ಐಫೋನ್​ಗಾಗಿ ಜಗಳ, ಮಗನ ಜತೆ ಬೆಟ್ಟದಿಂದ ಹಾರಿ ಪ್ರಾಣ ಬಿಟ್ಟ ದಂಪತಿ, ತಾಯಿ-ಮಗನ ಅನ್ಯೋನ್ಯತೆಯ ಹಳೆ ವಿಡಿಯೋ ವೈರಲ್

ಐಫೋನ್ ಇಎಂಐ ಹಣಕ್ಕಾಗಿ ಆರಂಭವಾದ ಜಗಳ ಮಹಾರಾಷ್ಟ್ರದ ಚಂದ್ವಾಡೆ ಕುಟುಂಬದ ಪ್ರಾಣವನ್ನೇ ಬಲಿ ಪಡೆಯಿತು. ಮಗ, ತಂದೆ, ತಾಯಿ ಬೆಟ್ಟದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡರು. ಡಿಜಿಟಲ್ ಗ್ಯಾಜೆಟ್‌ಗಳ ವ್ಯಾಮೋಹ ಯುವಜನರ ಮಾನಸಿಕ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದಕ್ಕೆ ಇದು ಕಹಿ ಉದಾಹರಣೆ. ದುರಂತದ ನಂತರ ತಾಯಿ-ಮಗನ ಅನ್ಯೋನ್ಯತೆಯ ಹಳೆಯ ವಿಡಿಯೋಗಳು ವೈರಲ್ ಆಗಿವೆ, ನೋಡುಗರ ಕಣ್ಣುಗಳನ್ನು ತೇವಗೊಳಿಸಿವೆ.

ಐಫೋನ್​ಗಾಗಿ ಜಗಳ, ಮಗನ ಜತೆ ಬೆಟ್ಟದಿಂದ ಹಾರಿ ಪ್ರಾಣ ಬಿಟ್ಟ ದಂಪತಿ, ತಾಯಿ-ಮಗನ ಅನ್ಯೋನ್ಯತೆಯ ಹಳೆ ವಿಡಿಯೋ ವೈರಲ್
ತಾಯಿ-ಮಗ

Updated on: Aug 23, 2026 | 12:14 PM

ಮುಂಬೈ, ಆಗಸ್ಟ್​ 23: ಐಫೋನ್ ಖರೀದಿಯ ಇಎಂಐ (EMI) ಹಣಕ್ಕಾಗಿ ಕುಟುಂಬದಲ್ಲಿ ಆರಂಭವಾದ ಸಣ್ಣ ಜಗಳವೊಂದು, ಇಡೀ ಮನೆಯನ್ನೇ ಬಲಿಪಡೆದ ಕರುಳುಹಿಂಡುವ ಘಟನೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ನಡೆದಿದೆ. ಕೊಹ್ಡ್ಯಾ ಬೆಟ್ಟದ ಅಂಚಿನಿಂದ ಸುಮಾರು 250 ಅಡಿ ಆಳದ ಕಂದಕಕ್ಕೆ ಬಿದ್ದು18 ವರ್ಷದ ಕುನಾಲ್ ಚಂದ್ವಾಡೆ, ಅವರ ತಾಯಿ ಸಂಗೀತಾ ಮತ್ತು ತಂದೆ ಮುರಳೀಧರ್ ಚಂದ್ವಾಡೆ (48) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಐಫೋನ್‌ಗಾಗಿ ಹಠ: ಹೊಸ ಐಫೋನ್ ಖರೀದಿಸಿದ್ದ ಕುನಾಲ್, ಅದರ ಮಾಸಿಕ ಕಂತು ಕಟ್ಟಲು ಹಣ ಕೇಳಿ ಪೋಷಕರೊಂದಿಗೆ ವಾಗ್ವಾದ ನಡೆಸಿದ್ದ. ಬಳಿಕ ಕೋಪದಿಂದ ಬೆಳಗ್ಗೆ 10 ಗಂಟೆಗೆ ಸಮೀಪದ ಕೊಹ್ಡ್ಯಾ ಬೆಟ್ಟವೇರಿ ಆತ್ಮಹತ್ಯೆಯ ಬೆದರಿಕೆ ಹಾಕಿದ್ದ. ಮಗನನ್ನು ಉಳಿಸಿಕೊಳ್ಳಲು ಬೆಟ್ಟಕ್ಕೆ ಓಡಿಹೋದ ತಾಯಿ ಸಂಗೀತಾ, ನೆಲದ ಮೇಲೆ ಕುಳಿತು ಕಣ್ಣೀರಿಡುತ್ತಾ ಕೈಮುಗಿದು, ಮಗನ ಕಾಲಿಗೆ ಬಿದ್ದು ಮನೆಗೆ ಬರುವಂತೆ ಗೋಗರೆದಿದ್ದಾರೆ. ಆದರೆ, “ಅಮ್ಮಾ, ನನ್ನ ಮಾತು ಯಾರೂ ಕೇಳುವುದಿಲ್ಲ. ನಾನು ಬದುಕುವುದರಲ್ಲಿ ಅರ್ಥವಿಲ್ಲ” ಎಂದು ಕುನಾಲ್ ಹತಾಶೆಯಿಂದ ಉತ್ತರಿಸಿದ್ದಾನೆ.

ರಕ್ಷಿಸಲು ಹೋಗಿ ಕಂದಕಕ್ಕೆ ಜಾರಿದ ತಂದೆ: ಸುಮಾರು ಮೂರು ಗಂಟೆಗಳ ಕಾಲ ಮನವೊಲಿಸಲು ಯತ್ನಿಸಿದ ತಂದೆ ಮುರಳೀಧರ್, ಕೊನೆಗೆ ಮಗನನ್ನು ಅಂಚಿನಿಂದ ಹಿಂದಕ್ಕೆ ಎಳೆಯಲು ಮುಂದಾದರು. ಈ ವೇಳೆ ಇಬ್ಬರ ಸಮತೋಲನ ತಪ್ಪಿ 250 ಅಡಿ ಆಳದ ಕಂದಕಕ್ಕೆ ಬಿದ್ದರು.

ವಿಡಿಯೋ

ಕಣ್ಣೆದುರೇ ಪತಿ ಮತ್ತು ಮಗ ಪ್ರಪಾತಕ್ಕೆ ಬೀಳುವುದನ್ನು ಕಂಡ ತಾಯಿ ಸಂಗೀತಾ, ತೀವ್ರ ಆಘಾತದಿಂದ ಸೆಕೆಂಡುಗಳ ಅಂತರದಲ್ಲಿ ತಾವೂ ಬೆಟ್ಟದಿಂದ ಹಾರಿ ಪ್ರಾಣ ಬಿಟ್ಟರು. ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಗ್ಯಾಜೆಟ್‌ಗಳು ಹಾಗೂ ಸಾಮಾಜಿಕ ಪ್ರತಿಷ್ಠೆಯ ವಿಚಾರಗಳು ಯುವಜನತೆಯ ಮಾನಸಿಕ ಸಮತೋಲನದ ಮೇಲೆ ತೀವ್ರ ಪರಿಣಾಮ ಬೀರುತ್ತಿವೆ.

ಮತ್ತಷ್ಟು ಓದಿ: iPhone Air: ಆಪಲ್​ಗೆ ದೊಡ್ಡ ಹೊಡೆತ: ಐಫೋನ್ ಏರ್ ಖರೀದಿಸಲು ಜನರೇ ಬರುತ್ತಿಲ್ಲ, ಏಕೆ?

ತೀವ್ರ ಕೋಪ, ಹತಾಶೆ ಅಥವಾ ಖಿನ್ನತೆಯ ಲಕ್ಷಣಗಳು ಕಂಡುಬಂದಾಗ ಪೋಷಕರು ವಾಗ್ವಾದಕ್ಕೆ ಇಳಿಯುವ ಬದಲು ನುರಿತ ಆಪ್ತಸಮಾಲೋಚಕರ ಸಹಾಯ ಪಡೆಯುವುದು ಅತ್ಯಗತ್ಯ ಎಂದು ಮನಶ್ಶಾಸ್ತ್ರಜ್ಞರು ಸಲಹೆ ನೀಡಿದ್ದಾರೆ.

ದುರಂತದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಕುನಾಲ್ ತನ್ನ ತಾಯಿಯೊಂದಿಗೆ ಚಹಾ ಕುಡಿಯುತ್ತಿರುವ ಹಾಗೂ ತಾಯಿಯ ಪಾದ ತೊಳೆದು ಆಶೀರ್ವಾದ ಪಡೆಯುತ್ತಿರುವ ಹಳೆಯ ವೀಡಿಯೊಗಳು ವೈರಲ್ ಆಗಿದ್ದು, ತಾಯಿ-ಮಗನ ನಡುವಿನ ಅನ್ಯೋನ್ಯತೆ ಕಂಡು ನೆಟ್ಟಿಗರು ಕಣ್ಣೀರು ಸುರಿಸಿದ್ದಾರೆ.

ಜೊತೆಗೆ ಬೆಟ್ಟದ ಅಂಚಿನಲ್ಲಿ ಮಗನ ಜೀವ ಉಳಿಸಲು ತಾಯಿ ನಡೆಸಿದ ಹತಾಶ ಪ್ರಯತ್ನದ ಕೊನೆಯ ದೃಶ್ಯಗಳು ಎಲ್ಲರ ಹೃದಯ ಕಲಕುವಂತಿವೆ.

ಹಳೆಯ ಅನ್ಯೋನ್ಯತೆಯ ವೀಡಿಯೊಗಳು ವೈರಲ್
ದುರಂತದ ಬೆನ್ನಲ್ಲೇ ಕುನಾಲ್ ತನ್ನ ತಾಯಿಯ ಪಾದ ತೊಳೆದು ಆಶೀರ್ವಾದ ಪಡೆಯುತ್ತಿರುವ ಮತ್ತು ಜೊತೆಯಾಗಿ ಚಹಾ ಸೇವಿಸುತ್ತಿರುವ ಹಳೆಯ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರ ಕಣ್ಣಾಲಿಗಳನ್ನು ತೇವಗೊಳಿಸಿವೆ. ಕ್ಷಣಿಕ ಆವೇಶ ಹಾಗೂ ಭೌತಿಕ ವಸ್ತುಗಳ ವ್ಯಾಮೋಹ ಎಷ್ಟು ದೊಡ್ಡ ದುರಂತಕ್ಕೆ ಕಾರಣವಾಗಬಹುದು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us