ಪ್ರವಾಹ ಪೀಡಿತ ಹಿಮಾಚಲ ಪ್ರದೇಶ, ಪಂಜಾಬ್‌ನಲ್ಲಿ ನಾಳೆ ಪ್ರಧಾನಿ ಮೋದಿ ವೈಮಾನಿಕ ಸಮೀಕ್ಷೆ
ಮಳೆಯಿಂದ ಉಂಟಾದ ಹಾನಿಯನ್ನು ನಿರ್ಣಯಿಸಲು ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ 9ರಂದು ಹಿಮಾಚಲ ಪ್ರದೇಶ, ಪಂಜಾಬ್‌ಗೆ ಭೇಟಿ ನೀಡಲಿದ್ದಾರೆ. ಎರಡೂ ರಾಜ್ಯಗಳು ಪ್ರವಾಹದಿಂದ ತೀವ್ರ ಹಾನಿಯನ್ನು ಎದುರಿಸುತ್ತಿವೆ. ಹಿಮಾಚಲ ಪ್ರದೇಶದಲ್ಲಿ 355 ಸಾವುನೋವುಗಳು ವರದಿಯಾಗಿವೆ. ಪಂಜಾಬ್‌ನಲ್ಲಿ ವ್ಯಾಪಕ ಪ್ರವಾಹ ಉಂಟಾಗಿದ್ದು, 1.75 ಲಕ್ಷ ಎಕರೆ ಕೃಷಿಭೂಮಿ ಮೇಲೆ ಪರಿಣಾಮ ಬೀರಿದೆ.

ನವದೆಹಲಿ, ಸೆಪ್ಟೆಂಬರ್ 8: ಪ್ರಧಾನಿ ನರೇಂದ್ರ ಮೋದಿ (PM Modi) ನಾಳೆ (ಸೆಪ್ಟೆಂಬರ್ 8) ಹಿಮಾಚಲ ಪ್ರದೇಶ ಮತ್ತು ಪಂಜಾಬ್‌ಗೆ ಭೇಟಿ ನೀಡಲಿದ್ದಾರೆ. ಎರಡೂ ರಾಜ್ಯಗಳಲ್ಲಿ ನಡೆಯುತ್ತಿರುವ ಪ್ರವಾಹ ಮತ್ತು ಭೂಕುಸಿತದ ಬಿಕ್ಕಟ್ಟಿನ ಬಗ್ಗೆ ಮೋದಿ ನೇರ ಪರಿಶೀಲನೆ ನಡೆಸಲಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಅಧಿಕಾರಿಗಳು ತಮ್ಮ ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸುತ್ತಿರುವುದರಿಂದ ಪರಿಹಾರ ಮತ್ತು ಪುನರ್ವಸತಿ ಪ್ರಯತ್ನಗಳನ್ನು ಮೇಲ್ವಿಚಾರಣೆ ಮಾಡುವುದು ಈ ಭೇಟಿಯ ಗುರಿಯಾಗಿದೆ.
ಹಿಮಾಚಲ ಪ್ರದೇಶದ ಪ್ರವಾಹ ಮತ್ತು ಭೂಕುಸಿತ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆಯೊಂದಿಗೆ ಪ್ರಧಾನಿ ಮೋದಿ ತಮ್ಮ ಭೇಟಿಯನ್ನು ಪ್ರಾರಂಭಿಸಲಿದ್ದಾರೆ. ನಾಳೆ ಮಧ್ಯಾಹ್ನ 1.30ರ ಸುಮಾರಿಗೆ ಅವರು ಕಾಂಗ್ರಾಗೆ ಆಗಮಿಸಲಿದ್ದಾರೆ. ಅಲ್ಲಿ ಅವರು ರಾಜ್ಯ ಅಧಿಕಾರಿಗಳನ್ನು ಭೇಟಿ ಮಾಡಿ ಪರಿಸ್ಥಿತಿಯನ್ನು ನಿರ್ಣಯಿಸಲು ಉನ್ನತ ಮಟ್ಟದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಕಾಂಗ್ರಾದಲ್ಲಿ ತಮ್ಮ ಭೇಟಿಯ ಸಮಯದಲ್ಲಿ ಮೋದಿ ಪ್ರವಾಹ ಪೀಡಿತ ನಿವಾಸಿಗಳು ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (NDRF), ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (SDRF) ಮತ್ತು ಆಪ್ಡಾ ಮಿತ್ರ ತಂಡದ ಸಿಬ್ಬಂದಿಯೊಂದಿಗೆ ಸಂವಾದ ನಡೆಸಲಿದ್ದಾರೆ.
ಇದನ್ನೂ ಓದಿ: ಅಪಾಯದ ಮಟ್ಟ ಮೀರಿದ ಜಮ್ಮು-ಕಾಶ್ಮೀರದ ಝೀಲಂ ನದಿ, ಪ್ರವಾಹದ ಎಚ್ಚರಿಕೆ
ನಾಳೆ ಮಧ್ಯಾಹ್ನದ ನಂತರ, ಪ್ರಧಾನಿ ಮೋದಿ ಸುಮಾರು 3 ಗಂಟೆಗೆ ಪಂಜಾಬ್‌ನ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ನಂತರ ಅವರು ಗುರುದಾಸ್ಪುರಕ್ಕೆ ತೆರಳಲಿದ್ದಾರೆ. ಸಂಜೆ 4.15ರ ಸುಮಾರಿಗೆ ಆಗಮಿಸಿ, ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ. ಗುರುದಾಸ್ಪುರದಲ್ಲಿ ಮೋದಿ ಪ್ರವಾಹ ಸಂತ್ರಸ್ತರು ಮತ್ತು ಪರಿಹಾರ ತಂಡಗಳೊಂದಿಗೆ ಸಭೆ ನಡೆಸಲಿದ್ದಾರೆ.
ಹಿಮಾಚಲ ಪ್ರದೇಶವು ತೀವ್ರವಾಗಿ ಪ್ರವಾಹ ಬಾಧಿತವಾಗಿದ್ದು, ಜೂನ್ 20ರಿಂದ 355 ಸಾವುನೋವುಗಳು ವರದಿಯಾಗಿವೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (SDMA) ತಿಳಿಸಿದೆ. ರಾಜ್ಯದಲ್ಲಿ ತೀವ್ರವಾದ ಮಾನ್ಸೂನ್ ಮಳೆಯಾಗಿದ್ದು, ಇದು ಭೂಕುಸಿತಗಳು ಮತ್ತು ಪ್ರಮುಖ ಮೂಲಸೌಕರ್ಯಗಳ ವ್ಯಾಪಕ ನಾಶಕ್ಕೆ ಕಾರಣವಾಯಿತು.
ಇದನ್ನೂ ಓದಿ: ಅಪಾಯದ ಮಟ್ಟ ಮೀರಿದ ಯಮುನಾ ನದಿ; ಪ್ರವಾಹದ ಡ್ರೋನ್ ವಿಡಿಯೋ ಇಲ್ಲಿದೆ
ಹಾಗೇ, ಪಂಜಾಬ್ ವ್ಯಾಪಕ ಪ್ರವಾಹವನ್ನು ಎದುರಿಸುತ್ತಿದೆ, ನದಿಗಳು ತುಂಬಿ ಹರಿಯುತ್ತಿವೆ. ಬಿಯಾಸ್, ಸಟ್ಲುಜ್, ರಾವಿ ಮತ್ತು ಘಗ್ಗರ್ ಸೇರಿದಂತೆ ಪ್ರಮುಖ ನದಿಗಳು ಅಪಾಯದ ಮಟ್ಟಕ್ಕಿಂತ ಹೆಚ್ಚಿರುವುದರಿಂದ ಪಂಜಾಬ್ ಪ್ರಸ್ತುತ ಕಟ್ಟೆಚ್ಚರದಲ್ಲಿದೆ. ಭಖ್ರಾ, ಪಾಂಗ್ ಮತ್ತು ರಂಜಿತ್ ಸಾಗರ್‌ನಂತಹ ಪ್ರಮುಖ ಅಣೆಕಟ್ಟುಗಳಿಂದ ನಿಯಂತ್ರಿತ ನೀರಿನ ಬಿಡುಗಡೆಗಳು ಪ್ರವಾಹವನ್ನು ಉಲ್ಬಣಗೊಳಿಸಿವೆ. ಎಲ್ಲಾ 23 ಜಿಲ್ಲೆಗಳಲ್ಲಿ 1,650ಕ್ಕೂ ಹೆಚ್ಚು ಹಳ್ಳಿಗಳು ಮುಳುಗಿದ್ದು, 1.75 ಲಕ್ಷ ಎಕರೆಗಳಿಗೂ ಹೆಚ್ಚು ಕೃಷಿಭೂಮಿಯ ಮೇಲೆ ಪರಿಣಾಮ ಬೀರಿವೆ ಮತ್ತು ಭತ್ತದ ಬೆಳೆಗಳು ನಾಶವಾಗಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:18 pm, Mon, 8 September 25




