
ನವದೆಹಲಿ, (ಜುಲೈ 26): ಕೇಂದ್ರ ನೂತನ ಶಿಕ್ಷಣ ಸಚಿವರಾಗಿ ಬಿಜೆಪಿ ಹಿರಿಯ ನಾಯಕ ಪ್ರಲ್ಹಾದ ಜೋಶಿ (Pralhad Joshi) ನವದೆಹಲಿಯ ಕರ್ತವ್ಯ ಭವನದಲ್ಲಿ ಇಂದು (ಜುಲೈ 26) ಸರಳವಾಗಿ ಅಧಿಕಾರ ಸ್ವೀಕರಿಸಿದರು. ಬಳಿಕ ಶಿಕ್ಷಣ ಸಚಿವಾಲಯದ (Education Ministry) ಹಿರಿಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿ, ಇಲಾಖೆಗೆ ಸಂಬಂಧಪಟ್ಟಂತೆ ಸಹಜ ಚರ್ಚೆ ನಡೆಸಿದರು. ಈ ವೇಳೆ ಇತ್ತೀಚಿನ ಬೆಳವಣಿಗೆಗಳ ಕುರಿತೂ ಗಹನ ಚರ್ಚೆ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ 12 ವರ್ಷದ ಸಮರ್ಥ ಆಡಳಿತ ಹಾಗೂ ಧರ್ಮೇಂದ್ರ ಪ್ರಧಾನ್ ಅವರ ಸಾರಥ್ಯದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗಳಾಗಿವೆ. ದೇಶಾದ್ಯಂತ ಶೈಕ್ಷಣಿಕ ಸುಧಾರಣೆಗೆ ಹೊಸ ಶಿಕ್ಷಣ ನೀತಿಯಡಿ ಕ್ರಾಂತಿಕಾರಿ ಹೆಜ್ಜೆ ಇರಿಸಲಾಗಿದೆ. ಮುಂದೆಯೂ ವಿದ್ಯಾರ್ಥಿಗಳ ಅಭ್ಯುದಯಕ್ಕೆ ಒತ್ತು ನೀಡಿ, ಪಾರದರ್ಶಕವಾಗಿ ಮತ್ತಷ್ಟು ವೇಗದ ಹೆಜ್ಜೆಯಿಡೋಣವೆಂದು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ನನ್ನ ಮೇಲೆ ವಿಶ್ವಾಸವಿರಿಸಿ ಶಿಕ್ಷಣ ಇಲಾಖೆ ಹೆಚ್ಚುವರಿ ಜವಾಬ್ದಾರಿ ವಹಿಸಿದ್ದಾರೆ. ಇದಕ್ಕಾಗಿ ಅವರಿಗೆ ಧನ್ಯವಾದಗಳು ಎಂದ ಜೋಶಿ, ಇದೇ ವೇಳೆ ಸಚಿವಾಲಯದ ಉನ್ನತ ಅಧಿಕಾರಿಗಳ ಸಹಕಾರ ಕೋರಿದರು.
ಪ್ರಸ್ತುತ ಎದುರಾಗಿರುವ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ಪ್ರಧಾನಿ ಅವರು ಫಾಸ್ಟ್ ಟ್ರ್ಯಾಕ್ ಕೋರ್ಟ್, 10 ವರ್ಷ ಸಜೆ, ಕೋಟ್ಯಂತರ ರೂಪಾಯಿ ದಂಡದಂಥ ಕಠಿಣ ಕಾನೂನು ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದರು.
ದೇಶದ ಶೈಕ್ಷಣಿಕ ವ್ಯವಸ್ಥೆ ಸುಧಾರಣೆ, ಸುರಕ್ಷತೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇನ್ನೂ ಹೆಚ್ಚಿನ ಪಾರದರ್ಶಕತೆಯತ್ತ ನಿಗಾ ವಹಿಸೋಣ ಮತ್ತು ಯಾವುದೇ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ ಆಗದಂತೆ ಕಟ್ಟೆಚ್ಚರ ವಹಿಸಬೇಕು ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತ್ವರಿತ ಫಲಿತಾಂಶ ಪ್ರಕಟಣೆ, ಮೂಲಸೌಕರ್ಯಕ್ಕೆ ಆದ್ಯತೆ ನೀಡಿ ಕಾರ್ಯ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಕೇಂದ್ರದ ಶಿಕ್ಷಣ ರಾಜ್ಯ ಸಚಿವರಾದ ಜಯಂತ್ ಚೌಧರಿ ಮತ್ತು ಶಿಕ್ಷಣ ಸಚಿವಾಲಯದ ಕಾರ್ಯದರ್ಶಿಗಳು ಹಾಗೂ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.