ದೆಹಲಿಗೆ ಬಂದ ಅಸ್ಸಾಂ ಪೊಲೀಸರು, ಹೈದರಾಬಾದ್​ಗೆ ಪರಾರಿಯಾದ ಪವನ್ ಖೇರಾ

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಅವರ ವಿರುದ್ಧ ಮಾಡಲಾದ ಪಾಸ್‌ಪೋರ್ಟ್ ವಂಚನೆ ಆರೋಪದ ಬಳಿಕ ಪವನ್ ಖೇರಾ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಇದಾದ ಒಂದು ದಿನದ ನಂತರ ಇಂದು ದೆಹಲಿಯಲ್ಲಿರುವ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರ ನಿವಾಸದ ಮೇಲೆ ಅಸ್ಸಾಂ ಪೊಲೀಸರು ದಾಳಿ ನಡೆಸಿದ್ದಾರೆ. ಅಸ್ಸಾಂ ಪೊಲೀಸರು ದೆಹಲಿಯಲ್ಲಿರುವ ಪವನ್ ಖೇರಾ ಅವರ ನಿವಾಸವನ್ನು ತಲುಪುವಷ್ಟರಲ್ಲಿ ಪವನ್ ಖೇರಾ ಹೈದರಾಬಾದ್​​ಗೆ ಓಡಿಹೋಗಿದ್ದಾರೆ.

ದೆಹಲಿಗೆ ಬಂದ ಅಸ್ಸಾಂ ಪೊಲೀಸರು, ಹೈದರಾಬಾದ್​ಗೆ ಪರಾರಿಯಾದ ಪವನ್ ಖೇರಾ
Pawan Khera
Image Credit source: PTI

Updated on: Apr 07, 2026 | 5:02 PM

ನವದೆಹಲಿ, ಏಪ್ರಿಲ್ 7: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಅವರು ಮಾಡಿದ್ದ ಪಾಸ್‌ಪೋರ್ಟ್ ವಂಚನೆ ಆರೋಪದ ವಿರುದ್ಧ ಕಾಂಗ್ರೆಸ್ ನಾಯಕ ಪವನ್ ಖೇರಾ (Pawan Khera) ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಅದಾದ ಒಂದು ದಿನದ ನಂತರ ಇಂದು ಅಸ್ಸಾಂ ಪೊಲೀಸರು ದೆಹಲಿಯಲ್ಲಿರುವ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರ ನಿವಾಸಕ್ಕೆ ತೆರಳಿದ್ದಾರೆ.ನಿಜಾಮುದ್ದೀನ್ ಪ್ರದೇಶದ ದೆಹಲಿ ಪೊಲೀಸರು ಅಸ್ಸಾಂ ಪೊಲೀಸರ ಭೇಟಿಯ ಸಮಯದಲ್ಲಿ ಅಸ್ಸಾಂ ಪೊಲೀಸ್ ತಂಡಕ್ಕೆ ಸಹಾಯ ಮಾಡಿದರು.

ಆದರೆ, ಅಷ್ಟರಲ್ಲಾಗಲೇ ಪವನ್ ಖೇರಾ ತಮ್ಮ ಮನೆಯನ್ನು ಬಿಟ್ಟು ಹೈದರಾಬಾದ್​ಗೆ ಪರಾರಿಯಾಗಿದ್ದರು. ಪವನ್ ಖೇರಾ ದೆಹಲಿಯಲ್ಲಿಲ್ಲ ಮತ್ತು ಕಾಂಗ್ರೆಸ್ ಆಡಳಿತದ ರಾಜ್ಯವಾದ ತೆಲಂಗಾಣದಲ್ಲಿ ಇರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

 

“ನಾವು ಅವರ ಮನೆಯನ್ನು ಶೋಧಿಸಿದ್ದೇವೆ. ನಾವು ಹೆಚ್ಚಿನ ವಿವರಗಳನ್ನು ನೀಡಲು ಸಾಧ್ಯವಿಲ್ಲ” ಎಂದು ಅಸ್ಸಾಂ ಪೊಲೀಸ್ ಡಿಸಿಪಿ ಡಾ. ದೇಬಾಜಿತ್ ನಾಥ್ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರ ನಿವಾಸದಲ್ಲಿ ನಡೆಸಿದ ಶೋಧದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಸಂಸದರ ಪತ್ನಿಗೆ ಪಾಕಿಸ್ತಾನದ ನಂಟು ದೃಢ; ಅಸ್ಸಾಂ ಸಿಎಂ ಹಿಮಂತ ಶರ್ಮಾಗೆ ಎಸ್‌ಐಟಿ ವರದಿ ಸಲ್ಲಿಕೆ

“ಪವನ್ ಖೇರಾ ಹೈದರಾಬಾದ್‌ಗೆ ಓಡಿಹೋಗಿದ್ದಾರೆ” ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಲೇವಡಿ ಮಾಡಿದ್ದಾರೆ. “ಅವರು ನಿನ್ನೆ ಗುವಾಹಟಿಯಿಂದ ಓಡಿಹೋಗಿದ್ದಾರೆ. ಪೊಲೀಸರು ದೆಹಲಿಯಲ್ಲಿರುವ ಅವರ ನಿವಾಸಕ್ಕೆ ಹೋಗಿದ್ದಾರೆ ಎಂದು ಮಾಧ್ಯಮಗಳ ಮೂಲಕ ನನಗೆ ತಿಳಿದುಬಂದಿದೆ. ಆದರೆ ಅವರು ಹೈದರಾಬಾದ್‌ಗೆ ಓಡಿಹೋಗಿದ್ದಾರೆ. ಕಾನೂನು ತನ್ನ ಕ್ರಮ ಕೈಗೊಳ್ಳುತ್ತದೆ” ಎಂದು ಹಿಮಂತ ಬಿಸ್ವ ಶರ್ಮಾ ಹೇಳಿದ್ದಾರೆ.

ಏನಿದು ವಿವಾದ?:

ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಅವರಿಗೆ ಸಂಬಂಧಿಸಿದ ಪಾಸ್‌ಪೋರ್ಟ್‌ಗಳು ಮತ್ತು ವಿದೇಶಿ ಆಸ್ತಿಗಳನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕ ಪವನ್ ಖೇರಾ ಪತ್ರಿಕಾಗೋಷ್ಠಿ ನಡೆಸಿದ್ದರು. ಅವರ ಹೇಳಿಕೆಗಳಿಗೆ ಸಂಬಂಧಿಸಿದಂತೆ ಅಸ್ಸಾಂ ಪೊಲೀಸರು ಪವನ್ ಖೇರಾ ಅವರನ್ನು ಪ್ರಶ್ನಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಪವನ್ ಖೇರಾ ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ.

ಇದನ್ನೂ ಓದಿ: ನನ್ನ ಪತ್ನಿ ಮೇಲೆ ಸುಳ್ಳು ಆರೋಪ ಮಾಡ್ಬೇಡಿ ಎನ್ನುತ್ತಾ ಕಾಂಗ್ರೆಸ್ ಬಂಡವಾಳ ಬಿಚ್ಚಿಟ್ಟ ಅಸ್ಸಾಂ ಸಿಎಂ ಹಿಮಂತ ಶರ್ಮಾ

ತಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ್ದಕ್ಕೆ ಹಿಮಂತ ಬಿಸ್ವ ಶರ್ಮ ಅವರ ಪತ್ನಿ ಪೊಲೀಸ್ ದೂರು ದಾಖಲಿಸಿದ್ದಾರೆ. ಹೀಗಾಗಿ, ಪವನ್ ಖೇರಾ ವಿರುದ್ಧ ಕೇಸ್ ದಾಖಲಾಗಿದ್ದು, ಅವರನ್ನು ವಿಚಾರಣೆಗೆ ಒಳಪಡಿಸಲು ದೆಹಲಿಗೆ ಹೋದರೂ ಅಲ್ಲಿಂದಲೂ ಪವನ್ ಖೇರಾ ಹೈದರಾಬಾದ್​​ಗೆ ಓಡಿಹೋಗಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:13 pm, Tue, 7 April 26

Follow Us