10 ವರ್ಷಗಳಲ್ಲಿ ಕಚ್ಚಾ ಉಕ್ಕು ಉತ್ಪಾದನೆ ದ್ವಿಗುಣ: ಪ್ರಧಾನಿ ಮೋದಿ
ದೇಶದ ಉಕ್ಕು ಉದ್ಯಮ ವಿಶ್ವದಲ್ಲೇ ಎರಡನೇ ಅತಿದೊಡ್ಡ ಉಕ್ಕು ಉದ್ಯಮವಾಗಿ ಹೊರಹೊಮ್ಮಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸೂರತ್: ಮುಂದಿನ 10 ವರ್ಷಗಳಲ್ಲಿ ಕಚ್ಚಾ ಉಕ್ಕು ಉತ್ಪಾದನೆಯನ್ನು ದ್ವಿಗುಣಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದರು. ಸದ್ಯ ದೇಶದಲ್ಲಿ ವಾರ್ಷಿಕ 154 ದಶಲಕ್ಷ ಟನ್ ಕಚ್ಚಾ ಉಕ್ಕು (Crude Steel) ಉತ್ಪಾದಿಸಲಾಗುತ್ತಿದೆ. ಇದನ್ನು ಮುಂದಿನ 9 ಅಥವಾ 10 ವರ್ಷಗಳಲ್ಲಿ 300 ದಶಲಕ್ಷ ಟನ್ಗೆ ಹೆಚ್ಚಿಸುವ ಗುರಿ ಹಾಕಿಕೊಳ್ಳಲಾಗಿದೆ. ದೇಶೀಯ ಉತ್ಪಾದನಾ ಸಾಮರ್ಥ್ಯ ವೃದ್ಧಿಸಬೇಕಿದೆ ಎಂದು ಪ್ರಧಾನಿ ಹೇಳಿದರು.
ಗುಜರಾತ್ನ ಸೂರತ್ ಜಿಲ್ಲೆಯ ಹಾಜಿರಾದಲ್ಲಿ ಆರ್ಸೆಲರ್-ಮಿತ್ತಲ್ ನಿಪ್ಪಾನ್ ಸ್ಟೀಲ್ ಇಂಡಿಯಾದ (ArcelorMittal Nippon Steel India) ಪ್ರಮುಖ ಘಟಕಕ್ಕೆ ಶುಕ್ರವಾರ ಭೂಮಿ ಪೂಜೆ ನೆರವೇರಿತು. ಈ ಕಾರ್ಯಕ್ರಮದಲ್ಲಿ ವರ್ಚುವಲ್ ಆಗಿ ಭಾಗವಹಿಸಿದ ಮೋದಿ, ಅತಿಥಿಗಳನ್ನು ಉದ್ದೇಶಿಸಿ ಮಾತನಾಡಿದರು.
‘ರಕ್ಷಣಾ ಕ್ಷೇತ್ರಕ್ಕೆ ಬೇಕಿದ್ದ ಉನ್ನದ ದರ್ಜೆಯ ಗುಣಮಟ್ಟದ ಉಕ್ಕನ್ನು ಹಿಂದೆ ಭಾರತವು ಆಮದು ಮಾಡಿಕೊಳ್ಳುತ್ತಿತ್ತು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಐಎನ್ಎಸ್ ವಿಕ್ರಾಂತ್ (ಮೊದಲ ದೇಶೀಯ ವಿಮಾನ ವಾಹಕ ಯುದ್ಧನೌಕೆ) ಯುದ್ಧನೌಕೆಯ ತಯಾರಿಯಲ್ಲಿ ದೇಶದಲ್ಲೇ ಉತ್ಪಾದನೆಯಾದ ಉಕ್ಕು ಬಳಸಲಾಗಿದೆ’ ಎಂದು ಮೋದಿ ತಿಳಿಸಿದರು.
ಎರಡನೇ ಸ್ಥಾನದಲ್ಲಿ ಭಾರತದ ಉಕ್ಕು ಉದ್ಯಮ
ಎಲ್ಲರ ಪ್ರಯತ್ನದಿಂದಾಗಿ ಕಳೆದ ಎಂಟು ವರ್ಷಗಳಲ್ಲಿ ದೇಶದ ಉಕ್ಕು ಉದ್ಯಮ ವಿಶ್ವದಲ್ಲೇ ಎರಡನೇ ಅತಿದೊಡ್ಡ ಉಕ್ಕು ಉದ್ಯಮವಾಗಿ ಹೊರಹೊಮ್ಮಿದೆ ಎಂದು ಪ್ರಧಾನಿ ಹೇಳಿದರು.
ಇದನ್ನೂ ಓದಿ: ಪೊಲೀಸರಿಗೆ ಒಂದು ರಾಷ್ಟ್ರ, ಒಂದು ಸಮವಸ್ತ್ರ ವಿಚಾರ ಪ್ರಸ್ತಾಪಿಸಿದ ನರೇಂದ್ರ ಮೋದಿ
ಐಎನ್ಎಸ್ ವಿಕ್ರಾಂತ್ ಯುದ್ಧನೌಕೆಯನ್ನು ಕಳೆದ ತಿಂಗಳು ಮೋದಿ ಲೋಕಾರ್ಪಣೆಗೊಳಿಸಿದ್ದರು. ಬಳಿಕ ಮಾತನಾಡಿದ್ದ ಅವರು, ಈ ಯುದ್ಧನೌಕೆಯ ನಿರ್ಮಾಣದಲ್ಲಿ ಉಕ್ಕು ಸೇರಿದಂತೆ ಕಚ್ಚಾವಸ್ತುಗಳು ಹಾಗೂ ಬಿಡಿಭಾಗಗಳನ್ನು ಬಳಸುವಾಗಲೂ ದೇಶೀಯ ಕಂಪನಿಗಳಿಗೇ ಆದ್ಯತೆ ನೀಡಲಾಗಿದೆ ಎಂದು ಹೇಳಿದ್ದರು.
ಕಳೆದ ಕೆಲವು ವರ್ಷಗಳಿಂದಲೂ ಮೇಕ್ ಇನ್ ಇಂಡಿಯಾ ಯೋಜನೆಯಡಿ ಕೇಂದ್ರ ಸರ್ಕಾರ ಹಲವು ಉಪಕ್ರಮಗಳನ್ನು ಕೈಗೊಳ್ಳುತ್ತಿದ್ದು, ದೇಶೀಯ ಉತ್ಪಾದನೆಗೇ ಮೊದಲ ಆದ್ಯತೆ ನೀಡುತ್ತಿದೆ. ರಕ್ಷಣಾ ಕ್ಷೇತ್ರ ಸೇರಿದಂತೆ ಇತರ ಕ್ಷೇತ್ರಗಳಲ್ಲಿ ಹಾಗೂ ಪ್ರಮುಖ ಉದ್ದಿಮೆಗಳಲ್ಲಿ ಸ್ವಾವಲಂಬನೆ ಸಾಧಿಸುವುದು ಸರ್ಕಾರದ ಪ್ರಮುಖ ಗುರಿಯಾಗಿದೆ. ಇದನ್ನು ಹಲವು ಕಾರ್ಯಕ್ರಮಗಳ ಸಂದರ್ಭದಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ