Odisha: ಕಾಲಿನಲ್ಲಿ ಕ್ಯಾಮೆರಾ, ಮೈಕ್ರೋಚಿಪ್ ಹೊಂದಿದ್ದ ಪಾರಿವಾಳ ಪತ್ತೆ, ತನಿಖೆಗೆ ಆದೇಶ
ಒಡಿಶಾದ ಜಗತ್‌ಸಿಂಗ್‌ಪುರ ಜಿಲ್ಲೆಯ ಪರದೀಪ್ ಕರಾವಳಿಯಲ್ಲಿ ಮೀನುಗಾರಿಕಾ ದೋಣಿಯ ಮೇಲೆ ಕುಳಿತಿದ್ದ ಶಂಕಿತ ಪಾರಿವಾಳವೊಂದು ಪತ್ತೆಯಾಗಿದೆ.
ಭುವನೇಶ್ವರ: ಒಡಿಶಾದ (Odisha) ಜಗತ್‌ಸಿಂಗ್‌ಪುರ ಜಿಲ್ಲೆಯ ಪರದೀಪ್ ಕರಾವಳಿಯಲ್ಲಿ ಮೀನುಗಾರಿಕಾ ದೋಣಿಯ ಮೇಲೆ ಕುಳಿತಿದ್ದ ಶಂಕಿತ ಪಾರಿವಾಳವೊಂದು ಪತ್ತೆಯಾಗಿದೆ. ಈ ಪಾರಿವಾಳದ ಕಾಲಿಗೆ ಕ್ಯಾಮೆರಾ ಮತ್ತು ಮೈಕ್ರೋಚಿಪ್‌ನಂತೆ ಕಾಣುವ ಸಾಧನಗಳನ್ನು ಅಳವಡಿಸಲಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪಾರಿವಾಳದ ರೆಕ್ಕೆಗಳ ಮೇಲೆ ಅನ್ಯ ಭಾಷೆಯಲ್ಲಿ ಕೆಲವೊಂದು ಬರಹಗಳನ್ನು ಬರೆದಿದ್ದಾರೆ ಎಂದು ವರದಿಯಾಗಿದೆ. ಈ ಪಾರಿವಾಳವನ್ನು ಬೇಹುಗಾರಿಕೆಗೆ ಬಳಸಿಕೊಳ್ಳಲಾಗಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಪೊಲೀಸರ ಪ್ರಕಾರ, ಕೆಲವು ದಿನಗಳ ಹಿಂದೆ ಒಡಿಶಾ ಕರಾವಳಿ ಭಾಗದಲ್ಲಿ ಮೀನುಗಾರರು ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ತಮ್ಮ ಟ್ರಾಲರ್ ಮೇಲೆ ಕುಳಿತಿದ್ದ ಪಾರಿವಾಳದ ಕಾಲುಗಳಿದ್ದ ಸಾಧನ ಮತ್ತು ರೆಕ್ಕೆಯ ಮೇಲೆ ಬರೆದಿದ್ದ ಬರಹವನ್ನು ಗಮನಿಸಿ ಅದನ್ನು ಹಿಡಿದು ಮರೈನ್ ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ಪಾರಿವಾಳದ ಕಾಲುಗಳಲ್ಲಿ ಇದ್ದ ಕ್ಯಾಮೆರಾ ಮತ್ತು ಮೈಕ್ರೋಚಿಪ್‌ನಂತೆ ಕಾಣುವ ಸಾಧನಗಳನ್ನು ಕಂಡುಹಿಡಿಯಲು ಪೊಲೀಸರು ಸೈಬರ್ ತಜ್ಞರ ಸಹಾಯವನ್ನು ಪಡೆದಕೊಂಡಿದ್ದಾರೆ, ವಶಪಡಿಸಿಕೊಂಡ ವಸ್ತುಗಳನ್ನು ಸೈಬರ್ ತಜ್ಞರ ಮುಂದೆ ಹಾಜರುಪಡಿಸುತ್ತೇವೆ ಎಂದು ಪರದೀಪ್ ಎಎಸ್ಪಿ, ನಿಮಾಯ್ ಚರಣ್ ಸೇಥಿ ಸುದ್ದಿ ಸಂಸ್ಥೆ ANI ಗೆ ತಿಳಿಸಿದ್ದಾರೆ. ಅದರ ಕಾಲುಗಳಿಗೆ ಕಟ್ಟಿರುವ ಸಾಧನಗಳನ್ನು ಪರೀಕ್ಷಿಸಲು ರಾಜ್ಯ ವಿಧಿ ವಿಜ್ಞಾನ ಪ್ರಯೋಗಾಲಯದ ಸಹಾಯವನ್ನೂ ಪಡೆಯುತ್ತೇವೆ ಎಂದು ಜಗತ್‌ಸಿಂಗ್‌ಪುರ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಪಿಆರ್ ಹೇಳಿದ್ದಾರೆ. ಹಕ್ಕಿಯ ರೆಕ್ಕೆಗಳಲ್ಲಿ ಏನು ಬರೆಯಲಾಗಿದೆ ಎಂಬುದನ್ನು ಕಂಡುಹಿಡಿಯಲು ತಜ್ಞರ ಸಹಾಯವನ್ನು ಸಹ ಪಡೆಯಲಾಗುವುದು ಎಂದು ಅವರು ಹೇಳಿದರು.
ಇದನ್ನೂ ಓದಿ: ಆಧುನಿಕ ಶಹಜಹಾನ್; ಪತ್ನಿಗಾಗಿ ಒಡಿಶಾದಲ್ಲಿ 7 ಕೋಟಿ ರೂ. ದೇಗುಲ ಕಟ್ಟಿಸಿದ ಉದ್ಯಮಿ
10 ದಿನಗಳ ಹಿಂದೆ ಕೋನಾರ್ಕ್‌ನಿಂದ ಕರಾವಳಿಯಿಂದ 35 ಕಿಲೋಮೀಟರ್ ಮೀನುಗಾರಿಗೆ ಮಾಡುತ್ತಿದ್ದಾಗ ಟ್ರಾಲರ್ ಮೇಲೆ ಪಾರಿವಾಳ ಪತ್ತೆಯಾಗಿದೆ ಎಂದು ಮೀನುಗಾರಿಕಾ ಟ್ರಾಲರ್‌ನ ಉದ್ಯೋಗಿ ಪಿತಾಂಬರ್ ಬೆಹೆರಾ ಪಿಟಿಐಗೆ ತಿಳಿಸಿದ್ದಾರೆ. ಹಕ್ಕಿಯ ಕಾಲುಗಳಿಗೆ ಕೆಲವು ಸಾಧನಗಳನ್ನು ಇರುವುದನ್ನು ನಾವು ನೋಡಿದ್ದೇವೆ. ಅದರ ರೆಕ್ಕೆಗಳ ಮೇಲೆ ಏನೋ ಬರೆಯಲಾಗಿತ್ತು. ನಮಗೆ ಆ ಭಾಷೆ ಅರ್ಥವಾಗಿಲ್ಲ ಎಂದು ಬೆಹೆರಾ ಹೇಳಿದರು.
Published On - 11:16 am, Thu, 9 March 23