Bank Recruitment 2026: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲು ಸುವರ್ಣವಕಾಶ; ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ (PSB) ಕೃತಕ ಬುದ್ಧಿಮತ್ತೆ (AI) ಸಂಬಂಧಿತ ತಾಂತ್ರಿಕ ವಿಭಾಗಗಳಲ್ಲಿ ವ್ಯವಸ್ಥಾಪಕ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಕರೆ ನೀಡಿದೆ. ಎಂಜಿನಿಯರಿಂಗ್ ಪದವೀಧರರಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ AI ಮತ್ತು ತಂತ್ರಜ್ಞಾನದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಇದೊಂದು ಸುವರ್ಣಾವಕಾಶ. ಆನ್‌ಲೈನ್ ಅರ್ಜಿ ಸಲ್ಲಿಸಲು ಜೂನ್ 28 ಕೊನೆಯ ದಿನಾಂಕ. ಅರ್ಹತೆ, ವಯೋಮಿತಿ ಮತ್ತು ಆಯ್ಕೆ ವಿಧಾನದ ಕುರಿತು ವಿವರಗಳು ಲಭ್ಯ.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಸುವರ್ಣ ಅವಕಾಶ ಇಲ್ಲಿದೆ. ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್ ಆದ ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ (PSB), ಕೃತಕ ಬುದ್ಧಿಮತ್ತೆ (AI) ಸಂಬಂಧಿತ ತಾಂತ್ರಿಕ ವಿಭಾಗಗಳಲ್ಲಿ ಗುತ್ತಿಗೆ ಆಧಾರದ ಮೇಲೆ ವಿವಿಧ ವ್ಯವಸ್ಥಾಪಕ ಮಟ್ಟದ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ.
ಲಭ್ಯವಿರುವ ಹುದ್ದೆಗಳ ವಿವರಗಳು:
ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಒಟ್ಟು ವಿವಿಧ ಹಂತದ ವ್ಯವಸ್ಥಾಪಕ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಇದರಲ್ಲಿ 4 ಮ್ಯಾನೇಜರ್ ಹುದ್ದೆಗಳು, 3 ಹಿರಿಯ ವ್ಯವಸ್ಥಾಪಕ ಹುದ್ದೆಗಳು ಹಾಗೂ 1 ಮುಖ್ಯ ವ್ಯವಸ್ಥಾಪಕ ಹುದ್ದೆ ಲಭ್ಯವಿದೆ. ಕೃತಕ ಬುದ್ಧಿಮತ್ತೆ ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ಕೆಲಸದ ಅನುಭವ ಹೊಂದಿರುವ ಎಂಜಿನಿಯರಿಂಗ್ ಪದವೀಧರರಿಗೆ ಬ್ಯಾಂಕಿಂಗ್ ವಲಯದ ಉನ್ನತ ಮಟ್ಟದ ಅಧಿಕಾರಿಯಾಗಲು ಇದೊಂದು ಅತ್ಯುತ್ತಮ ಮತ್ತು ಅಪರೂಪದ ಅವಕಾಶವಾಗಿದೆ.
ಶೈಕ್ಷಣಿಕ ಅರ್ಹತೆ ಮತ್ತು ಅನುಭವ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಂಬಂಧಿತ ತಾಂತ್ರಿಕ ವಿಭಾಗದಲ್ಲಿ ಬಿ.ಇ ಅಥವಾ ಬಿ.ಟೆಕ್ ಮತ್ತು ಎಂ.ಇ ಅಥವಾ ಎಂ.ಟೆಕ್ ಪದವಿಯಲ್ಲಿ ಉತ್ತೀರ್ಣರಾಗಿರಬೇಕು. ಇದರೊಂದಿಗೆ ಅಧಿಸೂಚನೆಯಲ್ಲಿ ಸೂಚಿಸಿರುವಂತೆ ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ನಿರ್ದಿಷ್ಟ ಕೆಲಸದ ಅನುಭವವನ್ನು ಕಡ್ಡಾಯವಾಗಿ ಹೊಂದಿರಬೇಕಾಗುತ್ತದೆ. ಅಭ್ಯರ್ಥಿಗಳು ಆಯ್ಕೆ ಮಾಡಿಕೊಳ್ಳುವ ಹುದ್ದೆಗೆ ಅನುಗುಣವಾಗಿ ಈ ಅನುಭವದ ಅವಧಿ ಮತ್ತು ಅರ್ಹತೆಗಳು ಬದಲಾಗುತ್ತವೆ.
ವಯೋಮಿತಿ ಮತ್ತು ಸಡಿಲಿಕೆಯ ನಿಯಮಗಳು:
ಜೂನ್ 1, 2026 ರ ಅನ್ವಯ ಅಭ್ಯರ್ಥಿಗಳ ಕನಿಷ್ಠ ವಯಸ್ಸು 31 ವರ್ಷ ಮತ್ತು ಗರಿಷ್ಠ ವಯಸ್ಸು 45 ವರ್ಷಗಳ ಒಳಗಿರಬೇಕು. ಸರ್ಕಾರದ ನಿಯಮಾವಳಿಗಳ ಪ್ರಕಾರ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ. ಇದರಲ್ಲಿ ಎಸ್‌ಸಿ ಮತ್ತು ಎಸ್‌ಟಿ ವರ್ಗದ ಅಭ್ಯರ್ಥಿಗಳಿಗೆ 5 ವರ್ಷಗಳು, ಒಬಿಸಿ (ಬಿಸಿ) ವರ್ಗದ ಅಭ್ಯರ್ಥಿಗಳಿಗೆ 3 ವರ್ಷಗಳು, ರಕ್ಷಣಾ ಇಲಾಖೆಯ ಮಾಜಿ ಸೈನಿಕರಿಗೆ 5 ವರ್ಷಗಳು ಹಾಗೂ ಅಂಗವಿಕಲ ವರ್ಗದ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಅನ್ವಯವಾಗುತ್ತದೆ.
ಇದನ್ನೂ ಓದಿ: 16 ಸರ್ಕಾರಿ ಉದ್ಯೋಗ ತಿರಸ್ಕರಿಸಿ IPS ಆದ ಯುವತಿ; ಮೊದಲ ಪ್ರಯತ್ನದಲ್ಲೇ UPSC ಪಾಸ್ ಮಾಡಿದ ತೃಪ್ತಿ ಭಟ್ ಯಶೋಗಾಥೆ
ಅರ್ಜಿ ಸಲ್ಲಿಕೆ ಮತ್ತು ಆಯ್ಕೆ ವಿಧಾನ:
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಪಂಜಾಬ್ ಮತ್ತು ಸಿಂಧ್ ಬ್ಯಾಂಕಿನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಜೂನ್ 28 ಕೊನೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಳ್ಳಲು ಸೂಚಿಸಲಾಗಿದೆ. ಅಭ್ಯರ್ಥಿಗಳ ಅಂತಿಮ ಆಯ್ಕೆಯನ್ನು ಲಿಖಿತ ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನದ ಆಧಾರದ ಮೇಲೆ ಮಾಡಲಾಗುತ್ತದೆ. ಅಭ್ಯರ್ಥಿಯ ಶೈಕ್ಷಣಿಕ ಅರ್ಹತೆ, ವೃತ್ತಿಪರ ಅನುಭವ ಮತ್ತು ಪರೀಕ್ಷೆಗಳಲ್ಲಿ ತೋರಿದ ಒಟ್ಟಾರೆ ಕಾರ್ಯಕ್ಷಮತೆಯ ಆಧಾರದ ಮೇಲೆ ಅಂತಿಮ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಿ ಆಕರ್ಷಕ ವೇತನದೊಂದಿಗೆ ಹುದ್ದೆ ನೀಡಲಾಗುತ್ತದೆ.
ಲಿಖಿತ ಪರೀಕ್ಷೆಯ ವಿವರವಾದ ಪಠ್ಯಕ್ರಮ:
ಈ ನೇಮಕಾತಿಯ ಲಿಖಿತ ಪರೀಕ್ಷೆಯು ಒಟ್ಟು 105 ನಿಮಿಷಗಳ ಕಾಲ ನಡೆಯಲಿದ್ದು, 100 ಅಂಕಗಳ 100 ಬಹು ಆಯ್ಕೆಯ (MCQ) ಪ್ರಶ್ನೆಗಳನ್ನು ಕೇಳಲಾಗುತ್ತದೆ. ಇದರಲ್ಲಿ ಅಭ್ಯರ್ಥಿಗಳ ಸಾಮರ್ಥ್ಯವನ್ನು ಮೂರು ವಿಭಾಗಗಳಲ್ಲಿ ಪರೀಕ್ಷಿಸಲಾಗುತ್ತದೆ. ಇಂಗ್ಲಿಷ್ ಭಾಷಾ ಜ್ಞಾನಕ್ಕೆ ಸಂಬಂಧಿಸಿದಂತೆ 20 ಅಂಕಗಳಿಗೆ 20 ಪ್ರಶ್ನೆಗಳನ್ನು ಮತ್ತು ಸಾಮಾನ್ಯ ಜಾಗೃತಿ (ಜನರಲ್ ಅವೇರ್ನೆಸ್) ವಿಷಯದಿಂದ 20 ಅಂಕಗಳಿಗೆ 20 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಇನ್ನುಳಿದಂತೆ ಅತ್ಯಂತ ಪ್ರಮುಖವಾದ ಅಭ್ಯರ್ಥಿಯ ವೃತ್ತಿಪರ ಜ್ಞಾನ ಅಂದರೆ ಕೃತಕ ಬುದ್ಧಿಮತ್ತೆ ಮತ್ತು ತಾಂತ್ರಿಕ ವಿಭಾಗಕ್ಕೆ ಸಂಬಂಧಿಸಿದ ವಿಷಯದಿಂದ 60 ಅಂಕಗಳಿಗೆ 60 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಬ್ಯಾಂಕಿಂಗ್ ವಲಯದಲ್ಲಿ ಉನ್ನತ ಮಟ್ಟದ ಉದ್ಯೋಗವನ್ನು ಬಯಸುವವರು ಈ ಪರೀಕ್ಷಾ ಮಾದರಿಯನ್ನು ಗಮನದಲ್ಲಿಟ್ಟುಕೊಂಡು ಮುಂಚಿತವಾಗಿಯೇ ಸಿದ್ಧತೆ ನಡೆಸುವುದು ಸೂಕ್ತ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




