ಅನಾಥವಾಗಿ ಬಿದ್ದಿದ್ದ ಮಗುವನ್ನು ಸಾಕಿದ ಮಹಿಳೆ ಆ ಮಗಳಿಂದಲೇ ಕೊಲೆಯಾದ ಕತೆಯಿದು!
ಒಡಿಶಾದ ಮಹಿಳೆಯೊಬ್ಬರು ರಸ್ತೆಯಲ್ಲಿ ಹೋಗುವಾಗ ಅನಾಥವಾಗಿ ಬಿದ್ದಿದ್ದ 3 ದಿನದ ಮಗುವನ್ನು ಮನೆಗೆ ತಂದು, ಸ್ವಂತ ಮಗುವಿಗಿಂತ ಹೆಚ್ಚಾಗಿ ಸಾಕಿ ಬೆಳೆಸಿದ್ದರು. ಆದರೆ, ಕೃತಜ್ಞತೆ ಎಂಬುದೇ ಕಣ್ಮರೆಯಾಗುತ್ತಿರುವ ಈಗಿನ ಸಮಾಜದಲ್ಲಿ ತಾನೇ ಸಾಕಿದ ಮಗಳು ತನ್ನ ಪಾಲಿನ ಮೃತ್ಯುವಾಗಬಹುದು ಎಂಬ ಸಣ್ಣ ಅನುಮಾನವೂ ಆಕೆಗೆ ಇರಲಿಲ್ಲ. ಅನಾಥೆಯಾಗಿದ್ದ ತನ್ನನ್ನು ಸಾಕಿದ ತಾಯಿಯನ್ನೇ 13 ವರ್ಷದ ಬಾಲಕಿ ಉಸಿರುಗಟ್ಟಿಸಿ ಕೊಲೆ ಮಾಡಿರುವ ದಾರುಣ ಘಟನೆ ನಡೆದಿದೆ.

ಭುವನೇಶ್ವರ, ಮೇ 17: ಅಪ್ಪ-ಅಮ್ಮನಿಗೆ ಬೇಡವಾದ ಮಗು ಕಸದಬುಟ್ಟಿಯನ್ನೋ, ರಸ್ತೆಯ ಬದಿಯನ್ನೋ ಸೇರುತ್ತದೆ. ಇನ್ನು ಕೆಲವರು ಹೆಣ್ಣುಮಗು ಹುಟ್ಟಿತೆಂಬ ಕಾರಣಕ್ಕೆ ಅದನ್ನು ಕೊಲ್ಲುವವರೂ ಇದ್ದಾರೆ. ಆದರೆ, ಒಡಿಶಾದ ಮಹಿಳೆ ರಾಜಲಕ್ಷ್ಮಿ ಕರ್ ಎಂಬುವವರಿಗೆ ಮಕ್ಕಳೆಂದರೆ ಜೀವ. ತಮಗೆ ಮಕ್ಕಳಾಗಲಿಲ್ಲವೆಂದು ಕೊರಗುತ್ತಿದ್ದ ಅವರಿಗೆ 13 ವರ್ಷದ ಹಿಂದೆ ರಸ್ತೆ ಬದಿಯಲ್ಲಿ 3 ದಿನದ ಹೆಣ್ಣುಮಗುವೊಂದು ಸಿಕ್ಕಿತ್ತು. ಕಾನೂನುಪ್ರಕಾರವೇ ಆ ಮಗುವನ್ನು ದತ್ತು ಪಡೆದ ಅವರು ಆ ಅನಾಥ ಮಗುವಿಗೆ ತಾಯಿಯಾದರು. ಅಮ್ಮನಿಗೆ ಬೇಡವಾಗಿ ಬಿದ್ದಿದ್ದ ಆ ಹೆಣ್ಣು ಶಿಶುವಿನ ಜೀವನಕ್ಕೆ ಆಧಾರವಾದರು. ಒಳ್ಳೆಯ ಶಾಲೆಗೆ ಸೇರಿಸಿ ಉತ್ತಮ ಶಿಕ್ಷಣವನ್ನೂ ಕೊಡಿಸಿದರು. 13 ವರ್ಷದ ಆಕೆ ಈಗ 8ನೇ ಕ್ಲಾಸ್ ಓದುತ್ತಿದ್ದಳು. ಮನೆಯಲ್ಲಿ ಎಷ್ಟೇ ಒಳ್ಳೆಯ ಸಂಸ್ಕಾರ ಹೇಳಿಕೊಟ್ಟರೂ ಮನೆಯಿಂದ ಹೊರಗೆ ಹೋದಾಗ ಆಕೆ ಹುಡುಗರೊಂದಿಗೆ ಓಡಾಡುತ್ತಾ, ಮಜಾ ಮಾಡುತ್ತಾ, ಕ್ಲಾಸ್ಗೆ ಬಂಕ್ ಮಾಡುತ್ತಾ ಸ್ವೇಚ್ಛಾಚ್ಛಾರದ ಜೀವನ ನಡೆಸುತ್ತಿದ್ದಳು.
ಒಂದು ದಿನ ತಾನು ಸಾಕಿದ ಮಗಳು ತನ್ನ ಬೆನ್ನ ಹಿಂದೆ ಈ ರೀತಿ ಕೆಟ್ಟ ಕೆಲಸಗಳನ್ನು ಮಾಡುತ್ತಿದ್ದಾಳೆಂಬ ವಿಷಯ ರಾಜಲಕ್ಷ್ಮಿಗೆ ಗೊತ್ತಾಯಿತು. ಈಗಲೇ ಬುದ್ಧಿ ಹೇಳದಿದ್ದರೆ ಮುಂದೆ ಆಕೆಯನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ನಿರ್ಧರಿಸಿದ ರಾಜಲಕ್ಷ್ಮಿ ಮಗಳನ್ನು ಕರೆದು ಬುದ್ಧಿ ಹೇಳಿದಳು. ಇನ್ನುಮುಂದೆ ಯಾವ ಹುಡುಗರ ಜೊತೆಯೂ ಸುತ್ತುವಂತಿಲ್ಲ ಎಂದು ಗದರಿದ್ದಳು. ಆದರೆ, ಅದೇ ತನ್ನ ಸಾವಿಗೆ ಕಾರಣವಾಗುತ್ತದೆ ಎಂಬುದು ಆಕೆಗೆ ಗೊತ್ತಿರಲೇ ಇಲ್ಲ!
ಇದನ್ನೂ ಓದಿ: ಗಂಡನನ್ನು ಮರಕ್ಕೆ ಕಟ್ಟಿ ಹೊಡೆದು ಕೊಂದು, ಗಂಗಾ ನದಿಗೆ ಎಸೆದ ಹೆಂಡತಿ
ಅಮ್ಮ ಬುದ್ಧಿ ಹೇಳಿದಾಗ ಕೋಪಗೊಂಡ 13 ವರ್ಷದ ಬಾಲಕಿ ನನಗೆ ಬುದ್ಧಿ ಹೇಳಲು ನೀನೇನು ನನ್ನ ಹೆತ್ತ ತಾಯಿಯೇ? ಎಂದು ಕೇಳಿ ಗಲಾಟೆ ಮಾಡಿದ್ದಳು. ಹೆತ್ತ ಮಗಳಿಗಿಂತ ಹೆಚ್ಚಾಗಿ ಸಾಕಿದ್ದರೂ ಮಗಳು ಈ ರೀತಿ ವರ್ತಿಸಿದ್ದು ರಾಜಲಕ್ಷ್ಮಿಗೆ ಬೇಸರ ತಂದಿತ್ತು. ತನ್ನ ತಾಯಿ ಈ ರೀತಿ ಹೇಳುತ್ತಿದ್ದಾರೆಂದು ಶಾಲೆಯಲ್ಲಿ ತನ್ನ ಇಬ್ಬರು ಬಾಯ್ಫ್ರೆಂಡ್ಗೆ ಹೇಳಿದ ಆ ಬಾಲಕಿ ಅವರ ಜೊತೆ ಸೇರಿ ತಾಯಿಯನ್ನೇ ಕೊಲ್ಲಲು ಪ್ಲಾನ್ ಮಾಡಿದ್ದಳು. ತನ್ನ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುತ್ತಿದ್ದಾಳೆಂದು ತಾಯಿಯನ್ನು ಕೊಲ್ಲಲು ಯೋಚಿಸಿದ ಆಕೆ ಏಪ್ರಿಲ್ 29ರಂದು ತನ್ನ ಇಬ್ಬರು ಗೆಳೆಯರ ಸಹಾಯದಿಂದ ತನ್ನ ಸಾಕು ತಾಯಿಯನ್ನು ಕೊಂದಿದ್ದಾಳೆ. ಅನಾಥವಾಗಿ ಬಿದ್ದಿದ್ದ ಮಗುವಿಗೆ ಆಸರೆ, ಶಿಕ್ಷಣ, ಸಮಾಜದಲ್ಲಿ ಐಡೆಂಟಿಟಿ ನೀಡಿದ ತಪ್ಪಿಗೆ ರಾಜಲಕ್ಷ್ಮಿ ಅದೇ ಮಗುವಿನಿಂದ ಕೊಲೆಯಾಗಿದ್ದಾರೆ.
ಪೊಲೀಸರನ್ನು ಉಲ್ಲೇಖಿಸಿದ ವರದಿಗಳ ಪ್ರಕಾರ, ಕಳೆದ ತಿಂಗಳು ಗಜಪತಿ ಜಿಲ್ಲೆಯ ಪರಲಖೆಮುಂಡಿ ಪಟ್ಟಣದಲ್ಲಿರುವ ಬಾಡಿಗೆ ಮನೆಯಲ್ಲಿ ಆ ಮಹಿಳೆಯನ್ನು ಕೊಲ್ಲಲು ಆ ಹುಡುಗಿ ತನ್ನ ಇಬ್ಬರು ಪುರುಷ ಸ್ನೇಹಿತರೊಂದಿಗೆ ಸಂಚು ರೂಪಿಸಿದ್ದಳು ಎಂದು ಹೇಳಲಾಗಿದೆ. ಇಬ್ಬರು ಹುಡುಗರ ಜೊತೆ ಸಂಬಂಧ ಇಟ್ಟುಕೊಂಡಿದ್ದನ್ನು ರಾಜಲಕ್ಷ್ಮಿ ವಿರೋಧಿಸಿದ್ದೇ ಈ ಕೊಲೆಗೆ ಕಾರಣ ಎನ್ನಲಾಗಿದೆ. ಹಾಗೇ, ಆಕೆ ಸಾಕು ತಾಯಿಯಾಗಿದ್ದರಿಂದ ಆಕೆಯ ಆಸ್ತಿಯನ್ನು ತನ್ನದಾಗಿಸಿಕೊಳ್ಳಲು ಈ ಕೊಲೆ ಮಾಡಿದ್ದಾಳೆಂಬ ಆರೋಪವೂ ಇದೆ.
ಇದನ್ನೂ ಓದಿ: ರಾಮನಗರದಲ್ಲಿ ಅಮಾನುಷ ಕೃತ್ಯ: ಅತ್ಯಾಚಾರ ಎಸಗಿ ಮೂಕ ಬಾಲಕಿ ಕೊಲೆ ಆರೋಪ
ಆ ಬಾಲಕಿ ರಾಜಲಕ್ಷ್ಮಿಗೆ ನಿದ್ರೆ ಮಾತ್ರೆಗಳನ್ನು ನೀಡಿ ನಂತರ ದಿಂಬುಗಳಿಂದ ಉಸಿರುಗಟ್ಟಿಸಿ ಕೊಂದಿದ್ದಾಳೆ ಎಂದು ತಿಳಿದುಬಂದಿದೆ. ನಂತರ ಮಹಿಳೆಯನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಅಲ್ಲಿ ಅವಳು ಸತ್ತಿದ್ದಾಳೆಂದು ಘೋಷಿಸಲಾಯಿತು. ಮರುದಿನ, ಆಕೆಯ ಸಂಬಂಧಿಕರ ಸಮ್ಮುಖದಲ್ಲಿ ಭುವನೇಶ್ವರದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಆಕೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ ಎಂದು ತಿಳಿಸಲಾಯಿತು. ರಾಜಲಕ್ಷ್ಮಿ ಅವರಿಗೆ ಈ ಮೊದಲೂ ಒಮ್ಮೆ ಹೃದಯಾಘಾತ ಉಂಟಾಗಿದ್ದರಿಂದ ಆ ಹುಡುಗಿ ತನ್ನ ತಾಯಿಗೆ ಹೃದಯಾಘಾತವಾಗಿದೆ ಎಂದು ಹೇಳಿದ್ದನ್ನು ಎಲ್ಲರೂ ನಂಬಿದ್ದರು.
ಅಷ್ಟೇ ಆಗಿದ್ದರೆ ಆ ಹುಡುಗಿ ಮಾಡಿದ ಕೊಲೆ ಯಾರಿಗೂ ಗೊತ್ತೇ ಆಗುತ್ತಿರಲಿಲ್ಲ. ಅದೊಂದು ಸಹಜ ಸಾವೆಂದೇ ಎಲ್ಲರೂ ಭಾವಿಸುತ್ತಿದ್ದರು. ಆದರೆ, ರಾಜಲಕ್ಷ್ಮಿಯ ಸಹೋದರ ಸಿಬಾ ಪ್ರಸಾದ್ ಮಿಶ್ರಾ ಅವರಿಗೆ ಭುವನೇಶ್ವರದಲ್ಲಿ ಬಿಟ್ಟು ಹೋಗಿದ್ದ ಆ ಹುಡುಗಿಯ ಮೊಬೈಲ್ ಫೋನ್ ಸಿಕ್ಕಿತು. ಅದರಲ್ಲಿ ಆಕೆ ಹುಡುಗರ ಜೊತೆ ಮಾಡಿದ್ದ ಮೆಸೇಜ್ ಇತ್ತು. ಅದನ್ನು ನೋಡಿದ ನಂತರ ಅಸಲಿ ವಿಷಯ ಬೆಳಕಿಗೆ ಬಂದಿತು. ವಾಟ್ಸಾಪ್ ಮೆಸೇಜ್ನಲ್ಲಿ ಆ ಮೂವರೂ ಕೊಲೆಯ ಪ್ಲಾನ್ ಬಗ್ಗೆ ಚಾಟ್ ನಡೆಸಿದ್ದರು. ಆ ಚಾಟ್‌ಗಳಲ್ಲಿ ರಾಜಲಕ್ಷ್ಮಿಯನ್ನು ಕೊಂದು ಅವಳ ಚಿನ್ನಾಭರಣಗಳು ಮತ್ತು ಹಣವನ್ನು ಕಿತ್ತುಕೊಂಡ ಬಗ್ಗೆ ನಿರ್ದಿಷ್ಟ ಉಲ್ಲೇಖಗಳಿತ್ತು.
ನಂತರ, ಮಿಶ್ರಾ ಮೇ 14ರಂದು ಈ ಸಂಬಂಧ ಪೊಲೀಸ್ ದೂರು ದಾಖಲಿಸಿದರು. ಬಳಿಕ ಮೂವರು ಆರೋಪಿಗಳಾದ 13 ವರ್ಷದ ಹುಡುಗಿ, ದೇವಾಲಯದ ಅರ್ಚಕ ಗಣೇಶ್ ರಾತ್ (21) ಮತ್ತು ಅವನ ಸ್ನೇಹಿತ ದಿನೇಶ್ ಸಾಹು (20) ಅವರನ್ನು ಬಂಧಿಸಲಾಯಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ