ಮೋದಿ ‘ಮನ್ ಕಿ ಬಾತ್’ 134ನೇ ಸಂಚಿಕೆ: ಕ್ರೀಡಾ ತಾರೆಗಳ ಕೊಂಡಾಡಿದ ಪ್ರಧಾನಿ; ಚೋಳರ ಕಾಲದ ವಿಗ್ರಹ ವಾಪಸಾತಿಗೆ ಹೆಮ್ಮೆ
PM Mann ki baat 134th episode: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್' (Mann Ki Baat) ನ 134ನೇ ಆವೃತ್ತಿಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಇಂದಿನ (ಮೇ 31) ಸಂಚಿಕೆಯಲ್ಲಿ ಅವರು ಭಾರತದ ಕ್ರೀಡಾಪಟುಗಳ ಐತಿಹಾಸಿಕ ಸಾಧನೆಗಳು ಮತ್ತು ವಿದೇಶದಿಂದ ಮರಳಿ ತರಲಾದ ಚೋಳರ ಕಾಲದ ಪುರಾತನ ಕಲಾಕೃತಿಯ ಕುರಿತು ಹೆಮ್ಮೆಯಿಂದ ಮಾತನಾಡಿದ್ದಾರೆ.

ನವದೆಹಲಿ, ಮೇ 31: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ತಮ್ಮ ಮನ್ ಕೀ ಬಾತ್ನ 134ನೇ ಸಂಚಿಕೆಯಲ್ಲಿ (Mann Ki Baat, 13th Episode) ಭಾರತೀಯ ಕ್ರೀಡಾ ಪ್ರತಿಭೆಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿ, ಕೆಲ ಸಾಧಕರೊಂದಿಗೆ ಸಂವಾದ ಕೂಡ ನಡೆಸಿದ್ದಾರೆ. ಕ್ರೀಡಾ ಜಗತ್ತಿನಲ್ಲಿ ಹೊಸ ದಾಖಲೆಗಳನ್ನು ಬರೆದ ಭಾರತದ ಯುವ ಪ್ರತಿಭೆಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಇದರೊಂದಿಗೆ ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಮರಳಿ ದೇಶಕ್ಕೆ ತರುವಲ್ಲಿ ಯಶಸ್ವಿಯಾಗಿರುವುದನ್ನು ದೇಶದ ಜನರೊಂದಿಗೆ ಹಂಚಿಕೊಂಡರು.
ರಾಷ್ಟ್ರೀಯ ದಾಖಲೆ ಬರೆದ ಕ್ರೀಡಾಪಟುಗಳಿಗೆ ಪ್ರಧಾನಿ ಶ್ಲಾಘನೆ
ಇತ್ತೀಚಿನ ಕ್ರೀಡಾಕೂಟಗಳಲ್ಲಿ ಅದ್ಭುತ ಪ್ರದರ್ಶನ ನೀಡಿ, ಹಳೆಯ ದಾಖಲೆಗಳನ್ನು ಮುರಿದು ಹೊಸ ಇತಿಹಾಸ ಸೃಷ್ಟಿಸಿದ ನಾಲ್ಕು ಪ್ರಮುಖ ಅಥ್ಲೀಟ್‌ಗಳನ್ನು ಪ್ರಧಾನಿ ಮೋದಿ ಅವರು ವಿಶೇಷವಾಗಿ ಸ್ಮರಿಸಿದರು. ಗುರಿಂದರ್ವೀರ್ ಸಿಂಗ್, ವಿಶಾಲ್ ಕುಮಾರ್, ತೇಜಸ್ವಿನ್ ಶಂಕರ್, ದೇವ್ ಮೀನಾ ಅವರ ಸಾಧನೆಗೆ ಹೆಮ್ಮೆ ಪಟ್ಟರು. ಟ್ರ್ಯಾಕ್ ರೇಸಿಂಗ್ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ ಗುರಿಂದರ್ ವೀರ್ ಸಿಂಗ್ (Gurindervir Singh) ಅವರ ವೇಗ ಮತ್ತು ಸಮರ್ಪಣಾ ಭಾವವನ್ನು ಪ್ರಧಾನಿಗಳು ಕೊಂಡಾಡಿದರು.
ಕಠಿಣ ಪರಿಶ್ರಮದಿಂದ ಕ್ರೀಡಾ ಕ್ಷೇತ್ರದಲ್ಲಿ ದೇಶದ ಕೀರ್ತಿ ಹೆಚ್ಚಿಸಿದ ವಿಶಾಲ್ ಕುಮಾರ್ (Vishal Kumar) ಅವರ ಸಾಧನೆ ಯುವಕರಿಗೆ ಪ್ರೇರಣೆ ಎಂದರು. ಹೈಜಂಪ್ ಮತ್ತು ಡೆಕಾಥ್ಲಾನ್‌ನಲ್ಲಿ ಸತತವಾಗಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ತೇಜಸ್ವಿನ್ ಶಂಕರ್ (Tejaswin Shankar) ಅವರ ಕ್ರೀಡಾ ಮನೋಭಾವವನ್ನು ಶ್ಲಾಘಿಸಿದರು. ಪೋಲ್ ವಾಲ್ಟ್ (Pole Vault) ಸ್ಪರ್ಧೆಯಲ್ಲಿ ಹೊಸ ರಾಷ್ಟ್ರೀಯ ದಾಖಲೆ ಬರೆದ ಮಧ್ಯಪ್ರದೇಶದ ಯುವ ಪ್ರತಿಭೆ ದೇವ್ ಮೀನಾ ಶಂಕರ್ ಅವರ ಸಾಧನೆಯನ್ನು ಪ್ರಧಾನಿ ಮುಕ್ತವಾಗಿ ಜನರಿಗೆ ಪರಿಚಯಿಸಿದರು.
ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ: 8 ಮಂದಿ ಸಾವು, ಮೃತರ ಪೈಕಿ ಬೆಂಗಳೂರು ಮೂಲದ ಪ್ರವಾಸಿಗರೂ ಇರುವ ಶಂಕೆ
“ನಮ್ಮ ಯುವ ಕ್ರೀಡಾಪಟುಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಮತ್ತು ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಹಳೆಯ ದಾಖಲೆಗಳನ್ನು ಧೂಳೀಪಟ ಮಾಡುತ್ತಿದ್ದಾರೆ. ಈ ಪ್ರತಿಯೊಬ್ಬ ಸಾಧಕನ ಯಶೋಗಾಥೆಯೂ ಭಾರತದ ಕ್ರೀಡಾ ಭವಿಷ್ಯದ ಬಲವಾದ ಹೆಜ್ಜೆಯಾಗಿದೆ.” ಎಂದು ಪ್ರಧಾನಿ ಸಂತಸ ವ್ಯಕ್ತಪಡಿಸಿದರು.
ಭಾರತಕ್ಕೆ ಮರಳಿದ ಚೋಳರ ಕಾಲದ ಅಮೂಲ್ಯ ಕಲಾಕೃತಿ
ಸಾಂಸ್ಕೃತಿಕ ರಂಗದಲ್ಲಿ ಭಾರತ ಸಾಧಿಸಿರುವ ಮತ್ತೊಂದು ದೊಡ್ಡ ಯಶಸ್ಸನ್ನು ಪ್ರಕಟಿಸಿದ ಪ್ರಧಾನಿ ಮೋದಿ, ತಮಿಳುನಾಡಿನ ಪ್ರಸಿದ್ಧ ಚೋಳರ ರಾಜವಂಶದ (Chola Era) ಕಾಲಕ್ಕೆ ಸೇರಿದ ಪುರಾತನ ಮತ್ತು ಅತ್ಯಂತ ಅಪರೂಪದ ಕಲಾಕೃತಿಯನ್ನು ಯಶಸ್ವಿಯಾಗಿ ಭಾರತಕ್ಕೆ ಮರಳಿ ತರಲಾಗಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಹೆಮ್ಮೆಯ ವಿಷಯ: ಈ ಕಲಾಕೃತಿಯನ್ನು ಈ ಹಿಂದೆ ಭಾರತದಿಂದ ಕಾನೂನುಬಾಹಿರವಾಗಿ ವಿದೇಶಕ್ಕೆ ಸಾಗಿಸಲಾಗಿತ್ತು. ಜಾಗತಿಕ ರಾಜತಾಂತ್ರಿಕ ಪ್ರಯತ್ನಗಳು ಮತ್ತು ಕಟ್ಟುನಿಟ್ಟಾದ ನಿಯಮಗಳ ಮೂಲಕ ಇದನ್ನು ಈಗ ಭಾರತಕ್ಕೆ ತಾಯ್ನಾಡಿಗೆ ತರಲಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಭಾರತದಿಂದ ಕಳುವಾಗಿದ್ದ ನೂರಾರು ಪವಿತ್ರ ವಿಗ್ರಹಗಳು ಮತ್ತು ಕಲಾಕೃತಿಗಳನ್ನು ಜಗತ್ತಿನ ವಿವಿಧ ದೇಶಗಳಿಂದ ಭಾರತಕ್ಕೆ ವಾಪಸ್ ತರಲಾಗುತ್ತಿದ್ದು, ಇದು ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಗೌರವಿಸುವ ಕೆಲಸವಾಗಿದೆ ಎಂದು ಪಿಎಂ ಮೋದಿ ಹೇಳಿದರು.
ಇದನ್ನೂ ಓದಿ: ಜರ್ಮನಿಯಲ್ಲಿ ಭಾರತೀಯ ಸಂಘಟನೆಗಳ ಹೊಸ ಒಕ್ಕೂಟ; ಎರಡು ದೇಶಗಳ ಬಾಂಧವ್ಯ ಹೆಚ್ಚಿಸಲು ಒಗ್ಗೂಡಿದ ಭಾರತೀಯರು
ಬೇಸಿಗೆಯ ಬಿಸಿಗೆ ತಂಪೆರೆಯುವ ಪಾನಕ ವೈವಿಧ್ಯಗಳ ಪರಿಚಯ ತಿಳಿಸಿದ ಮೋದಿ
ಮನ್ ಕಿ ಬಾತ್ನ 134ನೇ ಎಪಿಸೋಡ್ನಲ್ಲಿ ಪಿಎಂ ಮೋದಿ ಅವರು ಬೇಸಿಗೆಯ ಬಿಸಿಲನ್ನು ನೀಗಿಸಬಲ್ಲಂತಹ ದೇಸೀ ತಂಪು ಪಾನೀಯಗಳನ್ನು ಪ್ರಸ್ತಾಪಿಸಿದರು. ಪಾನಕ, ಲಸ್ಸಿ, ಆಮ್ ರಸ್ ಇತ್ಯಾದಿ ಪಾನೀಯಗಳನ್ನು ಪ್ರಧಾನಿಗಳು ಉದಾಹರಿಸಿದರು. ಈ ದೇಸೀ ಪಾನೀಯಗಳು ಯಾವುದೇ ದೊಡ್ಡ ಬ್ರ್ಯಾಂಡ್ ಹೊಂದಿಲ್ಲ. ಬದಲಾಗಿ ತಲೆತಲೆಮಾರುಗಳಿಂದ ತಯಾರಾಗುತ್ತಾ ಬಂದಿವೆ ಎಂದರು. ಹಾಗೆಯೇ, ಭಾರತದಲ್ಲಿರುವ ಮಾವಿನ ವೈವಿಧ್ಯತೆಯನ್ನೂ ಮೋದಿ ತಿಳಿಸಿದರು. ತೋತಾಪುರಿ, ಮಲಗೋಬಾ ಇತ್ಯಾದಿ ತಳಿಯ ಮಾವನ್ನೂ ಉದಾಹರಿಸಿದರು.
ಜಾಗತಿಕ ವೇದಿಕೆಯಲ್ಲಿ ಭಾರತದ ಪ್ರಭಾವ
ಈ ಬಾರಿಯ ಮನ್ ಕಿ ಬಾತ್‌ನಲ್ಲಿ ಪ್ರಧಾನಿಯವರು, ಭಾರತೀಯ ಯುವಶಕ್ತಿ ತಂತ್ರಜ್ಞಾನ, ಕ್ರೀಡೆ ಮತ್ತು ನಾವೀನ್ಯತೆಗಳಲ್ಲಿ ಜಾಗತಿಕವಾಗಿ ಹೇಗೆ ಮುಂಚೂಣಿಗೆ ಬರುತ್ತಿದೆ ಎಂಬುದನ್ನು ಒತ್ತಿ ಹೇಳಿದರು. ನಮ್ಮ ದೇಶದ ಇತಿಹಾಸ, ಸಂಸ್ಕೃತಿ ಮತ್ತು ಕ್ರೀಡೆಯನ್ನು ಒಟ್ಟಿಗೆ ಕೊಂಡೊಯ್ಯುವ ಮೂಲಕ ದೇಶವು ‘ವಿಕಸಿತ ಭಾರತ’ದತ್ತ ಮುನ್ನಡೆಯುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.
ಉಭಯ ಕ್ರೀಡಾ ಸಾಧನೆಗಳು ಹಾಗೂ ಸಾಂಸ್ಕೃತಿಕ ಮೌಲ್ಯಗಳ ಮರುಸ್ಥಾಪನೆಯು 140 ಕೋಟಿ ಭಾರತೀಯರಲ್ಲಿ ಹೊಸ ಚೈತನ್ಯ ಮತ್ತು ಹೆಮ್ಮೆಯನ್ನು ಮೂಡಿಸಿದೆ ಎಂದು ಪ್ರಧಾನಿ ಮೋದಿ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ





