ನರೇಂದ್ರ ಮೋದಿ ನೇತೃತ್ವದಲ್ಲಿ ಸಂಪುಟ ಸಭೆ; ಹಿಂದುಸ್ತಾನ್ ಜಿಂಕ್ನ ತನ್ನ ಸಂಪೂರ್ಣ ಪಾಲನ್ನು ಮಾರಾಟ ಮಾಡಲು ಅನುಮೋದನೆ
ಹಿಂದೂಸ್ತಾನ್ ಜಿಂಕ್ ಲಿಮಿಟೆಡ್ (HZL)ನಲ್ಲಿರುವ ಸರ್ಕಾರದ ಸಂಪೂರ್ಣ ಪಾಲನ್ನು ಮಾರಾಟ ಮಾಡುವ ಪ್ರಸ್ತಾಪವನ್ನು ಇಂದಿನ ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಲಾಯಿತು.
ನವದೆಹಲಿ: ಎರಡು ದಿನಗಳ ಜಪಾನ್ ಪ್ರವಾಸದ ವೇಳೆ ಕ್ವಾಡ್ ಲೀಡರ್ಸ್ ಶೃಂಗಸಭೆಯಲ್ಲಿ (Quad Summit) ಭಾಗವಹಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಇಂದು ಮುಂಜಾನೆ ದೆಹಲಿಗೆ ಬಂದಿಳಿದಿದ್ದಾರೆ. ಜಪಾನ್ನಿಂದ ದೆಹಲಿಗೆ ವಾಪಾಸ್ ಆಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಸಂಪುಟ ಸಭೆ ನಡೆಸಿದ್ದಾರೆ. ಹಿಂದೂಸ್ತಾನ್ ಜಿಂಕ್ ಲಿಮಿಟೆಡ್ (HZL)ನಲ್ಲಿರುವ ಸರ್ಕಾರದ ಸಂಪೂರ್ಣ ಪಾಲನ್ನು ಮಾರಾಟ ಮಾಡುವ ಪ್ರಸ್ತಾಪವನ್ನು ಇಂದಿನ ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಲಾಯಿತು. ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್ ಅನ್ನು ಮುಚ್ಚುವ ಪ್ರಸ್ತಾವನೆಗೂ ಸಂಪುಟ ಅನುಮೋದನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಹಿಂದೂಸ್ತಾನ್ ಜಿಂಕ್‌ನಲ್ಲಿ ಸರ್ಕಾರದ ಉಳಿದ ಪಾಲನ್ನು ಮಾರಾಟ ಮಾಡಲು ಕೇಂದ್ರ ಸಚಿವ ಸಂಪುಟ ಇಂದು ಅನುಮೋದನೆ ನೀಡಿದೆ. ಕೇಂದ್ರ ಸರ್ಕಾರವು ಪ್ರಸ್ತುತ ಹಿಂದೂಸ್ತಾನ್ ಜಿಂಕ್‌ನಲ್ಲಿ ಶೇ.29.54ರಷ್ಟು ಪಾಲನ್ನು ಹೊಂದಿದೆ. ಇದು ಸುಮಾರು 37,000 ಕೋಟಿ ರೂ. ಮೌಲ್ಯದ್ದಾಗಿದೆ ಎಂದು ಮೂಲಗಳು ತಿಳಿಸಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಹಿಂದೂಸ್ತಾನ್ ಜಿಂಕ್ ಬಹುಪಾಲು ಸರ್ಕಾರಿ ಸ್ವಾಮ್ಯದ ಕಂಪನಿಯಾಗಿತ್ತು. 2002ರಲ್ಲಿ ಅನಿಲ್ ಅಗರ್ವಾಲ್ ನೇತೃತ್ವದ ವೇದಾಂತ ಗ್ರೂಪ್ ಖರೀದಿಸಿದ ಸಂಸ್ಥೆಯಲ್ಲಿ ಸರ್ಕಾರವು ಈ ಹಿಂದೆ ಶೇ. 26ರಷ್ಟು ಪಾಲನ್ನು ಆಫ್‌ಲೋಡ್ ಮಾಡಿತ್ತು. 29.5ರಷ್ಟು ಪಾಲನ್ನು ಹೊಂದಿರುವ ಕೇಂದ್ರ ಸರ್ಕಾರವು ಹಿಂದೂಸ್ತಾನ್ ಜಿಂಕ್‌ನಲ್ಲಿ ಸಾಮಾನ್ಯ ಷೇರುದಾರರಾಗಿದ್ದು, ಇದನ್ನು ವೇದಾಂತ ಲಿಮಿಟೆಡ್‌ನಿಂದ ಪ್ರಚಾರ ಮಾಡಲಾಗಿದೆ. ಅನಿಲ್ ಅಗರ್ವಾಲ್ ನೇತೃತ್ವದ ವೇದಾಂತ ಜಿಂಕ್ ಲೀಡ್ ಮೈನರ್‌ನಲ್ಲಿ ಶೇ. 64.92ರಷ್ಟು ಪಾಲನ್ನು ಹೊಂದಿದೆ. ಪ್ರಸ್ತುತ ಮಾರುಕಟ್ಟೆ ಬೆಲೆಯಲ್ಲಿ ಹಿಂದೂಸ್ತಾನ್ ಜಿಂಕ್‌ನಲ್ಲಿ ಸರ್ಕಾರದ ಉಳಿಕೆ ಪಾಲು ಸುಮಾರು 38,000 ಕೋಟಿ ರೂ. ಆಗಿದೆ.
2021ರ ನವೆಂಬರ್ 18ರ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ, ಕೇಂದ್ರ ಸರ್ಕಾರವು SEBI ನಿಯಮಗಳಿಗೆ ಅನುಸಾರವಾಗಿ ಹಿಂದುಸ್ತಾನ್ ಜಿಂಕ್ ಲಿಮಿಟೆಡ್ನಲ್ಲಿ ತನ್ನ ಉಳಿದ ಪಾಲನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದು. ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆ (ಡಿಐಪಿಎಎಂ) ಹಿಂದೂಸ್ತಾನ್ ಜಿಂಕ್‌ನಲ್ಲಿನ ಸರ್ಕಾರದ ಸಂಪೂರ್ಣ ಪಾಲನ್ನು ಈ ಹಣಕಾಸು ವರ್ಷದೊಳಗೆ ಮಾರಾಟ ಮಾಡಲು ಯೋಜಿಸಿದೆ ಎಂದು ಮೂಲಗಳು ತಿಳಿಸಿವೆ.
ಎನ್ಡಿಎ ಸರ್ಕಾರದ ಸಂಪುಟದ ಹಿರಿಯ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ಎಸ್. ಜೈಶಂಕರ್, ನಿತಿನ್ ಗಡ್ಕರಿ, ನಿರ್ಮಲಾ ಸೀತಾರಾಮನ್, ಕಿರಣ್ ರಿಜಿಜು, ಅನುರಾಗ್ ಠಾಕೂರ್, ಸ್ಮೃತಿ ಇರಾನಿ ಸೇರಿದಂತೆ ಇತರರು ಈ ಸಭೆಯಲ್ಲಿ ಉಪಸ್ಥಿತರಿದ್ದರು. ಕ್ವಾಡ್ ಲೀಡರ್ಸ್ ಶೃಂಗಸಭೆಯಲ್ಲಿ ಭಾಗವಹಿಸಿದ ನಂತರ ಪ್ರಧಾನಿ ಮೋದಿ ಇಂದು ಪಾಲಂನ ವಾಯುಪಡೆ ನಿಲ್ದಾಣಕ್ಕೆ ಆಗಮಿಸಿದರು. ಟೋಕಿಯೊದಲ್ಲಿ ನಡೆದ ಶೃಂಗಸಭೆಯು ಕ್ವಾಡ್ ಲೀಡರ್‌ಗಳ ನಾಲ್ಕನೇ ಸಂವಾದವಾಗಿದ್ದು, 2021ರ ಮಾರ್ಚ್ ತಿಂಗಳಲ್ಲಿ ಮೊದಲ ವರ್ಚುವಲ್ ಸಭೆ ನಡೆಸಲಾಗಿತ್ತು. ನಂತರ 2021ರ ಸೆಪ್ಟೆಂಬರ್ ತಿಂಗಳಲ್ಲಿ ವಾಷಿಂಗ್ಟನ್ ಡಿಸಿಯಲ್ಲಿ ಶೃಂಗಸಭೆ ಮತ್ತು 2022ರ ಮಾರ್ಚ್ ತಿಂಗಳಲ್ಲಿ ವರ್ಚುವಲ್ ಸಭೆ ನಡೆಸಲಾಗಿತ್ತು.
ಕ್ವಾಡ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕ್ವಾಡ್ ರಾಷ್ಟ್ರಗಳ ನಾಯಕರೊಂದಿಗೆ ಸಂವಾದದಲ್ಲಿ ಭಾಗವಹಿಸಿದರು. ಇದು ಉಕ್ರೇನ್, ಆಸ್ಟ್ರೇಲಿಯಾ, ಜಪಾನ್ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ರಷ್ಯಾದ ಮಿಲಿಟರಿ ಕ್ರಮದ ಬಗ್ಗೆ ಟೀಕೆಗಳನ್ನು ಈ ಸಭೆಯಲ್ಲಿ ಮಾಡಲಾಯಿತು. ಕ್ವಾಡ್ ಶೃಂಗಸಭೆಯ ಹೊರತಾಗಿ, ಪಿಎಂ ಮೋದಿ ಮಂಗಳವಾರ ಅಮೆರಿಕಾದ ಅಧ್ಯಕ್ಷ ಜೋ ಬೈಡೆನ್ ಮತ್ತು ಆಸ್ಟ್ರೇಲಿಯಾದ ಹೊಸ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಿದರು. ಹಾಗೇ, ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು.
#WATCH | PM Narendra Modi arrived in Delhi early morning today after his tour of Japan, immediately on arrival held a Cabinet meeting today. pic.twitter.com/7UMXSg0uks
— ANI (@ANI) May 25, 2022
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:08 pm, Wed, 25 May 22