ರಾಜೀವ್ ಗಾಂಧಿ ಹತ್ಯೆ ಅಪರಾಧಿ ಪೇರರಿವಾಳನ್ ಬಿಡುಗಡೆಗೆ ಸುಪ್ರೀಂಕೋರ್ಟ್ ಆದೇಶ
ಕಳೆದ 31 ವರ್ಷಗಳಿಂದ ಜೈಲಿನಲ್ಲಿದ್ದ ಪೆರರಿವಾಳನ್ ಬಿಡುಗಡೆಗೆ ಸುಪ್ರೀಂಕೋರ್ಟ್ ಆದೇಶಿಸಿದೆ.
ದೆಹಲಿ: ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ (Rajiv Gandhi Assasination) ಅಪರಾಧಿ ಎಂದು ನ್ಯಾಯಾಲಯವು ಘೋಷಿಸಿದ್ದ ಎ.ಜಿ.ಪೇರರಿವಾಳನ್ಗೆ ಸುಪ್ರೀಂಕೋರ್ಟ್ (Supreme Court Of India) ಬುಧವಾರ (ಮೇ 18) ಜೈಲುವಾಸದಿಂದ ಮುಕ್ತಿ ನೀಡಿದೆ. ಕಳೆದ 31 ವರ್ಷಗಳಿಂದ ಜೈಲಿನಲ್ಲಿದ್ದ ಪೇರರಿವಾಳನ್ ಬಿಡುಗಡೆಗೆ ಸುಪ್ರೀಂಕೋರ್ಟ್ ಆದೇಶಿಸಿದೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಏಳು ಅಪರಾಧಿಗಳಲ್ಲಿ ಪೇರರಿವಾಳನ್ ಸಹ ಸೇರಿದ್ದರು. ಇವರ ವಿರುದ್ಧ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿತ್ತು. ಆದರೆ ನಂತರದ ದಿನಗಳಲ್ಲಿ ಅದನ್ನು ಜೀವಾವಾಧಿ ಶಿಕ್ಷೆಯಾಗಿ ಬದಲಿಸಲಾಯಿತು. ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರರಾವ್ ಮತ್ತು ಬಿ.ಆರ್.ಗವಾಯಿ ಅವರಿದ್ದ ನ್ಯಾಯಪೀಠವು ಪೇರರಿವಾಳನ್ ಬಿಡುಗಡೆ ಆದೇಶ ನೀಡಿದೆ.
ನಳಿನಿ ಶ್ರೀಹರನ್ ಮತ್ತು ಆಕೆಯ ಗಂಡ (ಶ್ರೀಲಂಕಾ ಪ್ರಜೆ) ಮುರುಗನ್ ಸೇರಿದಂತೆ ರಾಜೀವ್ ಗಾಂಧಿಯ ಇತರ 6 ಅಪರಾಧಿಗಳ ಬಿಡುಗಡೆಗೂ ಈ ತೀರ್ಪು ಅನುವು ಮಾಡಿಕೊಟ್ಟಿದೆ. ಇವರೆಲ್ಲರೂ ಕಳೆದ 31 ವರ್ಷಗಳಿಂದ ಜೈಲಿನಲ್ಲಿದ್ದಾರೆ. 142ನೇ ವಿಧಿಯ ಅನ್ವಯ, ಸೂಕ್ತ ಮಾನದಂಡಗಳನ್ನು ಆಧರಿಸಿ ರಾಜ್ಯ ಸಚಿವ ಸಂಪುಟವು ನಿರ್ಧಾರ ತೆಗೆದುಕೊಂಡಿದೆ. ಅಪರಾಧಿಗಳನ್ನು ಬಿಡುಗಡೆ ಮಾಡುವುದು ಸರಿ ಎನಿಸುತ್ತದೆ ಎಂದು ನ್ಯಾಯಾಧೀಶರು ಹೇಳಿದರು.
ರಾಜೀವ್ ಗಾಂಧಿ ಹತ್ಯೆಯಾದಾಗ ಪೇರರಿವಾಳನ್ಗೆ 19 ವರ್ಷ ವಯಸ್ಸು. ಹತ್ಯೆಯ ಸಂಚು ರೂಪಿಸಿದ್ದ ಎಲ್ಟಿಟಿಇ ಉಗ್ರ ಶಿವರಸನ್ಗೆ 9 ವೋಲ್ಟ್ ಬ್ಯಾಟರಿಗಳನ್ನು ತಂದುಕೊಟ್ಟ ಅಪರಾಧ ಪೇರರಿವಾಳನ್ ಮಾಡಿದ್ದ. 1991ರಲ್ಲಿ ರಾಜೀವ್ ಗಾಂಧಿ ಹತ್ಯೆಗೆ ಈ ಬ್ಯಾಟರಿಗಳು ಬಳಕೆಯಾಗಿದ್ದವು. 1998ರಲ್ಲಿ ಭಯೋತ್ಪಾದನಾ ನಿಗ್ರಹ ನ್ಯಾಯಾಲಯವು ಪೇರರಿವಾಳನ್ಗೆ ಮರಣದಂಡನೆ ವಿಧಿಸಿತ್ತು. ಈ ಆದೇಶವನ್ನು 1999ರಲ್ಲಿ ಸುಪ್ರೀಂಕೋರ್ಟ್ ಎತ್ತಿ ಹಿಡಿದಿತ್ತು. 2014ರಲ್ಲಿ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಮಾರ್ಪಡಿಸಲಾಯಿತು. ಕಳೆದ ಮಾರ್ಚ್ ತಿಂಗಳಲ್ಲಿ ಪೇರರಿವಾಳನ್ಗೆ ಸುಪ್ರೀಂಕೋರ್ಟ್ ಜಾಮೀನು ಮಂಜೂರು ಮಾಡಿತ್ತು.
ಜಾಮೀನು ಮಂಜೂರಾದ ನಂತರ ತನ್ನನ್ನು ಅವಧಿಗೆ ಮೊದಲೇ ಬಿಡುಗಡೆ ಮಾಡಬೇಕು ಎಂದು ಪೇರರಿವಾಳನ್ ಮನವಿ ಮಾಡಿಕೊಂಡಿದ್ದ. ಪೇರರಿವಾಳನ್ ಕೋರಿಕೆಯನ್ನು ಕೇಂದ್ರ ಸರ್ಕಾರ ವಿರೋಧಿಸಿತ್ತು. ತಮಿಳುನಾಡು ಸರ್ಕಾರವು ಈ ಸಂಬಂಧ ರಾಜ್ಯಪಾಲರಿಗೆ ಶಿಫಾರಸು ಕಳಿಸಿದೆ, ರಾಜ್ಯಪಾಲರು ರಾಷ್ಟ್ರಪತಿ ಅಭಿಪ್ರಾಯ ಕೋರಿದ್ದಾರೆ. ರಾಷ್ಟ್ರಪತಿ ಈ ವಿಚಾರದಲ್ಲಿ ಇನ್ನೂ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದು ಕೇಂದ್ರ ಸರ್ಕಾರವು ಕೋರ್ಟ್ಗೆ ತಿಳಿಸಿತ್ತು. ಈ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳಲು ತಡವಾಗುತ್ತಿರುವ ಕುರಿತು ಸುಪ್ರೀಂಕೋರ್ಟ್ ಪ್ರಶ್ನೆಗಳನ್ನು ಕೇಳಿತ್ತು.
ಸಚಿವ ಸಂಪುಟ ನಿರ್ಣಯದಂತೆ ತಮಿಳುನಾಡು ರಾಜ್ಯಪಾಲರು ಎಲ್ಲ ಅಪರಾಧಿಗಳನ್ನು ಬಿಡುಗಡೆ ಮಾಡಲು ನಿರ್ಧರಿಸಬೇಕಿತ್ತು. ಸಂವಿಧಾನದ 161ನೇ ವಿಧಿಯ ಅನ್ವಯ ಅವರೆಲ್ಲರಿಗೂ ಕ್ಷಮಾದಾನ ನೀಡಬೇಕಿತ್ತು. ರಾಜ್ಯಪಾಲರು ರಾಷ್ಟ್ರಪತಿ ಕಚೇರಿಗೆ ಕಡತ ರವಾನಿಸಿದ್ದರೂ ಸುಪ್ರೀಂಕೋರ್ಟ್ ರಾಷ್ಟ್ರಪತಿ ನಿರ್ಧಾರದವರೆಗೂ ಕಾಯಬೇಕಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.
ಕಳೆದ ವಾರದ ಪ್ರಕರಣದ ವಿಚಾರಣೆ ನಡೆಯುವಾಗ ರಾಷ್ಟ್ರಪತಿಗೆ ಮಾತ್ರ ವಿಶೆಷ ಅಧಿಕಾರ ಇದೆ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಇದನ್ನು ಸುಪ್ರೀಂಕೋರ್ಟ್ ಒಪ್ಪಿರಲಿಲ್ಲ. ‘ನಿಮ್ಮ ವಾದ ಒಪ್ಪಿಕೊಂಡರೆ ಈವರೆಗೆ ವಿವಿಧ ರಾಜ್ಯಪಾಲರು ಮಂಜೂರು ಮಾಡಿರುವ ಕ್ಷಮಾದಾನಗಳು ಅನೂರ್ಜಿತ ಎಂದಂತೆ ಆಗುತ್ತದೆ ಎಂದು ಆಕ್ಷೇಪಿಸಿತ್ತು.
ಮೇ 21, 1991ರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ತಮಿಳುನಾಡಿನ ಶ್ರೀಪೆರಂಬದೂರು ಪಟ್ಟಣದಲ್ಲಿ ಎಲ್ಟಿಟಿಇಗೆ ಸೇರಿದ ಆತ್ಮಾಹುತಿ ಬಾಂಬರ್ ಧನು ಹತ್ಯೆ ಮಾಡಿದ್ದಳು. ಈ ಪ್ರಕರಣದಲ್ಲಿ 7 ಮಂದಿಯನ್ನು ದೋಷಿಗಳು ಎಂದು ಘೋಷಿಸಿ ನ್ಯಾಯಾಲಯ ತೀರ್ಪು ನೀಡಿತ್ತು. ಅವರ ಕ್ಷಮಾದಾನ ಅರ್ಜಿಗಳಿಗೆ ಸಂಬಂಧಿಸಿದಂತೆ ತೀರ್ಮಾನ ತೆಗೆದುಕೊಳ್ಳುವಲ್ಲಿ ರಾಷ್ಟ್ರಪತಿಗಳು ತಡಮಾಡುತ್ತಿರುವುದನ್ನು ಉಲ್ಲೇಖಿಸಿ, ಸುಪ್ರೀಂಕೋರ್ಟ್ ಇವರೆಲ್ಲರ ಶಿಕ್ಷೆಯನ್ನು ಜೀವಾವಧಿಗೆ ಇಳಿಸಿತ್ತು.
ಜೆ.ಜಯಲಲಿತಾ ಮತ್ತು ಎಡಪ್ಪಡಿ ಕೆ.ಪಳನಿಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ತಮಿಳುನಾಡು ಸಚಿವ ಸಂಪುಟವು ರಾಜೀವ್ ಹತ್ಯೆ ಅಪರಾಧಿಗಳನ್ನು ಬಿಡುಗಡೆ ಮಾಡಲು ಶಿಫಾರಸು ಮಾಡಿತ್ತು. ಆದರೆ ಯಾವುದೇ ರಾಜ್ಯಪಾಲರು ಈ ಶಿಫಾರಸುಗಳನ್ನು ಒಪ್ಪಿರಲಿಲ್ಲ. ಕೇವಲ ರಾಷ್ಟ್ರಪತಿಗಳ ಅಭಿಪ್ರಾಯ ಕೋರಿ ಕಡತಗಳನ್ನು ರವಾನಿಸಿದ್ದರು. ರಾಷ್ಟ್ರಪತಿಗಳು ಕೇಂದ್ರ ಸಚಿವ ಸಂಪುಟದ ಶಿಫಾರಸು ಆಧರಿಸಿ ಕ್ರಮ ತೆಗೆದುಕೊಳ್ಳುತ್ತಾರೆ.
16 ವರ್ಷಕ್ಕೂ ಹೆಚ್ಚು ಅವಧಿ ಜೈಲಿನಲ್ಲಿ ಕಳೆದಿದ್ದ ಪೇರರಿವಾಳನ್ ಸೇರಿದಂತೆ ಹಲವರು ತಮ್ಮ ಶಿಕ್ಷೆಯ ಪ್ರಮಾಣ ತಗ್ಗಿಸಬೇಕೆಂದು ಕೋರಿ ಮೇಲ್ಮನವಿ ಸಲ್ಲಿಸಿದ್ದರು. ಹಲವು ವರ್ಷಗಳ ಏಕಾಂತವಾಸ ಅನುಭವಿಸಿದ್ದ ಪೇರರಿವಾಳನ್ ಜೈಲಿನಲ್ಲಿದ್ದಾಗ ಸನ್ನಡತೆಯನ್ನು ಸಾಬೀತುಪಡಿಸಿದ್ದ. ಚೆನ್ನಾಗಿ ಓದಿ ವಿದ್ಯಾರ್ಹತೆಯನ್ನೂ ಹೆಚ್ಚಿಸಿಕೊಂಡಿದ್ದ. ಮಾತ್ರವಲ್ಲದೆ ಪುಸ್ತಕವೊಂದನ್ನೂ ಬರೆದಿದ್ದ. ತನ್ನಿಂದ ಏಕೆ ಬ್ಯಾಟರಿ ತರಿಸಿದರು ಎಂದು ಗೊತ್ತಾಗಿರಲಿಲ್ಲ ಎಂದೇ ಕೊನೆಯವರೆಗೂ ವಾದಿಸುತ್ತಿದ್ದ. ಹಲವು ವರ್ಷಗಳ ನಂತರ ನಿವೃತ್ತ ಸಿಬಿಐ ಅಧಿಕಾರಿ ತ್ಯಾಗರಾಜನ್, ತಾವು ಪೇರರಿವಾಳನ್ರ ತಪ್ಪೊಪ್ಪಿಗೆ ಹೇಳಿಕೆಯನ್ನು ಮಾರ್ಪಡಿಸಿದ್ದಾಗಿ ಒಪ್ಪಿಕೊಂಡಿದ್ದರು.
ತಾಜಾ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:57 am, Wed, 18 May 22