‘ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿಗೆ ಅಮಿತ್ ಶಾ ಆದೇಶ’; ರಾಹುಲ್ ಗಾಂಧಿ ಆರೋಪಕ್ಕೆ ರಣರಂಗವಾದ ಸಂಸತ್

ಜುಲೈ 20ರ ಪ್ರತಿಭಟನೆಯ ವೇಳೆ ವಿದ್ಯಾರ್ಥಿಗಳ ಮೇಲಿನ ಬಲಪ್ರಯೋಗಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಅವರು ಗೃಹ ಸಚಿವ ಅಮಿತ್ ಶಾ ವಿರುದ್ಧ ಇಂದು ಸಂಸತ್​ ಅಧಿವೇಶನದಲ್ಲಿ ವಾಗ್ದಾಳಿ ನಡೆಸಿದರು. ಅಮಿತ್ ಶಾ ಅವರೇ ವಿದ್ಯಾರ್ಥಿಗಳ ಮೇಲಿನ ದಾಳಿಗೆ ಆದೇಶ ನೀಡಿದ್ದಾರೆ ಎಂದು ಆರೋಪಿಸಿದ ರಾಹುಲ್ ಗಾಂಧಿ, "ವಿದ್ಯಾರ್ಥಿಗಳ ಮೇಲಿನ ಹಲ್ಲೆಯ ಕುರಿತು ಸಂಸತ್ತನ್ನು ಎದುರಿಸುವ ಮತ್ತು ಮಾತನಾಡುವ ಧೈರ್ಯ ಈಗ ಗೃಹ ಸಚಿವರಿಗೆ ಇಲ್ಲ" ಎಂದು ಲೇವಡಿ ಮಾಡಿದರು. ಅಮಿತ್ ಶಾ ಕುರಿತ ರಾಹುಲ್ ಗಾಂಧಿ ಅವರ ಹೇಳಿಕೆಗೆ ಬಿಜೆಪಿ ಸಂಸದರು ಆಕ್ಷೇಪ ವ್ಯಕ್ತಪಡಿಸಿದರು.

‘ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿಗೆ ಅಮಿತ್ ಶಾ ಆದೇಶ’; ರಾಹುಲ್ ಗಾಂಧಿ ಆರೋಪಕ್ಕೆ ರಣರಂಗವಾದ ಸಂಸತ್
Rahul Gandhi Amit Shah
Image Credit source: PTI

Updated on: Jul 29, 2026 | 3:33 PM

ನವದೆಹಲಿ, ಜುಲೈ 29: ಇಂದು ನಡೆದ ಸಂಸತ್ ಅಧಿವೇಶನದ (Parliament Monsoon Session) ವೇಳೆಯೂ ರಾಜಕೀಯ ಕೆಸರೆರಚಾಟ ಮುಂದುವರೆಯಿತೇ ವಿನಃ ಮಸೂದೆಗಳ ಬಗ್ಗೆ ಚರ್ಚೆ ನಡೆಯಲಿಲ್ಲ. ಹೊಸ ಪರೀಕ್ಷಾ ಅಕ್ರಮ ತಡೆ ವಿಧೇಯಕದ ಮೇಲಿನ ಚರ್ಚೆಯ ವೇಳೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ನೀಡಿದ ಹೇಳಿಕೆ ಸಂಸತ್​​ನಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಯಿತು. “ನೀಟ್ (NEET) ಪ್ರತಿಭಟನೆಯ ಸಮಯದಲ್ಲಿ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್, ಗುಂಡಿನ ದಾಳಿ ಮಾಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಆದೇಶ ನೀಡಿದ್ದರು” ಎಂದು ರಾಹುಲ್ ಗಾಂಧಿ ಸದನದಲ್ಲಿ ಆರೋಪಿಸಿದ್ದಾರೆ. ಈ ಹೇಳಿಕೆಗೆ ಆಕ್ರೋಶಗೊಂಡ ಬಿಜೆಪಿ ಸಂಸದರು ರಾಹುಲ್ ಗಾಂಧಿ ಈ ಆರೋಪಕ್ಕೆ ಸಾಕ್ಷ್ಯಾಧಾರಗಳನ್ನು ಒದಗಿಸಬೇಕು, ಇಲ್ಲವಾದರೆ ಅಮಿತ್ ಶಾ ಬಳಿ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕಾಕ್ರೋಚ್ ಜನತಾ ಪಾರ್ಟಿ (CJP) ಮತ್ತು ನೂರಾರು ವಿದ್ಯಾರ್ಥಿಗಳು ದೆಹಲಿಯ ಜಂತರ್ ಮಂತರ್‌ನಲ್ಲಿ ಪರೀಕ್ಷಾ ಅಕ್ರಮಗಳ ವಿರುದ್ಧ ಪ್ರತಿಭಟನೆ ಆರಂಭಿಸಿದಾಗಿನಿಂದಲೂ, ವಿರೋಧ ಪಕ್ಷಗಳು ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡುತ್ತಿವೆ. ಜುಲೈ 20 ರಂದು ನಡೆದ ಪ್ರತಿಭಟನಾ ಮೆರವಣಿಗೆಯ ವೇಳೆ ಪ್ರತಿಭಟನಾಕಾರರ ಮೇಲೆ ಪೆಲೆಟ್ ಗನ್‌ಗಳನ್ನು ಬಳಸಲಾಗಿದೆ ಎಂಬ ಆರೋಪಗಳಿಗೆ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯ ಡೈರಿ ಎಂಟ್ರಿಯು ದೃಢೀಕರಣ ನೀಡಿದ್ದು, ಈ ಪ್ರಕರಣ ಮತ್ತಷ್ಟು ಕಾವು ಪಡೆದುಕೊಂಡಿದೆ.

ಇದನ್ನೂ ಓದಿ: ಕೆಪಿಎಸ್ಸಿ ಕರ್ಮಕಾಂಡ ಬಗ್ಗೆ ರಾಹುಲ್ ಗಾಂಧಿ ಮೌನ ಯಾಕೆ?: ಕಾಂಗ್ರೆಸಿಗರ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಿಡಿ

ರಾಹುಲ್ ಗಾಂಧಿ ಗಂಭೀರ ಆರೋಪ:

ಈ ಹಿನ್ನೆಲೆಯಲ್ಲಿ ಇಂದು ಲೋಕಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, “ನಮ್ಮ ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿ ನಡೆಸಲು ಗೃಹ ಸಚಿವರು ಆದೇಶ ನೀಡಿದ್ದರು. ಅವರು ನಮ್ಮ ವಿದ್ಯಾರ್ಥಿಗಳ ರಕ್ತದಲ್ಲಿ ಪೆಲೆಟ್‌ಗಳನ್ನು ಹರಿಸಿದರು. ಭಾರತದ ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸಲು ಅವರು ಆದೇಶಿಸಿದರು” ಎಂದು ಆರೋಪಿಸಿದರು. “ಇಂತಹ ಬಲಪ್ರಯೋಗದ ನಿರ್ಧಾರವನ್ನು ಕೇವಲ ಗೃಹ ಸಚಿವರು ಅಥವಾ ಪ್ರಧಾನಮಂತ್ರಿ ಮಾತ್ರ ಅನುಮೋದಿಸಲು ಸಾಧ್ಯ” ಎಂದು ರಾಹುಲ್ ಗಾಂಧಿ ಹೇಳಿದರು.


ಹಾಗೇ, ತಮ್ಮ ಭಾಷಣದಲ್ಲಿ ಅಮಿತ್ ಶಾ ಅವರ ಹೆಸರನ್ನು ಪ್ರಸ್ತಾಪಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ಈ ದೇಶದ ಗೃಹ ಸಚಿವರಿಗೆ ಸದನಕ್ಕೆ ಬಂದು ಕುಳಿತುಕೊಳ್ಳುವ ಧೈರ್ಯವಿಲ್ಲದಿರುವುದನ್ನು ನೋಡಿ ನನಗೆ ತುಂಬಾ ಸಂತೋಷವಾಗಿದೆ. ನಾನು ಕಾರಿನೊಳಗೆ ಕುಳಿತಿದ್ದ ಗೃಹ ಸಚಿವರು ನಡುಗುತ್ತಾ ನೋಡುತ್ತಿದ್ದುದನ್ನು ಕಂಡೆ” ಎಂದು ಹೇಳಿದರು.

ಕಿರಣ್ ರಿಜಿಜು ಆಕ್ರೋಶ:

ರಾಹುಲ್ ಗಾಂಧಿ ಗೃಹ ಸಚಿವರ ವಿರುದ್ಧ ಆರೋಪ ಮಾಡಿದ ತಕ್ಷಣವೇ, ಬಿಜೆಪಿ ಪಕ್ಷದ ಸಂಸದರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ರಾಹುಲ್ ಗಾಂಧಿಯ ಆರೋಪಗಳಿಗೆ ಸಾಕ್ಷಿ ಎಲ್ಲಿದೆ? ಎಂದು ಅವರು ಪ್ರಶ್ನಿಸಿದರು.


“ದಯವಿಟ್ಟು ಗೃಹ ಸಚಿವರ ಆದೇಶದ ಪ್ರತಿಯನ್ನು ತೋರಿಸಿ. ಯಾವ ಅಧಿಕಾರಿ ನಿಮಗೆ ಇದನ್ನು ಹೇಳಿದರು ಎಂದು ತಿಳಿಸಿ. ರಾಹುಲ್ ಗಾಂಧಿ ಅವರ ಈ ಆರೋಪಕ್ಕೆ ಆಧಾರವೇನು? ನೀವು ವಿರೋಧ ಪಕ್ಷದ ನಾಯಕ. ಯಾವ ಆಧಾರದ ಮೇಲೆ ಇದನ್ನು ಹೇಳುತ್ತಿದ್ದೀರಿ?” ಎಂದು ಸಚಿವ ಕಿರಣ್ ಪ್ರಶ್ನಿಸಿದರು.

ಇದನ್ನೂ ಓದಿ: ವಿದ್ಯಾರ್ಥಿ ಚಳವಳಿಯಲ್ಲಿದ್ದ ಮೇಲೆ ಬಂಧನ ಎದುರಿಸಲು ಸಿದ್ಧರಿರಬೇಕು: ಪ್ರತಿಭಟನಾಕಾರರ ಮೇಲಿನ ಪೊಲೀಸ್ ಕ್ರಮ ಸಮರ್ಥಿಸಿಕೊಂಡ ಜೆಪಿ ನಡ್ಡಾ

“ನಿಮಗೆ ಇದನ್ನು ಯಾರು ಹೇಳಿದರು? ನೀವು ಹೇಳಿದ್ದು ಸಂಪೂರ್ಣ ತಪ್ಪು. ನಾನು ಇದನ್ನು ಆಕ್ಷೇಪಿಸುತ್ತೇನೆ, ಈ ಮಾತುಗಳನ್ನು ಕಲಾಪದಿಂದ ತೆತೆದುಹಾಕಬೇಕು” ಎಂದರು. ಇಷ್ಟೊಂದು ಗಂಭೀರವಾದ ಆರೋಪ ಮಾಡುವುದು ವಿರೋಧ ಪಕ್ಷದ ನಾಯಕ ಸ್ಥಾನದ ಘನತೆಯನ್ನು ತಗ್ಗಿಸುತ್ತದೆ ಹಾಗೂ ಸಂಸತ್ತಿನ ಹಕ್ಕುಚ್ಯುತಿಗೆ ಕಾರಣವಾಗುತ್ತದೆ ಎಂದು ಹೇಳಿದ ಸಚಿವ ಕಿರಣ್ ರಿಜಿಜು, ರಾಹುಲ್ ಗಾಂಧಿ ತಕ್ಷಣವೇ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಆರ್​ಎಸ್​ಎಸ್​ ಬಗ್ಗೆಯೂ ರಾಹುಲ್ ಆಕ್ಷೇಪ:

ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಶಿಕ್ಷಣ ವ್ಯವಸ್ಥೆ ಮತ್ತು ವಿದ್ಯಾರ್ಥಿಗಳಿಗೆ ಬೋಧಿಸಲಾಗುತ್ತಿರುವ ಪಾಠಗಳ ಮೇಲೆ ಆರ್‌ಎಸ್‌ಎಸ್ ಪ್ರಭಾವ ಬೀರುತ್ತಿದೆ ಎಂದು ಆರೋಪಿಸಿದರು. “ಧರ್ಮೇಂದ್ರ ಪ್ರಧಾನ್ ಅವರು ಎಂದಿಗೂ ಶಿಕ್ಷಣ ಸಚಿವಾಲಯವನ್ನು ನಡೆಸಲಿಲ್ಲ. ಈ ವ್ಯವಸ್ಥೆಯನ್ನು ಆರ್‌ಎಸ್‌ಎಸ್ ವಶಪಡಿಸಿಕೊಂಡಿದೆ. ಈ ಸಚಿವಾಲಯವನ್ನು ನಿಜವಾಗಿ ನಡೆಸುತ್ತಿರುವ ವ್ಯಕ್ತಿ ಮತ್ತು ಸಂಘಟನೆ ಎಂದರೆ ಅದು ಆರ್‌ಎಸ್‌ಎಸ್” ಎಂದು ರಾಹುಲ್ ಟೀಕಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us