
ವಿಶಾಖಪಟ್ಟಣ, ಆ.18: ಆಂಧ್ರಪ್ರದೇಶದ ವಿಶಾಖಪಟ್ಟಣ ಸಮೀಪದ ಗುಡಿಲೋವಾದ ‘ವಿಜ್ಞಾನ ವಿಹಾರ’ ಶಾಲೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಬೃಹತ್ ‘ಅಖಿಲ ಭಾರತೀಯ ಸಮನ್ವಯ ಸಭೆ’ ಆಯೋಜನೆಗೊಂಡಿದೆ. ಸಭೆಯ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಆರ್‌ಎಸ್‌ಎಸ್ ಅಖಿಲ ಭಾರತೀಯ ಪ್ರಚಾರ ಪ್ರಮುಖ ಸುನಿಲ್ ಅಂಬೇಕರ್ ಅವರು, ಆಗಸ್ಟ್ 19ರ ಬೆಳಿಗ್ಗೆ 9 ಗಂಟೆಯಿಂದ ಆಗಸ್ಟ್ 21ರ ಸಂಜೆಯವರೆಗೆ ಈ ಸಭೆ ನಡೆಯಲಿದೆ ಎಂದು ತಿಳಿಸಿದರು. ಪ್ರಸಕ್ತ ವರ್ಷದಲ್ಲಿ ಆರ್‌ಎಸ್‌ಎಸ್ ಕಾರ್ಯಚಟುವಟಿಕೆಗೆ ಭಾರತದಾದ್ಯಂತ ಯುವಜನತೆಯಿಂದ ಅಭೂತಪೂರ್ವ ಬೆಂಬಲ ಸಿಗುತ್ತಿರುವುದನ್ನು ಅವರು ಅಂಕಿ-ಅಂಶಗಳೊಂದಿಗೆ ಹಂಚಿಕೊಂಡಿದ್ದಾರೆ.
ಸಭೆಯಲ್ಲಿ ಆರ್‌ಎಸ್‌ಎಸ್ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್, ಸರ್ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಸಹ ಸರ್ಕಾರ್ಯವಾಹರು ಹಾಗೂ ವಿವಿಧ ಕೇಂದ್ರೀಯ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.ಆರ್‌ಎಸ್‌ಎಸ್ ಪ್ರೇರಣೆಯಿಂದ ಕಾರ್ಯನಿರ್ವಹಿಸುತ್ತಿರುವ ‘ಭಾರತೀಯ ಮಜ್ದೂರ್ ಸಂಘ’ (BMS), ವಿಶ್ವ ಹಿಂದೂ ಪರಿಷತ್ (VHP), ಭಾರತೀಯ ಜನತಾ ಪಾರ್ಟಿ (BJP), ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP), ಭಾರತೀಯ ಕಿಸಾನ್ ಸಂಘ, ರಾಷ್ಟ್ರ ಸೇವಿಕಾ ಸಮಿತಿ ಸೇರಿದಂತೆ 32 ಸಂಘಟನೆಗಳ ರಾಷ್ಟ್ರೀಯ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಮತ್ತು ಪ್ರಮುಖರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
49 ಮಹಿಳೆಯರು ಸೇರಿದಂತೆ ಒಟ್ಟು 253 ಸಂಘಟನಾ ಪ್ರಮುಖರು ಹಾಗೂ ಸಂಘದ ಪ್ರಮುಖ ಅಧಿಕಾರಿಗಳನ್ನು ಸೇರಿಸಿ ಒಟ್ಟು 327 ಪ್ರತಿನಿಧಿಗಳು ಈ ಸಮಾವೇಶದಲ್ಲಿ ಭಾಗವಹಿಸುತ್ತಿದ್ದಾರೆ. ಈ ಸಭೆಯು ಯಾವುದೇ ಕಾರ್ಯಾಂಗೀಯ (Executive) ನಿರ್ಧಾರ ತೆಗೆದುಕೊಳ್ಳುವ ವೇದಿಕೆಯಲ್ಲ, ಬದಲಾಗಿ ವಿವಿಧ ಕ್ಷೇತ್ರಗಳಲ್ಲಿ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿರುವ ಸಂಘಟನೆಗಳ ನಡುವೆ ಅನುಭವ ಹಂಚಿಕೊಳ್ಳುವುದು ಹಾಗೂ ಸಮನ್ವಯ ಸಾಧಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ಇದನ್ನೂ ಓದಿ: ಕೇದಾರನಾಥ ದೇಗುಲದ ಮಾಜಿ ಪ್ರಧಾನ ಅರ್ಚಕ ಗುರುಲಿಂಗಯ್ಯ ಲಿಂಗೈಕ್ಯ: ಬೆಳಗಾವಿಯಲ್ಲಿ ಇಂದು ಕ್ರಿಯಾ ಸಮಾಧಿ
ದೇಶದ ಪ್ರಸಕ್ತ ಸಾಮಾಜಿಕ ಸ್ಥಿತಿಗತಿ, ಜನಸಂಖ್ಯಾ ಸ್ವರೂಪದಲ್ಲಿ ಆಗುತ್ತಿರುವ ಬದಲಾವಣೆಗಳು ಹಾಗೂ ಇದರಿಂದ ಉಂಟಾಗುವ ಪರಿಣಾಮಗಳ ಕುರಿತು ಗಂಭೀರ ಚರ್ಚೆ ನಡೆಯಲಿದೆ. ಯುವಪೀಳಿಗೆಯನ್ನು ಮಾದಕ ವ್ಯಸನಗಳಿಂದ ದೂರವಿಡಲು ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳ ಯೋಜನೆ ರೂಪಿಸಲಾಗುತ್ತದೆ. ಸಂಘದ ನೂರನೇ ವರ್ಷದ (Centenary Year) ಸಂದರ್ಭದಲ್ಲಿ ಮಾಡಲಾದ ಐದು ಪ್ರಮುಖ ಸಮಾಜ ಪರಿವರ್ತನಾ ಸಿದ್ಧಾಂತಗಳ ಮೇಲೆ ಬೆಳಕು ಚೆಲ್ಲಲಾಗುತ್ತದೆ.
ಸಂಘದ ಶತಾಬ್ದಿ ವರ್ಷದ ಹೊಸ್ತಿಲಲ್ಲಿ ಆರ್‌ಎಸ್‌ಎಸ್ ಕಡೆಗೆ ಯುವಜನತೆಯ ಆಕರ್ಷಣೆ ಅಪಾರವಾಗಿ ಹೆಚ್ಚಾಗಿದೆ. 2025 ರ ಜುಲೈಗೆ ಹೋಲಿಸಿದರೆ 2026 ರ ಜುಲೈನಲ್ಲಿ 2.5 ಪಟ್ಟು ಹೆಚ್ಚು ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ. ವೆಬ್‌ಸೈಟ್‌ನ ‘Join RSS’ ಮೂಲಕ 2025 ರ ಜನವರಿಯಿಂದ ಜುಲೈವರೆಗೆ 55,423 ಜನರು ನೋಂದಾಯಿಸಿದ್ದರೆ, 2026 ರ ಜನವರಿಯಿಂದ ಜುಲೈ ಅವಧಿಯಲ್ಲಿ ಈ ಸಂಖ್ಯೆ 1,23,287 ಕ್ಕೆ ಏರಿಕೆಯಾಗಿದೆ.ಜುಲೈ 2025 ರಲ್ಲಿ 9,718 ಜನರು ಅರ್ಜಿ ಸಲ್ಲಿಸಿದ್ದರೆ, ಜುಲೈ 2026 ರಲ್ಲಿ 24,086 ಜನರು ಸಂಘ ಸೇರಲು ಆಸಕ್ತಿ ವ್ಯಕ್ತಪಡಿಸಿದ್ದಾರೆ. ನೋಂದಾಯಿತರಲ್ಲಿ 30 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವಕರು ಶೇ. 65 ರಷ್ಟಿದ್ದರೆ, 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಶೇ. 85 ರಷ್ಟಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ದಕ್ಷಿಣ ಮಧ್ಯ ಕ್ಷೇತ್ರದ ಸಹ ಸಂಘಚಾಲಕ್ ದೂಸಿ ರಾಮಕೃಷ್ಣ ಹಾಗೂ ಅಖಿಲ ಭಾರತೀಯ ಸಹ ಪ್ರಚಾರ ಪ್ರಮುಖ್ ಪ್ರದೀಪ್ ಜೋಶಿ ಉಪಸ್ಥಿತರಿದ್ದರು.
ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ