‘ಪಂಜಾಬ್, ಪಂಜಾಬಿಗಳ ಹಿತಾಸಕ್ತಿಯೇ ಮೊದಲ ಆದ್ಯತೆ’; ಎನ್‌ಡಿಎಗೆ ಅಕಾಲಿ ದಳದ ಮರುಸೇರ್ಪಡೆಗೆ ಪ್ರಧಾನಿ ಮೋದಿ ಸಂತಸ

ಬಿಜೆಪಿ ಮತ್ತು ಶಿರೋಮಣಿ ಅಕಾಲಿ ದಳದ ಮೈತ್ರಿಯು ಒಂದು ನೈಸರ್ಗಿಕ ಮೈತ್ರಿಯಾಗಿದ್ದು, ಮುಂಬರುವ ಚುನಾವಣೆಯಲ್ಲಿ ಇದು ಪಂಜಾಬ್ ಜನತೆಯ ನೆಚ್ಚಿನ ಆಯ್ಕೆಯಾಗಿ ಹೊರಹೊಮ್ಮಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಭವಿಷ್ಯ ನುಡಿದಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ಶ್ರೀ ಗುರುನಾನಕ್ ದೇವ್ ಅವರ ಪ್ರಕಾಶ್ ಪುರಬ್ ಶುಭ ದಿನದಂದು ಶಿರೋಮಣಿ ಅಕಾಲಿ ದಳವು ಮತ್ತೆ ಎನ್‌ಡಿಎ ಕುಟುಂಬಕ್ಕೆ ಮರಳಿರುವುದು ತಮಗೆ ಅತ್ಯಂತ ಸಂತೋಷ ತಂದಿದೆ ಎಂದು ಹೇಳಿದ್ದಾರೆ.

ಪಂಜಾಬ್, ಪಂಜಾಬಿಗಳ ಹಿತಾಸಕ್ತಿಯೇ ಮೊದಲ ಆದ್ಯತೆ; ಎನ್‌ಡಿಎಗೆ ಅಕಾಲಿ ದಳದ ಮರುಸೇರ್ಪಡೆಗೆ ಪ್ರಧಾನಿ ಮೋದಿ ಸಂತಸ
ನರೇಂದ್ರ ಮೋದಿ
Image Credit source: PTI

Updated on: Nov 24, 2026 | 4:40 PM

ನವದೆಹಲಿ, ನವೆಂಬರ್ 24: 6 ವರ್ಷಗಳ ಅಂತರದ ನಂತರ ಶಿರೋಮಣಿ ಅಕಾಲಿ ದಳ (ಎಸ್​ಎಡಿ) ಮತ್ತೆ ಬಿಜೆಪಿ ನೇತೃತ್ವದ ಎನ್​ಡಿಎ ಮರುಸೇರ್ಪಡೆಯಾಗಿರುವುದನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಹೃತ್ಪೂರ್ವಕವಾಗಿ ಸ್ವಾಗತಿಸಿದ್ದಾರೆ. ಪಂಜಾಬ್‌ನ ಅಭಿವೃದ್ಧಿ ಮತ್ತು ಪಂಜಾಬಿಗಳ ಕಲ್ಯಾಣವನ್ನು ಮೊದಲ ಆದ್ಯತೆಯಾಗಿರಿಸಿಕೊಂಡು ಈ ಮೈತ್ರಿ ಏರ್ಪಟ್ಟಿದೆ ಎಂದು ಅವರು ಬಣ್ಣಿಸಿದ್ದಾರೆ. ಶಿರೋಮಣಿ ಅಕಾಲಿ ದಳದ ಮರುಸೇರ್ಪಡೆಯ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ ಮೂಲಕ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, “ಪಂಜಾಬ್ ಮತ್ತು ಪಂಜಾಬಿಗಳ ಕಲ್ಯಾಣವನ್ನು ಮೊದಲ ಸ್ಥಾನದಲ್ಲಿರಿಸಿ, ಶಿರೋಮಣಿ ಅಕಾಲಿ ದಳವು ಎನ್‌ಡಿಎಗೆ ಮರಳಿರುವುದನ್ನು ನಾನು ಸ್ವಾಗತಿಸುತ್ತೇನೆ. ಪಂಜಾಬ್‌ ಹಾಗೂ ಪಂಜಾಬಿಗಳ ಪ್ರಗತಿ, ಶಾಂತಿ ಮತ್ತು ಸಮೃದ್ಧಿಗಾಗಿ ನಾವು ಒಟ್ಟಾಗಿ ಕೆಲಸ ಮಾಡಲಿದ್ದೇವೆ” ಎಂದು ತಿಳಿಸಿದ್ದಾರೆ.

“ಪಂಜಾಬ್ ಮತ್ತು ಪಂಜಾಬಿಗಳ ಕಲ್ಯಾಣವೇ ಮೊದಲ ಆದ್ಯತೆ! ಶಿರೋಮಣಿ ಅಕಾಲಿ ದಳವು ಎನ್‌ಡಿಎ ಕುಟುಂಬಕ್ಕೆ ಮರಳಿರುವುದು, ಅದೂ ಶ್ರೀ ಗುರುನಾನಕ್ ದೇವ್ ಅವರ ಪ್ರಕಾಶ್ ಪುರಬ್ ದಿನದಂದು ಮರಳಿರುವುದು ನನಗೆ ಅತ್ಯಂತ ಸಂತೋಷ ತಂದಿದೆ. ನಮ್ಮದು ನೈಸರ್ಗಿಕ ಮೈತ್ರಿಯಾಗಿದ್ದು, ಪಂಜಾಬ್‌ಗೆ ಜನಪರ ಆಡಳಿತವನ್ನು ಖಚಿತಪಡಿಸುತ್ತದೆ ಮತ್ತು ರಾಜ್ಯವನ್ನು ಪ್ರಗತಿಯ ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ. ಅಟಲ್ ಬಿಹಾರಿ ವಾಜಪೇಯಿ, ಅಡ್ವಾಣಿ ಮತ್ತು ಸರ್ದಾರ್ ಪ್ರಕಾಶ್ ಸಿಂಗ್ ಬಾದಲ್ ಅವರಿಂದ ಪೋಷಿಸಲ್ಪಟ್ಟ ಅಕಾಲಿ ದಳ-ಬಿಜೆಪಿ ಮೈತ್ರಿಯು ಕಾಲದ ಪರೀಕ್ಷೆಯಲ್ಲಿ ಗೆದ್ದು ನಿಂತಿದೆ. ನಮ್ಮ ಮೈತ್ರಿಯು ಪಂಜಾಬ್ ಜನತೆಯ ನೆಚ್ಚಿನ ಆಯ್ಕೆಯಾಗಿ ಹೊರಹೊಮ್ಮಲಿದೆ ಎಂಬ ವಿಶ್ವಾಸ ನನಗಿದೆ” ಎಂದು ಪ್ರಧಾನಿ ಮೋದಿ ಪೋಸ್ಟ್ ಮಾಡಿದ್ದಾರೆ.

Loading...


ಹಿಂದೂ-ಸಿಖ್ ಏಕತೆ ಮತ್ತು ಭ್ರಾತೃತ್ವದ ಸಂದೇಶ:

ಬಿಜೆಪಿ ಮತ್ತು ಅಕಾಲಿ ದಳದ ನಡುವಿನ ಈ ಮೈತ್ರಿಯು ಕೇವಲ ರಾಜಕೀಯ ಹೊಂದಾಣಿಕೆಯಲ್ಲ, ಬದಲಾಗಿ ಪಂಜಾಬ್‌ನಲ್ಲಿ ಸಾಮಾಜಿಕ ಸಾಮರಸ್ಯ, ಹಿಂದೂ-ಸಿಖ್ ಭ್ರಾತೃತ್ವ ಮತ್ತು ಸ್ಥಿರ ಆಡಳಿತವನ್ನು ಬಲಪಡಿಸುವ ಮಹತ್ವದ ಹೆಜ್ಜೆಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಮೈತ್ರಿ ಘೋಷಣೆಯ ಸಂದರ್ಭದಲ್ಲಿ ಅಕಾಲಿ ದಳದ ಅಧ್ಯಕ್ಷ ಸುಖ್‌ಬೀರ್ ಸಿಂಗ್ ಬಾದಲ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದ ಪ್ರಧಾನಿ ಮೋದಿ, ಅಕಾಲಿ ದಳವು ಎನ್‌ಡಿಎಯ ಅತ್ಯಂತ ಹಳೆಯ ಮತ್ತು ನಂಬಿಕಸ್ತ ಮಿತ್ರಪಕ್ಷಗಳಲ್ಲಿ ಒಂದಾಗಿದ್ದು, ಅವರ ಪುನರಾಗಮನದಿಂದ “ಈಗ ಎನ್‌ಡಿಎ ಪೂರ್ಣಗೊಂಡಿದೆ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ರಾಮಾಯಣದ ಪೇಂಟಿಂಗ್​ನಿಂದ ಗಂಗಾಜಲದವರೆಗೆ; ನೇಪಾಳದ ಪ್ರಧಾನಿ ಬಾಲೆನ್ ಶಾಗೆ ಮೋದಿ ನೀಡಿದ ಉಡುಗೊರೆಗಳಿವು

6 ವರ್ಷಗಳ ಅಂತರದ ನಂತರ, ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಗಾಗಿ ಶಿರೋಮಣಿ ಅಕಾಲಿ ದಳ (ಎಸ್​ಎಡಿ) ಮತ್ತು ಬಿಜೆಪಿ ತಮ್ಮ ಮೈತ್ರಿಯನ್ನು ಅಧಿಕೃತವಾಗಿ ಘೋಷಿಸಿವೆ. ಈ ಮೂಲಕ ಎನ್‌ಡಿಎಯ ಅತ್ಯಂತ ಹಳೆಯ ಮಿತ್ರಪಕ್ಷವು 6 ವರ್ಷಗಳ ಬಳಿಕ ಮರಳಿದಂತಾಗಿದೆ. ಮೈತ್ರಿಕೂಟದಲ್ಲಿ ಅಕಾಲಿ ದಳವು “ಹಿರಿಯಣ್ಣ”ನ ಪಾತ್ರ ವಹಿಸುವುದರಿಂದ ಮುಖ್ಯಮಂತ್ರಿ ಹುದ್ದೆಯು ಅಕಾಲಿ ದಳದ ಪಾಲಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ. ಪಂಜಾಬ್‌ನ ಎಲ್ಲಾ 117 ವಿಧಾನಸಭಾ ಕ್ಷೇತ್ರಗಳಲ್ಲಿ ಉಭಯ ಪಕ್ಷಗಳು ಒಟ್ಟಾಗಿ ಸ್ಪರ್ಧಿಸಲಿವೆ ಎಂದು ಅಮಿತ್ ಶಾ ತಿಳಿಸಿದ್ದಾರೆ.

3 ಕೃಷಿ ಕಾಯ್ದೆಗಳ ವಿರುದ್ಧದ ವ್ಯಾಪಕ ಪ್ರತಿಭಟನೆಗಳ ನಡುವೆ 2020ರಲ್ಲಿ ಅಕಾಲಿ ದಳ ಎನ್‌ಡಿಎಯಿಂದ ಹೊರನಡೆದಿತ್ತು, ಆ ಮೂಲಕ 24 ವರ್ಷಗಳ ಪಾಲುದಾರಿಕೆಗೆ ತೆರೆಬಿದ್ದಿತ್ತು. ನಂತರ ಆ ಕಾಯ್ದೆಗಳನ್ನು ಹಿಂಪಡೆಯಲಾಗಿತ್ತು.

ಇದನ್ನೂ ಓದಿ: 2029ರೊಳಗೆ ಪಂಜಾಬ್ ‘ಮಾದಕವಸ್ತು ಮುಕ್ತ’ಗೊಳ್ಳಲಿದೆ; ಅಮಿತ್ ಶಾ ಭರವಸೆ

ನವದೆಹಲಿಯಲ್ಲಿ ಅಮಿತ್ ಶಾ ಮತ್ತು ಶಿರೋಮಣಿ ಅಕಾಲಿ ದಳದ ಮುಖ್ಯಸ್ಥ ಸುಖ್‌ಬೀರ್ ಸಿಂಗ್ ಬಾದಲ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮೈತ್ರಿಯನ್ನು ಘೋಷಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್, ಪಂಜಾಬ್ ಅನ್ನು ಅಭಿವೃದ್ಧಿ ಹೊಂದಿದ ರಾಜ್ಯವನ್ನಾಗಿ ಮಾಡಲು ಉಭಯ ಪಕ್ಷಗಳು ಒಟ್ಟಾಗಿ ಕೆಲಸ ಮಾಡಲಿವೆ ಎಂದು ಹೇಳಿದರು. ಮುಂಬರುವ ಚುನಾವಣೆಯಲ್ಲಿ ಮೈತ್ರಿಕೂಟವು 100ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದ್ದು, ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷದ (ಆಪ್) ಸ್ಥಾನಗಳ ಸಂಖ್ಯೆ ಒಂದಂಕಿಗೆ ಕುಸಿಯಲಿದೆ ಎಂದು ಬಾದಲ್ ವಿಶ್ವಾಸ ವ್ಯಕ್ತಪಡಿಸಿದರು.

ಅಲ್ಲದೆ, “ಡಿಸೆಂಬರ್ 8ರಂದು ನಡೆಯಲಿರುವ ನನ್ನ ತಂದೆ ಪ್ರಕಾಶ್ ಸಿಂಗ್ ಬಾದಲ್ ಅವರ 100ನೇ ಜನ್ಮದಿನಾಚರಣೆಯ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಒಪ್ಪಿಗೆ ನೀಡಿದ್ದಾರೆ” ಎಂದೂ ಅವರು ತಿಳಿಸಿದರು.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us