ಪುರಿ ಜಗನ್ನಾಥ ಯಾತ್ರೆ: ಶಾಖದ ತೀವ್ರತೆ, ಜನಸಂದಣಿಯಿಂದಾಗಿ 750 ಮಂದಿ ಅಸ್ವಸ್ಥ, 12 ಜನರ ಸ್ಥಿತಿ ಗಂಭೀರ
ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಭಾರಿ ಜನಸಂದಣಿ ಮತ್ತು ಬಿಸಿಲಿನಿಂದಾಗಿ 750ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದಾರೆ. 12 ಮಂದಿ ತೀವ್ರ ಅಸ್ವಸ್ಥರಾಗಿದ್ದು, ಐಸಿಯುಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆಂಬ್ಯುಲೆನ್ಸ್ ಕಾರಿಡಾರ್ ಮತ್ತು ಸ್ವಯಂಸೇವಕರ ಸಹಾಯದಿಂದ ವೈದ್ಯಕೀಯ ಸಹಾಯ ಒದಗಿಸಲಾಗಿದೆ. ಬಿಸಿಲಿನ ಬೇಗೆ ಮತ್ತು ಆರ್ದ್ರತೆಯೇ ಘಟನೆಗೆ ಪ್ರಮುಖ ಕಾರಣ ಎಂದು ಹೇಳಲಾಗಿದೆ.

ಪುರಿ, ಜೂನ್ 28: ಪುರಿ ಜಗನ್ನಥ ರಥಯಾತ್ರೆಯ (Puri Jagannath Rath Yatra) ಸಮಯದಲ್ಲಿ ಶಾಖದ ತೀವ್ರತೆ, ಜನಸಂದಣಿಯ ಒತ್ತಡ ಮತ್ತು ಆಯಾಸದಿಂದಾಗಿ ಅಸ್ವಸ್ಥರಾದವರ ಸಂಖ್ಯೆ 750 ಕ್ಕೆ ಏರಿಕೆಯಾಗಿದೆ. ಅಸ್ವಸ್ಥರಾಗಿರುವ ಭಕ್ತರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ 12 ಜನರಿಗೆ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. 230 ಕ್ಕೂ ಹೆಚ್ಚು ಭಕ್ತರನ್ನು ಸಾಂಕ್ರಾಮಿಕ ರೋಗಗಳ ಆಸ್ಪತ್ರೆಗೆ (IDH) ದಾಖಲಿಸಲಾಗಿದ್ದು, ಸುಮಾರು 520 ಮಂದಿಯನ್ನು ಜಿಲ್ಲಾ ಕೇಂದ್ರ ಆಸ್ಪತ್ರೆಗೆ (DHH) ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಸ್ವಸ್ಥರಾದವರ ಪೈಕಿ ಹೆಚ್ಚಿನವರನ್ನು ಪ್ರಥಮ ಚಿಕಿತ್ಸೆ ನೀಡಿ ನಂತರ ಬಿಡುಗಡೆ ಮಾಡಲಾಗಿದೆ. ತೀವ್ರವಾಗಿ ಅಸ್ವಸ್ಥರಾದ ಒಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಕಟಕ್‌ನ ಹಾಸ್ಪಿಟಲ್‌ಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಸ್ವಸ್ಥರಾದವರಿಗೆ ತ್ವರಿತ ವೈದ್ಯಕೀಯ ನೆರವು ನಿಡುವುದಕ್ಕಾಗಿ, ಪುರಿಯ ಗ್ರ್ಯಾಂಡ್ ರಸ್ತೆಯ ಉದ್ದಕ್ಕೂ ಆಂಬ್ಯುಲೆನ್ಸ್ ಕಾರಿಡಾರ್ ಸ್ಥಾಪಿಸಲಾಗಿದೆ. ಜನಸಂದಣಿಯ ಮೂಲಕ ಆಂಬ್ಯುಲೆನ್ಸ್ ಚಲನೆಯನ್ನು ಸುಗಮಗೊಳಿಸಲು ಸುಮಾರು 600 ಸ್ವಯಂಸೇವಕರು ಮಾನವ ಸರಪಳಿಯನ್ನು ರಚಿಸಿ ಕಾರ್ಯನಿರ್ವಹಿಸಿದ್ದಾರೆ.
ಅಸ್ವಸ್ಥರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿರುವ ಸ್ವಯಂಸೇವಕರು: ವಿಡಿಯೋ ನೋಡಿ
VIDEO | Puri, Odisha: Volunteers rush a devotee to hospital who fell ill during the ongoing Jagannath Rath Yatra.#PuriRathYatra #JagannathRathYatra
(Full video available on PTI Videos – https://t.co/n147TvrpG7) pic.twitter.com/ftZLr1ehen
— Press Trust of India (@PTI_News) June 28, 2025
ರಥಯಾತ್ರೆಯ ವಿಶೇಷ ಆರೋಗ್ಯ ವ್ಯವಸ್ಥೆಗಳ ಭಾಗವಾಗಿ, ಹೊರಗಿನ ಜಿಲ್ಲೆಗಳಿಂದ ಹೆಚ್ಚುವರಿಯಾಗಿ 378 ವೈದ್ಯರನ್ನು ಪುರಿಗೆ ಕರೆಸಿಕೊಂಡು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಇದಲ್ಲದೆ, ರೋಗಿಗಳಿಗೆ ಸ್ಥಳಾವಕಾಶ ಕಲ್ಪಿಸಲು 265 ಹೆಚ್ಚುವರಿ ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಥಯಾತ್ರೆಯ ಸಮಯದಲ್ಲಿ ಜನದಟ್ಟಣೆಯಿಂದಾಗಿ ಹಲವಾರು ಜನರಿಗೆ ಸಣ್ಣಪುಟ್ಟ ಗಾಯಗಳು, ವಾಂತಿ ಮತ್ತು ಮೂರ್ಛೆ ತಪ್ಪುವಿಕೆ ಘಟಿಸಿದೆ ಎಂದು ಪುರಿ ಜಿಲ್ಲಾ ಮುಖ್ಯ ವೈದ್ಯಾಧಿಕಾರಿ ಡಾ. ಕಿಶೋರ್ ಸತಪತಿ ತಿಳಿಸಿದ್ದಾರೆ. ಭಕ್ತರು ಅನಾರೋಗ್ಯಕ್ಕೆ ಒಳಗಾಗಲು ಬಿಸಿಲಿನ ಬೇಗೆ ಮತ್ತು ಹೆಚ್ಚಿನ ಆರ್ದ್ರತೆಯೇ ಕಾರಣ ಎಂದು ಒಡಿಶಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮುಖೇಶ್ ಮಹಾಲಿಂಗ್ ತಿಳಿಸಿದ್ದಾರೆ. ಪುರಿಯ ಜಿಲ್ಲಾ ಕೇಂದ್ರ ಆಸ್ಪತ್ರೆಯಲ್ಲಿ ಸುಮಾರು 70 ಜನರು ಚಿಕಿತ್ಸೆ ಪಡೆಯುತ್ತಿದ್ದು, 9 ಜನರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಪುರಿ ಜಗನ್ನಾಥ ದೇವಾಲಯದ ರಥಯಾತ್ರೆಯಲ್ಲಿ 10 ಲಕ್ಷಕ್ಕೂ ಹೆಚ್ಚು ಜನ ಭಾಗಿ
ಪುರಿ ಜಗನ್ನಾಥ ಕ್ಷೇತ್ರದ ಮೂರು ಭವ್ಯ ರಥಗಳಲ್ಲಿ ಒಂದಾದ ತಾಳಧ್ವಜ ರಥವನ್ನು ಎಳೆಯುವ ಸಂದರ್ಭದಲ್ಲಿ ಜನದಟ್ಟಣೆಯಿಂದಾಗಿ ಕಾಲ್ತುಳಿತದಂತಹ ಪರಿಸ್ಥಿತಿ ಉಂಟಾಗಿ, 500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾಗಿ ಶುಕ್ರವಾರ ವರದಿಯಾಗಿತ್ತು. ಆದರೆ, ಇದೀಗ ಅಸ್ವಸ್ಥರಾದವರ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, ಘಟನೆಗೆ ನಿಖರ ಕಾರಣ ಏನು ಎಂಬುದು ಬಹಿರಂಗವಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








