ದೆಹಲಿ, ಫೆಬ್ರವರಿ 26: ಟಿವಿ9 ಆಯೋಜಿಸಿದ ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’ (WITT) ಶೃಂಗಸಭೆ ನಡೆಯುತ್ತಿದೆ. 2ನೇ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಂಡಿದ್ದರು. ಟಿವಿ9 ಎಂಡಿ ಮತ್ತು ಸಿಇಒ ಬರುಣ್ ದಾಸ್ ಅವರು ದೇಶ ವಿದೇಶಗಳ ಗಣ್ಯರನ್ನು ಸ್ವಾಗತಿಸಿದರು. ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಕಳೆದ 10 ವರ್ಷಗಳಲ್ಲಿ ಭಾರತ ಸಾಕಷ್ಟು ಬದಲಾವಣೆ ಆಗಿದೆ. ಅದರಲ್ಲಿಯೂ ಭ್ರಷ್ಟಾಚಾರ, ಸಾವಿರಾರು ಕೋಟಿ ರೂ. ಹಗರಣಗಳು, ಸ್ವಜನಪಕ್ಷಪಾತ, ಇವೆಲ್ಲವು ದೇಶದ ಬುನಾದಿಯನ್ನು ಹಾಳು ಮಾಡಿತ್ತು. ಕಳೆದ 10 ವರ್ಷಗಳಲ್ಲಿ ನಾವು ದೇಶವನ್ನು ಆ ಭಯಾನಕ ಪರಿಸ್ಥಿತಿಯಿಂದ ಹೊರತಂದಿದ್ದೇವೆ ಎಂದು ಹೇಳಿದ್ದಾರೆ.
ಈ ಬದಲಾವಣೆಯು ಮನಸ್ಥಿತಿಗೆ ಸಂಬಂಧಿಸಿದೆ. ಈ ಬದಲಾವಣೆಯು ವಿಶ್ವಾಸ, ನಂಬಿಕೆ ಮತ್ತು ಉತ್ತಮ ಆಡಳಿತವಾಗಿದೆ. ಮನ್ ಕೆ ಹರೇ ಹರ್ ಹೈ, ಮನ್ ಕೆ ಜೀತ್ ಜೀತ್ ಎಂಬ ಹಳೆಯ ಮಾತನ್ನು ಈ ವೇಳೆ ಅವರು ನೆನಪು ಮಾಡಿಕೊಂಡರು.
ಇದನ್ನೂ ಓದಿ: ಭಾರತವು ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆ ದೇಶವಾಗಿದೆ, ಪ್ರತಿದಿನವು ನವಭಾರತದ ದರ್ಶನವಾಗುತ್ತಿದೆ: ಪ್ರಧಾನಿ ಮೋದಿ
ಸೋತ ಮನಸ್ಸಿನಿಂದ ಗೆಲ್ಲುವುದು ಕಷ್ಟ. ಕಳೆದ 10 ವರ್ಷಗಳಲ್ಲಿ ಮನಸ್ಸಿನ ಬದಲಾವಣೆಯು ನಿಜಕ್ಕೂ ಅದ್ಭುತವಾಗಿದೆ. ದಶಕಗಳ ಕಾಲ ಸರ್ಕಾರವನ್ನು ನಡೆಸುತ್ತಿರುವವರಿಗೆ ಭಾರತೀಯರ ಸಾಮರ್ಥ್ಯದ ಮೇಲೆ ನಂಬಿಕೆಯೇ ಇರಲಿಲ್ಲ. ಅವರು ದೇಶದ ಜನರ ಸಾಮರ್ಥ್ಯವನ್ನು ಕಡೆಗಣಿಸಿದ್ದರು.
ದೇಶದ ನಾಯಕತ್ವವು ಹತಾಶೆಯಿಂದ ತುಂಬಿರುವಾಗ ಯಾವುದೇ ಭರವಸೆ ಇರಲಾರದು. ಹಾಗಾಗಿ ದೇಶ ಹೀಗೆಯೇ ಮುಂದುವರಿಯುತ್ತದೆ ಎಂದು ದೇಶದ ಬಹುತೇಕ ಜನರು ಒಪ್ಪಿಕೊಂಡರು.
ಇದನ್ನೂ ಓದಿ: 10 ವರ್ಷದಲ್ಲಿ ಭಾರತದ ಮೇಲೆ ಜನರ ನಂಬಿಕೆ ಹೆಚ್ಚಾಗಿದೆ, ಅದಕ್ಕೆ ನಮ್ಮ ಸರ್ಕಾರವೇ ಕಾರಣ ಎಂದ ಮೋದಿ
21ನೇ ಶತಮಾನದಲ್ಲಿ ಭಾರತ ಸಣ್ಣ ಯೋಚನೆ ಮಾಡೋದನ್ನೇ ಬಿಟ್ಟಿದೆ. ಭಾರತದ ಸಾಧನೆ ನೋಡಿ ಇಡೀ ಜಗತ್ತೇ ನಿಬ್ಬೆರಗಾಗಿದೆ. ಜಗತ್ತು ಭಾರತದೊಂದಿಗೆ ಸಾಗುವಾಗ ತನ್ನ ಲಾಭ ಏನು ಅಂತ ನೋಡುತ್ತಿದೆ. ನಮ್ಮ ಸರ್ಕಾರ 10 ವರ್ಷದಲ್ಲಿ 640 ಬಿಲಿಯನ್ ಡಾಲರ್ನಷ್ಟು ವಿದೇಶಿ ನೇರ ಬಂಡವಾಳವನ್ನ ಭಾರತಕ್ಕೆ ತಂದಿದೆ ಎಂದರು.
ಇನ್ನು ಭಾರತದಲ್ಲಿ ಪ್ರತಿದಿನ 55 ಸಾವಿರ ಜನರನ್ನು ಬಡತನ ರೇಖೆಯಿಂದ ಹೊರಗೆ ತಂದಿದ್ದೇವೆ. 25ಕೋಟಿ ಜನರನ್ನು ಬಡತನ ರೇಖೆಯಿಂದ ಮೇಲೆ ಎತ್ತುವ ಕಾರ್ಯ ಮಾಡಿದ್ದೇವೆ. ಭಾರತದಲ್ಲಿ ಪ್ರತಿದಿನ ಅಭಿವೃದ್ಧಿ ಕಾರ್ಯಗಳು ನಡೆಯುತ್ತಲೇ ಅಂತ ಪ್ರಧಾನಿ ಮೋದಿ ಗರ್ವದಿಂದ ಹೇಳಿಕೊಂಡರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.