
ನವದೆಹಲಿ, ಸೆಪ್ಟೆಂಬರ್ 08: ದಕ್ಷಿಣ ದೆಹಲಿಯ ಸತ್ಯ ನಿಕೇತನ ಪ್ರದೇಶದಲ್ಲಿ ಐದು ಅಂತಸ್ತಿನ ಕಟ್ಟಡ ಕುಸಿದು ಏಳು ಜನರು ಸಾವನ್ನಪ್ಪಿದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ದೆಹಲಿ ಮಹಾನಗರ ಪಾಲಿಕೆ (MCD), ಅದರ ಪಕ್ಕದಲ್ಲೇ ದುರ್ಬಲಗೊಂಡು ವಾಲಿ ನಿಂತಿರುವ ಮತ್ತೊಂದು ಬಹುಮಹಡಿ ಕಟ್ಟಡವನ್ನು ಹಂತ-ಹಂತವಾಗಿ ಕೆಡವಲು ನಿರ್ಧರಿಸಿದೆ. ದುರಂತದಲ್ಲಿ ಗಾಯಗೊಂಡವರನ್ನು ಏಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಮುಖ್ಯಮಂತ್ರಿ ರೇಖಾ ಗುಪ್ತಾ, ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಅಸುರಕ್ಷಿತ ಕಟ್ಟಡವನ್ನು ನಾಳೆಯೇ ನೆಲಸಮ ಮಾಡಲಾಗುವುದು ಎಂದು ಘೋಷಿಸಿದ್ದಾರೆ.
ಪಕ್ಕದ ಕಟ್ಟಡಕ್ಕೆ 20 ಕಬ್ಬಿಣದ ಗಾರ್ಡ್‌ರೈಲ್ ಆಸರೆ: ಕುಸಿದ ಕಟ್ಟಡದ ಪಕ್ಕದ ಕಟ್ಟಡವೂ ಅಡಿಪಾಯ ಕಳೆದುಕೊಂಡು ವಾಲಿದ್ದು, ಮುನ್ನೆಚ್ಚರಿಕೆಯಾಗಿ ಸುಮಾರು 18 ರಿಂದ 20 ಕಬ್ಬಿಣದ ಕಂಬಗಳಿಂದ (ಗಾರ್ಡ್‌ರೈಲ್) ಅದಕ್ಕೆ ಆಸರೆ ನೀಡಲಾಗಿದೆ. ಈ ಕಟ್ಟಡ ತೀವ್ರ ಅಸುರಕ್ಷಿತವಾಗಿದ್ದು, ಯಾವುದೇ ಕ್ಷಣದಲ್ಲೂ ಬೀಳುವ ಭೀತಿಯಿರುವ ಕಾರಣ ನಿಯಂತ್ರಿತ ರೀತಿಯಲ್ಲಿ ನಾಶಪಡಿಸಲು ನೋಟಿಸ್ ಜಾರಿ ಮಾಡಲಾಗಿದೆ.
ಪಿಲ್ಲರ್ ಮತ್ತು ಬೀಮ್‌ಗಳೇ ಇಲ್ಲದ ಅಕ್ರಮ ನಿರ್ಮಾಣ: ತಜ್ಞರ ಪ್ರಕಾರ, ನೆಲಮಹಡಿಯ ನಿರ್ಮಾಣದಲ್ಲಿ ಕಂಬಗಳು ಮತ್ತು ತೊಲೆಗಳನ್ನೇ ಬಳಸಲಾಗಿರಲಿಲ್ಲ. ಕೇವಲ ಗೋಡೆಗಳ ಮೇಲೆಯೇ ಅಕ್ರಮವಾಗಿ ಒಂದರ ಮೇಲೊಂದರಂತೆ ನಾಲ್ಕು ಅಂತಸ್ತುಗಳನ್ನು ನಿರ್ಮಿಸಲಾಗಿತ್ತು. ಈ ಕಾರಣದಿಂದಲೇ ಭಾರ ತಾಳಲಾರದೆ ಕಟ್ಟಡ ಕುಸಿದು ಬಿದ್ದಿದೆ.
ಆರು ಕಟ್ಟಡಗಳು ಸೀಜ್: ಸ್ಥಳೀಯವಾಗಿ ಸುರಕ್ಷತಾ ತಪಾಸಣೆ ಕೈಗೊಂಡಿರುವ ಎಂಜಿನಿಯರ್‌ಗಳ ತಂಡ, ಸುತ್ತಮುತ್ತಲಿನ ಆರು ಕಟ್ಟಡಗಳನ್ನು ಈಗಾಗಲೇ ಸೀಲ್ ಮಾಡಿದೆ.
ಮತ್ತಷ್ಟು ಓದಿ: ದೆಹಲಿಯ ಸತ್ಯ ನಿಕೇತನದಲ್ಲಿ ಹಠಾತ್ ಕುಸಿದ ಕಟ್ಟಡ: ಅವಶೇಷಗಳಡಿ ಐವರು ಸಿಲುಕಿರುವ ಶಂಕೆ
ನಗರದ ಎಲ್ಲಾ ಪಿಜಿಗಳ ಸ್ಟ್ರಕ್ಚರಲ್ ಆಡಿಟ್‌ಗೆ ಆದೇಶ: ದೆಹಲಿ ಲೆಫ್ಟಿನೆಂಟ್ ಗವರ್ನರ್ ಸರ್ದಾರ್ ತರಂಜಿತ್ ಸಿಂಗ್ ಸಂಧು ಅವರು ದೆಹಲಿಯಾದ್ಯಂತ ಇರುವ ವಿದ್ಯಾರ್ಥಿ ಪಿಜಿ ಮತ್ತು ಹಾಸ್ಟೆಲ್ ಕಟ್ಟಡಗಳ ಸುರಕ್ಷತಾ ಲೆಕ್ಕಪರಿಶೋಧನೆಗೆ ಒಂದು ವಾರದ ಗಡುವು ನೀಡಿದ್ದಾರೆ. ಎತ್ತರ ಮತ್ತು ಅಂತಸ್ತುಗಳ ನಿಯಮ ಉಲ್ಲಂಘಿಸಿರುವ ಕಟ್ಟಡಗಳನ್ನು ತಪಾಸಣೆಗೊಳಪಡಿಸುವಂತೆ ಸೂಚಿಸಿದ್ದು, ಏಕಾಏಕಿ ಸೀಲಿಂಗ್ ಮಾಡಿ ವಿದ್ಯಾರ್ಥಿಗಳನ್ನು ಬೀದಿಗೆ ತಳ್ಳದಂತೆ ಎಚ್ಚರಿಕೆ ನೀಡಿದ್ದಾರೆ.
ಸೆಪ್ಟೆಂಬರ್ 10 ರೊಳಗೆ ವರದಿ: ಎಂಸಿಡಿ ಆಯುಕ್ತ ಸಂಜೀವ್ ಖಿರ್ವಾರ್ ಆದೇಶದಂತೆ ಎಲ್ಲಾ ವಲಯಗಳ ಕಾರ್ಯನಿರ್ವಾಹಕ ಎಂಜಿನಿಯರ್‌ಗಳು ಅಪಾಯಕಾರಿ ಕಟ್ಟಡಗಳ ಪಟ್ಟಿಯನ್ನು ಸೆ. 10 ರೊಳಗೆ ಸಲ್ಲಿಸಬೇಕಿದ್ದು, ಇದನ್ನು ಹೈಕೋರ್ಟ್‌ಗೆ ಅಫಿಡವಿಟ್ ರೂಪದಲ್ಲಿ ಸಲ್ಲಿಸಲಾಗುತ್ತದೆ.
ಪುನರ್ವಸತಿ ಕಾಲೋನಿ ನಿಯಮಗಳ ಉಲ್ಲಂಘನೆ: ಸತ್ಯ ನಿಕೇತನವು 1970 ರ ದಶಕದಲ್ಲಿ ನಿರ್ಮಾಣವಾದ ಪುನರ್ವಸತಿ ಕಾಲೋನಿಯಾಗಿದ್ದು, ಇಲ್ಲಿ ಕೇವಲ 55 ಚದರ ಗಜಗಳ ಸಣ್ಣ ಪ್ಲಾಟ್‌ಗಳಲ್ಲಿ ‘ನೆಲಮಹಡಿ + 1 ಅಂತಸ್ತು’ ನಿರ್ಮಾಣಕ್ಕೆ ಮಾತ್ರ ಅವಕಾಶವಿತ್ತು. ಆದರೆ ನಿಯಮಗಳನ್ನು ಗಾಳಿಗೆ ತೂರಿ ಯಾವುದೇ ಅನುಮೋದಿತ ನಕ್ಷೆಯಿಲ್ಲದೆ ನೆಲಮಾಳಿಗೆ ಹಾಗೂ ನಾಲ್ಕು ಅಂತಸ್ತುಗಳನ್ನ ಕಟ್ಟಿ, ವಿದ್ಯಾರ್ಥಿಗಳ ಬಾಯ್ಸ್ ಹಾಸ್ಟೆಲ್ ಆಗಿ ಪರಿವರ್ತಿಸಲಾಗಿತ್ತು.
ವಿಡಿಯೋ
#WATCH | Satya Niketan building collapse | Visuals of the building adjoining the one that collapsed in Satya Niketan on 6th September.
As per MCD Commissioner Sanjeev Khirwar, “The building has weakened, and we will take it up for demolition in a calibrated manner in the next… pic.twitter.com/2RrbGIrpQX
— ANI (@ANI) September 8, 2026
ಎಂಸಿಡಿ ಸಮೀಕ್ಷೆಯ ವೈಫಲ್ಯದ ಪ್ರಶ್ನೆ: ಕಳೆದ ಜೂನ್‌ನಲ್ಲಿ ಎಂಸಿಡಿ ನಗರದ 28 ಲಕ್ಷ ಕಟ್ಟಡಗಳನ್ನು ಪರಿಶೀಲಿಸಿ ಕೇವಲ 19 ಅಪಾಯಕಾರಿ ಕಟ್ಟಡಗಳನ್ನು ಮಾತ್ರ ಗುರುತಿಸಿತ್ತು. ಆದರೆ ಇಂತಹ ಅಪಾಯಕಾರಿ ಅಕ್ರಮ ಕಟ್ಟಡಗಳು ಪಾಲಿಕೆಯ ಕಣ್ಣಿಗೆ ಬೀಳದಿರುವುದು ನಾಗರಿಕ ಆಡಳಿತದ ಮೇಲ್ವಿಚಾರಣಾ ವೈಫಲ್ಯವನ್ನು ಬಟಾಬಯಲು ಮಾಡಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ