ದೆಹಲಿ: ಕಾಂಗ್ರೆಸ್ ಪಕ್ಷಕ್ಕೆ ಭಯ ಇರದ ನಾಯಕರು ಬೇಕು. ಪಕ್ಷದಲ್ಲಿ ಇರುವುದಕ್ಕೆ ಭಯಪಡುವ ನಾಯಕರನ್ನು ಪಕ್ಷದಿಂದ ಹೊರಹಾಕಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಕ್ಷದ ಸಾಮಾಜಿಕ ಜಾಲತಾಣದ ತಂಡದೊಂದಿಗೆ ನಡೆಸಿದ ಮಾತುಕತೆಯ ವೇಳೆ ತಿಳಿಸಿದ್ದಾರೆ. ತನ್ಮೂಲಕ, ಕಾಂಗ್ರೆಸ್ ಪಕ್ಷ ತೊರೆದ ಹಾಗೂ ಪಕ್ಷಕ್ಕೆ ಸಮಸ್ಯೆ ಉಂಟಾಗುವಂತೆ ವ್ಯವಹರಿಸುತ್ತಿರುವ ನಾಯಕರಿಗೆ ಕಟು ಸಂದೇಶ ನೀಡಿದಂತಾಗಿದೆ.
ಕಾಂಗ್ರೆಸ್ ಪಕ್ಷದ ಹೊರಗೂ ಕೆಲವು ಸಮರ್ಥರಿದ್ದಾರೆ. ಅಂಥವರನ್ನು ಕಾಂಗ್ರೆಸ್ ಪಕ್ಷದ ಒಳಕ್ಕೆ ಕರೆತರಬೇಕು ಎಂದು ಸಂಸದರೂ ಆಗಿರುವ ರಾಹುಲ್ ಗಾಂಧಿ ಹೇಳಿದ್ದಾರೆ. ನಮ್ಮ ಪಕ್ಷದಲ್ಲಿ ಭಯಪಟ್ಟು ಇರುವವರಿದ್ದಾರೆ ಅಂಥವರು ಆರ್ಎಸ್ಎಸ್ ಕಡೆಗೆ ಹೋಗಬಹುದು. ನಮಗೆ ಬೇಕಾಗಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ನಮಗೆ ನಿರ್ಭಯ ವ್ಯಕ್ತಿಗಳು ಬೇಕು. ಅದುವೇ ನಮ್ಮ ಸಿದ್ಧಾಂತ. ಅದುವೇ ನನ್ನ ಪ್ರಾಥಮಿಕ ಸಂದೇಶ ಎಂದು ರಾಹುಲ್ ಗಾಂಧಿ ಮಾತನಾಡಿದ್ದಾರೆ. ರಾಹುಲ್ ಗಾಂಧಿ, ಕಾಂಗ್ರೆಸ್ ಪಕ್ಷದಲ್ಲಿ ತಮ್ಮ ಆಪ್ತ ವಲಯದಲ್ಲಿದ್ದು ಈಗ ಬಿಜೆಪಿ ಸೇರ್ಪಡೆಗೊಂಡಿರುವ ಜೋತಿರಾದಿತ್ಯ ಸಿಂಧಿಯಾ ಹಾಗೂ ಜಿತಿನ್ ಪ್ರಸಾದ್ ಬಗ್ಗೆ ಪರೋಕ್ಷವಾಗಿ ಟೀಕಿಸಿದ್ದಾರೆ ಎಂದು ಹೇಳಲಾಗಿದೆ.
ಕಾಂಗ್ರೆಸ್ ಪಕ್ಷದಲ್ಲಿ, ರಾಹುಲ್ ಗಾಂಧಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಜೋತಿರಾದಿತ್ಯ ಸಿಂಧಿಯಾ ಕಳೆದ ವರ್ಷ ಬಿಜೆಪಿ ಪಕ್ಷ ಸೇರ್ಪಡೆಗೊಂಡಿದ್ದರು. ಇದೀಗ ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ ಕೂಡ ಅವರು ಸ್ಥಾನ ಪಡೆದುಕೊಂಡಿದ್ದಾರೆ.
ಮತ್ತೋರ್ವ ರಾಹುಲ್ ಗಾಂಧಿ ಆಪ್ತ, ಜಿತಿನ್ ಪ್ರಸಾದ್ ಜೂನ್ನಲ್ಲಿ ಕಾಂಗ್ರೆಸ್ ತೊರೆದಿದ್ದರು. ಹಾಗೂ ಉತ್ತರ ಪ್ರದೇಶ ಬಿಜೆಪಿಯಲ್ಲಿ ಅವರು ಪ್ರಮುಖ ಪಾತ್ರ ವಹಿಸುವ ಸಾಧ್ಯತೆ ಇದೆ. ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ಚುನಾವಣೆಯೂ ನಡೆಯುತ್ತಿದೆ.
ರಾಹುಲ್ ಗಾಂಧಿ ತಮ್ಮ ಹೇಳಿಕೆಯ ಮೂಲಕ ಜಿ 23 ನಾಯಕರನ್ನು ಟೀಕಿಸಿರುವಂತೆ ಕಂಡುಬಂದಿದೆ. ಜಿ 23 ನಾಯಕರು ಇತ್ತೀಚೆಗಷ್ಟೇ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪಕ್ಷದ ನಾಯಕತ್ವದ ಬಗ್ಗೆ ಪತ್ರ ಬರೆದಿದ್ದರು. ಪೂರ್ಣಪ್ರಮಾಣದ, ದೂರದೃಷ್ಟಿಯುಳ್ಳ, ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಹಾಗೂ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ನಾಯಕತ್ವ ಬೇಕು ಎಂದು ಅವರು ಪತ್ರದಲ್ಲಿ ತಿಳಿಸಿದ್ದರು.
ಮತ್ತೆ ಕೆಲವರು ಈ ಮಾತುಗಳು ಪ್ರಶಾಂತ್ ಕಿಶೋರ್ಗೆ ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನ ಎಂದೂ ಹೇಳಲಾಗುತ್ತಿದೆ. ಮುಂದೆ ಬರಲಿರುವ ಕೆಲವು ರಾಜ್ಯಗಳ ಹಾಗೂ ರಾಷ್ಟ್ರೀಯ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಶಾಂತ್ ಕಿಶೋರ್ ಹಾಗೂ ರಾಹುಲ್ ಗಾಂಧಿ ಕಾರ್ಯತಂತ್ರ ರೂಪಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಸಚಿವ ಸಂಪುಟದಲ್ಲಿ ಮಂತ್ರಿಗಳ ಸಂಖ್ಯೆ ಹೆಚ್ಚಾಗಿದೆ; ಕೊರೊನಾ ಲಸಿಕೆ ಸಂಖ್ಯೆ ಏರಿಕೆಯಾಗಿಲ್ಲ: ರಾಹುಲ್ ಗಾಂಧಿ ಟೀಕೆ
Rahul Gandhi: ದೇಶದಲ್ಲಿ ಕಷ್ಟದ ಪರಿಸ್ಥಿತಿ ಉಂಟಾಗಲು ಯಾರು ಕಾರಣ ಎಂಬುದು ಜನರಿಗೆ ಗೊತ್ತು; ರಾಹುಲ್ ಗಾಂಧಿ ಟ್ವೀಟ್