AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರಿನ ಬಾನೆಟ್‌ನಲ್ಲಿ ವಿಚಿತ್ರ ಸದ್ದು, ತೆರೆದು ನೋಡಿದ ಮಾಲೀಕನಿಗೆ ಶಾಕ್: 7 ಅಡಿ ಉದ್ದದ ಹೆಬ್ಬಾವು ಪ್ರತ್ಯಕ್ಷ

ಮುಂಬೈನ ದಹಿಸರ್‌ನಲ್ಲಿ ಕಾರಿನ ಬಾನೆಟ್‌ನಲ್ಲಿ 7 ಅಡಿ ಉದ್ದದ ಹೆಬ್ಬಾವು ಪತ್ತೆಯಾಗಿ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಪಾರ್ಕ್ ಮಾಡಿದ್ದ ಕಾರಿನ ಎಂಜಿನ್ ಭಾಗದಲ್ಲಿ ಸುರುಳಿ ಸುತ್ತಿದ್ದ ಬೃಹತ್ ಹಾವನ್ನು ವನ್ಯಜೀವಿ ರಕ್ಷಕರು ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಪಶುವೈದ್ಯರ ತಪಾಸಣೆ ನಂತರ, ಹೆಬ್ಬಾವನ್ನು ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನದ ನೈಸರ್ಗಿಕ ಆವಾಸಸ್ಥಾನಕ್ಕೆ ಬಿಡಲಾಯಿತು. ಮಳೆಗಾಲದಲ್ಲಿ ವಾಹನಗಳಲ್ಲಿ ಹಾವುಗಳು ಆಶ್ರಯ ಪಡೆಯುವುದು ಸಾಮಾನ್ಯ ಎಂದು ತಜ್ಞರು ಎಚ್ಚರಿಸಿದ್ದಾರೆ.

ಕಾರಿನ ಬಾನೆಟ್‌ನಲ್ಲಿ ವಿಚಿತ್ರ ಸದ್ದು, ತೆರೆದು ನೋಡಿದ ಮಾಲೀಕನಿಗೆ ಶಾಕ್: 7 ಅಡಿ ಉದ್ದದ ಹೆಬ್ಬಾವು ಪ್ರತ್ಯಕ್ಷ
ಹೆಬ್ಬಾವು
ನಯನಾ ರಾಜೀವ್
|

Updated on: Sep 08, 2026 | 9:14 AM

Share

ಮುಂಬೈ, ಸೆಪ್ಟೆಂಬರ್ 08: ಮುಂಬೈನ ದಹಿಸರ್ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ಕಾರೊಂದರ ಬಾನೆಟ್‌ನಲ್ಲಿ ಬರೋಬ್ಬರಿ ಏಳು ಅಡಿ ಉದ್ದದ ಬೃಹತ್ ಹೆಬ್ಬಾವು ಪತ್ತೆಯಾಗಿ ಸ್ಥಳೀಯರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಅಪಾರ್ಟ್‌ಮೆಂಟ್ ಆವರಣದಲ್ಲಿ ನಿಲ್ಲಿಸಿದ್ದ ಕಾರಿನ ಕೆಳಗಿನಿಂದ ಎಂಜಿನ್ ಭಾಗಕ್ಕೆ ಹಾವು ತೆವಳಿಕೊಂಡು ಹೋಗುವುದನ್ನು ಗಮನಿಸಿದ ಸ್ಥಳೀಯರು ತಕ್ಷಣ ವನ್ಯಜೀವಿ ರಕ್ಷಕರಿಗೆ ಮಾಹಿತಿ ನೀಡಿದ್ದಾರೆ. ಸಕಾಲದಲ್ಲಿ ಸ್ಥಳಕ್ಕೆ ಧಾವಿಸಿದ ಉರಗ ತಜ್ಞರು ಹಾವನ್ನು ಸುರಕ್ಷಿತವಾಗಿ ರಕ್ಷಿಸಿ, ಕಾಡಿಗೆ ಬಿಟ್ಟಿದ್ದಾರೆ.

ದಹಿಸರ್ ಪಶ್ಚಿಮದ ಕಂದರ್ಪದ, ಬಾಪು ಬಾಗ್ವೆ ರಸ್ತೆಯ ಬಳಿಯ ಮಹೇಶ್ವರ ಭವನದ ಆವರಣದಲ್ಲಿ ಸನ್ನಿ ಕಾಂಬ್ಳೆ ಎಂಬುವವರ ಸಹೋದರಿಯ ಕಾರನ್ನು ಪಾರ್ಕ್ ಮಾಡಲಾಗಿತ್ತು. ಈ ವೇಳೆ ಕಾರಿನ ಕೆಳಭಾಗದಿಂದ ಬಾನೆಟ್ ಕಡೆಗೆ ಬೃಹತ್ ಹೆಬ್ಬಾವು ಹೋಗುತ್ತಿರುವುದನ್ನು ನಿವಾಸಿಗಳು ಗಮನಿಸಿದ್ದಾರೆ. ವನ್ಯಜೀವಿ ಸಂರಕ್ಷಕ ಸಮೀರ್ ಗುಪ್ತಾ ಸ್ಥಳಕ್ಕೆ ಆಗಮಿಸಿ ಕಾರಿನ ಬಾನೆಟ್ ತೆರೆದಾಗ, ಎಂಜಿನ್ ಪಕ್ಕದಲ್ಲೇ ಹೆಬ್ಬಾವು ಸುರುಳಿ ಸುತ್ತಿಕೊಂಡು ಕುಳಿತಿರುವುದು ಕಂಡುಬಂದಿದೆ. ಎಚ್ಚರಿಕೆಯಿಂದ ಕಾರ್ಯಾಚರಣೆ ನಡೆಸಿದ ಅವರು ಹಾವನ್ನು ಸುರಕ್ಷಿತವಾಗಿ ಹೊರತೆಗೆದು ವಿಶೇಷ ಚೀಲಕ್ಕೆ ಹಾಕಿದ್ದಾರೆ.

ತಪಾಸಣೆ ಬಳಿಕ ಕಾಡಿಗೆ: ಕಾರಿನ ಬಿಸಿ ಎಂಜಿನ್ ಭಾಗಗಳಿಂದ ಹಾವಿಗೆ ಸುಟ್ಟ ಗಾಯಗಳಾಗಿವೆಯೇ ಎಂದು ಖಚಿತಪಡಿಸಿಕೊಳ್ಳಲು ಪಶುವೈದ್ಯರ ಬಳಿ ತಪಾಸಣೆ ನಡೆಸಲಾಯಿತು. ಹೆಬ್ಬಾವು ಸಂಪೂರ್ಣ ಆರೋಗ್ಯವಾಗಿರುವುದು ದೃಢಪಟ್ಟ ನಂತರ, ಅದನ್ನು ಮುಂಬೈನ ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನದ (SGNP) ನೈಸರ್ಗಿಕ ಆವಾಸಸ್ಥಾನಕ್ಕೆ ಸುರಕ್ಷಿತವಾಗಿ ಬಿಡಲಾಯಿತು.

ಮತ್ತಷ್ಟು ಓದಿ: ಚಾಮರಾಜನಗರ: ಬೆಲವತ್ತ ಆಣೆಕಟ್ಟು ಬಳಿಯ ಜಮೀನಲ್ಲಿ ಇತ್ತೊಂದು ಭಾರಿಗಾತ್ರದ ಹೆಬ್ಬಾವು!

ಮಳೆಗಾಲದಲ್ಲಿ ವಾಹನಗಳೇ ಆಸರೆ: ಮಳೆಗಾಲ ಅಥವಾ ತಂಪಾದ ವಾತಾವರಣದಲ್ಲಿ ಹಾವುಗಳು ಬೆಚ್ಚಗಿನ ತಾಣಗಳನ್ನು ಹುಡುಕಿಕೊಂಡು ಕಾರಿನ ಬಾನೆಟ್, ವೀಲ್ ಆರ್ಚ್ ಹಾಗೂ ಎಂಜಿನ್ ಬೇ ಭಾಗಗಳಿಗೆ ನುಸುಳುವುದು ಸಾಮಾನ್ಯ. ಹೀಗಾಗಿ ಮುಂಬೈನಂತಹ ನಗರಗಳಲ್ಲಿ ಹಸಿರು ವಲಯದ ಸಮೀಪ ವಾಹನ ಪಾರ್ಕ್ ಮಾಡುವಾಗ ಎಚ್ಚರಿಕೆ ವಹಿಸಲು ವನ್ಯಜೀವಿ ತಜ್ಞರು ಸೂಚಿಸಿದ್ದಾರೆ.

ಜನ ಶತಾಬ್ದಿ ರೈಲಿನಲ್ಲೂ ಪತ್ತೆಯಾಗಿತ್ತು ಹಾವು: ಮುಂಬೈನಲ್ಲಿ ಇಂತಹ ಘಟನೆ ಇದೇ ಮೊದಲಲ್ಲ. ಇತ್ತೀಚೆಗೆ ಮಡಗಾಂವ್-ಸಿಎಸ್‌ಎಂಟಿ ಜನ ಶತಾಬ್ದಿ ಎಕ್ಸ್‌ಪ್ರೆಸ್ ರೈಲು ಮುಂಬೈ ತಲುಪಿದಾಗ, ಅದರ ಎಂಜಿನ್ ಕ್ಯಾಬಿನ್‌ನಲ್ಲೂ ಹೆಬ್ಬಾವಿನ ಮರಿಯೊಂದು ಪತ್ತೆಯಾಗಿತ್ತು. ಅಂದು ರೈಲ್ವೆ ಅಧಿಕಾರಿಗಳು ಮತ್ತು ವನ್ಯಜೀವಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಅದನ್ನು ಸುರಕ್ಷಿತವಾಗಿ ರಕ್ಷಿಸಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us