಖಲಿಸಬೇಕೆ? ಎರಡೂ ಪಕ್ಷಗಳ ಕಕ್ಷಿದಾರರು ನ್ಯಾಯಾಲಯವನ್ನು ಪ್ರವೇಶಿಸಲು ಅವಕಾಶವಿದೆ. ಇಂಥ ಪ್ರಕರಣಗಳನ್ನು ನ್ಯಾಯಾಲಯಗಳು ತ್ವರಿತಗತಿಯಲ್ಲಿ ವಿಲೇವಾರಿ ಮಾಡಲಿವೆ. ಈಗಾಗಲೇ ಈ ಕಾಯ್ದೆಯ ಅನ್ವಯ ಯಾವುದೇ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದ್ದರೆ, ಅಂಥವರು ಜಾಮೀನಿಗಾಗಿ ನ್ಯಾಯಾಲಯಗಳನ್ನು ಕೋರಬಹುದು’ ಎಂದು ಸುಪ್ರೀಂಕೋರ್ಟ್ ಹೇಳಿದೆ.

ಇದನ್ನೂ ಓದಿ

ಈ ಸುದ್ದಿಯನ್ನು ಇಂಗ್ಲಿಷ್​​ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada