ದೆಹಲಿಯಲ್ಲಿ ಬಿಎಸ್-6 ನಿಯಮಗಳು ಜಾರಿ; ಬಿಎಸ್-6 ಅಲ್ಲದ ವಾಹನಗಳಿಗೆ ಇಲ್ಲ ಪ್ರವೇಶ; ಹೊರವಲಯದಲ್ಲಿ ಟ್ರಾಫಿಕ್ ಜಾಮ್
Measures to curb pollution in Delhi: ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯವನ್ನು ತಡೆಗಟ್ಟಲು ಕಟ್ಟುನಿಟ್ಟಿನ ಬಿಎಸ್-6 ವಾಹನ ನಿಯಮಗಳು ಜಾರಿಗೆ ಬಂದಿವೆ. ದೆಹಲಿಗೆ ಬರುವ ವಾಹನಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸಲಾಗುತ್ತಿದೆ. ಬಿಎಸ್-6 ಅಲ್ಲದ ವಾಹನಗಳನ್ನು ವಾಪಸ್ ಕಳುಹಿಸಲಾಗುತ್ತಿದೆ. ಇದರಿಂದ, ದೆಹಲಿ-ಗುರುಗ್ರಾಮ್ ಗಡಿಯಲ್ಲಿ ವಾಹನ ದಟ್ಟಣೆ ಹೆಚ್ಚು ತೀವ್ರಗೊಂಡಿದೆ.

ನವದೆಹಲಿ, ನವೆಂಬರ್ 1: ದೆಹಲಿ-ರಾಷ್ಟ್ರೀಯ ರಾಜಧಾನಿ ವಲಯದಲ್ಲಿ (NCR) ಹೆಚ್ಚುತ್ತಿರುವ ವಾಯು ಮಾಲಿನ್ಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ನವೆಂಬರ್ 1ರಿಂದ ಕಟ್ಟುನಿಟ್ಟಾದ ಕ್ರಮಗಳನ್ನು ದೆಹಲಿ ಸರ್ಕಾರ ಜಾರಿಗೊಳಿಸಿದೆ. ಅದರಲ್ಲಿ ಬಿಎಸ್-6 (BS-VI) ಪ್ರಮಾಣ ಅಲ್ಲದ ವಾಹನಗಳ ನಿರ್ಬಂಧವೂ ಸೇರಿದೆ. ಇದರ ಪರಿಣಾಮವಾಗಿ ದೆಹಲಿ – ಗುರುಗ್ರಾಮ್ ಗಡಿಯಲ್ಲಿ ಬಿಗಿ ತಪಾಸಣೆ ನಡೆಯುತ್ತಿದ್ದು, ಪ್ರಮುಖ ಗಡಿ ಭಾಗಗಳಲ್ಲಿ ಭಾರಿ ವಾಹನ ದಟ್ಟಣೆ ಕಂಡುಬಂದಿದೆ.
ಮಾಲಿನ್ಯ ನಿಯಂತ್ರಣದ ಭಾಗವಾಗಿ ದೆಹಲಿಗೆ ಪ್ರವೇಶಿಸುವ ಹೊರ ರಾಜ್ಯಗಳ ನೋಂದಾಯಿತ ವಾಹನಗಳ ಮೇಲೆ ಕಣ್ಣಿಡಲಾಗಿದೆ. ದೆಹಲಿ-ಜೈಪುರ ಹೆದ್ದಾರಿಯ ಸರಹೌಲ್ ಬಾರ್ಡರ್, ಕಾಸಹೇಡಾ, ಅಯಾನಗರ, ರಜೋಕರಿ ಮತ್ತು ಬಜ್‌ಗೇಡಾ ಸೇರಿದಂತೆ ಪ್ರಮುಖ ಐದು ಗಡಿಗಳಲ್ಲಿ ವಿಶೇಷ ಪೊಲೀಸ್ ತಂಡಗಳನ್ನು ನಿಯೋಜಿಸಿ ಸತತ ತಪಾಸಣೆ ನಡೆಸಲಾಗುತ್ತಿದೆ.
ಇದನ್ನೂ ಓದಿ: ಅರ್ನಬ್ ಚಂಡಮಾರುತದ ಹೊಡೆತದ ಬೆನ್ನಲ್ಲೇ ಮತ್ತೊಂದು ಅಪಾಯ: ಆಂಧ್ರಕ್ಕೆ ಹೊಸ ಚಂಡಮಾರುತದ ಆತಂಕ
ಬಿಎಸ್-6 ಅಲ್ಲದ ವಾಹನಗಳ ಪ್ರವೇಶಕ್ಕೆ ನಿಷೇಧ
ಹೊಸ ನಿಯಮಗಳ ಪ್ರಕಾರ, ಬಿಎಸ್-6 (BS-VI) ಮಾನದಂಡಗಳನ್ನು ಪೂರೈಸದ ವಾಹನಗಳು ಮತ್ತು ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (PUC) ಇಲ್ಲದ ವಾಹನಗಳ ದೆಹಲಿ ಪ್ರವೇಶವನ್ನು 2027ರ ಜನವರಿ 31ರವರೆಗೂ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಂಥ ವಾಹನಗಳನ್ನು ಅವು ದೆಹಲಿ ಪ್ರವೇಶಕ್ಕೆ ಮುನ್ನವೇ ತಡೆದು ವಾಪಸ್ ಕಳುಹಿಸಲಾಗಿದೆ. ಇದರಿಂದಾಗಿ ಸಾವಿರಾರು ವಾಣಿಜ್ಯ ವಾಹನಗಳು ಹಾಗೂ ಹಳೆಯ ಡೀಸೆಲ್/ಪೆಟ್ರೋಲ್ ಕಾರುಗಳ ದಟ್ಟನೆ ಹೆಚ್ಚಾಗಿ ವಿಪರೀತ ಟ್ರಾಫಿಕ್ ಜಾಮ್ ನಿರ್ಮಾಣವಾಗಿದೆ.
ಗಡಿ ಭಾಗಗಳಲ್ಲಿ ಪೊಲೀಸರು ವಾಹನಗಳ ದಾಖಲಾತಿ ಪತ್ರಗಳು (RC) ಮತ್ತು ಪಿಯುಸಿ (PUC) ಪ್ರಮಾಣಪತ್ರಗಳನ್ನು ಕೂಲಂಕಷವಾಗಿ ಪರಿಶೀಲಿಸುತ್ತಿರುವ ಕಾರಣ ವಾಹನಗಳ ಸಾಲುಗೈದು ನಿಂತಿದ್ದು, ಸಂಚಾರದ ವೇಗವು ಕುಂಠಿತಗೊಂಡಿದೆ. ದೆಹಲಿಗೆ ತೆರಳುವವರು ಪರ್ಯಾಯ ಮಾರ್ಗಗಳನ್ನು ಅಥವಾ ಕೆಎಂಪಿ ಎಕ್ಸ್‌ಪ್ರೆಸ್‌ವೇ ಬಳಸುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲಿಗೆ ಗ್ರೀನ್ ಸಿಗ್ನಲ್: ಇಲ್ಲಿದೆ ಟಿಕೆಟ್ ದರ, ವೇಳಾಪಟ್ಟಿ ಮಾಹಿತಿ
ದೆಹಲಿ ಮೂಲಕ ಬೇರೆ ಕಡೆಗೆ ಹೋಗಬೇಕೆನ್ನುವವರು ದೆಹಲಿಯ ಪೂರ್ವ ಅಥವಾ ಪಶ್ಚಿಮ ಭಾಗದಲ್ಲಿರುವ ಎಕ್ಸ್‌ಪ್ರೆಸ್‌ವೇ ರಸ್ತೆಗಳನ್ನು ಬಳಸಬೇಕೆಂದು ಸಲಹೆ ನೀಡಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:55 pm, Sun, 1 November 26




