ಗಾಂಧಿಗಳು ನಾಯಕತ್ವದಿಂದ ಇಳಿದು ಬೇರೆಯವರಿಗೆ ಅವಕಾಶ ಕೊಡುವ ಸಮಯ ಬಂದಿದೆ; ಕಪಿಲ್ ಸಿಬಲ್ ಟೀಕೆ
ಸೋನಿಯಾ ಗಾಂಧಿ ನೆಪ ಮಾತ್ರಕ್ಕೆ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ. ವಾಸ್ತವವಾಗಿ ರಾಹುಲ್ ಗಾಂಧಿ ಅವರೇ ನಿಜವಾದ ಅಧ್ಯಕ್ಷ. ರಾಹುಲ್ ಗಾಂಧಿಯೇ ಪಕ್ಷದ ಎಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಕಪಿಲ್ ಸಿಬಲ್ ಹೇಳಿದ್ದಾರೆ.
ನವದೆಹಲಿ: ಐದು ರಾಜ್ಯಗಳ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ (Congress) ಹೀನಾಯವಾಗಿ ಸೋಲನ್ನು ಅನುಭವಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಈ ಆಘಾತದಿಂದ ಕಾಂಗ್ರೆಸ್ ಚೇತರಿಸಿಕೊಳ್ಳುತ್ತಿದೆ. ಅಧಿಕಾರದಲ್ಲಿದ್ದ ಪಂಜಾಬ್ ಸೇರಿದಂತೆ ಎಲ್ಲಾ ಐದು ರಾಜ್ಯಗಳಲ್ಲಿ ನೀರಸ ಪ್ರದರ್ಶನದಿಂದ ಆಘಾತಕ್ಕೊಳಗಾದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಭಾನುವಾರ ಐದು ಗಂಟೆಗಳ ಸುದೀರ್ಘ ಸಭೆಯನ್ನು ನಡೆಸಿದೆ. ಈ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರು ಸೋನಿಯಾ ಗಾಂಧಿಯವರ (Sonia Gandhi) ನಾಯಕತ್ವದಲ್ಲಿ ತಮಗೆ ನಂಬಿಕೆಯಿದೆ ಎಂದು ಪುನರುಚ್ಛರಿಸಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷದ ಎಲ್ಲ ನಾಯಕರೂ ಈ ಅಭಿಪ್ರಾಯಕ್ಕೆ ಬದ್ಧರಾಗಿಲ್ಲ. ಕಾಂಗ್ರೆಸ್ನ ಹಿರಿಯ ನಾಯಕ ಕಪಿಲ್ ಸಿಬಲ್ (Kapil Sibal) ಪಂಚ ರಾಜ್ಯಗಳಲ್ಲಿ ಕಾಂಗ್ರೆಸ್ನ ನೀರಸ ಪ್ರದರ್ಶನಕ್ಕೆ ನಾಯಕತ್ವವೇ ಕಾರಣ ಎಂದಿದ್ದಾರೆ.
ಈ ಬಗ್ಗೆ ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಕಪಿಲ್ ಸಿಬಲ್, ಗಾಂಧಿ ಕುಟುಂಬ ನಾಯಕತ್ವ ಸ್ಥಾನಗಳಿಂದ ದೂರ ಸರಿದು ಬೇರೆಯವರಿಗೆ ಅವಕಾಶ ನೀಡುವ ಸಮಯ ಹತ್ತಿರ ಬಂದಿದೆ. ಗಾಂಧಿಗಳು ಸ್ವಯಂಪ್ರೇರಣೆಯಿಂದ ನಾಯಕತ್ವದಿಂದ ದೂರ ಸರಿಯಬೇಕು ಎಂದಿದ್ದಾರೆ.
ರಾಹುಲ್ ಗಾಂಧಿಯನ್ನು ಕಾಂಗ್ರೆಸ್ ಪಕ್ಷದ ಅಧ್ಯಕ್ಷರನ್ನಾಗಿ ಮಾಡಲು ಹೆಚ್ಚುತ್ತಿರುವ ಬೇಡಿಕೆಯ ಕುರಿತು ಉತ್ತರಿಸಿರುವ ಕಪಿಲ್ ಸಿಬಲ್, ಸೋನಿಯಾ ಗಾಂಧಿ ನೆಪ ಮಾತ್ರಕ್ಕೆ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ. ವಾಸ್ತವವಾಗಿ ರಾಹುಲ್ ಗಾಂಧಿ ಅವರೇ ನಿಜವಾದ ಅಧ್ಯಕ್ಷ. ರಾಹುಲ್ ಗಾಂಧಿಯೇ ಪಕ್ಷದ ಎಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದಿದ್ದಾರೆ.
ರಾಹುಲ್ ಗಾಂಧಿ ಪಂಜಾಬ್‌ಗೆ ಹೋಗಿ ಚರಣ್‌ಜಿತ್ ಸಿಂಗ್ ಚನ್ನಿ ನೂತನ ಮುಖ್ಯಮಂತ್ರಿಯಾಗುತ್ತಾರೆ ಎಂದು ಘೋಷಿಸಿದರು. ಚನ್ನಿಗೆ ಯಾವ ಸಾಮರ್ಥ್ಯ ಇದೆ ಎಂದು ಆತನನ್ನು ಸಿಎಂ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದರು? ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷರಲ್ಲ, ಆದರೆ ಅವರು ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅವರು ವಾಸ್ತವವಾಗಿ ಈಗಾಗಲೇ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದಾರೆ. ಕಾಂಗ್ರೆಸ್ ಗಾಂಧಿ ಕುಟುಂಬದ ಹಿಡಿತದಿಂದ ಹೊರಬಂದಾಗ ಏನಾದರೂ ಬದಲಾವಣೆ ಕಾಣಲು ಸಾಧ್ಯ ಎಂದು ಕಪಿಲ್ ಸಿಬಲ್ ಅಸಮಾಧಾನ ಹೊರಹಾಕಿದ್ದಾರೆ.
2020ರಲ್ಲಿ ಕಾಂಗ್ರೆಸ್ ನಾಯಕತ್ವದಲ್ಲಿ ಬದಲಾವಣೆ ಕೋರಿ ಸೋನಿಯಾ ಗಾಂಧಿ ಅವರಿಗೆ 23 ಹಿರಿಯ ಕಾಂಗ್ರೆಸ್ ನಾಯಕರು ಪತ್ರ ಬರೆದಿದ್ದರು. ಆ ನಾಯಕರ ಪೈಕಿ ಕಪಿಲ್ ಸಿಬಲ್ ಕೂಡ ಒಬ್ಬರು. ಅಂದಿನಿಂದ ಕಾಂಗ್ರೆಸ್ನಲ್ಲಿ ಎರಡು ಬಣಗಳಾಗಿವೆ.
ಇದನ್ನೂ ಓದಿ: ಕರ್ನಾಟಕ ಕಾಂಗ್ರೆಸ್ ನಾಯಕರಿಗೆ ರಾಹುಲ್ ಗಾಂಧಿ ನೀಡಿದ ಸಾಮೂಹಿಕ ನಾಯಕತ್ವ ಸಂದೇಶ ಕಾರ್ಯರೂಪ ತಳೆಯುತ್ತಿದೆ!