AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇರಾನ್ ವಿರುದ್ಧದ ಯುದ್ಧ ಗೆದ್ದರೆ ಪೆಟ್ರೋಲ್ ಬೆಲೆ ಗ್ಯಾಲನ್‌ಗೆ 2 ಡಾಲರ್‌ಗಿಂತ ಕಡಿಮೆ: ಅಮೆರಿಕ ಅಧ್ಯಕ್ಷ ಟ್ರಂಪ್ ಭವಿಷ್ಯ

ಅಮೆರಿಕ ಅಧ್ಯಕ್ಷ ಟ್ರಂಪ್ ಇರಾನ್ ವಿರುದ್ಧದ ಸಂಘರ್ಷದಲ್ಲಿ ಅಮೆರಿಕ ಗೆದ್ದರೆ, ಜಾಗತಿಕ ತೈಲ ಬೆಲೆ ಕುಸಿಯಲಿದ್ದು, ಪೆಟ್ರೋಲ್ ಗ್ಯಾಲನ್‌ಗೆ 2 ಡಾಲರ್‌ಗಿಂತ ಕಡಿಮೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಹಾರ್ಮುಜ್ ಜಲಸಂಧಿ ಸುತ್ತ ಹೆಚ್ಚಿದ ಉದ್ವಿಗ್ನತೆ, ಕಚ್ಚಾ ತೈಲ ದರ ಏರಿಕೆ, ಅಮೆರಿಕದ ದಾಳಿ ಮತ್ತು ಇರಾನ್‌ನ ಪ್ರತಿಕ್ರಿಯೆಗಳ ನಡುವೆ, ಟ್ರಂಪ್ ಹೇಳಿಕೆಯು ಜಾಗತಿಕ ಇಂಧನ ಮಾರುಕಟ್ಟೆ ಮತ್ತು ಅಮೆರಿಕದ ರಾಜಕೀಯದ ಮೇಲೆ ಪರಿಣಾಮ ಬೀರುತ್ತದೆ.

ಇರಾನ್ ವಿರುದ್ಧದ ಯುದ್ಧ ಗೆದ್ದರೆ ಪೆಟ್ರೋಲ್ ಬೆಲೆ ಗ್ಯಾಲನ್‌ಗೆ 2 ಡಾಲರ್‌ಗಿಂತ ಕಡಿಮೆ: ಅಮೆರಿಕ ಅಧ್ಯಕ್ಷ ಟ್ರಂಪ್ ಭವಿಷ್ಯ
ಡೊನಾಲ್ಡ್​ ಟ್ರಂಪ್ Image Credit source: Hindustan Times
ನಯನಾ ರಾಜೀವ್
|

Updated on: Sep 08, 2026 | 8:35 AM

Share

ವಾಷಿಂಗ್ಟನ್, ಸೆಪ್ಟೆಂಬರ್ 08: ಇರಾನ್ ಜೊತೆಗಿನ ಮಿಲಿಟರಿ ಸಂಘರ್ಷದಲ್ಲಿ ಅಮೆರಿಕ ವಿಜಯ ಸಾಧಿಸಿದ ತಕ್ಷಣ ಜಾಗತಿಕ ಇಂಧನ ಮಾರುಕಟ್ಟೆಗಳು ವೇಗವಾಗಿ ಸಹಜ ಸ್ಥಿತಿಗೆ ಮರಳಲಿದ್ದು, ಅಮೆರಿಕದಲ್ಲಿ ಪೆಟ್ರೋಲ್ ದರ ಪ್ರತಿ ಗ್ಯಾಲನ್‌ಗೆ 2 ಡಾಲರ್‌ಗಿಂತ ಕಡಿಮೆಯಾಗಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭವಿಷ್ಯ ನುಡಿದಿದ್ದಾರೆ. ಹಾರ್ಮುಜ್ ಜಲಸಂಧಿಯ ಸುತ್ತ ಉಭಯ ದೇಶಗಳ ನಡುವಿನ ಸೇನಾ ಮುಖಾಮುಖಿಯಿಂದಾಗಿ ಕಚ್ಚಾ ತೈಲ ಬೆಲೆ ಗಗನಕ್ಕೇರುತ್ತಿರುವ ಬೆನ್ನಲ್ಲೇ, ಟ್ರೂತ್ ಸೋಶಿಯಲ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಇರಾನ್ ಎಂದಿಗೂ ಪರಮಾಣು ಶಸ್ತ್ರಾಸ್ತ್ರ ಹೊಂದುವುದನ್ನು ಅಮೆರಿಕ ಸಹಿಸುವುದಿಲ್ಲ ಎಂದು ಗುಡುಗಿದ್ದಾರೆ.

ತೈಲ ಬೆಲೆ ಭಾರಿ ಕುಸಿತದ ಮುನ್ಸೂಚನೆ: “ಇರಾನ್ ವಿರುದ್ಧದ ಸಂಘರ್ಷ ಮುಗಿದ ಬಳಿಕ ತೈಲ ಬೆಲೆಗಳು ತೀವ್ರವಾಗಿ ಇಳಿಯಲಿವೆ. ಆರಂಭದಲ್ಲಿ ಗ್ಯಾಲನ್‌ಗೆ 3 ಡಾಲರ್, ನಂತರ 2 ಡಾಲರ್‌ಗಿಂತಲೂ ಕಡಿಮೆಯಾಗಲಿದೆ” ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಕಚ್ಚಾ ತೈಲ ದರ ಬ್ಯಾರೆಲ್‌ಗೆ 97 ಡಾಲರ್​ಗೆ ಜಂಪ್: ಹಾರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ ಹೆಚ್ಚಿದ ಹಿನ್ನೆಲೆಯಲ್ಲಿ ಜಾಗತಿಕ ಬ್ರೆಂಟ್ ಕಚ್ಚಾ ತೈಲ ದರ 6 ವಾರಗಳ ಗರಿಷ್ಠ ಮಟ್ಟವಾದ ಬ್ಯಾರೆಲ್‌ಗೆ 97 ಡಾಲರ್‌ಗೆ ತಲುಪಿದ್ದು, ಕೇವಲ ಒಂದು ತಿಂಗಳಲ್ಲಿ ಶೇ. 19 ರಷ್ಟು ಏರಿಕೆಯಾಗಿದೆ.

ಇರಾನ್‌ನ 3 ತೈಲ ಟ್ಯಾಂಕರ್‌ಗಳ ಮೇಲೆ ಅಮೆರಿಕ ದಾಳಿ: ಇತ್ತೀಚೆಗೆ ಯುಎಸ್ ನೌಕಾಪಡೆಯ ಯುದ್ಧನೌಕೆಗಳ ಮೇಲೆ ಕ್ಷಿಪಣಿ ದಾಳಿಗೆ ಯತ್ನಿಸಿದ ಬಳಿಕ ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಪ್ರತಿದಾಳಿ ನಡೆಸಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ಗೆ (IRGC) ಸೇರಿದ ಎಂಟಿ ಡೌನಿ, ಎಂಟಿ ಸ್ಟಾರ್ಕ್ 1 ಹಾಗೂ ಎಂಟಿ ಕೈಲೋ ಎಂಬ ಮೂರು ಕಚ್ಚಾ ತೈಲ ಸಾಗಣೆ ನೌಕೆಗಳನ್ನು ಶಾಶ್ವತವಾಗಿ ನಿಷ್ಕ್ರಿಯಗೊಳಿಸಿ ನಾಶಪಡಿಸಿದೆ.

ಮತ್ತಷ್ಟು ಓದಿ: 2027 ರವರೆಗೆ ಮಧ್ಯಪ್ರಾಚ್ಯದಲ್ಲಿ ಅಮೆರಿಕ ಪಡೆಗಳ ಬೀಡು: ಇರಾನ್ ವಿರುದ್ಧ ಕಠಿಣ ಯುದ್ಧ ವಿಸ್ತರಣೆಗೆ ಮುಂದಾದ ಟ್ರಂಪ್ ಆಡಳಿತ

ಇರಾನ್ ನೌಕಾಪಡೆ ರಕ್ಷಣಾರಹಿತ ಎಂದ ಹೆಗ್ಸೆತ್: ಅಮೆರಿಕದ ಯುದ್ಧ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಹೇಳಿಕೆ ನೀಡಿ, ಇರಾನ್‌ನ ಟ್ಯಾಂಕರ್ ಪಡೆಯ ಬಳಿ ರಕ್ಷಣಾ ಸಾಮರ್ಥ್ಯವಿಲ್ಲ, ಅಮೆರಿಕದ ಹಡಗುಗಳನ್ನು ಗುರಿಯಾಗಿಸಿಕೊಂಡರೆ ಅವುಗಳನ್ನು ಸಮುದ್ರದಲ್ಲಿ ಮುಳುಗಿಸುತ್ತೇವೆ ಎಂದು ಎಚ್ಚರಿಸಿದ್ದಾರೆ.

ಇರಾನ್ ಪ್ರತ್ಯಸ್ತ್ರದ ಎಚ್ಚರಿಕೆ: ಇದಕ್ಕೆ ತಿರುಗೇಟು ನೀಡಿರುವ ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘರ್ ಗಾಲಿಬಾಫ್, “ನಮ್ಮ ಇಂಧನ ನೆಲೆಗಳನ್ನು ಮುಟ್ಟಿದರೆ ಈ ಭಾಗದಲ್ಲಿರುವ ಅಮೆರಿಕದ ತೈಲ ಕಂಪನಿಗಳು ಮತ್ತು ನೆಲೆಗಳೂ ಸುರಕ್ಷಿತವಾಗಿ ಉಳಿಯುವುದಿಲ್ಲ” ಎಂದು ಎಚ್ಚರಿಕೆ ನೀಡಿದ್ದಾರೆ.

ಹಾರ್ಮುಜ್ ಜಲಸಂಧಿಯ ಮಹತ್ವ: ಜಾಗತಿಕ ತೈಲ ಪೂರೈಕೆಯ ಸುಮಾರು ಶೇ.20 ತೈಲ ಸಾಗಣೆಯು ಪರ್ಷಿಯನ್ ಕೊಲ್ಲಿಯ ಕಿರಿದಾದ ಹಾರ್ಮುಜ್ ಜಲಸಂಧಿಯ ಮೂಲಕವೇ ಸಾಗುತ್ತದೆ. ಇಲ್ಲಿ ಯಾವುದೇ ಸಣ್ಣ ಸಂಘರ್ಷ ನಡೆದರೂ ಜಾಗತಿಕ ಪೂರೈಕೆ ಸರಪಳಿ ಅಸ್ತವ್ಯಸ್ತಗೊಂಡು ಭಾರತ ಸೇರಿದಂತೆ ಆಮದು ಅವಲಂಬಿತ ದೇಶಗಳ ಮೇಲೆ ಹಣದುಬ್ಬರದ ನೇರ ಪರಿಣಾಮ ಬೀರುತ್ತದೆ.

ಅಮೆರಿಕದ ದೇಶೀಯ ರಾಜಕೀಯ: ಅಮೆರಿಕದಲ್ಲಿ ಇಂಧನ ದರವು ನೇರವಾಗಿ ಮತದಾರರ ಮೇಲೆ ಪ್ರಭಾವ ಬೀರುವ ಪ್ರಮುಖ ಆರ್ಥಿಕ ವಿಚಾರವಾಗಿದೆ. ಹೀಗಾಗಿ ಯುದ್ಧದ ಬೆದರಿಕೆಯ ಜೊತೆಗೆ ಇಂಧನ ಬೆಲೆಯನ್ನು ತಗ್ಗಿಸುವ ಆಶ್ವಾಸನೆಯನ್ನು ಟ್ರಂಪ್ ದೇಶೀಯವಾಗಿ ರಾಜಕೀಯ ಅಸ್ತ್ರವನ್ನಾಗಿ ಬಳಸುತ್ತಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us