
ನವದೆಹಲಿ, ನವೆಂಬರ್ 28: ಸಂಸತ್ತಿನ ವಿಶೇಷ ಅಧಿವೇಶನಕ್ಕೂ ಮುನ್ನ ಕ್ಷೇತ್ರ ಪುನರ್ವಿಂಗಡಣೆ ವಿಧೇಯಕವನ್ನು ಪರಿಗಣಿಸುವಂತೆ ಲೋಕಸಭೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಶಿಫಾರಸು ಮಾಡಿದ್ದಾರೆ. ನವೆಂಬರ್ 30ರಿಂದ ಡಿಸೆಂಬರ್ 3ರವರೆಗೆ ನಡೆಯಲಿರುವ ಸಂಸತ್ತಿನ 4 ದಿನಗಳ ವಿಶೇಷ ಅಧಿವೇಶನಕ್ಕೂ ಮುನ್ನ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂವಿಧಾನದ 117(3)ನೇ ವಿಧಿಯ ಅಡಿಯಲ್ಲಿ ‘ಕ್ಷೇತ್ರ ಪುನರ್ವಿಂಗಡಣೆ (ಎರಡನೇ) ವಿಧೇಯಕ, 2026’ ಅನ್ನು ಪರಿಗಣಿಸುವಂತೆ ಲೋಕಸಭೆಗೆ ಇಂದು ಅಧಿಕೃತ ಶಿಫಾರಸು ಮಾಡಿದ್ದಾರೆ. ಈ ಮೂಲಕ ಪರಿಷ್ಕೃತ ಕ್ಷೇತ್ರ ಪುನರ್ವಿಂಗಡಣೆ ವಿಧೇಯಕವನ್ನು ಸಂಸತ್ತಿನಲ್ಲಿ ಮಂಡಿಸಲು ಪ್ರಮುಖ ಸಾಂವಿಧಾನಿಕ ಮತ್ತು ಕಾರ್ಯವಿಧಾನದ ಅಗತ್ಯವನ್ನು ಪೂರ್ಣಗೊಳಿಸಿದಂತಾಗಿದೆ.
ಯಾವುದೇ ವಿಧೇಯಕವು ಜಾರಿಗೆ ಬಂದಾಗ ಭಾರತದ ಸಂಚಿತ ನಿಧಿಯಿಂದ ವೆಚ್ಚವನ್ನು ಒಳಗೊಂಡಿದ್ದರೆ, ಸಂಸತ್ತಿನ ಉಭಯ ಸದನಗಳಲ್ಲಿ ಅದನ್ನು ಅಂಗೀಕರಿಸುವ ಮೊದಲು ರಾಷ್ಟ್ರಪತಿಗಳ ಪೂರ್ವ ಶಿಫಾರಸು ಪಡೆಯುವುದು ಕಡ್ಡಾಯವಾಗಿದೆ.
ಇದನ್ನೂ ಓದಿ: ‘ಮಹಿಳೆಯರ ದಶಕಗಳ ಕಾಯುವಿಕೆ ಅಂತ್ಯಗೊಳ್ಳಲಿದೆ’; ಕ್ಷೇತ್ರ ಮರುವಿಂಗಡನೆ ಬೆಂಬಲಿಸಲು ವಿಪಕ್ಷಗಳಿಗೆ ಅಮಿತ್ ಶಾ ಮನವಿ
ಪ್ರಸ್ತಾವಿತ ಬದಲಾವಣೆಗಳ ಅಡಿಯಲ್ಲಿ, ಲೋಕಸಭೆಯು ಗರಿಷ್ಠ 850 ಸ್ಥಾನಗಳನ್ನು ಹೊಂದಬಹುದು. ಇವುಗಳಲ್ಲಿ ಗರಿಷ್ಠ 815 ಸ್ಥಾನಗಳು ರಾಜ್ಯಗಳನ್ನು ಮತ್ತು 355 ಸ್ಥಾನಗಳು ಕೇಂದ್ರಾಡಳಿತ ಪ್ರದೇಶಗಳನ್ನು ಪ್ರತಿನಿಧಿಸಲಿವೆ. ಈ ಸಂವಿಧಾನ ತಿದ್ದುಪಡಿಯು 2051ರವರೆಗೆ ಲೋಕಸಭೆಯಲ್ಲಿ ಪ್ರತಿ ರಾಜ್ಯದ ಪ್ರಸ್ತುತ ಸ್ಥಾನಗಳ ಪಾಲನ್ನು (ಅನುಪಾತವನ್ನು) ಹಾಗೆಯೇ ಉಳಿಸಿಕೊಳ್ಳಲಿದೆ.
ಮಹಿಳಾ ಮೀಸಲಾತಿ ಜಾರಿ:
2029ರ ಲೋಕಸಭಾ ಚುನಾವಣೆಗೂ ಮುನ್ನವೇ ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿಯನ್ನು ಜಾರಿಗೊಳಿಸಲು ಈ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯು ದಾರಿ ಮಾಡಿಕೊಡಲಿದೆ. ಸೋಮವಾರದಿಂದ (ನವೆಂಬರ್ 30) ಆರಂಭವಾಗಲಿರುವ ವಿಶೇಷ ಅಧಿವೇಶನದಲ್ಲಿ ಈ ಎರಡೂ ವಿಧೇಯಕಗಳು ಮಂಡನೆಯಾಗಲಿವೆ. ಸಂವಿಧಾನ ತಿದ್ದುಪಡಿ ವಿಧೇಯಕವಾಗಿರುವುದರಿಂದ, ಇದು ಅಂಗೀಕಾರಗೊಳ್ಳಲು ಸಂಸತ್ತಿನ ಉಭಯ ಸದನಗಳಲ್ಲಿ ಮೂರನೇ ಎರಡರಷ್ಟು ವಿಶೇಷ ಬಹುಮತದ ಜೊತೆಗೆ ದೇಶದ ಕನಿಷ್ಠ ಅರ್ಧದಷ್ಟು ರಾಜ್ಯಗಳ ವಿಧಾನಸಭೆಗಳ ಅನುಮೋದನೆಯೂ ಅಗತ್ಯವಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ