
ನವದೆಹಲಿ, ಆಗಸ್ಟ್ 03: ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಮೇಲೆ ಹೆಚ್ಚುತ್ತಿರುವ ತೀವ್ರ ಒತ್ತಡವನ್ನು ಬಿಂಬಿಸುವ ಆಘಾತಕಾರಿ ಅಂಕಿಅಂಶವೊಂದು ಹೊರಬಿದ್ದಿದೆ. ದೇಶದ ಅತ್ಯುನ್ನತ ನ್ಯಾಯಾಲಯ(Court)ವಾದ ಸುಪ್ರೀಂ ಕೋರ್ಟ್‌ನಲ್ಲಿ 96,000 ಕ್ಕೂ ಹೆಚ್ಚು ಪ್ರಕರಣಗಳು ವಿಚಾರಣೆಗೆ ಕಾಯುತ್ತಿದ್ದು, ಅವುಗಳಲ್ಲಿ 10,000 ಕ್ಕೂ ಹೆಚ್ಚು ಕೇಸ್‌ಗಳು ಕಳೆದ ಒಂದು ದಶಕದಿಂದ ಇತ್ಯರ್ಥವಾಗದೆ ಬಾಕಿ ಉಳಿದಿವೆ.
ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ರಾಜ್ಯಸಭೆಯಲ್ಲಿ ನೀಡಿರುವ ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದ್ದು, ದೇಶಾದ್ಯಂತ ಎಲ್ಲಾ ನ್ಯಾಯಾಲಯಗಳಲ್ಲಿ ಒಟ್ಟು ಬಾಕಿ ಇರುವ ಪ್ರಕರಣಗಳ ಸಂಖ್ಯೆ 5.64 ಕೋಟಿಗೆ ತಲುಪಿದೆ ಎಂದು ಬಹಿರಂಗಪಡಿಸಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ 26 ಪ್ರಕರಣಗಳು ಕಳೆದ 30 ವರ್ಷಗಳಿಗೂ ಹೆಚ್ಚು ಕಾಲ ಹಾಗೂ 558 ಪ್ರಕರಣಗಳು 20 ವರ್ಷಗಳಿಗೂ ಹೆಚ್ಚು ಕಾಲ ಇತ್ಯರ್ಥವಾಗದೆ ಉಳಿದುಕೊಂಡಿವೆ.
ರಾಷ್ಟ್ರೀಯ ನ್ಯಾಯಾಂಗ ದತ್ತಾಂಶ ಗ್ರಿಡ್ (NJDG) ನೀಡಿರುವ ಅಂಕಿಅಂಶಗಳ ಪ್ರಕಾರ, ದೇಶದ ವಿವಿಧ ಹೈಕೋರ್ಟ್‌ಗಳಲ್ಲಿ 80,660 ಕ್ಕೂ ಹೆಚ್ಚು ಪ್ರಕರಣಗಳು ಕಳೆದ 30 ವರ್ಷಗಳಿಂದ ಧೂಳು ಹಿಡಿಯುತ್ತಿವೆ.
ಮತ್ತಷ್ಟು ಓದಿ: ವಿದ್ಯಾರ್ಥಿ ಪ್ರತಿಭಟನೆ ವೇಳೆ ಹಿಂಸಾಚಾರ; ಎಸ್‌ಐಟಿ ತನಿಖೆಗೆ ಸುಪ್ರೀಂ ಕೋರ್ಟ್ ಸೂಚನೆ
ನ್ಯಾಯಾಲಯದ ಮೂಲಸೌಕರ್ಯ ಬಲಪಡಿಸಲು, ಇ-ಕೋರ್ಟ್ (e-Courts) ಯೋಜನೆಯಡಿ ಡಿಜಿಟಲೀಕರಣಗೊಳಿಸಲು ಹಾಗೂ ತಂತ್ರಜ್ಞಾನ ಅಳವಡಿಕೆಗೆ ಕೇಂದ್ರ ಸರ್ಕಾರವು 2011 ರಿಂದ ಇದುವರೆಗೆ 9,800 ಕೋಟಿ ರೂ.ಗೂ ಹೆಚ್ಚು ಹಣ ಖರ್ಚು ಮಾಡಿದೆ. ಆದಾಗ್ಯೂ ಹಳೆಯ ಪ್ರಕರಣಗಳ ವಿಲೇವಾರಿ ಗತಿಯು ತೀವ್ರ ವಿಳಂಬದಿಂದ ಸಾಗಿದೆ.
ದೇಶದ ಹೈಕೋರ್ಟ್‌ಗಳು ಮತ್ತು ಅಧೀನ (ಕೆಳ) ನ್ಯಾಯಾಲಯಗಳಲ್ಲಿ ಸಾವಿರಾರು ನ್ಯಾಯಾಧೀಶರು, ನ್ಯಾಯಮೂರ್ತಿಗಳು ಹಾಗೂ ನ್ಯಾಯಾಂಗ ಸಿಬ್ಬಂದಿ ಹುದ್ದೆಗಳು ಭರ್ತಿಯಾಗದೆ ಖಾಲಿ ಇರುವುದು ಪ್ರಕರಣಗಳ ಬಾಕಿಗೆ ಪ್ರಮುಖ ಕಾರಣವಾಗಿದೆ. ಪ್ರಕರಣಗಳ ಶೀಘ್ರ ವಿಲೇವಾರಿಯು ನ್ಯಾಯಾಂಗದ ಪ್ರತ್ಯೇಕ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿದ ಸಚಿವರು, ವಿಳಂಬಕ್ಕೆ ಹಲವು ಕಾರಣಗಳನ್ನು ನೀಡಿದ್ದಾರೆ.
ಪ್ರಕರಣಗಳ ತಾಂತ್ರಿಕ ಸಂಕೀರ್ಣತೆ ಮತ್ತು ಸಾಕ್ಷ್ಯಾಧಾರಗಳ ಕೊರತೆ
ತನಿಖಾ ಸಂಸ್ಥೆಗಳು, ವಕೀಲರು ಹಾಗೂ ಸಾಕ್ಷಿಗಳ ನಡುವೆ ಸರಿಯಾದ ಸಮನ್ವಯ ಇಲ್ಲದಿರುವುದು
ಸಿಬ್ಬಂದಿ ಹಾಗೂ ಮೂಲಸೌಕರ್ಯಗಳ ಕೊರತೆ
ಭಾರತದಲ್ಲಿ ಪ್ರತಿ 10 ಲಕ್ಷ ಜನಸಂಖ್ಯೆಗೆ ಪ್ರಸ್ತುತ ಸುಮಾರು 21 ನ್ಯಾಯಾಧೀಶರುಗಳಿದ್ದಾರೆ. ಆದರೆ 1987 ರ ಕಾನೂನು ಆಯೋಗವು (Law Commission) ಪ್ರತಿ10 ಲಕ್ಷ ಜನರಿಗೆ ಕನಿಷ್ಠ 50 ನ್ಯಾಯಾಧೀಶರು ಇರಬೇಕು ಎಂದು ಶಿಫಾರಸು ಮಾಡಿತ್ತು. ನ್ಯಾಯಾಲಯಗಳಲ್ಲಿ ಪ್ರಕರಣಗಳು ವಿಳಂಬವಾಗುತ್ತಿರುವುದರಿಂದ ದೇಶದ ಜೈಲುಗಳಲ್ಲಿ ಸೂಕ್ತ ತೀರ್ಪು ಬಾರದೆ ಬಂಧನದಲ್ಲಿರುವ ವಿಚಾರಣಾಧೀನ ಕೈದಿಗಳ ಸಂಖ್ಯೆ ಜೈಲುಗಳ ಸಾಮರ್ಥ್ಯಕ್ಕಿಂತ ಶೇ. 130 ರಷ್ಟು ಹೆಚ್ಚಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ